ಬಾಲಿವುಡ್ `ಯುಗ ಪುರುಷ’ನ ಯುಗಾಂತ್ಯ

ಬಾಲಿವುಡ್ ನಟ ರಿಷಿ ಕಪೂರ್ ಸಾವಿನೊಂದಿಗೆ ಕಪೂರ್ ಖಾನ್‌ದಾನಿನ ಹಿರಿಯ ತಲೆಯೊಂದು ಶಾಶ್ವತವಾಗಿ ತೆರೆಮರೆಗೆ ಹೋದಂತಾಗಿದೆ. ಭಾರತೀಯ ಚಿತ್ರರಂಗದ ದಂತಕತೆಯಾಗಿ ಗುರುತಿಸಿಕೊಂಡಿರುವ ರಾಜ್ ಕಪೂರ್ ಅವರ ಪುತ್ರನಾಗಿ ಮಾತ್ರವಲ್ಲ ಹಿಂದಿ ಚಿತ್ರರಂಗದ ಪ್ರಣಯರಾಜನಾಗಿ ಗುರುತಿಸಿಕೊಂಡವರು ರಿಷಿ ಕಪೂರ್. ಭಾರತೀಯ ಚಿತ್ರರಂಗಕ್ಕೆ ಅತಿಹೆಚ್ಚು ಕಲಾವಿದರನ್ನು ನೀಡಿದ ಕುಟುಂಬ ಎನ್ನುವ ಹೆಗ್ಗಳಿಕೆ ಇರುವ ಕಪೂರ್ ಕುಟುಂಬದ ರಿಷಿ ಕಪೂರ್ ಅವರ ಪುತ್ರ ರಣಬೀರ್ ಕಪೂರ್ ಕೂಡ ಬಾಲಿವುಡ್‌ನ ಯುವ ನಾಯಕನಾಗಿ ಹೆಸರಾಗಿದ್ದಾರೆ.

ಕನ್ನಡಿಗರಿಗೆ ರಿಷಿ ಕಪೂರ್ ಹೆಚ್ಚು ಪರಿಚಿತರಲ್ಲ. ಆದರೆ ಅವರು ನಟಿಸಿದ ಕರ್ಜ್ ಚಿತ್ರ ಕನ್ನಡದಲ್ಲಿ ರಿಮೇಕ್ ಆಗುವುದರೊಂದಿಗೆ ಅದೇ ಕಾರಣಕ್ಕಾಗಿ ಹೆಚ್ಚು ಗಮನಿಸಲ್ಪಟ್ಟಿದ್ದರು. ಕನ್ನಡದಲ್ಲಿ ಯುಗಪುರುಷ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲವಾದರೂ, ಬಾಲಿವುಡ್‌ನಲ್ಲಿ ಕರ್ಜ್ ದೊಡ್ಡ ಯಶಸ್ಸು ಪಡೆದ ಚಿತ್ರವಾಗಿತ್ತು. ಕನ್ನಡದಲ್ಲಿ ರವಿಚಂದ್ರನ್ ಅವರ ಹಿಂದಿನ ಜನ್ಮದ ಪಾತ್ರವನ್ನು ರಾಮಕೃಷ್ಣ ನಟಿಸಿದ್ದರು. ಒಂದು ರೀತಿಯಲ್ಲಿ ರಿಷಿ ಕಪೂರ್ ಕೂಡ ನೋಟದಲ್ಲಿ, ಮಾತಿನ ಲವಲವಿಕೆಯಲ್ಲಿ ರಾಮಕೃಷ್ಣ ಅವರನ್ನೇ ಹೋಲುತ್ತಿದ್ದರು. ಆದರೆ ದಶಕಗಳ ಕಾಲ ಅವರಿಗೆ ಇದ್ದ ಇಮೇಜ್ ಮಾತ್ರ ಕನ್ನಡದಲ್ಲಿ ರವಿಚಂದ್ರನ್ ಅವರಿಗೆ ಇರುವಂಥ ರೊಮ್ಯಾಂಟಿಕ್ ಇಮೇಜೇ ಆಗಿತ್ತು ಎನ್ನುವುದು ಗಮನಾರ್ಹ ಸಂಗತಿ.

ರಿಷಿಕಪೂರ್ ಪ್ರೇಮಮಯ ಸಿನಿಮಾಗಳಿಗೆ ತಕ್ಕಂತೆ ಸುಪರ್ ಹಿಟ್ ಹಾಡುಗಳು ಕೂಡ ಮೂಡಿ ಬಂದಿದ್ದವು. ತಂದೆಯ ನಿರ್ದೇಶನದಲ್ಲೇ ನಾಯಕನಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುವ ಅವಕಾಶ ಇವರದಾಗಿತ್ತು. ಪ್ರಥಮ ಚಿತ್ರದಲ್ಲೇ ಎಲ್ಲರ ಗಮನ ಸೆಳೆಯುವ ಜತೆಗೆ ಹಾಡುಗಳಿಂದಲೂ ಜನಪ್ರಿಯರಾಗುವ ಅವಕಾಶ ರಿಷಿ ಕಪೂರ್ ಗೆ ಲಭಿಸಿತು. ಲಕ್ಷ್ಮೀಕಾಂತ್ ಪ್ಯಾರೇಲಾಲ್ ಸಂಗೀತದಲ್ಲಿನ ಮೈ ಶಾಯರ್ ತೋ ನಹೀ ಹಾಡು ಇಂದಿಗೂ ಪ್ರೇಮಿಗಳ ಬಾಯಲ್ಲಿ ಜೀವಂತ. ‘ಸಾಗರ್' ಚಿತ್ರದಂತೆ ಸಾಗರ್ ಕಿನಾರೇ ಹಾಡು ಕೂಡ ತುಂಬ ಜನಪ್ರಿಯವಾಗಿತ್ತು. 1985ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ರಿಷಿಕಪೂರ್‌ಗೆ ಜೋಡಿಯಾಗಿ ಡಿಂಪಲ್ ಕಪಾಡಿಯಾ ನಟಿಸಿದ್ದರು. ತ್ರಿಕೋನ ಪ್ರೇಮದ ಕತೆ ಹೇಳುವ ಈ ಚಿತ್ರದಲ್ಲಿ ಮತ್ತೊಬ್ಬ ನಾಯಕನಾಗಿ ಕಮಲ್ ಹಾಸನ್ ನಟಿಸಿದ್ದರು. ಕನ್ನಡದಲ್ಲಿ ಸ್ನೇಹದ ಕಡಲಲ್ಲಿ' ಹೆಸರಿನಲ್ಲಿ ಸುನೀಲ್ ಮಾಲಾಶ್ರೀ ಜೋಡಿಯ ಚಿತ್ರವಾಗಿ ತೆರೆಗೆ ಬಂದಿತ್ತು. ಕಮಲ್ ಹಾಸನ್ ಪಾತ್ರವನ್ನು ಅರ್ಜುನ್ ಸರ್ಜ ನಿರ್ವಹಿಸಿದ್ದರು. ರಮೇಶ್ ಸಿಪ್ಪಿ ನಿರ್ದೇಶನದ ಸಾಗರ್ ಚಿತ್ರದಲ್ಲಿ ಆರ್‌.ಡಿ ಬರ್ಮನ್ ಸಂಗೀತದ ಹಾಡುಗಳೆಲ್ಲ ಹಿಟ್ ಆಗಿದ್ದವು. ಅದರಲ್ಲಿಯೂ ಕಿಶೋರ್ ಕುಮಾರ್ ಕಂಠದಲ್ಲಿನಚೆಹ್ರಾ ಹೈ ಕ್ಯಾ ಚಾಂದ್ ಖಿಲಾ ಹೈ ಹಾಡು ಇಂದಿಗೂ ಜಾಹೀರಾತುಗಳಲ್ಲಿ ಬಳಕೆಯಾಗುತ್ತಿರುವುದನ್ನು ಕಾಣಬಹುದಾಗಿದೆ.


ಕಳೆದ ವರ್ಷ ಇಮ್ರಾನ್ ಹಷ್ಮಿ ಜತೆಗೆ ನಟಿಸಿದ್ದ ದಿ ಬಾಡಿ' ಅವರ ನಟನೆಯಲ್ಲಿ ತೆರೆಕಂಡ ಕೊನೆಯ ಚಿತ್ರವಾಗಿದೆ. ಕನ್ನಡದದೃಶ್ಯ’ ಚಿತ್ರದ ನಿರ್ದೇಶಕ ಜಿತ್ತು ಜೋಸೆಫ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಇದು ಸ್ಪಾನಿಶ್ ಚಿತ್ರದ ರಿಮೇಕ್ ಆಗಿದ್ದು, ವಿಶೇಷ ಏನೆಂದರೆ ಅದರ ಕನ್ನಡ ಅವತರಣಿಕೆಯಾದ ಗೇಮ್' ಚಿತ್ರದಲ್ಲಿಅರ್ಜುನ್ ಸರ್ಜಾ ನಟಿಸಿದ್ದರು! ತಂದೆಯೊಂದಿಗೆ ಬಾಲನಟನಾಗಿ ನಟಿಸಿದ ಪ್ರಥಮ ಚಿತ್ರಮೇರಾ ನಾಮ್ ಜೋಕರ್’ ಸಿನಿಮಾದಲ್ಲಿನ ನಟನೆಗೆ ಶ್ರೇಷ್ಠಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ರಿಷಿಕಪೂರ್ ಅವರದ್ದು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಷಿಕಪೂರ್ ತಮ್ಮ 67ನೇ ವಯಸ್ಸಿನಲ್ಲಿ ವಿದಾಯ ಹೇಳುವ ಮೂಲಕ ಭಾರತೀಯ ಚಿತ್ರರಂಗಕ್ಕೆ ನೆನಪಾಗಿ ಮಾತ್ರ ಉಳಿದಿದ್ದಾರೆ.

Recommended For You

Leave a Reply

error: Content is protected !!
%d bloggers like this: