
ಬಾಲಿವುಡ್ ನ ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ ಸಾಜಿದ್ ವಾಜಿದ್ ಹೆಸರು ಕೇಳಿರದವರು ಅಪರೂಪ. ಅವರಲ್ಲಿ ವಾಜಿದ್ ಇಂದು ಮುಂಜಾನೆ ಕೋವಿಡ್19 ಕಾರಣದಿಂದ ನಿಧನರಾಗಿದ್ದಾರೆ.
‘ದಬಂಗ್’, ‘ವಾಂಟೆಡ್’, ‘ಜೈ ಹೊ’ ಮೊದಲಾದ ಜನಪ್ರಿಯ ಚಿತ್ರಸಂಗೀತದಿಂದ ಹೆಸರಾದವರು ಸಾಜಿದ್ ವಾಜಿದ್ ಸಹೋದರರು. ವಾಜಿದ್ ಗೆ ವರ್ಷಗಳಿಂದ ಕಿಡ್ನಿ ತೊಂದರೆ ಇತ್ತು. ಆದರೆ ಇದೀಗ ಮುಂಬೈನ ಆಸ್ಪತ್ರೆಗೆ ದಾಖಲಾಗಲು ಕಾರಣ ಉಸಿರಾಟದ ತೊಂದೆರೆ ಆಗಿತ್ತು. ವೆಂಟಿಲೇಟರ್ ನಲ್ಲಿ ಚಿಕಿತ್ಸೆಗೊಳಪಟ್ಟಿದ್ದ ವಾಜಿದ್ ನಿಧನರಾಗಿರುವುದು ಬಾಲಿವುಡ್ ಬಳಗ ಮತ್ತು ಅವರ ಸಂಗೀತಾರಾಧಕರಿಗೆ ನೋವು ನೀಡಿದೆ.

ಸಲ್ಮಾನ್ ಅವರ ಮೆಚ್ಚಿನ ಸಂಗೀತ ನಿರ್ದೇಶಕ ಜೋಡಿಯಾಗಿದ್ದ ಇವರು ಜೀ ವಾಹಿನಿಯ ಸರೆಗಮಪ ಹಿಂದಿ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿಯೂ ಭಾಗವಹಿಸಿದ್ದರು. ಬಾಲಿವುಡ್ ನಟಿಯರಾದ ಪ್ರಿಯಾಂಕ ಚೋಪ್ರಾ ಮುಂಜಾನೆ ಎರಡು ಗಂಟೆ ಹೊತ್ತಿಗೆ ಈ ಬಗ್ಗೆ ಟ್ವೀಟ್ ಮಾಡಿದ್ದು ‘ಇದೊಂದು ಆಘಾತಕಾರಿ ಸುದ್ದಿ. ನನ್ನಿಂದ ಸಹೋದರ ವಾಜಿದ್ ಅವರ ನಗುಮುಖವನ್ನು ಮರೆಯಲಾಗದು. ತುಂಬ ಬೇಗ ಹೊರಟು ಬಿಟ್ಟಿರಿ. ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ವಾಜಿದ್ ಆತ್ಮಕ್ಕೆ ಶಾಂತಿ ದೊರಕಲಿ. ನೀವು ನನ್ನ ಮನದ ಪ್ರಾರ್ಥನೆಯಲ್ಲಿ ಎಂದಿಗೂ ಇರುತ್ತೀರಿ” ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ಜನಪ್ರಿಯ ತಾರೆ ಪ್ರೀತಿ ಜಿಂಟಾ ಸೇರಿದಂತೆ ಗಣ್ಯರನೇಕರು ಟ್ವಿಟ್ಟರ್ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಜಿದ್ ವಾಜಿದ್ ಜೋಡಿಯಲ್ಲಿ ವಾಜಿದ್ ಒಬ್ಬ ಉತ್ತಮ ಗಾಯಕ ಕೂಡ ಆಗಿದ್ದರು. ‘ಪಾರ್ಟ್ನರ್’ ಚಿತ್ರದಲ್ಲಿ ‘ಸೋನಿ ದೆ ನಕ್ ರೆ..’ , ‘ಡು ಯು ವನ್ನ ಪಾರ್ಟ್ನರ್..’ ‘ಗಾಡ್ ತುಸ್ಸೀ ಗ್ರೇಟ್ ಹೊ’ ಚಿತ್ರದಲ್ಲಿ ‘ತುಜೆ ಅಕ್ಸಾ ಬೀಚ್ ಗುಮಾದುಂ..’, ‘ವಾಂಟೆಡ್’ ಚಿತ್ರದಲ್ಲಿ ‘ಜಲ್ವಾ..’ ರೌಡಿ ರಾಥೋಡ್ ಸಿನಿಮಾದಲ್ಲಿ ‘ಜಿಂತಾತ ಜಿತಾ ಜಿತಾ..’, ಏಕ್ ಟೈಗರ್ ಚಿತ್ರದಲ್ಲಿ ‘ಮಾಶ ಅಲ್ಲಾಹ್’, ದಬಂಗ್ 2 ನಲ್ಲಿ ‘ಪಾಂಡೇಜಿ ಸೀಟಿ..’ ಹೀಗೆ ಹಾಡಿದ ಬಹುಪಾಲು ಗೀತೆಗಳು ಸೂಪರ್ ಹಿಟ್ ಆಗಿದ್ದವು ಎನ್ನುವುದು ಸತ್ಯ.
ಕೊರೊನ ವೈರಸ್ ದೇಶದಲ್ಲಿ ದಿನೇ ಹೆಚ್ಚಾಗುತ್ತಿದ್ದು ಮಾಧ್ಯಮದ ಮಂದಿ, ರಾಜಕಾರಣಿಗಳು, ಪೊಲೀಸ್ ಇಲಾಖೆಯವರಿಗೂ ಸೋಂಕು ತಗಲುತ್ತಿರುವುದನ್ನು ಕಂಡು ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ. ಇದೀಗ ಬಾಲಿವುಡ್ ಸೆಲೆಬ್ರಿಟಿ ಸಾವಿಗೂ ಕೊರೊನಾ ಕಾರಣ ಎನ್ನಲಾಗುತ್ತಿರುವುದು ಜನಸಾಮಾನ್ಯರ ಗತಿಯೇನು ಎನ್ನುವಂತಾಗಿದೆ.

