ಅಂಬರೀಷ್ ನೆನಪಲ್ಲಿ ಅನಿರುದ್ಧ್

ಕೆಲವೇ ತಿಂಗಳಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರು ನಮ್ಮನ್ನು ಅಗಲಿ ಎರಡು ವರ್ಷಗಳಾಗಲಿವೆ. ಆದರೆ ಅವರ ಮಾತುಗಳು, ಕಂಠ ಇದೀಗ ತಾನೇ ನಮ್ಮ ಕಿವಿಯಲ್ಲಿ ಮೊಳಗಿದಂತೆ ಅನಿಸುತ್ತದೆ. ಆ ಮಟ್ಟಿಗೆ ಅವರ ಪ್ರಭಾವ ನಮ್ಮನ್ನು ಇಂದಿಗೂ‌ ಬಿಟ್ಟು ಹೋಗಿಲ್ಲ. ಅಂಬರೀಷ್ ಇಂದು ನಮ್ಮ ಜತೆಗಿದ್ದಿದ್ದರೆ ಅವರಿಗೆ 68 ವರ್ಷ ತುಂಬಿರುತ್ತಿತ್ತು.

ಅಂಬರೀಷ್ ಅವರ ಹೆಸರು ಹೇಳುವಾಗ ನಟ ಡಾ.‌ವಿಷ್ಣುವರ್ಧನ್ ಅವರನ್ನು ನೆನೆಯದಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಅವರಿಬ್ಬರ ನಡುವಿನ ಸ್ನೇಹ ಅಂಥದ್ದು. ವಿಷ್ಣುವರ್ಧನ್ ಅವರ ನಿಧನದ ಬಳಿಕ ಕೂಡ ಆ ಕುಟುಂಬದ ಜತೆಗೆ ಅವರ ಆತ್ಮೀಯತೆ ಎಷ್ಟರಮಟ್ಟಿಗೆ ಇತ್ತು ಎನ್ನುವುದು ಬಹಳ ಮಂದಿಗೆ ತಿಳಿದಿಲ್ಲ. ಆದರೆ ಆ ಬಗ್ಗೆ ಸ್ವತಃ ವಿಷ್ಣುವರ್ಧನ್ ಅವರ ಅಳಿಯ, ನಟ ಅನಿರುದ್ಧ್ ಅವರು ತಮ್ಮ ಅಪೂರ್ವವೆನಿಸುವ ನೆನಪುಗಳನ್ನು ಸಿನಿಕನ್ನಡ.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ. ಇದು ಡಾ.ಅಂಬರೀಷ್ ಅವರ ಜನ್ಮದಿನದ ನೆನಪಿಗೆ ಅರ್ಪಣೆ. ಅನಿರುದ್ಧ ಅವರದೇ ಮಾತುಗಳಲ್ಲಿ ಮುಂದೆ ಓದಿ.

ಅದು ನಾನು ‘ರಾಜಾಸಿಂಹ’ ಚಿತ್ರದ ನಟನೆಗೆ ತಯಾರಾಗುತ್ತಿದ್ದ ದಿನಗಳು. “ರೆಬೆಲ್ ಸ್ಟಾರ್ ಅಂಬರೀಷ್ ಅಣ್ಣಾವರು ಈ ಪಾತ್ರ ಮಾಡಿದ್ದರೆ ಚೆನ್ನಾಗಿರುತ್ತಿತ್ತು” ಎಂದು ನನ್ನ ‘ರಾಜಾ ಸಿಂಹ’ ಚಿತ್ರದ ನಿರ್ದೇಶಕರು ನನಗೆ ತಿಳಿಸಿದ್ರು. ಅದು ಅತಿಥಿ ಪಾತ್ರ ಆಗಿದ್ದರೂ ತುಂಬಾ ಮುಖ್ಯವಾದ ಪಾತ್ರ ಅಂತ ನನಗೆ ಗೊತ್ತಿತ್ತು. ಮಾತ್ರವಲ್ಲ ಆ ಪಾತ್ರಕ್ಕೆ ಅಂಬರೀಷ್ ಅವರೇ ಸೂಕ್ತವಾದ ಏಕೈಕ ವ್ಯಕ್ತಿ ಅನ್ನೋದೂ ನಾನು ಬಹಳ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದೆ. ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಕೇಳೋದು ಯಾರಿಗೂ ಅಷ್ಟು ಸುಲಭದ ಮಾತಾಗಿರಲಿಲ್ಲ. ಹಾಗಾಗಿ ಸಹಜವಾಗಿಯೆ ನಿರ್ದೇಶಕರು ಆ ಮಹತ್ತರ ಜವಾಬ್ದಾರಿಯನ್ನ ನನ್ನ ಹೆಗಲ ಮೇಲೆ ಹೊರಿಸದ್ರು.

ನಾನೇನೋ ಅಂಬರೀಷ್ ಅವರಿಗೆ ಆತ್ಮೀಯವಾಗಿದ್ದೆ. ಆದರೆ, ಸಹಾಯ ಕೇಳೋದಕ್ಕೆ ಒಂದು ರೀತಿ ಮುಜುಗರ. ಅವರು ಒಪ್ಪಿಕೊಂಡರೆˌ ಅದು ನನ್ನ ಜೀವನದ ಸುವರ್ಣ ಅವಕಾಶ ನಿಜ. ಆದರೆ ಅವರು ಒಪ್ಪಿಕ್ಕೊಳ್ತಾರ..?

ನಾನು ಭಾರತಿ ಅಮ್ಮನ್ನ ಅಥವಾ ನನ್ನ ಅರ್ಧಾಂಗಿಯಾದ ಕೀರ್ತಿಯವರನ್ನ ಅವರ ಹತ್ರ ನನ್ನ ಪರವಾಗಿ ಮಾತಾಡೋದಕ್ಕೆ ಹೇಳಬಹುದಾಗಿತ್ತು. ಆದರೆ, ಅಂಬರೀಷ್ ಅವರ ಜತೆ ನನ್ನ ನೇರವಾದ ಸಂಪರ್ಕ ಇತ್ತು. ಹಾಗಾಗಿ ನಾನು ಹಾಗ್ ಮಾಡದ್ರೆ, ಅಂಕಲ್ ಗೆ ಹೇಗೆ ಅನಿಸಬಹುದು? ನಾನೇನಾದ್ರು ತಪ್ಪಸ್ಕೊಳ್ತಿದ್ದಿನಿ ಅಂತ ಅಂದುಕೊಂಡ್ರೆ..? ಅದಕ್ಕೆ ನಾನೇ ಅವರನ್ನ ಕೇಳಬೇಕು ಅಂತ ತೀರ್ಮಾನಿಸಿದೆ.

ನಾನು ಇನ್ನೇನು ಅವರನ್ನು ಕೇಳಬೇಕು ಅನ್ನೋ ಅಷ್ಟರಲ್ಲಿˌ ಇದ್ದಕ್ಕಿದ್ದಂತೆ ನನಗೆ ಯೋಚನೆ ಬಂತು. ಇದು ಉದ್ವೇಗದ ತೀರ್ಮಾನಾನ? ಅಂಬರೀಷ್ ಅಂಕಲ್, ಅವರು ನನ್ನನ್ನ ಮೊದಲ ದಿನದಿಂದ ಇಷ್ಟಪಟ್ಟಿದ್ದರು. ಅವರ ಸಹವಾಸದಲ್ಲಿ ನಾನು ತುಂಬಾ ಕ್ಷೇಮವಾಗಿ ಇರಬೇಕು ಅನ್ನೋದನ್ನ ಅವರು ಖಚಿತ ಮಾಡ್ಕೊಳ್ತಾ ಇದ್ದರು. ನಾನು ಹಾಡು ಹೇಳಬೇಕು ಅಂತ ಪ್ರತಿಬಾರಿ ಒತ್ತಾಯಿಸ್ತಾ ಇದ್ದರು ಕೂಡ! ಆದರೆ ಅವರಿಗೆ ವೈಯಕ್ತಿಕ ಹಾಗೂ ವೃತ್ತಿ ಬದುಕು ಒಂದು ಮಾಡಿದ್ರೆ ಇಷ್ಟ ಆಗಬಹುದಾ? ಸಿನಿಮಾ ವಿಷಯಕ್ಕೆ ಬಂದರೆ ಅವರು ಬಹಳ ಪ್ರಮಾಣದಲ್ಲಿ ಆಯ್ಕೆ ಮಾಡಿಯೇ ಒಪ್ಪಿಕೊಳ್ಳೋದು, ಅವರ ಮನವೊಲಿಸೋದು ಅಷ್ಟು ಸುಲಭ ಅಲ್ಲ ಅಂತೆಲ್ಲಾನೂ ನಾನು ಕೆಲವರಿಂದ ಕೇಳಿದ್ದೆ. ಅವರು ಅತಿಥಿ ಪಾತ್ರ ಮಾಡೋದ್ದಕ್ಕೆ ಒಪ್ಪಿಕ್ಕೊಳ್ಳದೇ ಇದ್ದರೆ? ನಾನು ಸ್ವಲ್ಪ ಹಿಂಜರಿದೆ.

ಓಹ್! ಆದರೆ ಹೌದು, ನನ್ನ ಹತ್ರ ಗೆಲವು ತರುವ ಇಸ್ಪೀಟಿನ ಎಲೆ ಇದೆ ಅಲ್ವಾ! ಅವರ ಮತ್ತು ಅಪ್ಪಾವ್ರ, ಅಂದರೆ ನನ್ನ ಮಾವನವರಾದ ಡಾll ವಿಷ್ಣುವರ್ಧನರವರ ಸ್ನೇಹ ಇಡೀ ಕರ್ನಾಟಕಕ್ಕೇ ಗೊತ್ತಿರುವಂಥದ್ದು. ಹಾಗಿರೋವಾಗ ನಾನ್ಯಾಕೆ ಭಯ ಪಡಬೇಕು? ನಾನು ಧೈರ್ಯದಿಂದ ಒಳ್ಳೇದೆ ಆಗತ್ತೆ ಅನ್ನೋ ನಂಬಿಕೆಯಿಂದ ಅವರಿಗೆ ಕರೆ ಮಾಡಿದೆ. ಅವರು ನನ್ನನ್ನ ಮನೆಗೆ ಕರೆದ್ರು. ನಾನು ಅವರನ್ನ ಕೇಳ್ದೆ, “ಆಂಕಲ್ ನಾನು ನಮ್ಮ ನಿರ್ದೇಶಕ ಮತ್ತು ನಿರ್ಮಾಪಕರನ್ನು ಕರ್ಕೊಂಡು ಬರ್ಲಾ”? ಎಂದು. ಯಾಕೆಂದರೆ ನಾನು ಅನ್ಕೊಂಡಿದ್ದೆ; ನಮ್ಮ ನಿರ್ದೇಶಕರು ಅವರಿಗೆ ಅವರ ಪಾತ್ರದ ಬಗ್ಗೆ ವಿವರಿಸ್ತಾರೆ ಹಾಗೂ ನಮ್ಮ ನಿರ್ಮಾಪಕರು ಅವರ ಸಂಭಾವನೆ ಬಗ್ಗೆ ಕೇಳ್ತಾರೆ ಅಂತ. ಆದ್ರೆ ಅವರು ಬಹಳ ಸ್ಪಷ್ಟವಾಗಿ “ಅವರೆಲ್ಲ ಬೇಡ, ನೀನು ಒಬ್ಬನೇ ಬಂದು ನನಗೆ ನನ್ನ ಪಾತ್ರದ ಬಗ್ಗೆ ಹೇಳು” ಅಂತ ಹೇಳಿದ್ರು.

ಆದ್ದರಿಂದ ನಾನು ನನ್ನ ತಂದೆ, ತಾಯಿ ಮತ್ತು ಅಮ್ಮನವರ ಆಶೀರ್ವಾದ ತೊಗೊಂಡು, ಅಪ್ಪಾವ್ರ ಪಟಕ್ಕೆ ನಮಸ್ಕಾರ ಮಾಡಿ ಅವರನ್ನ ಭೇಟಿ ಮಾಡೋದಕ್ಕೆ ಹೊರಟೆ.

ಆತಿಥ್ಯ ಮಾಡೋದ್ರಲ್ಲಿ ಅವರ ಎತ್ತರಕ್ಕೆ ಏರಲು ಯಾರಿಗೂ ಆಗಲ್ಲ. ಅವರ ಆತಿಥ್ಯ ಆಯ್ತು. ನಂತರ ನಾನು ಅವರಿಗೆ ಅವರ ಪಾತ್ರ ವಿವರಿಸುವುದಕ್ಕೆ ಮುಂಚೆಯೇ, ಪಾತ್ರ ಮಾಡೋದಿಕ್ಕೆ ಒಪ್ಪಿಗೆ ಇದೆ ಎನ್ನುವುದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ನಾನು ವಿವರ ನೀಡಿದ ಮೇಲೆ, ಅವರು ತಕ್ಷಣ ನನಗೆ ಚಿತ್ರೀಕರಣದ ದಿನಾಂಕ ಹಾಗೂ ಪಾತ್ರಕ್ಕೆ ಬೇಕಾದ ವಸ್ತ್ರಗಳ ಬಗ್ಗೆ ಕೇಳದ್ರು. ಅವರ ಬಟ್ಟೆ ಹೊಲಿಸುವುದಕ್ಕಾಗಿ ಅಳತೆ ತೆಗೆದುಕೊಳ್ಳಲು ನಮ್ಮ ತಂಡದ ವ್ಯಕ್ತಿಯನ್ನ ಕಳಿಸುತ್ತೀನಿ ಎಂದೆ. ತಕ್ಷಣ ಅವರು “ಬೇಡ ನಾನೇ ಮಾಡಿಸ್ಕೊಂಡು ಬರ್ತೀನಿ” ಅಂದ್ರು. ಅದಕ್ಕೆ ನಾನು “ಸರಿ, ನಮ್ಮ ನಿರ್ಮಾಪಕರಿಗೆ ನಿಮ್ಮ ಅಪೇಕ್ಷಿತ ಸಂಭಾವನೆ ಮತ್ತು ವಸ್ತ್ರಗಳ ವೆಚ್ಚ ತಿಳಿಸುತ್ತೀನಿ ನಂಗೆ ತಿಳಿಸಿ” ಅಂತ ಕೇಳಿದೆ. ಅವರು ನನಗೆ ಉತ್ತರ ಕೊಟ್ಟಿದ್ದು ಅವರ ಬೈಗುಳಸ ಮುಖಾಂತರ! ಅದಾಗಿತ್ತು ಅವರದ್ದೇ ಆದ ರೀತಿಯ ಬೇಷರತ್ತಿನ ಪ್ರೀತಿ.

ನನಗೋಸ್ಕರ ಪಾತ್ರ ಮಾಡೋದಕ್ಕೆ ಅವರು ಸಂಭಾವನೆ ತೋಗೊಳ್ತಾರ? ಅದೂ ಯಾರವರು? ಸಿನಿರಂಗದ ಕರ್ಣ, ಅಪ್ಪಾವ್ರ ಕುಚಿಕು ಸ್ನೇಹಿತ ಮತ್ತು ನನ್ನ ಅಂಬರೀಷ್ ಅಂಕಲ್.

ಅವರು ನಮ್ಮನ್ನ ಬಿಟ್ಟು ಹೋದಾಗ ಅವರ ಹೊಸ ಮನೆ ಬರಿ ಅರ್ಧದಷ್ಟು ಪೂರ್ಣಗೊಂಡಿತ್ತು ಮತ್ತು ಅವರ ಮಗನ ಮೊದಲ ಚಿತ್ರ ಇನ್ನು ಚಿತ್ರೀಕರಣದ ಹಂತದಲ್ಲೆ ಇತ್ತು. ಅವರು ನಮ್ಮೊಟ್ಟಿಗೆ ಇಲ್ಲ ಅನ್ನೋದು ಯಾರಿಗೂ ಸಹಿಸೋದಕ್ಕೆ ಆಗಿಲ್ಲ. ಅವತ್ತು ಬರೀ ನಾನಷ್ಟೇ ಅಲ್ಲ, ಇಡಿ ಕರ್ನಾಟಕವೇ ಕಣ್ಣೀರು ಸುರಿಸ್ತು.

ಕೆಲವು ತಿಂಗಳ ನಂತರ, ಅಮ್ಮ, ಕೀರ್ತಿಯವರು ಮತ್ತು ನಾನು, ಅವರ ಹೊಸ ಮನೆಯ ಗೃಹಪ್ರವೇಶಕ್ಕೂ ಹೋಗಿದ್ದೆವು. ತುಂಬಾ ದೊಡ್ಡ ಹಾಗೂ ಸುಂದರವಾದ ಬಂಗಲೆ. ಅವರ ವಿಶಾಲವಾದ ನಗು ಮುಖದ ಚಿತ್ರ ನಮ್ಮನ್ನ ಸ್ವಾಗತ ಮಾಡುವಂತಿತ್ತು. ಸುಮಲತಾ ಆಂಟಿ, ಅವರ ಮುಖದಲ್ಲಿ ಮಂಡ್ಯದಲ್ಲಿ ತನ್ನ ಗೆಲವು ಖಚಿತ ಅನ್ನೋ ಭಾವ ಸ್ಪಷ್ಟವಾಗಿ ಕಾಣ್ತಾ ಇತ್ತು. ಅವರು ಪ್ರತಿಬಾರಿ ನೋಡ್ಕೊಳ್ಳೋ ಹಾಗೆ ನಮ್ಮನ್ನ ಅತ್ಯಂತ ಸ್ನೇಹದಿಂದ ನೋಡ್ಕೊಂಡ್ರು.

ಕೆಲವೇ ಹೊತ್ತಿನ ನಂತರ ಅವರ ಮಗ ಅಭಿಷೇಕ್ ಬಂದ್ರು. ಆತನ ಕಣ್ಣುಗಳು, ಮಾತುಗಳು, ವರ್ತನೆ ಎಲ್ಲವೂ ನನ್ನಲ್ಲಿ ಭರವಸೆ ಮೂಡಿಸ್ತು, ಅಂಬರೀಷ್ ಅಂಕಲ್ ಎಲ್ಲೂ ಹೋಗಿಲ್ಲ ಅಂತ. ಅವರು ಜೀವಂತವಾಗಿದ್ದರೆ, ಆತನಲ್ಲೇ, ಅವರ ಮಗನಲ್ಲೇ, ಹೊಸ ‘ರೆಬೆಲ್ ಸ್ಟಾರ್’ನಲ್ಲೇ.

ಅವರಿಲ್ಲದ ಎರಡು ವರ್ಷಗಳಲ್ಲಿ ಎಲ್ಲೆಡೆಯೂ ಬಹಳಷ್ಟು ಬದಲಾವಣೆಗಳಾಗಿವೆ. ನನಗೆ ‘ಜೊತೆಜೊತೆಯಲಿ’ ಧಾರಾವಾಹಿ ಹೆಸರು ತಂದುಕೊಟ್ಟಿದೆ. ಅವರಿದ್ದಿದ್ದರೆ ಖಂಡಿತವಾಗಿ ನೋಡಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದರು. ಅದೇ ರೀತಿ ಅವರ ಪುತ್ರ ಅಭಿಯ ಹೊಸ ಸಿನಿಮಾ ಪೋಸ್ಟರ್ ಬಿಡುಗಡೆಯಾಗಿದೆ. ಆದರೆ ಅವರು ನಮ್ಮ ಕಣ್ಣೆದುರಲ್ಲಿ ಇರದೇ ಹೋದರೂ ಅವರ ಆಶೀರ್ವಾದ ನಮ್ಮ ಮೇಲೆ ಖಂಡಿತವಾಗಿ ಇರುವುದನ್ನುವ ಭರವಸೆ ನನಗಿದೆ. ಅವರ ಜನ್ಮದಿನದ ಸ್ಮರಣೆಗಳೊಂದಿಗೆ..ನಮಸ್ಕಾರ.

ಅನಿರುದ್ಧ

ನಟರು, ಗಾಯಕರು, ಸಾಹಿತಿ ಮತ್ತು ನಿರ್ದೇಶಕರು

Recommended For You

Leave a Reply

error: Content is protected !!
%d bloggers like this: