‘ರೈ‘ ಎಂದರೆ ನೆನಪಾಗುವುದೇ ಕರ್ನಾಟಕದ ಕರಾವಳಿ. ಅದಕ್ಕೆ ಕಾರಣ ಅಲ್ಲಿನ ಬಂಟ ಜನಾಂಗದಲ್ಲಿ ಗುರುತಿಸಿರುವ ರೈಗಳು ದೇಶಾದ್ಯಂತ ಮಾಡಿರುವ ಹೆಸರು. ಅದು ಮಿಸ್ ವರ್ಲ್ಡ್ ಐಶ್ವರ್ಯಾ ರೈಯಿಂದ ಹಿಡಿದು ಅಂಡರ್ ವರ್ಲ್ಡ್ ನಲ್ಲಿ ಹೆಸರು ಮಾಡಿದ ಮುತ್ತಪ್ಪ ರೈ ತನಕ ಸಾಕಷ್ಟು ಮಂದಿ ಇದ್ದಾರೆ.
ಮುತ್ತಪ್ಪ ರೈಯವರು ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಆರಂಭದಲ್ಲಿ ಭೂಗತ ಲೋಕದ ಮೂಲಕ ಗುರುತಿಸಿಕೊಂಡರೂ, ಕೊನೆಗೆ ‘ಜಯಕರ್ನಾಟಕ’ ಸಂಘಟನೆಯ ಮೂಲಕ ಸಮಾಜ ಸೇವಕರಾಗಿ ಹೆಸರಾದವರು. ಈ ಪರಿವರ್ತನೆ ಅವರ ಬಗ್ಗೆ ಜನರಲ್ಲಿ ಒಂದು ರೀತಿಯ ಅಭಿಮಾನ ಮೂಡಿಸಲು ಕಾರಣವಾಗಿದೆ. ಅದೇ ಕಾರಣದಿಂದಲೇ ಅವರ ಬಗ್ಗೆ ರೈ ಹೆಸರಲ್ಲಿ ಚಿತ್ರವೊಂದನ್ನು ಮಾಡಲು ಖುದ್ದು ರಾಮ್ ಗೋಪಾಲ್ ವರ್ಮ ಮುಂದಾಗಿದ್ದರು. ಬಾಲಿವುಡ್ ನಟ ವಿವೇಕ್ ಒಬೆರಾಯ್ ಮುತ್ತಪ್ಪ ರೈಯಾಗಿ ನಟಿಸಲಿದ್ದರು. ಚಿತ್ರದ ಟೀಸರ್ ಕೂಡ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಆದರೆ ಅದೇನು ಕಾರಣವೋ ಗೊತ್ತಿಲ್ಲ; ರೈ ಹೆಸರಿನ ಆ ಚಿತ್ರ ಮುಂದೆ ಸಾಗಲೇ ಇಲ್ಲ!
ರೈ ಪಾತ್ರಕ್ಕೆ ಹೊಂದುವಂತೆ ವಿವೇಕ್ ಒಬೇರಾಯ್ ಗಡ್ಡ ಕತ್ತರಿಸಿಕೊಂಡಿದ್ದರು. ಟೀಸರಿನಲ್ಲಿ ಕೂಡ ಆ ಕಲಾವಿದ ರೈಯವರ ಮ್ಯಾನರಿಸಮ್ ಅನುಸರಿಸಿದ್ದರು. ಆದರೆ ಚಿತ್ರ ಮುಂದುವರಿಯಲಿಲ್ಲ. ಕಾರಣ ಮುತ್ತಪ್ಪ ರೈಯವರಿಗೆ ಇಷ್ಟವಾಗಿರಲಿಲ್ಲ. ಟೀಸರಲ್ಲಿ ಗ್ರೇಟೆಸ್ಟ್ ಗ್ಯಾಂಗ್ ಸ್ಟರ್ ಎಂದು ಬರೆಯಲಾಗಿತ್ತು. ಆದರೆ ಕತೆಯಲ್ಲೇನಿತ್ತೋ ಯಾರಿಗ್ಗೊತ್ತು? ಭೂಗತ ಲೋಕದ ಮೂಲಕ ಹೆಸರಾದರೂ ಆ ಲೋಕವನ್ನು ವೈಭವೀಕರಿಸಲು ಸ್ವತಃ ಮುತ್ತಪ್ಪ ರೈಯವರಿಗೂ ಇಷ್ಟವಿರಲಿಲ್ಲ. ಆದರೆ ವರ್ಮ ಚಿತ್ರಗಳಲ್ಲಿ ಪಾತಕದ ವೈಭವೀಕರಣ, ಒಂದಷ್ಟು ಕಾಮ ತುಂಬಿದ ಹಸಿಬಿಸಿ ದೃಶ್ಯಗಳು ಸಾಮಾನ್ಯ. ಇದೇ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿರಬಹುದು. ಆದರೆ ಕರಾವಳಿಯ ಮಂದಿಗೆ ಇಂದಿಗೂ ಮುತ್ತಪ್ಪ ರೈ ಸಿನಿಮಾ ಒಂದು ಕನಸು. ಆದರೆ ಆ ಪಾತ್ರಕ್ಕೆ ನಟನಾಗಿ ಅವರ ನಿರೀಕ್ಷೆ ರಕ್ಷಿತ್ ಶೆಟ್ಟಿ!
ರೈಯಂತೆ ಶೆಟ್ಟಿ ಕೂಡ ಬಂಟ ಸಮಯುದಾಯದ ಸೂಚಕ ಪದ. ಮುತ್ತಪ್ಪ ರೈ ಕರಾವಳಿಯ ಪುತ್ತೂರು ಮೂಲದಿಂದ ಬಂದವರು. ರಕ್ಷಿತ್ ಶೆಟ್ಟಿ ಅದೇ ಕರಾವಳಿಯ ಉಡುಪಿಯವರು. ಇಬ್ಬರ ಮಾತೃಭಾಷೆ ಕೂಡ ತುಳು. ಒಂದೇ ಬಣ್ಣ. ಎತ್ತರ ವಿಚಾರಕ್ಕೆ ಬಂದರೆ ರಕ್ಷಿತ್ ತುಸು ಹೆಚ್ಚೇ ಇರುತ್ತಾರೆ. ಅದು ಸಿನಿಮಾದ ಪಾತ್ರಕ್ಕೆ ತಕ್ಕಂತಿರುತ್ತದೆ. ಇನ್ನು ರಕ್ಷಿತ್ ಗನ್ ಹಿಡಿಯುವ ರೀತಿ ಎಷ್ಟು ಸೊಗಸಾಗಿದೆ ಎನ್ನುವುದನ್ನು ‘ಉಳಿದವರು ಕಂಡಂತೆ’ ಚಿತ್ರದಲ್ಲೇ ನೋಡಿದ್ದೇವೆ. ಫ್ರೆಂಚ್ ಕಟ್ ಹೊಸ ಲುಕ್ ನೀಡುತ್ತದೆ. ಆರಂಭದ ಬ್ಯಾಂಕ್ ಉದ್ಯೋಗ, ಬಳಿಕದ ಅನುರಾಗ, ಭೂಗತ ಲೋಕ, ದುಬೈ ಪಯಣ, ಜೈಲು, ಹೊರಗೆ ಬಂದ ಮೇಲಿನ ಸಂಘಟನೆ, ಸಮಾಜ ಸೇವೆ.. ಹೀಗೆ ಎಲ್ಲ ಪರಿಸ್ಥಿತಿಗೂ ಒಗ್ಗಿಕೊಂಡು ಕಳೆ ನೀಡಬಲ್ಲ ನಟನಿದ್ದರೆ ಅದು ರಕ್ಷಿತ್ ಮಾತ್ರ. ಆದರೆ ಅವರು ಇದನ್ನು ಒಪ್ಪುತ್ತಾರ? ಹಾಗಂತ ಒಪ್ಪಲ್ಲ ಎಂದು ನಾವೇ ನಿರ್ಧರಿಸುವ ಬದಲು ಅವರಲ್ಲೇ ಕೇಳೋಣ ಎಂದು ಕೇಳಿಯೇ ಬಿಟ್ಟೆ. ಸಿನಿಕನ್ನಡ.ಕಾಮ್ ಕೇಳಿದ ಈ ವಿಶೇಷ ಪ್ರಶ್ನೆಗೆ ರಕ್ಷಿತ್ ಪ್ರತಿಕ್ರಿಯೆ ಹೀಗಿತ್ತು.
ರಕ್ಷಿತ್ ಹೇಳಿದ್ದೇನು..?
ರಕ್ಷಿತ್ ಶೆಟ್ಟಿ ಹೆಚ್ಚು ಯೋಚಿಸಲೇ ಇಲ್ಲ. ಖಂಡಿತವಾಗಿ ಒಪ್ಕೋತೀನಿ ಎಂದರು. ಆದರೆ ಹಾಗೆ ಒಂದು ಟ್ವಿಸ್ಟ್ ಕೂಡ ಕೊಟ್ಟರು. ‘ಅದು ಸ್ಕ್ರಿಪ್ಟ್ ಹೇಗಿದೆ ಎನ್ನುವುದನ್ನು ಆಧಾರಿಸಿಕೊಂಡಿರುತ್ತದೆ’ ಎಂದರು. ಮುತ್ತಪ್ಪ ರೈಯವರು ಸ್ವತಃ ಹೇಳುತ್ತಿದ್ದ ಹಾಗೆ ಅವರ ಬದುಕು ಒಂದು ತೆರೆದ ಪುಸ್ತಕ. ಹಾಗಾಗಿ ಪ್ರಮುಖ ವಿಚಾರಗಳು ಗೊತ್ತಿದ್ದೇ ರಕ್ಷಿತ್ ಒಪ್ಪಿರುತ್ತಾರೆ. ಉಳಿದಂತೆ ಅಭಿಮಾನದಿಂದ ಮಾಡುವ ಚಿತ್ರದಲ್ಲಿ ನೆಗೆಟಿವ್ ಶೇಡ್ ತುರುಕಲು ನಿರ್ಮಾಪಕರು ಕೂಡ ತಯಾರಿರುವುದಿಲ್ಲ. ಹಾಗಾಗಿ ಸ್ಕ್ರಿಪ್ಟ್ ವಿಚಾರದಲ್ಲಿ ರಕ್ಷಿತ್ ನಿರಾಕರಿಸುವ ಸಂಧರ್ಭ ವಿರಳ. ಆದರೆ ಅವರ ಎರಡನೇ ಕಂಡಿಶನ್ ಮಾತ್ರ ನಿಜಕ್ಕೂ ಯೋಚಿಸಲೇ ಬೇಕಾದ ಸಂಗತಿಯಾಗಿತ್ತು. “ನಾನು ಯೋಜನೆ ಹಾಕಿರುವ ಮೂರು ಸಿನಿಮಾಗಳು ಕ್ಯೂನಲ್ಲಿವೆ. ಅವುಗಳ ಕೆಲಸ ಸಂಪೂರ್ಣವಾಗಿ ಮುಗಿಯದೇ ನಾನು ಹೊಸ ಚಿತ್ರಗಳ ಕಡೆಗೆ ಗಮನ ಕೊಡುವುದಿಲ್ಲ. ಮುಖ್ಯವಾಗಿ ಪರಿಸ್ಥಿತಿ ಈಗಿನಂತೆ ಮುಂದುವರಿದರೆ ಮಿನಿಮಮ್ ಆ ಚಿತ್ರಗಳು ಜನರ ಮುಂದೆ ಬರಲು ಎರಡು ವರ್ಷ ಬೇಕಾಗಬಹುದು. ಆಗಲೂ ಈ ಚಿತ್ರ ಮಾಡುವ ಯೋಜನೆ ಇದ್ದರೆ ಖಂಡಿತವಾಗಿ ಪ್ರಯತ್ನಿಸಬಹುದು ಎಂದರು.
ರೈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಉತ್ಸಾಹ ಸೃಷ್ಟಿಯಾಗಿದ್ದು ಅವರ ಸಾವಿನ ಬಳಿಕ. ಅವರೇ ಹೇಳಿದ ಕತೆಯಾದರೂ ಈಗ ಚಿತ್ರ ಮಾಡುವ ಮೊದಲು ಮನೆಯವರ ಒಪ್ಪಿಗೆ ಅನಿವಾರ್ಯ. ಅದನ್ನು ಪಡೆದು ರಕ್ಷಿತ್ ಕಾಲ್ ಶೀಟ್ ಗಾಗಿ ಎರಡು ವರ್ಷ ಕಾದರೆ ಆಗ ಕರಾವಳಿಯಲ್ಲಿ ಇದೇ ರೀತಿ ರೈಯವರ ಸಿನಿಮಾ ನೋಡಬೇಕೆಂಬ ಕ್ರೇಜ್ ಯಾವಮಟ್ಟಿಗೆ ಇರಬಹುದು ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೂ ರಕ್ಷಿತ್ ಶೆಟ್ಟಿ ನಾಯಕತ್ವದಲ್ಲಿ ಆ ಸಿನಿಮಾ ಮಾಡಲೇಬೇಕು ಎಂದು ಹಠ ಹಿಡಿಯುವವರಿದ್ದರೆ ಖಂಡಿತವಾಗಿ ಈಗಲೇ ಅವರ ಬೆನ್ನು ಬೀಳುವುದು ಉತ್ತಮ. ಎರಡು ವರ್ಷ ಕಣ್ಣುಮುಚ್ಚಿ ತೆರೆಯುವುದರೊಳಗೆ ಬಂದು ಬಿಡುತ್ತದೆ. ಆಮೇಲೇನಿದ್ದರೂ ರೈ ಸಿನಿಮಾ ಶೂಟಿಂಗ್ ಒಂದೇ ವಿಚಾರ.