ನಿಕಿತಾಗೆ ನೀಡಿದೆ ಚಂದನವನ ಸ್ವಾಗತ

ಸ್ಟಾರ್ ಸುವರ್ಣ ವಾಹಿನಿಯ “ಸತ್ಯಂ ಶಿವಂ ಸುಂದರಂ” ನಲ್ಲಿ ಟೀನಾ ಪಾತ್ರದಿಂದ ಪರಿಚಿತರಾಗಿರುವ ನಟಿ ನಿಖಿತಾ ದೋರ್ತೋಡಿ. ಇವರು ಮಂಗಳೂರು ಮೂಲದ ಪ್ರತಿಭೆಗಳ ಸಾಲಿಗೆ ಮತ್ತೊಂದು ಸೇರ್ಪಡೆ. ನಟನೆ ಎಂಬುದು ಸುಲಭದ ಮಾತಲ್ಲ, ಒಂದು ಪಾತ್ರ ನಿರ್ವಹಿಸುವುದರಲ್ಲಿ ಕಲಾವಿದನ ಶ್ರಮ ಬಹಳ ದೊಡ್ಡದು, ತಮ್ಮ ನಟನಾ ಸಾಮರ್ಥ್ಯದಿಂದ ಮನರಂಜಿಸಿ ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿಯುವ ಸಾಮರ್ಥ್ಯ ಒಬ್ಬ ಕಲಾವಿದನಿಗೆ ಇರುತ್ತದೆ. ಇದೇ ರೀತಿಯ ಸಾಮರ್ಥ್ಯದಿಂದ ಕಿರುತೆರೆ ಪ್ರೇಕ್ಷಕರ ಮನೆಗೆದ್ದ ನಟಿ ನಿಖಿತಾ ದೋರ್ತೋಡಿ.

ಮಂಗಳೂರಿನ ಉಪ್ಪಿನಂಗಡಿ ಮೂಲದ ನಿಕಿತಾ ಅವರಿಗೆ
ಚಿಕ್ಕಂದಿನಿಂದಲೂ ನೃತ್ಯದ ಬಗ್ಗೆ ಅಪಾರ ಒಲವು. ಶಾಲಾ ದಿನಗಳಲ್ಲೇ ಫಿಲ್ಮ್ ಇನ್ಸ್ಟಿಟ್ಯೂಟ್ ಒಂದರಲ್ಲಿ ಭರತನಾಟ್ಯ ಕಲಿಯಲಾರಂಭಿಸಿದರು, ನೃತ್ಯದ ಜೊತೆಗೆ ನಟನೆಯನ್ನು ಅಲ್ಲಿ ಕಲಿಸುತ್ತಿದ್ದರಿಂದಲೋ ಏನೋ ಆ ವಾತಾವರಣ ಅವರಲ್ಲಿ ನಟನೆಯ ಬಗ್ಗೆ ಒಲವು ಮೂಡುವಂತೆ ಮಾಡಿತು.
ನಟಿ ಆಗಿರದಿದ್ದರೆ ಏನಾಗ ಬಯಸುವಿರಿ ಎಂಬ ಪ್ರಶ್ನೆಗೆ “ತಂದೆಯವರು ಏರ್ಫೋರ್ಸ್ ನಲ್ಲಿ ಸೇವೆ ಸಲ್ಲಿಸಿದವರು ಹಾಗಾಗಿ ಪೈಲಟ್ ಆಗಬೇಕೆಂಬ ಕನಸು ಹೊತ್ತಿದ್ದೆ ಕಾರಣಾಂತರಗಳಿಂದ ಅದು ನನಸಾಗಲಿಲ್ಲ, ಆದರೆ ಎನ್ ಸಿ ಸಿ ಯಲ್ಲಿ ಇರುವಾಗ ಜಕ್ಕೂರು ಏರ್ ಫೀಲ್ಡ್ ನಲ್ಲಿ ತರಬೇತಿ
ಪಡೆದಿರುತ್ತೇನೆ. ಎನ್ ಸಿ ಸಿ ಅಂತಾರಾಜ್ಯ ಸ್ಪರ್ಧೆಯ ಭಾಗವಾಗಿ X ಏರ್ ಮೈಕ್ರೋ ಲೈಟ್ 2 ಸೀಟರ್ ಏರ್ಕ್ರಾಫ್ಟ್ ಚಾಲನೆಯ ಅವಕಾಶ ದೊರೆಯಿತು. ನಿಯಮಿತ ತರಬೇತಿಯಲ್ಲಿ ಹದಿಮೂರು ಘಂಟೆಗಳು ಪುಟ್ಟ ಏರ್ಕ್ರಾಫ್ಟ್ ಅನ್ನು ನಾನೇ ಹಾರಿಸಿದ್ದೇನೆ, ಮತ್ತು ಕರ್ನಾಟಕ – ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದೆ” ಎನ್ನುತ್ತಾರೆ.

ಕಾಲೇಜು ದಿನಗಳಲ್ಲಿ ನಿರೂಪಕಿಯಾಗಿ ಸಕ್ರಿಯರಾಗಿದ್ದ ನಿಕಿತಾರವರು ಶಿಕ್ಷಣ ಮುಗಿದ ನಂತರ ಮಾಡೆಲಿಂಗ್ ಕ್ಷೇತ್ರದತ್ತ ಮುಖ ಮಾಡುತ್ತಾರೆ. 2019 ರ ವೋಗ್ ಬ್ಯೂಟಿ ಪೇಜೆಂಟ್ ಒಂದರಲ್ಲಿ “ಬೆಸ್ಟ್ ಫೇಸ್ ಅಫ್ ದ ಯೆರ್” ಶ್ರೇಯ ಇವರ ಮುಡಿಗೇರುತ್ತದೆ. ಮೋಡೆಲ್ಲಿಂಗ್ ಜೊತೆ ಜತೆಗೆ ಜಾಹೀರಾತು ಕ್ಷೇತ್ರದ ಕಡೆಗೂ ಕಾಲಿಟ್ಟ ನಿಕಿತಾ “ಪ್ರಕೃತಿ ಹೇರ್ ಆಯಿಲ್”, “ಸ್ಪೋಕನ್ ಇಂಗ್ಲಿಷ್ ಕೋರ್ಸ್ ಆ್ಯಪ್” ಮುಂತಾದ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾಡೆಲಿಂಗ್ ಮತ್ತು ಜಾಹೀರಾತು ಇವೆರಡರ ಹೊಯ್ದಾಟ ದ ನಡುವೆಯೂ ನಟಿಸಬೇಕೆಂಬ ಆಕಾಂಕ್ಷೆ ಬೆಂಬಿಡದೆ ಕಾಡುತ್ತಿರುತ್ತದೆ.
ಉತ್ತಮ ಅವಕಾಶಗಳ ಹುಡುಕಾಟದಲ್ಲಿದಾಗ ‘ಮಾಸ್ಟರ್ ಪೀಸ್’ ಖ್ಯಾತಿಯ ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶಿಸಿ, ನಾಯಕರಾದ “ಭರತ ಬಾಹುಬಲಿ” ಚಿತ್ರದ ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಅವಕಾಶ ಸಿಗುತ್ತದೆ. ಸಣ್ಣ ಪಾತ್ರವಾದರೂ ಕತೆಯ ಪ್ರಮುಖ ಘಟ್ಟದಲ್ಲಿ ಟ್ವಿಸ್ಟ್
ಕೊಡುವ ಪಾತ್ರ ಆಗಿದ್ದರಿಂದ ಹಾಗೂ ಅನುಭವಿ ನಿರ್ದೇಶಕರೊಬ್ಬರ ಜೊತೆಗೆ ಕೆಲಸ ಮಾಡುವ ಉದ್ದೇಶದಿಂದ ಒಪ್ಪಿಕೊಳ್ಳುತ್ತಾರೆ.

ಬೆಳ್ಳಿಪರದೆಯಲ್ಲಿಯೇ ಗಟ್ಟಿನೆಲೆ ಕಂಡುಕೊಳ್ಳಬೇಕೆಂಬ ಉದ್ದೇಶ ಹೊಂದಿರುವ ನಿಖಿತಾ ಅವರಿಗೆ ಕಿರುತೆರೆ ತಮ್ಮ ಕನಸಿಗೆ ವ್ಯವಸ್ಥಿತ ರಹದಾರಿ ಕಲ್ಪಿಸುತ್ತದೆ ಮತ್ತು ಜನರ ಮನೆ ಮನಗಳಲ್ಲಿ ನೆಲೆಯೂರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿದೊಡನೆ ಧಾರಾವಾಹಿಗಳಿಗೆ ಆಡಿಷನ್ ಕೊಡಲು ನಿರ್ಧರಿಸುತ್ತಾರೆ. ಕೇವಲ ಆಸೆ ಇದ್ದರಷ್ಟೇ ಸಾಲದಲ್ಲವೇ ಬಣ್ಣದ ಲೋಕದ ವ್ಯಾಮೋಹ ಸಾಮಾನ್ಯವಾದುದಲ್ಲ ಅದು ಎಲ್ಲರನ್ನೂ ತನ್ನ ಕದಂಬ ಬಾಹುಗಳಿಂದ ಆಕರ್ಷಿಸುತ್ತದೆ
ಆದರೆ ಕೆಲವರಿಗೆ ಮಾತ್ರ ತನ್ನ ಅಂತರಂಗದಲ್ಲಿ ಜಾಗ ಕೊಡುತ್ತದೆ.

ಕಿರುತೆರೆ ಪ್ರವೇಶಿಸಲು ನಿಕಿತಾ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ, ಪ್ರತೀ ಬಾರಿ ಬೆಂಗಳೂರಿನಿಂದ ಆಡಿಷನ್ಗಾಗಿ ಕರೆ ಬಂದಾಗ ಮಂಗಳೂರಿನಿಂದ ರಾತ್ರಿ ಬಸ್ನಲ್ಲಿ ಪ್ರಯಾಣ ಮಾಡಿ, ಬೆಳಿಗ್ಗೆ ಬೆಂಗಳೂರು ತಲುಪಿ ಆಡಿಷನ್ ಮುಗಿಸಿ ಅದೇ ದಿನ ರಾತ್ರಿ ಮಂಗಳೂರಿಗೆ ವಾಪಸಾಗುತ್ತಿದ್ದರು. ಎಷ್ಟೋ ಬಾರಿ ಪ್ರತ್ಯುತ್ತರ ಬಾರದೆ ನಿರಾಸೆಗೊಳಗಾಗಿದ್ದು ಉಂಟು, ಎಷ್ಟೇ ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನ ಆಗದಿದ್ದಾಗ ಬೇಸತ್ತು ಆಡಿಷನ್ ಕೊಡುವುದನ್ನೇ ನಿಲ್ಲಿಸಲು ತೀರ್ಮಾನಿಸಿದ್ದು ಉಂಟು, ಆದರೂ ಧೃತಿಗೆಡದೆ ತನಗೆ ತಾನೇ ಸಮಾಧಾನ ಮಾಡಿಕೊಂಡು ಪ್ರಯತ್ನ ಮುಂದುವರೆಸಿದ್ದು ಉಂಟು.
ಮುಂದೇ ಒಂದು ದಿನ ಅಂದರೆ ಸತತ ಒಂದು ವರ್ಷದ ಪ್ರಯತ್ನದ ಫಲ ವೆಂಬಂತೆ ಪ್ರಭು ಎಂಬ ಕಾಸ್ಟಿಂಗ್
ಏಜೆಂಟ್ ಮೂಲಕ ಸ್ಟಾರ್ ಸುವರ್ಣ ಚಾನಲ್ ನಿಂದ
ಕರೆ ಬರುತ್ತದೆ. ಸತ್ಯಂ ಶಿವಂ ಸುಂದರಂ ಎಂಬ ಧಾರಾವಾಹಿಯ “ಟೀನಾ” ಪಾತ್ರಕ್ಕೆ ಆಯ್ಕೆಯಾಗುತ್ತಾರೆ.
ಅಲ್ಲಿಂದ ಬಣ್ಣದ ಲೋಕದ ಪ್ರಯಾಣ ಶುರು.

‘ಸಮಷ್ಟಿ’ ರಂಗ ತಂಡದಲ್ಲೂ ಸಹ ಸಕ್ರಿಯರಾಗಿರುವ ನಿಕಿತಾ ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಾಟಕ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. “ನಟನೆ ಎಂಬುದು ಅದ್ಭುತ ಕಲೆ, ಅದು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಇರುವ ವೇದಿಕೆ. ನಟನಾದವನಿಗೆ ಸಹನೆ ಮತ್ತು ಶ್ರದ್ಧೆ ಬಹಳ ಮುಖ್ಯ ಹೀಗಿದ್ದರೆ ಮಾತ್ರ ಈ ಕ್ಷೇತ್ರದಲ್ಲಿ ನೆಲೆಯೂರಲು ಸಾಧ್ಯ ಇದನ್ನು ನನಗೆ ನಾಟಕದ ಒಡನಾಟ ಕಲಿಸಿದೆ” ಎನ್ನುವ ನಿಕಿತಾ ಅವರದು “ಸತ್ಯಂ ಶಿವಂ ಸುಂದರಂ” ನಲ್ಲಿ ತುಂಬಾ ಗಟ್ಟಿ ಪಾತ್ರವಾಗಿದ್ದು, ಮುಂಬೈನಿಂದ ಬಂದಿರುವ “ಟೀನಾ” ಹೆಸರಿನಿಂದ ಜನಮೆಚ್ಚುಗೆ ಗಳಿಸಿದ್ದಾರೆ. ಅರಸು ಕುಟುಂಬದ ಮೂರನೇ ಮಗ ಸುಂದರರಾಜ್ ಅರಸ್ ನ ಪ್ರೆಯಸಿಯಾಗಿ, ಮೊದಲಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಂಡಿದ್ದರೂ
ತನ್ನನ್ನು ತನ್ನ ರೀತಿನೀತಿಗಳನ್ನು ಮನೆತನದ ಹಿತದೃಷ್ಟಿಯಿಂದ ಬದಲಾಯಿಸಿಕೊಂಡು ಕುಟುಂಬದ ಹಿತಕ್ಕಾಗಿ ಶ್ರಮಿಸುವ, ಕೆಲವೊಮ್ಮೆ ನಗಿಸುವ, ಕೆಲವೊಮ್ಮೆ ಅಳಿಸುವ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಭರವಸೆಯ ನಟಿ ಎನಿಸಿಕೊಂಡಿದ್ದಾರೆ.

ಉಳಿದಂತೆ ಇತರ ಚಾನಲ್ ಗಳಿಂದ ಅವಕಾಶಗಳು ಮತ್ತು ಒಂದೆರಡು ಸಿನೆಮಾಗಳ ಮಾತುಕತೆ ಸಹ ಮುಗಿದಿದೆ ಎನ್ನುವ ನಿಖಿತಾ ಅವರಿಗೆ ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿಯುವ ಪಾತ್ರ ನಿರ್ವಹಿಸುವ ಅಭಿಲಾಷೆ ಇದೆಯಂತೆ. ಅವರ ವೃತ್ತಿಜೀವನ ಉಜ್ವಲವಾಗಿರಲಿ ಎಂದು ಆಶಿಸೋಣ.

Recommended For You

Leave a Reply

error: Content is protected !!