ಕೊರೊನಾ ಕಾರಣ ಹಲವರ ಕಲ್ಯಾಣ ಸದ್ದಿಲ್ಲದೆ ನಡೆಯುವಂತಾಗಿದೆ. ಆ ಪಟ್ಟಿಗೆ ಕನ್ನಡದ ಜನಪ್ರಿಯ ನಿರ್ದೇಶಕಿ ಸುಮನಾ ಕಿತ್ತೂರು ಕೂಡ ಸೇರಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ವಾಸವಾಗಿರುವ ಸುಮನಾ ಅವರು ಕಳೆದ ತಿಂಗಳು ಏಪ್ರಿಲ್ 17ರಂದು ಮಾಂಗಲ್ಯ ಬಂಧನಕ್ಕೆ ಒಳಗಾಗಿದ್ದಾರೆ.
ಪುದುಚೇರಿಯಲ್ಲಿ `ಒರೊವಿಲ್ ‘ನಲ್ಲಿ ವೃತ್ತಿಯಲ್ಲಿರುವ ಶ್ರೀನಿವಾಸ್ ಎನ್ನುವ ಸಾಫ್ಟ್‌ವೇರ್ ಎಂಜಿನಿಯರ್ ಜತೆಗೆ ಸುಮನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. “ಬೆಂಗಳೂರಿಗೆ ಬಂದು ಕುಪ್ಪಳ್ಳಿಯಲ್ಲಿ ಮಂತ್ರಮಾಂಗಲ್ಯ ಮೂಲಕ ವಿವಾಹವಾಗುವ ಯೋಜನೆ ಇತ್ತು. ಆದರೆ ಲಾಕ್ಡೌನ್ ಕಾರಣದಿಂದ ಅದು ಸಾಧ್ಯವಾಗಲಿಲ್ಲ ಹಾಗೆ ಪುದುಚೇರಿಯಲ್ಲೇ ಮದುವೆ ಮಾಡಿಕೊಂಡೆವು” ಎಂದು ಸುಮನಾ ತಿಳಿಸಿದರು. ಸಿನಿಕನ್ನಡದ ಜತೆಗೆ ಮಾತನಾಡಿದ ಅವರು “ಶ್ರೀನಿವಾಸ್ ಮೂಲತಃ ಶಿವಮೊಗ್ಗದವರಾಗಿದ್ದು, ಕೌಟುಂಬಿಕವಾಗಿ ಪರಿಚಿತರು. ಎರಡು ಕುಟುಂಬಗಳ ಸಮ್ಮತಿಯೊಂದಿಗೆ ತೀರ ಸರಳವಾಗಿ ವಿವಾಹ ನೆರವೇರಿದೆ” ಎಂದರು.
ಒರೊವಿಲ್ ಇತಿಹಾಸ
ಒರೊವಿಲ್ ಎನ್ನುವುದು ಒಂದು ವಿಶೇಷ ಪ್ರದೇಶ. ವಿವಿಧ ದೇಶಗಳ ಪ್ರಜೆಗಳು ಅಲ್ಲಿ ಒಂದಾಗಿ ಬಾಳುತ್ತಾರೆ ಎನ್ನುವುದೇ ಪ್ರಮುಖ ವಿಶೇಷ. ಅಲ್ಲಿ ಜಾತಿ, ಧರ್ಮ, ವರ್ಣಭೇದಕ್ಕೆ ಯಾವುದೇ ಅವಕಾಶವಿಲ್ಲ. ಪುದುಚೇರಿಯಿಂದ ಕೇವಲ 12 ಕಿ.ಮೀಗಳ ಉತ್ತರದಲ್ಲಿರುವ ಸ್ಥಳವೇ ಒರೊವಿಲ್. 1968ರಲ್ಲಿ ಮೀರಾ ಅಲ್ಫಾಸ ಎನ್ನುವವರು ಈ ನಗರವನ್ನು ಸ್ಥಾಪಿಸಿದ್ದಾರೆ. ಜಗತ್ತಿಗೆ ಮಾನವ ಐಕ್ಯತೆಯನ್ನು ತೋರಿಸಿಕೊಡುವುದೇ ಒರೊವಿಲ್ ಎನ್ನುವ ವ್ಯವಸ್ಥೆಯ ಗುರಿಯಾಗಿದೆ. ಇದರ ಉದ್ಘಾಟನೆಯ ವೇಳೆ 124 ದೇಶಗಳ ಪ್ರತಿನಿಧಿಗಳು ಇಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಇದು ಜಗತ್ತಿನ ಎಲ್ಲರಿಗೂ ಸಂಬಂಧಿಸಿದ ಜಾಗ. ಆದರೆ ಜಗದ ಜನರಿಗೆ ಸೇವೆ ಸಲ್ಲಿಸುವ ಮನೋಭಾವ ಹೊಂದಿದವರಿಗೆ ಮಾತ್ರ ಇಲ್ಲಿ ತಂಗುವ ಅವಕಾಶ. ಈಗಾಗಲೇ ಅಲ್ಲಿ ವೃತ್ತಿಯಲ್ಲಿರುವ ಸುಮನಾ ಕಿತ್ತೂರು ಅವರ ಕಾಂಟ್ರಾಕ್ಟ್ ಮುಗಿದಿದ್ದು ಮುಂದೆ ಶ್ರೀನಿವಾಸ್ ಅವರೊಂದಿಗೆ ಮೈಸೂರಿನಲ್ಲಿ ಸಂಸಾರ ಹೂಡುವುದು ಬಹುತೇಕ ಖಚಿತವಾಗಿದೆ.
ಎದೆಗಾರಿಕೆಯ ನಿರ್ದೇಶಕಿ!
ಎದೆಗಾರಿಕೆ ಎನ್ನುವ ಚಿತ್ರದ ನಿರ್ದೇಶಕಿ ಎನ್ನುವುದರ ಜತೆಗೆ ವ್ಯಕ್ತಿತ್ವದಲ್ಲಿಯೂ ಎದೆಗಾರಿಕೆ ತೋರಿರುವವರು ಸುಮನಾ ಕಿತ್ತೂರು. ನಿರ್ದೇಶನ ರಂಗದಲ್ಲಿ ಮಹಿಳೆಯರು ಬರುವುದೇ ಅಪರೂಪ ಎನ್ನುವ ಹೊತ್ತಿನಲ್ಲಿ ಭೂಗತ ಲೋಕದ ಕತೆಯೊಂದಿಗೆ ತೆರೆಕಂಡ ಆ ದಿನಗಳು' ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿ 2007ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಮರು ವರ್ಷವೇ ದುನಿಯಾ ವಿಜಯ್ ನಾಯಕರಾಗಿರುವ
ಸ್ಲಂ ಬಾಲ’ ಚಿತ್ರವನ್ನು ಸ್ವತಃ ನಿರ್ದೇಶಿಸಿದರು. ಬಳಿಕ ಯಶ್ ಪ್ರಧಾನ ಪಾತ್ರದಲ್ಲಿದ್ದಕಳ್ಳರ ಸಂತೆ', ಆದಿತ್ಯ ನಾಯಕರಾಗಿದ್ದ
ಎದೆಗಾರಿಕೆ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದು ಮಾತ್ರವಲ್ಲ, ಎಲ್ಲ ಚಿತ್ರಗಳಿಗೂ ಹಾಡುಗಳನ್ನು ಬರೆದು ಜನಪ್ರಿಯತೆ ಗಳಿಸಿದರು. ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ ಚಿತ್ರ `ಕಿರಗೂರಿನ ಗಯ್ಯಾಳಿಗಳು’ ಅವರ ನಿರ್ದೇಶಿಸಿ ತೆರೆಕಂಡ ಕೊನೆಯ ಚಿತ್ರ.
ಕಳ್ಳರ ಸಂತೆ' ಚಿತ್ರಕ್ಕೆ ಶ್ರೇಷ್ಠ ಚಿತ್ರವೆಂದು ತೀರ್ಪುಗಾರರ ವಿಶೇಷ ಮೆಚ್ಚುಗೆಯ ಪ್ರಶಸ್ತಿ ಲಭಿಸಿತ್ತು.
ಎದೆಗಾರಿಕೆ’ ಚಿತ್ರಕ್ಕೆ ಮೂರನೇ ಶ್ರೇಷ್ಠ ಸಿನಿಮಾ ಎಂದು ರಾಜ್ಯ ಪ್ರಶಸ್ತಿಯೂ ಲಭಿಸಿದೆ. ಕಿರಗೂರಿನ ಗಯ್ಯಾಳಿಯಂಥ ವ್ಯಾಪಕ ಪ್ರಶಂಸೆ ಪಡೆದ ಚಿತ್ರವನ್ನು ನೀಡಿದ್ದರೂ ಸುಮನಾ, ವಿಶ್ವಮಾನವ ತತ್ವದ ಆಸಕ್ತಿಯನ್ನೇ ಗುರಿಯಾಗಿಸಿಕೊಂಡು ಒರಿವಿಲ್ ನಲ್ಲಿ ವಾಸವಾಗಿದ್ದಾರೆ. ಅವರ ಈ ವೈವಿಧ್ಯಮಯ ಆಸಕ್ತಿಗೆ ವೃತ್ತಿಬದುಕನ್ನು ಪತ್ರಕರ್ತೆಯಾಗಿ ಆರಂಭಿಸಿದ ದಿನಗಳ ಸ್ಫೂರ್ತಿಯೂ ಕಾರಣ ಇರಬಹುದು. ಶ್ರೀಧರ್ ಅವರ `ಅಗ್ನಿ’ಯ ಮೂಲಕ ದೀಪವಾಗಿ ಬೆಳಗಿದ ಪ್ರತಿಭೆ ಸುಮನಾ ಅವರನ್ನೇ ತಮ್ಮಗುರುಗಳೆಂದು ಪರಿಗಣಿಸುತ್ತಾರೆ. ಸುಮನಾ ಶ್ರೀನಿವಾಸ್ ಅವರ ವೈವಾಹಿಕ ಜೀವನವು ಸಂತೋಷಕರವಾಗಿರಲಿ ಎಂದು ಸಿನಿಕನ್ನಡದ ಹಾರೈಕೆ.