ಕೋವಿಡ್ ಕಾಲದಲ್ಲಿ ಇವರೇಕೆ ಹೀಗೆ?- ಡೇವಿಡ್ ಪ್ರಶ್ನೆ

ಕೋವಿಡ್ 19 ಬಂದ ಮೇಲೆ ಎಲ್ಲರೂ ಆತಂಕಗೊಂಡು ಮನೆಯಲ್ಲಿರುವ ಹಾಗಾಯಿತು. ಆದರೆ ಇದೀಗ ಲಾಕ್ಡೌನ್ ಸಂಪೂರ್ಣವಾಗಿ ಸಡಿಲವಾಗಿದೆ. ಕಿರುತೆರೆಯಲ್ಲಿ ಧಾರಾವಾಹಿ ಸೇರಿದಂತೆ ಎಲ್ಲ ರಂಗಗಳು ಸಕ್ರಿಯವಾಗಿವೆ. ಆದರೆ ನಮ್ಮ ಚಿತ್ರರಂಗಕ್ಕೆ ಏನಾಗಿದೆ? ಆಗಿರುವ ಮಹಾನ್ ನಷ್ಟದ ಅರಿವಿದ್ದರೂ ಇದನ್ನೆಲ್ಲ ಮೆಟ್ಟಿ ನಿಲ್ಲಲು, ಸಂಘಟನಾತ್ಮಕವಾಗಿ ಚುರುಕಾಗಲು ಯಾರೂ ತಯಾರಿಲ್ಲ! ಅಣ್ಣಾವ್ರಿಂದ ಅಂಬರೀಷ್ ಇರುವ ತನಕ ಚಿತ್ರರಂಗಕ್ಕೆ ಕರೆ ನೀಡಿ‌ ಮುನ್ನುಗ್ಗಲು ಒಬ್ಬ ಸ್ಟಾರ್ ಮುಂದಾಳು ಇದ್ದರು. ಈಗ ಎಲ್ಲರೂ ಅವರವರ ಚಿತ್ರಗಳ ಬಗ್ಗೆ ಮಾತ್ರ ಯೋಚಿಸಿ ಕುಳಿತುಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಚಿರಂಜೀವಿಯವರು ಚಿತ್ರರಂಗದ ದಿಗ್ಗಜರೊಡನೆ ಒಂದು‌ ಮೀಟಿಂಗ್ ನಡೆಸಿದ್ದಾರೆ. ನಮ್ಮಲ್ಲೇಕೆ ಹೀಗೆ ಎಂದು ಎಲ್ಲರೂ‌ ಚಿಂತಿತರಾಗಿದ್ದಾರೆ. ಈ ಬಗ್ಗೆ ಚಿತ್ರರಂಗದಲ್ಲಿ ನಿರ್ದೇಶನ, ಚಿತ್ರಕತೆ ವಿಭಾಗದಲ್ಲಿ ಕಳೆದ 15 ವರ್ಷಗಳಿಂದ ಗುರುತಿಸಿಕೊಂಡಿರುವ ಡೇವಿಡ್ ಅವರು ಧೈರ್ಯವಾಗಿ ಪ್ರಶ್ನೆ ಮಾಡಿದ್ದಾರೆ. ಅವರ ಪ್ರಶ್ನೆಯನ್ನು ಯಥಾವತ್ತಾಗಿ ಸಿನಿಕನ್ನಡ.ಕಾಮ್ ನಿಮ್ಮ ಮುಂದೆ ಇಡುತ್ತಿದೆ.

ಚಿತ್ರರಂಗದ ಸರ್ವರಿಗೂ ನಮಸ್ಕಾರ

ತೆಲುಗು ಚಿತ್ರರಂಗದ ಕೆಲಸಕಾರ್ಯಗಳು ಲಾಕ್ ಡೌನ್ ಮುಗಿದ ನಂತರ ಹೇಗೆ ಪ್ರಾರಂಭಿಸಬೇಕು, ಚಿತ್ರರಂಗ ಸ್ಥಗಿತಗೊಂಡಿದ್ದಕ್ಕೆ ಮುಂದೆ ಎದುರಿಸಬೇಕಾಗಿರುವ ಪರಿಣಾಮಗಳು, ಸರ್ಕಾರ ಹೊರಡಿಸಿರುವ ಚಿತ್ರೀಕರಣ ನಿಬಂಧನೆಗಳ ಕುರಿತು ಹಿರಿಯ ನಟ ಚಿರಂಜೀವಿಯವರ ಮನೆಯಲ್ಲಿ ಮೇ 20ರಂದು ಸಿನಿಮಾ ದಿಗ್ಗಜರೊಂದಿಗೆ ಚರ್ಚೆ, ವಿಮರ್ಶೆ, ಸಮಾಲೋಚನೆ ನಡೆದಿರುತ್ತದೆ.

ಈ ವಿಚಾರವಾಗಿ ನನ್ನ ವೈಯಕ್ತಿಕವಾದ ಸಣ್ಣ ಅಭಿಪ್ರಾಯಗಳು

1.ಈ ರೀತಿಯ ವೈಯಕ್ತಿಕವಾಗಿ ಮುಂದಾಳತ್ವ ವಹಿಸುವಷ್ಟು ಕಾಳಜಿ, ಮುತುವರ್ಜಿ ಇರುವವರು ನಮ್ಮ ಚಿತ್ರರಂಗದಲ್ಲೇಕೆ ಇಲ್ಲ? ಯಾವ ನಟರೂ ಅಷ್ಟು ಪ್ರಬುದ್ಧರಾಗಿಲ್ಲವೇ…..?

2.ಪರಭಾಷಾ ಚಿತ್ರನಟರ ಡಬ್ಬಿಂಗ್ ಚಿತ್ರ ನಮ್ಮಲ್ಲಿ ಬಿಡುಗಡೆಗೊಳಿಸಲು ತಮ್ಮ ಹೆಗಲು ಕೊಟ್ಟು, ರತ್ನಗಂಬಳಿ ಹಾಸಿದ್ದಂತಹ ನಮ್ಮ ಮಹಾನಟರು ಇಲ್ಲಿದ್ದಾರೆ. ಆದರೆ ಕೆಲವರ್ಷಗಳ ಹಿಂದೆ, ಅದೇ ನಟರು “ಪ್ರಾಣ ಬಿಟ್ಟೇವು, ಡಬ್ಬಿಂಗ್ ಬಿಡೆವು” ಎಂದು ಘರ್ಜಿಸಿದ್ದರು. ಇಂದು ಕೋರೋನಾ ಸಂಕಷ್ಟಕ್ಕೆ ಕನ್ನಡ ಚಿತ್ರರಂಗ ಮುಳುಗಡೆಯಾಗುತ್ತಿದ್ದರೂ, ಯಾವ ನಟರೂ ಸಹ ಚಿತ್ರರಂಗದ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಬಗೆಹರಿಸಲು, ವೈಯಕ್ತಿಕವಾಗಿ ಮುಂದಾಗದಿರುವುದು ಕಂಡಾಗ ನಮ್ಮ ಮಹಾನಟರ ನೈತಿಕತೆ ಪ್ರಶ್ನಾರ್ಹವಾಗಿದೆ ಎಂದೆನಿಸಿದೆ.

3.ಚಿತ್ರರಂಗದಿಂದ ಅಪರಿಮಿತವಾಗಿ ಗಳಿಸುತ್ತಿರುವ ಕೆಲವು ಮಹಾ ನಟರು, ಕೋರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ, ತಮ್ಮ ಆದಾಯಕ್ಕೆ GST, TDS, Income Tax ವಿಧಿಸುವ ಸರ್ಕಾರದ ಕೊರೋನ ಪರಿಹಾರ ನಿಧಿಗೆ ಕೊಡುಗೆ ನೀಡಿದ್ದಾರೆ, ವಿನಃ ತಮ್ಮ ಆದಾಯದ ಉತ್ಪಾದನೆಗೆ ಕಾರಣವಾಗುವ ಚಿತ್ರಕಾರ್ಮಿಕರ ಕಷ್ಟದ-ಕಣ್ಣೀರು ಕಾಣಿಸಲೇ ಇಲ್ಲ.

4.ಚಲನಚಿತ್ರರಂಗದ ಪ್ರಮುಖ ವಲಯಗಳ, ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ನ್ಯಾಯಾಲಯದ ದಾವೆಗಳಿಗೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುವಾಗ ಯೋಚನೆ ಮಾಡಲಿಲ್ಲ. ಆದರೆ ಸದಸ್ಯರೆಲ್ಲರೂ ಕೋರೋನ ಕಷ್ಟದಲ್ಲಿ ಅಳುತ್ತಿರುವಾಗ, ಸದಸ್ಯರ ಕಲ್ಯಾಣ ನಿಧಿಯಿಂದ ನೀಡಬೇಕಾಗಿರುವ ಅವರದ್ದೇ ಹಣದಲ್ಲಿ ಎಲ್ಲ ಸದಸ್ಯರಿಗೆ ಮುಂಗಡವಾಗಿ ಕೇವಲ 6% ಕೊಡುವುದಕ್ಕೆ ಇನ್ನೂ ಯೋಚಿಸಿಕೊಂಡೆ ಅಧಿಕಾರದ ಅಮಲಿನಲ್ಲಿ ಮುಳುಗಿದ್ದಾರೆ.

5.ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿಯೇ ಸ್ಥಾಪಿತಗೊಂಡಿರುವ ಚಲನಚಿತ್ರ ಅಕಾಡೆಮಿ, ‘ನಾಲ್ಕು’ವಾಣಿಜ್ಯ ಮಂಡಳಿಗಳು ಹಾಗೂ 24 ತಂತ್ರಜ್ಞರ ಅಸೋಸಿಯೇಷನ್ ಗಳು ಚಿತ್ರೋದ್ಯಮದ ಪುನಶ್ಚೇತನಕ್ಕೆ ಶ್ರಮಿಸುವುದರ ಬಗ್ಗೆ ರೂಪುರೇಷೆಗಳನ್ನು ಸಿದ್ದಪಡಿಸುವುದನ್ನು ಮರೆತು, ರಿಲಯನ್ಸ್ ಕಂಪನಿ, ಸುಧಾಮೂರ್ತಿ, ಅಮಿತಾಭ್ ಬಚ್ಚನ್ ಮೊದಲಾದವರು ದಾನ ನೀಡಿದ ಕೂಪನ್ ಗಳನ್ನು ಹಂಚುವುದನ್ನೆ ಪ್ರಧಾನವಾಗಿಸಿಕೊಂಡಂತಾಗಿದೆ.

ಪ್ರತಿ ಸಿನಿಮಾದಲ್ಲೂ ಖಚಿತವಾಗಿ ಸಂಭಾವನೆ ಪಡೆಯುವ ಮಹಾನಟರು, ಕೆಲವೊಮ್ಮೆ ಸೋತು-ಗೆಲ್ಲುವ ನಿರ್ಮಾಪಕರು ಇವರಿಬ್ಬರಿಗೂ ವೃತ್ತಿಜೀವನ ಕೊಟ್ಟು ಅನೇಕ ಬಾರಿ ಮಡದಿ-ಮಕ್ಕಳನ್ನು ಉಪವಾಸದಲ್ಲಿರಿಸಿದರೂ, ಉಪ ಕಸುಬಿಗಿಳಿಯದೇ ಇನ್ನೊಂದು ಸಿನಿಮಾಗೆ ಚಿತ್ರಕಥೆ ಸಿದ್ದಪಡಿಸಿಕೊಳ್ಳುವ ನಿರ್ದೇಶಕರು, ಈ ಮೂರು ವರ್ಗದವರೂ ಸೇರಿ ಚಿತ್ರೋದ್ಯಮದ ಪುನಶ್ಚೇತನಕ್ಕೆ, ಸುಭದ್ರ ಬುನಾದಿ ಬಲಪಡಿಸುವಿಕೆಯ ನಿಟ್ಟಿನಲ್ಲಿ ವಿಚಾರಸಂಕಿರಣಗಳು, ವಿಮರ್ಶೆಗಳು, ಸಮಾಲೋಚನೆಗಳು, ಚರ್ಚೆಗಳು, ಸುದ್ದಿಗೋಷ್ಠಿಗಳನ್ನು ನಡೆಸಲೇಬೇಕಾಗಿದೆ. ಇಲ್ಲವಾದರೆ ಮುಂದಿನ ಪೀಳಿಗೆಯ ಸಿನಿಮಾ ಜಗತ್ತಿನ ಪರಿಕಲ್ಪನೆಗಳು ನಮಗರಿವಿಲ್ಲದಂತೆಯೇ, ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಗೆ ಗರ್ಭಧರಿಸಿಕೊಂಡಾಗ, ಪ್ರಸ್ತುತ ನಿರ್ದೇಶಕರ ಸ್ಮೃತಿಪಟಲದಲ್ಲಿ ರೂಪುಗೊಳ್ಳುವ ಸೃಜನಶೀಲತೆಯ ವಿಚಾರಧಾರೆಗಳು ದೈನಂದಿನ ವೃತ್ತಪತ್ರಿಕೆಗಳಲ್ಲಿ ಪ್ರಕಟಗೊಳ್ಳಲು ಸಹ ಅರ್ಹವಾಗುವುದಿಲ್ಲವೇನೋ ಎಂಬ ಮಟ್ಟ ತಲುಪಿದರೂ ಅಚ್ಚರಿ ಇಲ್ಲ!

(ಪ್ರಿಯರೇ, ಇದು ನನ್ನ ಅತಿ ವೈಯಕ್ತಿಕವಾದ ಆಲೋಚನೆಗಳು.
ತಪ್ಪೆನಿಸಿದ್ದಲ್ಲಿ ದಯವಿಟ್ಟು ಕ್ಷಮಿಸಿ, ಮರೆತುಬಿಡಿ, ತಪ್ಪಿಲ್ಲವೆನಿಸಿದ್ದಲ್ಲಿ ಏನಾದರೂ ಮಾಡಬಹುದೇ?
ಅಥವಾ ಉದ್ಯಮದ ಮುಖಂಡರಿಗೆ ಸಲಹೆ ನೀಡಬಹುದೇ?)

ಡೇವಿಡ್ ಆರ್.
ನಿರ್ದೇಶಕ, ನಿರ್ಮಾಪಕ

Recommended For You

Leave a Reply

error: Content is protected !!
%d bloggers like this: