ಕಳೆದ ವರ್ಷಾರಂಭದಲ್ಲೇ ತೆರೆಕಂಡು ವರ್ಷಪೂರ್ತಿ ಸುದ್ದಿಯಲ್ಲಿದ್ದ ಸಿನಿಮಾ `ಬೆಲ್ ಬಾಟಂ’. ಎಂಬತ್ತರ ದಶಕದಲ್ಲಿ ಹಳ್ಳಿಯೊಂದರಲ್ಲಿ ನಡೆಯುವ ಕಳ್ಳತನದ ಘಟನೆಯನ್ನು ಆಧಾರವಾಗಿಸಿದ ಚಿತ್ರದ ಪ್ರಮುಖ ಆಕರ್ಷಣೆ ನಾಯಕ ರಿಷಭ್ ಶೆಟ್ಟಿ ಮತ್ತು ರೆಟ್ರೋ ಕಾಲದ ಮೇಕಿಂಗ್ ಆಗಿತ್ತು. ಕನ್ನಡದ ಉತ್ತಮ, ಸಭ್ಯ ಚಿತ್ರಗಳ ನಿರ್ದೇಶಕ ಎಂದು ಗುರುತಾಗಿರುವ ಜಯತೀರ್ಥ ಅವರ ನಿರ್ದೇಶನದಲ್ಲಿ ಮೂಡಿ ಬಂದ ಬೆಲ್ ಬಾಟಂ ಕಳೆದ ವರ್ಷದ ಯಶಸ್ವಿ ಚಿತ್ರಗಳಲ್ಲೊಂದಾಗಿತ್ತು. ಇದೀಗ ತಮಿಳಲ್ಲಿಯೂ ತಯಾರಾಗಿರುವ ಬೆಲ್ ಬಾಟಂ ಅದರ ಬಿಡುಗಡೆಗೆ ಮುನ್ನವೇ ಮಲಯಾಳಂನಲ್ಲಿ ಸದ್ದು ಮಾಡುತ್ತಿದೆ. ಅದು ರಿಮೇಕ್ ವಿಚಾರದಲ್ಲಿ ಅಲ್ಲ. ಅವರು ಒಟಿಟಿ ಮೂಲಕ ಕನ್ನಡ ಸಿನಿಮಾ ನೋಡಲು ಶುರು ಮಾಡಿದ್ದಾರೆ.
ಚಿತ್ರರಂಗದ ಆರಂಭದ ದಿನಗಳಲ್ಲಿ ಕನ್ನಡದ ಸಾಕಷ್ಟು ಪ್ರಯೋಗಾತ್ಮಕ ಚಿತ್ರಗಳು ಪರಭಾಷೆಗೆ ಮಾದರಿಯಾಗಿದ್ದವು. ಆನಂತರದ ಒಂದು ಕಾಲಘಟ್ಟ ಪರಭಾಷಾ ಮಾದರಿಯ ಚಿತ್ರಗಳನ್ನು ನೀಡುವುದರಲ್ಲೇ ನಮ್ಮ ತಾರೆಯರು ಕಳೆದು ಹೋದರು. ಆದರೆ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಪ್ರವೇಶವಾದ ಬಳಿಕ ಕನ್ನಡ ಸಿನಿಮಾಗಳ ಬಗ್ಗೆ ಮತ್ತೆ ಮಾತನಾಡತೊಡಗಿದ ಪರಭಾಷಿಗರು ಪೂರ್ತಿಯಾಗಿ ಕತ್ತು ತಿರುಗಿಸಿ ನೋಡಿದ್ದು ‘ಕೆಜಿಎಫ್’ ಚಿತ್ರ ಬಂದಾಗ. ಆನಂತರ ಕನ್ನಡ ಸಿನಿಮಾಗಳತ್ತ ಅವರು ಒಂದು ಕಣ್ಣು ನೆಟ್ಟೇ ಕುಳಿತಿದ್ದಾರೆ. ತೆಲುಗು, ತಮಿಳು ಭಾಷೆಗಳಿಗೆ ಕನ್ನಡ ಸಿನಿಮಾ ಪಥ್ಯವಾಗುವುದು ಹೊಸತಲ್ಲ. ಆದರೆ ಕೇರಳದ ಸಿನಿಮಾ ಪ್ರೇಮಿಗಳು ಕನ್ನಡ ಎಂದಷ್ಟೇ ಅಲ್ಲ, ಪರಭಾಷೆಯ ಚಿತ್ರಗಳಿಗೆ ಸುಲಭದಲ್ಲಿ ಮಣೆ ಹಾಕುವವರೇ ಅಲ್ಲ. ಅಂಥವರು ಈಗ ಬೆಲ್ ಬಾಟಂ ಚಿತ್ರದ ಬಗ್ಗೆ ಮೆಚ್ಚಿ ಹಾಕುತ್ತಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಒಂದು ಕಡೆ ಚಿತ್ರ ನೋಡಿದವರು, ಇಂಗ್ಲಿಷ್ ಸಬ್ ಟೈಟಲ್ ಇಲ್ಲದಿರುವ ಕಾರಣ ಸಿನಿಮಾ ಅರ್ಥ ಮಾಡಿಕೊಳ್ಳಲು ಕಷ್ಟವಾಯಿತೆಂದು ಹೇಳುತ್ತಿದ್ದರೆ, ಹಾಗಿದ್ದರೂ ಒಮ್ಮೆ ಚಿತ್ರ ನೋಡಿ ಎಂದು ತಾವಾಗಿಯೇ ಪ್ರಚಾರ ಮಾಡುತ್ತಿರುವುದು ವಿಶೇಷ.

ಒಟ್ಟಿನಲ್ಲಿ ಮಲಯಾಳಿಗಳು ಚಿತ್ರಿಷ್ಟಪಟ್ಟಿರುವುದಕ್ಕೆ ಚಿತ್ರದ ಕತೆಯೂ ಕಾರಣ. ಹಾಗಾಗಿ ಈ ಸಿನಿಮಾದ ಕತೆಗಾರ ಟಿಕೆ ದಯಾನಂದ್ ಮತ್ತು ಬಹು ಭಾಷಾ ತಾರೆಯಾಗಿ ಬೆಳಡದಿರುವ ನಾಯಕಿ ಹರಿಪ್ರಿಯಾ ಅವರಿಗೂ ಅದರ ಕ್ರೆಡಿಟ್ ಸಂದಾಯವಾಗುವುದರಲ್ಲಿ ಸಂದೇಹವೇ ಇಲ್ಲ. ಮಲಯಾಳಂ ಟ್ರೋಲ್ ಪೇಜ್ ಒಂದರಲ್ಲಿ ನಡೆಸಿರುವ ಪ್ರಚಾರದ ಪ್ರಕಾರ “ಪೊಲೀಸ್ ಸ್ಟೇಷನ್ ಗಳಲ್ಲಿ ನಡೆಯುವ ಒಂದು ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣದ ಪತ್ತೆಗೆ ಹೊರಡುವ ಡಿಟೆಕ್ಟಿವ್ ದಿವಾಕರ್.. ಮುಂದುವರಿದ ಘಟನೆಗಳು ಸಿನಿಮಾದ ಪ್ರಮುಖ ಘಟ್ಟ..ಕೇಸ್ ಪತ್ತೆ ಮಾಡುವಲ್ಲಿನ ಪರಿಶ್ರಮ, ಹಾಸ್ಯ, ಟ್ವಿಸ್ಟ್ ಗಳು, ಸಸ್ಪೆನ್ಸ್ ಎಲ್ಲವೂ ಬೆರೆತ, ನಿರಾಶೆಗೊಳಿಸದ ಒಂದು ಕನ್ನಡ ಥ್ರಿಲ್ಲರ್ ಸಿನಿಮಾ…” ಎನ್ನುವ ಸಾಲುಗಳನ್ನು ಬರೆಯಲಾಗಿದೆ. ಬಿಡುಗಡೆಯಾಗಿ ವರ್ಷ ದಾಟಿದ ಮೇಲೆಯೂ ಕನ್ನಡಿಗರು ಹೆಮ್ಮೆ ಪಡುವಂಥ ಚಿತ್ರವನ್ನು ನೀಡಿದ ಬೆಲ್ ಬಾಟಂ ತಂಡಕ್ಕೆ ಅಭಿನಂದನೆಗಳು.
