ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ ತೇರಲಿ ಕುಳಿತಂತೇ ಅಮ್ಮ..
ಗುಮ್ಮ ಬಂತೆನಿಸಿ ಹೆದರಿ ನಿಂತಾಗ ನಿನ್ನ ಸೆರಗೇ ಕಾವಲು ಅಮ್ಮ..
ಕಾಣದ ದೇವರಿಗೆ ಕೈಯಾ ನಾ ಮುಗಿಯೇ.. ನಿನಗೆ ನನ್ನುಸಿರೇ ಆರತೀ..
ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ…
ಕೆ.ಜಿ.ಎಫ್ ಸಿನಿಮಾ ನೋಡಿದವರು ಈ ಹಾಡು ಮತ್ತು ಒಂದು ದೃಶ್ಯವನ್ನು ಲೈಫ್ ಲಾಂಗ್ ನೆನಪಿರಿಸಿರುತ್ತಾರೆ. ಅದು ರಾಕಿ ಭಾಯ್ ತಾಯಿಯೊಬ್ಬಳಿಗೆ ರಸ್ತೆಯಿಂದ ಬನ್ ಎತ್ತಿ ಕೊಡುವ ಸನ್ನಿವೇಶ. ಅಲ್ಲಿ ಆ ತಾಯಿಗೆ “ಸ್ವಾರ್ಥಕ್ಕೋಸ್ಕರ ಓಡ್ತಾಯಿರೋ ಪ್ರಪಂಚ ಯಾರಿಗೋಸ್ಕರಾನೂ ನಿಲ್ಲಲ್ಲ. ನಾವೇ ತಡೆದು ನಿಲ್ಲಿಸಬೇಕು… ಅವರಿವರ ಬಗ್ಗೆ ತಲೆ ಕೆಡಿಸ್ಕೋಬೇಡ; ಅವರು ಯಾರೂ ನಿನ್ನಷ್ಟು ಬಲಶಾಲಿಯಲ್ಲ. ಪ್ರಪಂಚದಲ್ಲೇ ತಾಯಿಗಿಂತ ದೊಡ್ಡ ಯೋಧ ಬೇರೆ ಯಾರೂ ಇಲ್ಲ!” ಎಂದು ಯಶ್ ಹೇಳುತ್ತಿದ್ದರೆ ಪ್ರೇಕ್ಷಕರ ಮೈ ರೋಮಾಂಚನಗೊಳ್ಳುತ್ತದೆ. ಅಂಥ ಯಶ್ ನ ನಿಜವಾದ ತಾಯಿ ಪುಷ್ಪಲತಾ. ಅವರು ತಮ್ಮ ಪತಿ ಅರುಣ್ ಕುಮಾರ್ ಅವರೊಂದಿಗೆ ಸೇರಿ ಯಶ್ ಅವರನ್ನು ಬೆಳೆಸಿದ ರೀತಿಯೇ ಅವರನ್ನು ಗಾಂಧಿನಗರದಲ್ಲಿ ಛಲದಿಂದ ಉಳಿದು ಇಂದು ಸ್ಟಾರ್ ಮಾಡಿದೆ ಎಂದು ಎಲ್ಲರಿಗೂ ಗೊತ್ತು. ಅಂಥ ಪುಷ್ಪಲತಾ ಅವರು ಮಗನಿಗೆ ಬುದ್ಧಿ ಮಾತು ಹೇಳಿರುವುದಲ್ಲದೆ ಆತನಿಂದಲೂ ಕಲಿತುಕೊಂಡಿದ್ದಾರಂತೆ. ಈ ಮಾತನ್ನು ಸ್ವತಃ ಅವರೇ ಸಿನಿಕನ್ನಡ.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ. ಮಾತೃದಿನದ ವಿಶೇಷವಾಗಿ ಯಶ್ ತಾಯಿ ಪುಷ್ಪಪಲತಾ ಅರುಣ್ ಕುಮಾರ್ ಅವರ ವಿಶೇಷ ಸಂದರ್ಶನ ನಿಮಗಾಗಿ.
ನಮಸ್ಕಾರಮ್ಮ. ಮದರ್ಸ್ ಡೇ ಸಂದರ್ಭದಲ್ಲಿ ನೀವು ಯಶ್ ಜತೆಯಲ್ಲೇ ಇದ್ದೀರ?
ನಮಸ್ಕಾರ. ಇಲ್ಲ, ನಮ್ಮನ್ನು ಸದ್ಯಕ್ಕೆ ಲಾಕ್ಡೌನ್ ಬೇರೆ ಬೇರೆ ಮಾಡಿದೆ. ನಾವು ಹಾಸನದ ಫಾರ್ಮ್ ಹೌಸ್‌ನಲ್ಲಿದ್ದೇವೆ. ಆದರೆ ಸದಾ ಟಚ್ಚಲ್ಲಿದ್ದೇವೆ. ವಾಟ್ಸ್ಯಾಪ್ ಕಾಲ್ ಮಾಡುತ್ತಿರುತ್ತಾನೆ. ಮಕ್ಕಳನ್ನು ತೋರಿಸುತ್ತಾನೆ. ಅಂದಹಾಗೆ ಈ ಸಂದರ್ಭದಲ್ಲಿ ಜತೆಗಿರುವ ಅಥವಾ ಮಕ್ಕಳಿಂದ ಅನಿವಾರ್ಯವಾಗಿ ದೂರದಲ್ಲಿರುವ ಎಲ್ಲ ತಾಯಂದಿರಿಗೂ ನಾನು `ಮದರ್ಸ್ ಡೇ’ ಶುಭಕೋರಲು ಬಯಸುತ್ತೇನೆ.
ಯಶ್ ತಾಯಿ ಎಂದು ಹೇಳಿಕೊಳ್ಳುವಲ್ಲಿ ನಿಮಗಿರುವ ಹೆಮ್ಮೆ ಎಷ್ಟು?
ತುಂಬಾನೇ ಇದೆ. ನಾನು ಹೇಳಿಕೊಳ್ಳುವುದಕ್ಕಿಂತಲೂ ಜನರೇ ನನ್ನನ್ನು ಯಶ್ ತಾಯಿ ಎಂದು ಗುರುತಿಸುತ್ತಿರುತ್ತಾರೆ. ನಾನು ಆಟೊ ಹತ್ತಿದರೆ ಎಷ್ಟೋ ಬಾರಿ ರಿಕ್ಷಾದವರು ನನ್ನನ್ನು ಗುರುತು ಹಿಡಿಯುತ್ತಾರೆ. ಅಥವಾ ನಿಮ್ಮನ್ನೆಲ್ಲೋ ನೋಡಿದ್ದೀವಲ್ಲಮ್ಮ.. ಎಲ್ಲಿ ನೆನಪಾಗ್ತಿಲ್ಲ ಅಂತಾರೆ. ನಾನು ಯಶ್ ತಾಯಿ ಅಂತ ಗೊತ್ತಾದ ತಕ್ಷಣ ಆಟೋ ಚಾರ್ಜ್ ಬೇಡ ಅಂತಾರೆ. ನಾನು ಮತ್ತು ನನ್ನ ಪತಿಯನ್ನು ಕಂಡ ವಯಸ್ಸಾದ ದಂಪತಿ ನಮ್ಮ ಬಳಿಗೆ ಬಂದು, “ನೀವು ಶಿವಪಾರ್ವತಿ ಹಾಗೆ. ಎಂಥ ಮಗನ್ನ ಹೆತ್ತಿದ್ದೀರ” ಎಂದು ಆಶೀರ್ವಾದ ಮಾಡುತ್ತಾರೆ. ಆಗೆಲ್ಲ ನನ್ನ ನಿರೀಕ್ಷೆ ನಿಜವಾಯಿತಲ್ಲ ಎಂದು ಸಂತೃಪ್ತಿಯಾಗುತ್ತದೆ. ಸಮಾಜದಲ್ಲಿ ನೀನು ಒಳ್ಳೆಯ ವ್ಯಕ್ತಿಯಾಗಬೇಕು. ನಿನ್ನಿಂದ ನಾಲ್ಕು ಜನಕ್ಕೆ ಒಳ್ಳೆಯದಾಗಬೇಕು. ನಾನು ನನ್ನ ಯಜಮಾನ್ರು ಚಿಕ್ಕ ವಯಸ್ಸಿನಿಂದಲೇ ಅವನಿಗೆ ಹೇಳಿಕೊಟ್ಟಿದ್ದು ಅದನ್ನೇ. ಈಗ ನಾನು ಹೋದಲ್ಲಿ ಬಂದಲ್ಲಿ ಎಲ್ಲ “ಎಂಥಾ ಮಗನನ್ನು ಹೆತ್ತಿದ್ದೀರಿ, ನೀವೇ ಅದೃಷ್ಟವಂತರು” ಅಂತಾರೆ. “ನಿಮ್ಮಂಥ ತಾಯಿ ಹೊಟ್ಟೆಯಲ್ಲಿ ಹುಟ್ಟಿರುವುದಕ್ಕೆ ನಿಮ್ಮಗ ಇಂದು ನ್ಯಾಶನಲ್ ಸ್ಟಾರ್ ಆಗಿದ್ದಾನೆ” ಎನ್ನುವವರು ಇದ್ದಾರೆ. ಒಬ್ಬ ತಾಯಿಗೆ ಇದಕ್ಕಿಂತ ಹೆಚ್ಚೇನು ಬೇಕಿದೆ ಹೇಳಿ.
ನಿಮ್ಮಂಥ ತಾಯಿಯನ್ನು ಆದರ್ಶವಾಗಿರಿಸಬೇಕು ಎನ್ನುವವರಿಗೆ ನಿಮ್ಮ ಸಲಹೆಯೇನು?
ಯಾರ್ಯಾರಿಗೋ ಬೇಡ, ನಾನು ನನ್ನ ಮಗಳಲ್ಲೇ ಹೇಳುವ ಒಂದು ಮಾತಿದೆ. “ತಾಯಿಯಾಗುವುದು ಮುಖ್ಯವಲ್ಲ, ಮುಂದೆ ಆ ಮಕ್ಕಳನ್ನು ಬೆಳೆಸುವುದರಲ್ಲಿ ತುಂಬ ಜವಾಬ್ದಾರಿ ಇದೆ” ಅನ್ನೋದನ್ನು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಎಷ್ಟೇ ಕೆಲಸ ಇದ್ದರೂ ಮಕ್ಕಳ ಮೇಲೆ ನಾವು ಸದಾ ಒಂದು ಕಣ್ಣಿಟ್ಟಿರಬೇಕು. ಅವರು ಏನು ತಪ್ಪುಮಾಡುತ್ತಾರೆ ಎನ್ನುವುದನ್ನು ಪತ್ತೆ ಮಾಡಿ, ಅದು ಯಾಕೆ ಮಾಡಬಾರದು ಎಂದು ಬುದ್ಧಿ ಹೇಳಬೇಕು. ಅವರ ತಪ್ಪನ್ನು ತಿದ್ದುವುದು ಮುಖ್ಯ. ನಮ್ಮಜ್ಜಿ ಯಾವಾಗಲೂ ಒಂದು ಗಾದೆಮಾತು ಹೇಳೋರು, “ಮುರೀದೇ ಇರುವ ಗಿಡ, ಹೊಡೆಯದೇ ಇರುವ ಮಕ್ಕಳು ಯಾವತ್ತೂ ಉದ್ಧಾರವಾಗಲ್ಲ” ಅಂತ. ಅಂದರೆ ಮಕ್ಕಳಿಗೆ ಹೊಡೆಯಲೇಬೇಕು ಅಂತ ಅಲ್ಲ; ಶಿಸ್ತಿನಿಂದ ಗೈಡ್ ಮಾಡುವುದು ಕೂಡ ಹೊಡೆದಷ್ಟೇ ಪರಿಣಾಮಕಾರಿಯಾಗಿರಬೇಕು. ಕೆಲವರನ್ನು ನೋಡಿದ್ದೇನೆ ನಾನು “ನನ್ನ ಮಗ ಯಾವತ್ತೂ ತಪ್ಪು ಮಾಡಲ್ಲ. ನನ್ನ ಮಗ ಅಂಥವನೇ ಅಲ್ಲ” ಎಂದು ಹೇಳುತ್ತಿರುತ್ತಾರೆ. ಆದರೆ ನಾನು ಯಾವತ್ತೂ ಹಾಗೆ ಹೇಳಲ್ಲ! ಬೇಕಿದ್ರೆ ನನ್ನ ಮಗನ್ನೇ ಕೇಳಿ; ನಾನು ಯಾವತ್ತಾದರೂ ಮಗನಿಗೆ ಬೈದಿರಬಹುದೇನೋ ಆದರೆ ಸೊಸೆಗೆ ಮಾತ್ರ ಬೈದಿಲ್ಲ. ಅವಳಲ್ಲಿ ಹೇಗಿದ್ದೀಯಮ್ಮ ಎಂದು ಕೇಳಿದರೆ “ಅತ್ತೆ, ನಿಮ್ಮಗ ನನ್ನನ್ನು ತುಂಬ ಚೆನ್ನಾಗಿ ನೋಡ್ಕೊಂತಾರೆ. ಅದನ್ನೆಲ್ಲ ನೀವು ಕಲಿಸಿರ್ತೀರ ಬಿಡಿ ಅತ್ತೆ” ಎಂದು ಸೊಸೆ ಹೇಳ್ತಿರ್ತಾಳೆ. ನನ್ನ ಮಗ ಎಲ್ಲದರಲ್ಲೂ ಜಾಣ ಇದ್ದಾನೆ ಎಂದು ನಾನು ಅಂದುಕೊಂಡಿದ್ದೀನಿ. ಆದರೆ ಅವನ ಮುಂದೆ ಯಾವತ್ತೂ ಹೇಳಿಲ್ಲ.
ಇಂದು ಬಹಳಷ್ಟು ತಾಯಂದಿರು ಮಕ್ಕಳಿಂದ ನಿರಾಶೆಗೊಳ್ಳಲು ಕಾರಣವೇನಿರಬಹುದು?
ಮುಖ್ಯವಾಗಿ ಮಕ್ಕಳ ಮೇಲೆ ನಿರೀಕ್ಷೆ ಹೆಚ್ಚಿದಾಗ ನಿರಾಶೆ ಸಹಜ. ಹಾಗಾಗಿ ಅತಿಯಾದ ನಿರೀಕ್ಷೆ ಇಟ್ಟುಕೊಂಡರೆ ಅದು ನಮ್ಮದೇ ತಪ್ಪು. ಮಕ್ಕಳನ್ನು ಸಾಧ್ಯವಾದಷ್ಟು ಚೆನ್ನಾಗಿ ಬೆಳೆಸುವುದು, ಸಾಕುವುದು ನಮ್ಮ ಕರ್ತವ್ಯ. ಹಾಗಾಗಿ ನಮ್ಮ ನಿರೀಕ್ಷೆಗಳನ್ನೆಲ್ಲ ಅವರ ಮೇಲೆ ಹೇರುವುದು ತಪ್ಪು. ಇದು ನಾನು ತಾಯಿಯಾಗಿ ಇತರ ತಾಯಂದಿರಲ್ಲಿ ಮಾಡುವ ಮನವಿ. ಒಂದು ವೇಳೆ ನಿರೀಕ್ಷೆ ಇಟ್ಟರೂ ಅದು ಈಡೇರದಿದ್ದರೆ ಅದನ್ನು ಸಹಿಸುವ ಶಕ್ತಿ ನಮ್ಮಲ್ಲಿ ಇರಬೇಕು. ನಾನು ನನ್ನ ಮಗನನ್ನು ಹೆಂಗೆ ಬೆಳೆಸಿದ್ದೀನಿ ಅಂದರೆ, ಹೇಗಾದರೂ ಮಾಡಿ ಮನೆಗೆ ಬರುತ್ತಿರಬೇಕು, ನಮ್ಮ ಬಗ್ಗೆ ಸದಾ ವಿಚಾರಿಸುತ್ತಿರಬೇಕು ಅಥವಾ ನಮಗೋಸ್ಕರ ಆತನ ಕೆಲಸ ಬಿಟ್ಟು ಬರಬೇಕು ಅಂತ ಯಾವತ್ತೂ ಒತ್ತಡ ಹೇರಿದವಳಲ್ಲ. “ನಿನ್ನ ಕರ್ತವ್ಯ ನೀನು ಮಾಡುತ್ತಿರು. ಮನೆಯಲ್ಲೇ ಇರಬೇಕಾಗಿಲ್ಲ. ಮನೆಯಲ್ಲಿದ್ದರೂ ಸುಮ್ಮನೆ ಇರಬಾರ್ದು, ಏನಾದರೊಂದು ಕೆಲಸ ಮಾಡುತ್ತಿರಬೇಕು, ಟೈಮ್ ವೇಸ್ಟ್ ಮಾಡಬಾರದು” ಎಂದು ಹೇಳುತ್ತಿದ್ದೆ. ಹಾಗಾಗಿ ನನಗೆ ಟೈಮ್ ಕೊಡ್ತಿಲ್ಲ, ಅಷ್ಟು ದಿನಗಳಿಂದ ನನ್ನನ್ನು ನೋಡೋಕೇನೇ ಬರ್ಲಿಲ್ಲ ಅಥವಾ ನನಗೋಸ್ಕರ ಏನೂ ತೆಗೆಸಿ ಕೊಟ್ಟಿಲ್ಲ ಅಂತ ಯಾವತ್ತೂ ಕೊರಗಲ್ಲ. ಯಾಕೆಂದರೆ ಅವನ್ನೆಲ್ಲ ನಾನು ನಿರೀಕ್ಷೆ ಮಾಡೋದೇ ಇಲ್ಲ. ನಾವು ಯಾವಾಗಲೂ ಫ್ರೆಂಡ್ಸ್ ತರಹ ಇರುತ್ತೇವೆ. ಫ್ರೆಂಡ್ಸ್ ಹೇಗೆ ಚರ್ಚೆ ಮಾಡ್ತಾರೋ ಹಂಗೇ ಚರ್ಚೆ ಮಾಡುತ್ತೇವೆ. ನನ್ನ ವಿಚಾರ ಸರಿ ಅನಿಸಿದಾಗ ಒಪ್ಕೋತಾನೆ. ಅವನ ನಿರ್ಧಾರ ಸರಿ ಇದ್ದಂತೆ ಕಂಡರೆ ನಾನು ಒಪ್ಕೋತೇನೆ. ತಾಯಿಯಾಗಿ ನಾನು ಕೂಡ ಆತನಿಂದ ತುಂಬ ಕಲಿತಿದ್ದೇನೆ!
ನೀವು ಯಶ್ ಅವರಿಂದ ಕಲಿತಿರುವ ಯಾವುದಾದರೂ ಒಂದು ವಿಚಾರವನ್ನು ಹೇಳುತ್ತೀರ ?
ಅವನಿಗೆ ತುಂಬ ತಾಳ್ಮೆ ಇದೆ. ನನಗಿಂತಲು ತಾಳ್ಮೆ ಎಂದೇ ಹೇಳಬಹುದು. ಎಂಥ ಸಂದರ್ಭ ಆದರೂ ಅವನು ಯೋಚಿಸದೆ ಮುಂದೆ ನುಗ್ಗುವವನಲ್ಲ. ತಾಯಾಗಿ ನಾನು ಹೇಳಿಕೊಟ್ಟ ದಾರಿಯಲ್ಲಿ ಅವನು ಬೆಳೆದಿರಬಹುದು. ಆದರೆ ಅವನಿಂದ ತುಂಬ ಕಲಿತಿದ್ದೇನೆ. ಆಗಲೇ ಹೇಳಿದಂತೆ ನಾನು ಕೂಡ ಅವನ ಮೇಲೆ ನಿರೀಕ್ಷೆ ಇರಿಸಿಕೊಂಡಿದ್ದೆ. ಅವನ ದಾರಿಯಲ್ಲಿ ನಮ್ಮ ಕೈಗೆ ಸಿಗ್ತಿಲ್ಲ; ಸ್ಟಾರ್ ಆದ ಮೇಲಿನ ಅವನ ಬದುಕಿನ ರೀತಿ (ವಿದೇಶಕ್ಕೆ ಹೋಗಬೇಕಾಗುವುದು, ತಿಂಗಳ ಕಾಲ ಮನೆಗೆ ಬರದಿರುವುದು), ನಮಗೆ ಕಷ್ಟಾಗುತ್ತೆ ಎಂದುಕೊಂಡಿದ್ದೆ. ಆದರೆ ಸ್ಟಾರ್ ಆದಮೇಲೆಯೂ ನಮ್ಮ ಸಣ್ಣಪುಟ್ಟ ನಿರೀಕ್ಷೆಗಳಿಗಿಂತ ಆತನ ಗುರಿ ಮುಖ್ಯ ಎಂದು ಅರ್ಥ ಮಾಡಿಕೊಂಡು ಆ ನಿರೀಕ್ಷೆಗಳಿಂದ ನಾನು ಆಚೆ ಬಂದೆ. ಆಮೇಲೆ ಯೋಚಿಸಿದಾಗ, “ಹೌದಲ್ವಾ ನಾವೇ ಅಂದುಕೊಂಡಿದ್ದಲ್ವ ಅವನು ಬೆಳೆಯಬೇಕು ಅಂತ, ಆತನ ದಾರಿಯಲ್ಲಿ ಆತ ಚೆನ್ನಾಗಿದ್ದರೆ ಸಾಕು” ಎಂದು ಅಂದ್ಕೋತೀನಿ. ಅವನು ಪ್ರಪಂಚ ನೋಡಿ ತುಂಬ ಕಲಿತಿದ್ದಾನೆ. ಹಾಗಂತ ನಾನು ಅವನು ಹೇಳಿದ್ದನ್ನೆಲ್ಲ ಕೇಳುತ್ತಾ ಕುಳಿತಿರುತ್ತೇನೆ ಅಂತ ಅಲ್ಲ! ನಮ್ಮನೆಯಲ್ಲಿ ಏನೇ ಮಾತುಗಳು ಬೆಳೆದರೂ ಅದರಲ್ಲಿ ನಂದು ಅವನದ್ದೇ ಜಾಸ್ತಿ! ಅವನು ದೊಡ್ಡ ವ್ಯಕ್ತಿ ಅಂತ ನಾನು ಯಾವತ್ತೂ ನೋಡಲ್ಲ. ಅವನೂ ಅಷ್ಟೇ, ನಾನು ದೊಡ್ಡೋನಾಗಿದ್ದೇನೆ ಇನ್ನುಎಲ್ಲಾನೂ ನನ್ನ ಮಾತೇ ಸರಿ ಅಂತ ಅವನೂ ಇರಲ್ಲ. ನನಗಂತೂ ಯಾವಾಗಲೂ ಅವನು ಮಗನೇ ತಾನೇ.
ಯಶ್ ಮನೆಗೆ ಬಂದಾಗಲೆಲ್ಲ ಹೆಚ್ಚಾಗಿ ನೀಡುವ ತಿಂಡಿ ಮತ್ತು ಆಡುವ ಮಾತುಗಳೇನು?
ನಾನು ಮಾಡುವುದೆಲ್ಲ ಇಷ್ಟ ಅವನಿಗೆ. ಸಾಸಿವೆ ಚಿತ್ರಾನ್ನ, ನಿಂಬೆ ಹಣ್ಣಿನ ಚಿತ್ರಾನ್ನ, ಗೀ ರೈಸ್ ಹೀಗೆ ವಿಶೇಷವಾಗಿ ವೆಜಿಟೇಬಲ್ ಪಲಾವ್, ಅಕ್ಕಿರೊಟ್ಟಿ ಎಲ್ಲವೂ ಇಷ್ಟ. ಇನ್ನು ಮಾತುಗಳೆಲ್ಲ ತಮಾಷೆಯಾಗಿರುತ್ತವೆ. ಆಗಲೇ ಹೇಳಿದಂತೆ ನಾವು ಸ್ನೇಹಿತರಂತೆ ಇರುತ್ತೇವೆ. ಮೊದಲೆಲ್ಲ ನಾನು ಅವನಲ್ಲಿ ಹೇಳುತ್ತಿದ್ದ ಒಂದು ಮಾತಿದೆ. ಅದು ನನ್ನ ಬದುಕಿನ ರೀತಿಯೂ ಹೌದು, ಅದೇನೆಂದರೆ “ಈಗ ನಾವು ಚೆನ್ನಾಗಿದ್ದರೂ, ಒಂದು ಹಂತದಲ್ಲಿ ಎಲ್ಲರೂ ಕಷ್ಟಪಟ್ಟಿದ್ದೇವೆ. ಆದರೆ ಯಾವತ್ತೂ ಅದರ ಬಗ್ಗೆ ಹೇಳಿಕೊಳ್ಳುವುದು ಬೇಡ. ಹಾಗಂತ ಕಷ್ಟದ ದಿನಗಳ ಬಗ್ಗೆ ಮರೆತಿದ್ದೇವೆ ಅಂತ ಅಲ್ಲ. ಕಷ್ಟದ ಬಗ್ಗೆ ಹೇಳಿ ಸಿಂಪತಿಗಿಟ್ಟಿಸುವ ಅಗತ್ಯ ಇಲ್ಲ” ಅಂತ. ನಾನು ಮಗನಿಗೆ ಅದನ್ನೇ ಹೇಳಿದ್ದೇನೆ. ಎಲ್ಲೋ ಅಪ್ಪಿತಪ್ಪಿ ನಮ್ಮ ಕಣ್ಣೀರು ಕಂಡರೂ ಅದನ್ನುನಾಟಕ ಎಂದುಕೊಳ್ಳುವವರು ಸಮಾಜದಲ್ಲಿದ್ದಾರೆ. ಹಾಗಾಗಿ ನಮ್ಮ ಕಷ್ಟ ಕೇಳಿ ಅವಕಾಶ ನೀಡುವವರಿಗಿಂತ ನಮ್ಮ ಶ್ರಮದಿಂದ ಅವಕಾಶ ಗಿಟ್ಟಿಸಿಕೊಳ್ಳಬೇಕಿರುವುದು ಮುಖ್ಯ ಎಂದು. ದೇವರ ದಯೆಯಿಂದ ಅದೇ ಇಂದು ನಡೆದಿದೆ. ನಾನು ತುಂಬ ಶಿಸ್ತು. ನಾನು ಯಾವಾಗಲು ಹೇಳುವ ಮಾತು ಏನೆಂದರೆ ನಾವು ಏನೂ ತಪ್ಪು ಮಾಡಿಲ್ಲ ಅಂದರೆ ಸಮಾಜ ನಮಗೆ ಯಾವತ್ತೂ ತಪ್ಪು ಮಾಡಲ್ಲ, ತಪ್ಪು ಮಾಡಿ ಹೆದರುತ್ತಾ ಹೋದರೆ, ಒಂದು ಸುಳ್ಳಿಗೊಂದು ಸುಳ್ಳು ಸೇರಿಸಿ ನಿಜದಿಂದ ಕದ್ದು ಮುಚ್ಚಿಯೇ ಬದುಕಬೇಕಾಗುತ್ತದೆ. ನಾವು ಪ್ರಾಮಾಣಿಕವಾಗಿದ್ದರೆ ಖಂಡಿತವಾಗಿ ನಮ್ಮ ಸತ್ಯ ನಮ್ಮನ್ನು ಕಾಪಾಡುತ್ತದೆ. ಅದೇ ರೀತಿಯಲ್ಲಿ ನನ್ನ ಮಗನ ಸತ್ಯವಂತಿಕೆ ಒಂದು ಒಳ್ಳೆಯ ಹೆಸರು ತಂದುಕೊಟ್ಟಿದೆ. ಖುಷಿಯಿದೆ.