
ಕ್ರೇಜಿಸ್ಟಾರ್ ರವಿಚಂದ್ರನ್ ಮೊದಲಬಾರಿಗೆ ದೇವರಾಗಿದ್ದು ‘ಕುರುಕ್ಷೇತ್ರ’ ಚಿತ್ರದ ಮೂಲಕ. ಡಾ.ರಾಜ್ ಕುಮಾರ್ ಅವರನ್ನು ಬಿಟ್ಟರೆ ಕನ್ನಡದಲ್ಲಿ ದೇವರ ಪಾತ್ರ ಮಾಡಲು ಮತ್ತೊಬ್ಬರಿಲ್ಲ ಎನ್ನುವಂಥ ಸಂದರ್ಭದಲ್ಲಿ ರವಿಚಂದ್ರನ್ ಅಭಿಮಾನಿಗಳೇ ಬೆಚ್ಚುವಂತೆ ಶ್ರೀಕೃಷ್ಣನಾಗಿ ನಟಿಸಿದರು ರವಿಚಂದ್ರನ್. ಆದರೆ ಈ ಬಾರಿ ಚಿತ್ರಕ್ಕೆ ದೇವರ ಹೆಸರಿದೆ ಹೊರತು, ರವಿಚಂದ್ರನ್ ಪೌರಾಣಿಕ ಪಾತ್ರ ಮಾಡುತ್ತಿಲ್ಲ ಎನ್ನಲಾಗಿದೆ.
‘ಶ್ರೀರಾಮಚಂದ್ರ’, ‘ಗೋಪಿಕೃಷ್ಣ’, ‘ಕೋದಂಡರಾಮ’ ‘ರಾಮಕೃಷ್ಣ’ ಹೀಗೆ ದೇವರ ಹೆಸರಿನ ಸಿನಿಮಾಗಳಲ್ಲಿ ರವಿಚಂದ್ರನ್ ಈ ಹಿಂದೆಯೂ ನಟಿಸಿದ್ದಾರೆ. ಆದರೆ ಈಗ ನಟಿಸುತ್ತಿರುವ ಚಿತ್ರದ ಹೆಸರೇ GOD ಎಂದು ಹೇಳಲಾಗಿದೆ. ಅಂದಹಾಗೆ ಎಲ್ಲರೂ ಲಾಕ್ಡೌನ್ ದಿನಗಳಲ್ಲಿ ಮನೆಯೊಳಗಿದ್ದು ಕೆಲಸವಿಲ್ಲದೆ ಪರದಾಡಿದರೆ ರವಿಚಂದ್ರನ್ ಮಾತ್ರ ಮನೆಯೊಳಗೆಯೇ ಸಿನಿಮಾ ಶುರು ಮಾಡಿದ್ದಾರೆ. ಅದರ ಹೆಸರೇ ‘ಗಾಡ್’. ಅಂದಹಾಗೆ ಇದೇ ಹೆಸರನ್ನೇ ಅವರು ಫೈನಲ್ ಮಾಡುವುದಾದರೆ ‘ಕ್ರೇಜಿಲೋಕ’, ‘ಕ್ರೇಜಿಸ್ಟಾರ್’ ಬಳಿಕ ಆಂಗ್ಲ ಶೀರ್ಷಿಕೆಯಲ್ಲಿ ತೆರೆಕಾಣಲಿರುವ ಮೂರನೇ ಸಿನಿಮಾ ಇದಾಗಲಿದೆ.

ಮೊದಲೆಲ್ಲ ರವಿಚಂದ್ರನ್ ಸಿನಿಮಾ ಎಂದರೆ ಮುಹೂರ್ತದ ಆಹ್ವಾನ ಪತ್ರಿಕೆಯಿಂದಲೇ ನಭೂತೊ ನ ಭವಿಷ್ಯತಿ ಎನ್ನುವ ಮಟ್ಟಕ್ಕೆ ಸುದ್ದಿಯಾಗುತ್ತಿತ್ತು. ಅವರ ಚಿತ್ರಗಳು ಬಿಡುಗಡೆಯಾದರೆ ಚೆನ್ನೈ ಮಂದಿಯೇ ಚುರುಕಾಗುತ್ತಿದ್ದರು. ಯಾಕೆಂದರೆ ಅವರ ಸಿನಿಮಾಗಳಲ್ಲಿನ ತಂತ್ರಜ್ಞಾನದ ರೀತಿಯೇ ಅಂಥದ್ದು. ಆಕರ್ಷಕ. ಇನ್ನೊಬ್ಬರಿಂದ ಅನುಕರಿಸಲಾಗದ ಮಾದರಿ. ಆದರೆ ‘ಏಕಾಂಗಿ’ಯ ಬಳಿಕ ಅವರು ಆರಂಭಿಸಿದ ಎರಡನೇ ಇನ್ನಿಂಗ್ಸ್ ನಲ್ಲಿ ಅದ್ಧೂರಿಗಿಂತ ಆಳವಾದ ಅಧ್ಯಯನಕ್ಕೆ ಮೀಸಲಿಡುತ್ತಿದ್ದಾರೆ ಎನ್ನುವಂತಿದೆ. ಯಾಕೆಂದರೆ ಲಾಕ್ಡೌನ್ ಇರದಿದ್ದರೂ ರವಿಚಂದ್ರನ್ ಹೆಚ್ಚಾಗಿ ಮನೆಯಲ್ಲೇ ಕಳೆಯುತ್ತಾರೆ. ಮನೆಯಲ್ಲೇ ಕಚೇರಿ, ಸ್ಟುಡಿಯೋ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಯಾವ ಸಿನಿಮಾ ಸೆಟ್ ಅದ್ಧೂರಿತನಕ್ಕೂ ಕೊರತೆ ಕಾಣದ ಹಾಗೆ ಅಲಂಕಾರಗಳನ್ನು ಜೋಡಿಸಿದ್ದಾರೆ. ಹಾಗಾಗಿ ಆ ಮನೆಯಲ್ಲಿ ಮೇಲ್ಮಹಡಿ ಸೇರಿಕೊಂಡರೆ ಚಿತ್ರೀಕರಣಕ್ಕೂ ಕೊರತೆಯೇ ಇರದಂಥ ವಾತಾವರಣ ಇದೆ. ಒಂದು ವೇಳೆ ಅದೇನೇ ಕೊರತೆಗಳಿದ್ದರೂ ಛಾಯಾಗ್ರಹಣದ ನಿರ್ವಹಣೆಯಲ್ಲಿ ಅವೆಲ್ಲವೂ ಆಸಕ್ತಿಕರವಾಗಿಯೇ ಕಾಣುತ್ತದೆ.
ಇಬ್ಬರು ವೇಶ್ಯೆಯರ ಕತೆ!
‘ಏಕಾಂಗಿ’ ಚಿತ್ರದಲ್ಲಿ ನಾಯಕಿ ಮೋಸ ಮಾಡುವ ಕತೆ ಇತ್ತು. ಇಲ್ಲಿ ಇಬ್ಬರು ನಾಯಕಿಯರಿದ್ದಾರೆ. ಆದರೆ ಅವರು ಕೂಡ ವೇಶ್ಯೆಯರು! ಹಾಗಾದರೆ ನಾಯಕಿಯರು ಹೇಗಾಗುತ್ತಾರೆ? ಬಹುಶಃ ಕನ್ನಡದಲ್ಲಿ ಪುಟ್ಟಣ್ಣ ಕಣಗಾಲ್ ಬಳಿಕ ರವಿಚಂದ್ರನ್ ಮಹಿಳೆಯರ ಎಲ್ಲ ಮಾದರಿಯ ಪಾತ್ರಗಳಿಗೂ ಒಂದು ಡೆಪ್ತ್ ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಬಹುದು. ಹಾಗಾಗಿ ಅವರಿಗೆ ಸಂದಿರುವ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಅರ್ಥ ಹೆಚ್ಚಿದೆ. ಅಪೂರ್ವದಲ್ಲಿ ಎಳೆಯ ಹೆಣ್ಣಿನ ಭಾವನೆಗಳ ಬಗ್ಗೆ ತೋರಿಸಿದ್ದ ರವಿಚಂದ್ರನ್ ಇಲ್ಲಿ ತೋರಿಸುತ್ತಿರುವ ನಾಯಕಿಯರ ವಯಸ್ಸೆಷ್ಟು ಎಂದು ರಿವೀಲಾಗಿಲ್ಲ. ಅಸಲು ನಾಯಕಿಯರಾಗಿ ನಟಿಸುತ್ತಿರುವವರು ಯಾರು ಎನ್ನುವುದೇ ಗೊತ್ತಿಲ್ಲ. ಯಾಕೆಂದರೆ ರವಿಚಂದ್ರನ್ ‘ಗಾಡ್’ ಸಿನಿಮಾ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ಯಾವ ವಿಚಾರವನ್ನು ಕೂಡ ಹೊರಗೆ ಬಿಟ್ಟಿಲ್ಲ. ಅವರ ಆಪ್ತವಲಯದಿಂದ ಸಿಕ್ಕಿರುವ ಸುದ್ದಿಯ ಆಧಾರದಲ್ಲಿ ಇದನ್ನು ನಿಮ್ಮ ಮುಂದೆ ಇರಿಸಿದ್ದೇವೆ.
ರವಿ ಮಾತಿಗೆ ಕಾಯೋಣ
ರವಿಚಂದ್ರನ್ ಮಾಧ್ಯಮಗಳ ಮುಂದೆ ಹಾಜರಾಗುವುದು ಅಪರೂಪ. ಹಾಗೆ ಎದುರಾದರೆ ಎಲ್ಲವನ್ನೂ ಒಂದೇ ಬಾರಿ ಹೇಳಿಬಿಡುವುದು ಅವರ ಅಭ್ಯಾಸ. ಈ ಹಿಂದೆ ಮಗನನ್ನು ನಾಯಕನಾಗಿಸಿ ‘ಅಂದು’ ಎನ್ನುವ ಚಿತ್ರ ಮನೆಯಲ್ಲೇ ಶೂಟ್ ಮಾಡಿದ್ದಾಗಿ ಹೇಳಿದ್ದರು. ಅದಕ್ಕೆ ಕ್ಲಾಪ್ ಬೋರ್ಡಾಗಿ ತಮ್ಮ ಅಂಗೈಯನ್ನೇ ಇಟ್ಟಿದ್ದಾಗಿ ಹೇಳುತ್ತಿದ್ದರು! ಏನೇ ಆಗಲಿ, ‘ಅಂದು’, ‘ಮಂಜಿನ ಹನಿ’ ಮೊದಲಾದ ಚಿತ್ರಗಳು ತೆರೆಕಾಣಲೇ ಇಲ್ಲ. ರಾಧಿಕಾ ಕುಮಾರ ಸ್ವಾಮಿ ನಾಯಕಿಯಾಗಿರುವ ‘ರಾಜೇಂದ್ರ ಪೊನ್ನಪ್ಪ’ ಚಿತ್ರ ಅರ್ಧದಲ್ಲಿ ನಿಂತಿದ್ದು ಪ್ರೇಕ್ಷಕರು ಅದಕ್ಕಾಗಿ ಎದುರು ನೋಡುತ್ತಿದ್ದಾರೆ. ಪೂರ್ತಿಯಾಗಿದೆ ಎನ್ನಲಾಗಿರುವ ‘ರವಿಬೋಪಣ್ಣ’ದ ಬಗ್ಗೆಯೂ ನಿರೀಕ್ಷೆ ಇದೆ. ಇದರ ನಡುವೆ ಸ್ವಂತ ಒಟಿಟಿ ಫ್ಲಾಟ್ಫಾರಂ ಮಾಡುವ ಬಗ್ಗೆ ಕೂಡ ರವಿಚಂದ್ರನ್ ಕನಸು ಸಾಗಿದೆಯಂತೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ರವಿಚಂದ್ರನ್ ಅವರ ಸಿನಿಮಾಗಳು ಚಿತ್ರಮಂದಿರದಲ್ಲೇ ನೋಡಲು ಸೊಗಸು. ಅಂಥ ಅವಕಾಶ ಆದಷ್ಟು ಬೇಗ ಬರಲಿ ಎಂದು ಅವರ ಜನ್ಮದಿನದ ಸಂದರ್ಭದಲ್ಲಿ ಆಶಿಸೋಣ.