ವಿನು ಮನಸು ಮದುವೆ ನನಸು

ಕನ್ನಡದಲ್ಲಿ ಆರಡಿ ಮೀರಿದ ಸಂಗೀತ ನಿರ್ದೇಶಕರೊಬ್ಬರು ಇದ್ದರೆ ಅದು ವಿನು ಮನಸು! ಆದರೆ ಎತ್ತರವನ್ನು ತೋರಿಸಿಕೊಳ್ಳದ ಮನಸು. ಇವರ ಸಂಗೀತದ ಹಾಡುಗಳಲ್ಲಿನ ಮಾಧುರ್ಯವೇ ಸೊಗಸು. ಇದುವರಗೆ ಹದಿನೈದರಷ್ಟು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ವಿನು ಮನಸು ಅವರ ಸಾಕಷ್ಟು ಚಿತ್ರಗಳು ಬಿಡುಗಡೆ ತಯಾರಾಗಿವೆ. ಅಷ್ಟರೊಳಗೆ ಅವರ ಮದುವೆಯ ಕನಸು ಈಡೇರಿದೆ. ಅಂದಹಾಗೆ ಲಾಕ್ಡೌನ್ ಸಂದರ್ಭದಲ್ಲೇ ಮದುವೆಯಾಗುವ ಅವಸರವೇನಿತ್ತು ಎನ್ನುವ ಪ್ರಶ್ನೆ ಸಹಜವೇ. ಆದರೆ ಅದಕ್ಕೂ ಬಲವಾದ ಕಾರಣವಿರುವುದನ್ನು ಅವರು ಸಿನಿಕನ್ನಡ.ಕಾಮ್ ಗೆ ತಿಳಿಸಿದರು.

ದಿನ ಫಿಕ್ಸಾಗಿರೋದು ಇದು ಮೂರನೇ ಬಾರಿ!

ವಿನು ಮನಸು ಅವರದು ಲವ್ ಮ್ಯರೇಜೇನೂ ಅಲ್ಲ. ವಿನು ಅವರ ಅತ್ತೆ ಸಂಬಂಧಿಕರ ಮದುವೆಯ ವೇಳೆ ನೋಡಿದ್ದಂಥ ಹುಡುಗಿ ರೇಖಾ. ಬೆಂಗಳೂರಲ್ಲಿ ಶಾಲಾ ಶಿಕ್ಷಕಿಯಾಗಿರುವ ರೇಖಾ ವಿನು ಅವರಿಗೂ ಇಷ್ಟವಾದರು. ಇನ್ನೇನು ಮದುವೆಗೆ ಮೊದಲು ಮನೆ ಕಟ್ಟೋಣ ಎಂದು ಅದರ ತಯಾರಿಯಲ್ಲಿ ತೊಡಗಿಕೊಂಡರು ವಿನು. ಕಳೆದ ನವೆಂಬರ್‌ನಲ್ಲಿ ಮನೆ ಕೆಲಸ ಮುಗಿಸಿ ಡಿಸೆಂಬರ್‌ನಲ್ಲಿ ಇನ್ನೇನು ಮದುವೆ ಎಂದುಕೊಂಡಿದ್ದಾಗ ಮಕ್ಕಳು ಪರೀಕ್ಷೆ ಮುಗಿಸಿ ಬಿಡುವಾಗಲಿ, ಪತ್ನಿಯೂ ಶಿಕ್ಷಕಿಯಾದ ಕಾರಣ ಏಪ್ರಿಲ್‌ ನಲ್ಲೇ ಮದುವೆಯಾದರಾಯಿತು ಎಂದುಕೊಂಡರಂತೆ. ಆದರೆ ಏಪ್ರಿಲ್‌ 14ಕ್ಕೆ ಮುಗಿಯುತ್ತದೆ ಎಂದುಕೊಂಡಿದ್ದ ಲಾಕ್ಡೌನ್ ಮೇ ತನಕ ಮುಂದುವರಿದಾಗ ಎರಡನೇ ಬಾರಿ ಕೂಡ ಮದುವೆಯ ಯೋಜನೆ ಮುಂದೆ ಹೋಗಿತ್ತು. ಆದರೆ ವಿನು ಮನಸು ಅವರ ಸಂಗೀತದ ಗುರುಗಳಾದ ಕೆಎಂ ಇಂದ್ರ ಅವರು ಬೆಂಗಳೂರಿನಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಿ ಕಮಿಷನರ್‌ ಅವರಿಂದ ಮದುವೆಗೆ ಒಪ್ಪಿಗೆ ಪಡೆದುಕೊಳ್ಳಲು ಇಷ್ಟೊಂದು ಕಾಯಬೇಕಾಯಿತು. ಒಪ್ಪಿಗೆ ನಿನ್ನೆಯಷ್ಟೇ ಕೈಸೇರಿತು. ಇಂದು ಬೆರಳೆಣಿಕೆಯ ಮಂದಿಯ ಸಮ್ಮುಖದಲ್ಲಿ ವಿವಾಹ ನೆರವೇರಿತು ಎಂದರು ವಿನು ಮನಸು.

ವಿನು ಮನಸು ಅವರ ನಿಜವಾದ ಹೆಸರು ವಿನೋದ್ ಕುಮಾರ್. ಆದರೆ ವಿನು ಮನಸು ಎನ್ನುವ ಹೆಸರಲ್ಲಿ ಹೊಂಬಣ್ಣ, ಪಯಣಿಗರು, ಬಿಂದಾಸ್ ಗೂಗ್ಲಿ ಚಿತ್ರಕ್ಕೆ ನೀಡಿರುವ ಸಂಗೀತದ ಮೂಲಕ ಹಲವರ ಮನಸು ಗೆದ್ದಿದ್ದಾರೆ. ಇಂದು ಅಂದರೆ ಭಾನುವಾರ ಚೆನ್ನರಾಯಪಟ್ಟಣದ ಹಿರಿಸಾವೆಯ ಬೂಕನ ಬೆಟ್ಟ ರಂಗನಾಥ ಸ್ವಾಮಿ ದೇಗುಲದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ವಿನು ಅವರು ತಮ್ಮ ತಂದೆ ತಾಯಿ ಮತ್ತು ಒಬ್ಬ ಸ್ನೇಹಿತನೊಂದಿಗೆ ಹಾಜರಾಗಿದ್ದರು! ಇದೀಗ ನೆಲಮಂಗಲ ತಾಲೂಕಲ್ಲಿರುವ ಮನೆಗೆ ನವದಂಪತಿಯ ಆಗಮನವಾಗಿದೆ. ಆದಷ್ಟು ಬೇಗ ವಿವಾಹವನ್ನು ರಿಜಿಸ್ಟರ್ ಮಾಡಿಸಬೇಕು. ಮದುವೆಗೆ ಬರಲಾಗದ ಸ್ವಂತ ತಂಗಿ ಬಾವ ಸೇರಿದಂತೆ ಕುಟುಂಬದವರನ್ನು ಸೇರಿಸಿ ಮರಿಕಡಿದು ಒಂದು ಬಾಡೂಟ ನೀಡಬೇಕು. ಬೆಂಗಳೂರಲ್ಲಿ ಕೂಡ ಆತ್ಮೀಯರ ಜತೆಗೊಂದು ಸಮಾರಂಭ ನಡೆಸಬೇಕು ಎನ್ನುವ ಯೋಜನೆಗಳು ವಿನು ಮನಸು ಮನದಲ್ಲಿದೆ. ಆದರೆ ಎಲ್ಲದಕ್ಕೂ ಲಾಕ್ಡೌನ್ ಕಾಲ ಮುಗಿಯಬೇಕಿದೆ. ನೂತನ ದಂಪತಿಗೆ ಸಿನಿಕನ್ನಡದ ವತಿಯಿಂದ ಹಾರ್ದಿಕ ಶುಭಾಶಯಗಳು.

Recommended For You

Leave a Reply

error: Content is protected !!
%d bloggers like this: