
ಓಂ ಸಿನಿಮಾ ತೆರೆಕಂಡು 25 ವರ್ಷ ಆಗಿದೆ. ಆದರೆ ಇಂದಿಗೂ ಅದರ ಆಚರಣೆ ಮಾಡಲಾಗುತ್ತಿದೆ ಎಂದರೆ ಬಲವಾದ ಕಾರಣಗಳಿವೆ. ಚಿತ್ರ ಎಂಥ ಅಭಿಮಾನಿಗಳನ್ನು ಸೃಷ್ಟಿಸಿದೆ ಎಂದರೆ ಓಂ ತೆರೆಕಾಣುವಾಗ ಹತ್ತು ವರ್ಷದ ಹುಡುಗನಾಗಿದ್ದ ಶಂಭು; ಈಗ ಶಿವಣ್ಣನನ್ನು ಕಂಡರೆ ಶರಣು ಎನ್ನುತ್ತಾರೆ. ಅದಕ್ಕೆ ಕಾರಣ, ಆ ಬಳಿಕ ಅವರು ಚಿತ್ರವನ್ನು ಮರು ಬಿಡುಗಡೆಯ ವೇಳೆ ಥಿಯೇಟರಲ್ಲೇ ನೋಡಿದ್ದಾರೆ. ಶಿವಣ್ಣನ ನಟನೆಗೆ ಅಭಿಮಾನಿಯಾಗಿ ಬಿಟ್ಟಿದ್ದಾರೆ. ಮಾಧ್ಯಮದ ಪ್ರತಿನಿಧಿಯೋರ್ವರ ಮೂಲಕ ಶಿವಣ್ಣನಲ್ಲಿ ವಿಡಿಯೋ ಕಾಲ್ ಮೂಲಕ ಮಾತನಾಡಿದ ಆತ ಕೇಳಿಕೊಂಡ ಬೇಡಿಕೆಯೇನು ಗೊತ್ತೇ? ಅದರ ಸಂಪೂರ್ಣ ವಿವರ ಇಲ್ಲಿದೆ.
“ಅಣ್ಣ ನನಗೆ ಓಂ' ಸಿನಿಮಾ ತುಂಬ ಇಷ್ಟ. ಅದರಲ್ಲೂ ಕ್ಲೈಮ್ಯಾಕ್ಸ್ ಫಾಲೋ ಮಾಡ್ತೀನಿ" ಎಂದು ಶಂಭು ಹೇಳುತ್ತಿದ್ದರೆ
ವೆರಿಗುಡ್’ ಎಂದರು ಶಿವಣ್ಣ. ಚಿತ್ರ ರಿಲೀಸ್ ಆಗಬೇಕಿದ್ರೆ ನಾನು ತುಂಬ ಚಿಕ್ಕೋನಿದ್ದೆ ಎಂದ ಶಂಭುವಿಗೆ “ನಾನು ಆಗ ಮಗುವಾಗಿದ್ದೆ, ಈಗ ಚಿಕ್ಕೋನಿದ್ದೀನಿ” ಎಂದು ಕಾಲೆಳೆದರು! ಇದರ ನಡುವೆ ಶಂಭು ಶಿವಣ್ಣನಲ್ಲಿ ದಿಢೀರನೆ ಒಂದು ಬೇಡಿಕೆ ಮುಂದಿಟ್ಟಾಗ ಅಲ್ಲಿದ್ದವರೆಲ್ಲರ ಕಿವಿ ಚುರುಕಾಯಿತು. “ಏನಿಲ್ಲಣ್ಣ.. ನನಗೆ ಬೇರೇನೂ ಬೇಡ.. ನಾನು ಸಾಯೋವರೆಗು ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ” ಎಂದು ಶಂಭು ಹೇಳುತ್ತಿದ್ದರೆ ನೆರೆದವರ ಮೈ ರೋಮಾಂಚನಗೊಂಡಿದ್ದು ಸುಳ್ಳಲ್ಲ. ಅಂದಹಾಗೆ ಈ ಮಾತುಕತೆ ನಡೆದಿದ್ದು ಶಿವರಾಜ್ ಕುಮಾರ್ ಅವರ ನಿವಾಸದಲ್ಲೇ . ವಾಟ್ಸ್ಯಾಪ್ ವಿಡಿಯೋ ಕಾಲ್ ಮೂಲಕ ಇದನ್ನು ಸಾಧ್ಯವಾಗಿಸಿದ್ದು ಮಹಾಂತೇಶ್ ಜಗ್ಗಿನ್. ಮತ್ತೋರ್ವ ಮಾಧ್ಯಮ ಪ್ರತಿನಿಧಿ ಅರ್ಚನಾ ಶರ್ಮ ಅವರು ತಮ್ಮ ಮೊಬೈಲ್ ಕ್ಯಾಮೆರಾ ಮೂಲಕ ಈ ಘಟನೆಗೆ ಸಾಕ್ಷಿ ಒದಗಿಸಿದ್ದಾರೆ.

ಶಂಭು ಮೂಲತಃ ಬಳ್ಳಾರಿಯ ಯುವಕ. ಉತ್ತರ ಕನ್ನಡದ ಮಂದಿಗೆ ಸಿನಿಮಾ ಕಲಾವಿದರು ಅಂದರೆ ತುಂಬ ಅಭಿಮಾನ. ಅಂಥದ್ದರಲ್ಲಿ ಶಿವರಾಜ್ ಕುಮಾರ್ ಅವರ ಸಿನಿಮಾ ಚಿತ್ರೀಕರಣ ಅಲ್ಲಿ ನಡೆದಿತ್ತು. ಚಿತ್ರದ ಹೆಸರು `ಭೂಮಿ ತಾಯಿಯ ಚೊಚ್ಚಲ ಮಗ’. ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಶಿವರಾಜ್ ಕುಮಾರ್ ಸ್ಥಳೀಯ ಐ.ಬಿಯಲ್ಲಿ ತಂಗಿದ್ದರು. ಅದೇ ಅತಿಥಿಗೃಹದಲ್ಲಿ ಶಂಭುವಿನ ತಂದೆ ಸರ್ಕಾರಿ ಕೆಲಸಗಾರ. ಹಾಗಾಗಿ ಬಹಳ ಸುಲಭದಲ್ಲೇ ಮಗನೊಂದಿಗೆ ಶಿವಣ್ಣನನ್ನು ಭೇಟಿಯಾಗಲು ಹೋದರು. ಆದರೆ ಅವರಿಗೆ ಇದ್ದ ಆತಂಕವೆಲ್ಲ ಒಬ್ಬ ಸ್ಟಾರ್ ನಟ ಹೇಗೆ ನಡೆದುಕೊಳ್ಳಬಹುದು ಎಂದಾಗಿತ್ತಂತೆ. ಆದರೆ ಆ ದಿನ ಶಿವಣ್ಣನ ವಿನಯವಂತಿಕೆಯ ನಡೆ, ನುಡಿ ಕಂಡ ಶಂಭು ಮತ್ತು ಆತನ ತಂದೆ ಅಚ್ಚರಿಪಟ್ಟಿದ್ದಾರೆ. ಮನೆಗೆ ವಾಪಾಸಾದ ಮೇಲೆಯೂ ಶಿವರಾಜ್ ಕುಮಾರ್ ಅವರ ಆತ್ಮೀಯ ವರ್ತನೆ ಮತ್ತು ಯಾವ ನಟರನ್ನು ಇಷ್ಟು ಸರಳವಾಗಿ ಕಂಡಿಲ್ಲವೆಂಬ ತಂದೆಯ ಮಾತು ಶಂಭುವಿನಲ್ಲಿ ಅಭಿಮಾನ ಮೂಡಿಸಿದೆ.
ಆ ಕಾಲದ ಸುಪರ್ ಹಿಟ್ ಚಿತ್ರವಾದ `ಓಂ’ ಪದೇ ಪದೆ ಮರುಬಿಡುಗಡೆ ಕಾಣುತ್ತಿತ್ತು. ಥಿಯೇಟರಿಗೆ ಬಂದಾಗಲೆಲ್ಲ ಜನ ಹೊಸ ಸಿನಿಮಾ ಬಂದಷ್ಟೇ ಖುಷಿಯಿಂದ ಹೋಗಿ ಚಿತ್ರಮಂದಿರ ಹೌಸ್‌ಫುಲ್ ಮಾಡುತ್ತಿದ್ದರು. ಇಂಥ ಸಂದರ್ಭದಲ್ಲಿ ಚಿತ್ರ ನೋಡಿದ ಶಂಭುವಿಗೆ ಸಿನಿಮಾದ ಕ್ಲೈಮ್ಯಾಕ್ಸ್ ತುಂಬಾನೇ ಇಷ್ಟವಾಗಿತ್ತು. ಒಬ್ಬ ಹೋಟೆಲ್ ಮಾಲೀಕ ಗ್ರಾಹಕರ ನೇರ ಬೈಗುಳ ಕೇಳಿದರೂ ಅವರಿಗೆ ಆಯುಧದಿಂದ ಶಿಸ್ತಿನ ಪಾಠ ಹೇಳಿ ಗೆಲ್ಲಲಾರ. ಆ ಗೆಲುವು ಏನಿದ್ದರೂ ಕ್ಷಣಿಕ. ಹಾಗಾಗಿಯೇ ರೌಡಿಸಮ್ ಮಾಡುವುದಕ್ಕಿಂತ ಹೋಟೆಲ್ ನಡೆಸಿ ಸ್ವಾವಲಂಬಿಯಾಗುವುದರಲ್ಲಿ ಹೆಚ್ಚು ಗೌರವ, ನೆಮ್ಮದಿ, ಸಾರ್ಥಕತೆ ಇದೆ. ಅಂಥದೊಂದು ಸಂದೇಶ ಮನಮುಟ್ಟುವಂತೆ ಮಾಡಿರುವುದು ಚಿತ್ರದಲ್ಲಿನ ಶಿವಣ್ಣನ ಅಭಿನಯ. ಹಾಗಾಗಿ ನಾನು ಅವರಿಗೆ ಪಕ್ಕಾ ಅಭಿಮಾನಿ ಎನ್ನುತ್ತಾರೆ ಶಂಭು.

ಶಿವಣ್ಣನಿಗೆ ಶಂಭುವಿನಂಥ ಅಭಿಮಾನಿಗಳು ಲಕ್ಷಾಂತರ ಇದ್ದಾರೆ. ಆದರೆ ಶಂಭುವಿಗೆ ಶಿವಣ್ಣನೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುವ ಅವಕಾಶ ಲಭಿಸಿದೆ. ಅದು ಸಾಧ್ಯವಾಗಿದ್ದು ಖಾಸಗಿ ವಾಹಿನಿಯ ಪ್ರತಿನಿಧಿಯೊಬ್ಬರಿಂದ. ಶಂಭು ಸ್ನೇಹಿತರಾದ ಸಿನಿಮಾ ವರದಿಗಾರ ಮಹಾಂತೇಶ್ ಜಗ್ಗಿನ್ ಅವರು ಈ ಅವಕಾಶ ಮಾಡಿಕೊಟ್ಟಿದ್ದಾರೆ.
ಓಂ ಚಿತ್ರದ 25ನೇ ವರ್ಷದ ವಿಶೇಷ ಸಂದರ್ಶನಕ್ಕಾಗಿ ಮಹಾಂತೇಶ್ ಜಗ್ಗಿನ್ ಅವರು ಶಿವಣ್ಣನ ಮನೆಗೆ ಹೊರಟು ನಿಂತಾಗ ಶಂಭು ಒಂದು ಮನವಿ ಮಾಡಿಕೊಂಡಿದ್ದಾರೆ. ನೇರವಾಗಿ ಭೇಟಿಯಾಗಲು ಸಾಧ್ಯವಾಗದಿದ್ದರೂ ಫೋನಲ್ಲಿಯಾದರೂ ಮಾತನಾಡಬಹುದೇ ಎಂದು. ಜಗ್ಗಿನ್ ಅವರು ವಿಡಿಯೋ ಕಾಲ್ ಕನೆಕ್ಟ್ ಮಾಡಿದ್ದಾರೆ. ಮಾಧ್ಯಮಗಳ ಸಂದರ್ಶನದ ನಡುವೆ ನಿಮಿಷಗಳ ಕಾಲ ಶಿವಣ್ಣ ಫ್ರೀಯಾಗಲು ಕಾಯುತ್ತಿದ್ದ ಜಗ್ಗಿನ್ ಅವರಲ್ಲಿ ಈ ವಿಚಾರ ತಿಳಿಸಿದ್ದಾರೆ. ಶಿವಣ್ಣ ಒಪ್ಪದಿರುತ್ತಾರೆಯೇ? ಅಷ್ಟು ಹೊತ್ತಿನಿಂದ ಆನ್ಲೈನಲ್ಲಿ ಕಾಯುತ್ತಿದ್ದ ಶಂಭುವಿಗೆ ನಮಸ್ಕಾರ ಹೇಳಿ ಮಾತು ಶುರು ಮಾಡಿದ್ದಾರೆ. ಮಾತ್ರವಲ್ಲ, ಲಾಕ್ಡೌನ್ ಮುಗಿದ ಬಳಿಕ ಬನ್ನಿ ಭೇಟಿಯಾಗೋಣ ಎಂದಿದ್ದಾರೆ. ಒಬ್ಬ ಡೈಹಾರ್ಟ್ ಫ್ಯಾನ್‌ಗೆ ಇದಕ್ಕಿಂತ ಬೇರೇನು ಬೇಕು ಅಲ್ಲವೇ?
