ಬದುಕಿನಲ್ಲಿ ಯಾರು ಯಾವಾಗ ಹೇಗೆ ಸಹಾಯ ಮಾಡುತ್ತಾರೆ ಎನ್ನುವುದು ಯಾರಿಗೂ ಹೇಳಲು ಸಾಧ್ಯವಿಲ್ಲ. ಇವರು ಖಂಡಿತವಾಗಿ ಸಹಾಯ ಮಾಡುತ್ತಾರೆ ಎನ್ನುವ ನಂಬಿಕೆ ಇರಿಸಿಕೊಂಡಿದ್ದಾಗಲೇ ಅವರು ಕೈ ಕೊಡಬಹುದು! ಇವರೆಲ್ಲ ನಮಗೆ ಯಾಕೆ ಸಹಾಯ ಮಾಡುತ್ತಾರೆ ಭರವಸೆಯನ್ನೇ ಇರಿಸದಿದ್ದಾಗಲೂ ಕೆಲವರು ದಿಢೀರನೆ ಆಪತ್ಬಾಂಧವರಾಗಿ ಬರುತ್ತಾರೆ. ಅಂಥ ಕೆಲಸವನ್ನು ಸ್ವತಃ ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಮಾಡಿದ್ದಾರೆ.
ರಚಿತಾ ಸಹಾಯ ಮಾಡಿದ್ದು ದಿನಗೂಲಿ ಕಾರ್ಮಿಕರಿಗೆ. ಅವರು ತಮ್ಮ ಊರಿಗೂ ಹೋಗಲು ಸಾಧ್ಯವಿಲ್ಲದೆ, ಹಸಿವನ್ನೂ ನಿವಾರಿಸಲಾಗದೆ ಒದ್ದಾಡಿದ ಕಾಲವೊಂದಿತ್ತಲ್ವ? ಆಗ ಮನೆಯಲ್ಲಿದ್ದೇ ಈ ವಿಚಾರ ಅರಿತುಕೊಂಡ ರಚಿತಾ ಅವರಿಗೆ ಸುಮ್ಮನಿರಲು ಸಾಧ್ಯವಾಗಲಿಲ್ಲ. ಒಂದು ತಂಡದ ಜತೆಗೆ ನಾನೇ ಹೋಗಿ ಆಹಾರ ಅಗತ್ಯ ಇದ್ದವರಿಗೆ ಖುದ್ದಾಗಿ ಬಡಿಸಿದ್ದೇನೆ. ಆದರೆ ನಾನು ಮುಖಕ್ಕೆ ಮಾಸ್ಕ್ ಧರಿಸಿದ್ದ ಕಾರಣ ಯಾರೂ ನನ್ನ ಗುರುತು ಹಿಡಿಯುವ ಸಾಧ್ಯತೆ ಇರಲಿಲ್ಲ. ನನಗೂ ಅವರು ನನ್ನ ಗುರುತು ಹಿಡಿಯವುದಕ್ಕಿಂತ ನಾನು ಅವರಿಗೆ ನೇರವಾಗಿ ಸಹಾಯ ಮಾಡಬೇಕು ಎನ್ನುವ ಆತ್ಮತೃಪ್ತಿ ಬೇಕಿತ್ತು. ಅದು ಸಾಧ್ಯವಾಯಿತು. ಹಾಗಾಗಿ ಆಮೇಲೆಯೂ ಯಾರಲ್ಲಿಯೂ ಹೇಳಿಕೊಂಡಿಲ್ಲ ಎಂದಿದ್ದಾರೆ.
ಅಂದಹಾಗೆ ರಚಿತಾ ಅವರು ಮಾಡಿರುವ ಈ ಸಹಾಯದ ಬಗ್ಗೆ ಅವರು ಯಾರಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಅವರೊಂದಿಗೆ ಸಿನಿಕನ್ನಡ.ಕಾಮ್ ಪರವಾಗಿ ಮಾತನಾಡುತ್ತಾ, ಲಾಕ್ಡೌನ್ ದಿನಗಳ ಬಗ್ಗೆ ವಿಚಾರಿಸುವಾಗ ಮಾತಿನ ನಡುವೆ ಈ ವಿಷಯ ಹೊರಗೆ ಬಂತು. ಮಾತ್ರವಲ್ಲ, ಅವರು ತಾವು ಯಾವ ತಂಡದ ಜತೆಗೆ ಹೋಗಿದ್ದೆ, ಎಲ್ಲೆಲ್ಲ ಆಹಾರ ವಿತರಿಸಿದ್ದೇನೆ ಎನ್ನುವುದನ್ನು ಹೇಳಲು ಒಪ್ಪಲಿಲ್ಲ. ಒತ್ತಾಯಿಸುವುದರಲ್ಲಿ ಅರ್ಥವಿಲ್ಲ ಎಂದು ನಮಗೂ ಗೊತ್ತಿತ್ತು. ಯಾಕೆಂದರೆ, ಅವರು ಪ್ರಚಾರ ಬಯಸಿದ್ದರೆ ಅಂದು ಆಹಾರ ನೀಡಲು ಹೊರಡುವಾಗಲೇ ಮಾಧ್ಯಮಗಳನ್ನು ಸಂಪರ್ಕಿಸಿದ್ದಲ್ಲಿ ಲೈವ್ ಕವರೇಜ್ ಸಿಗುತ್ತಿತ್ತು. ಆದರೆ ಅವರಿಗೆ ಅದು ಇಷ್ಟವಿರಲಿಲ್ಲ. ಈ ಸಂದರ್ಭದಲ್ಲಿ ಸಮಾಜ ಸೇವೆಯನ್ನು ವಿವಿಧ ರೀತಿಯಲ್ಲಿ ಮಾಡುವ ನಮ್ಮ ಸ್ಟಾರ್ ಗಳ ಬಗ್ಗೆ ಪ್ರಸ್ತಾಪಿಸಲೇಬೇಕು.
ದಾನ ನೀಡುವುದರಲ್ಲಿದೆ ಹಲ ವಿಧಾನ
ಬಾಲಿವುಡ್ ನಿಂದ ಆರಂಭಿಸುವುದಾದರೆ ನಟ ಅಕ್ಷಯ್ ಕುಮಾರ್ ಪಿಎಂ ಕೇರ್ ಫಂಡ್ ಗೆ ನೀಡಿದ್ದು 25 ಕೋಟಿ. ಆದರೆ ಬೀದಿಗಿಳಿದು ಸ್ವಂತ ಹಣದಲ್ಲಿ ಲಾಕ್ಡೌನ್ ನಿಂದ ಕಷ್ಟಕ್ಕೊಳಗಾದ ಅಂತಾರಾಜ್ಯ ದಿನಗೂಲಿ ಕಾರ್ಮಿಕರನ್ನು ಅವರ ಸ್ವಸ್ಥಾನಕ್ಕೆ ಕಳುಹಿಸಲು ನೆರವಾಗಿದ್ದು ಸೋನು ಸೂದ್. ಇದರ ನಡುವೆ ಶಾರುಖ್ ಖಾನ್ 25,000 ಪಿಪಿಇ ಕಿಟ್ ಗಳನ್ನು ವೈದ್ಯರಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ರೀತಿ ನಮ್ಮ ಚಂದನವನದ ಉದಾಹರಣೆ ತೆಗೆದುಕೊಂಡರೂ ಅಷ್ಟೇ, ಪುನೀತ್ ರಾಜ್ ಕುಮಾರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ಮೊತ್ತವನ್ನು ನೀಡಿದ್ದಾರೆ. ಸಂಚಾರಿ ವಿಜಯ್, ಡಾಲಿ ಧನಂಜಯ್ ಅವರು ಖುದ್ದಾಗಿ ಫುಡ್ ಕಿಟ್ ವಿತರಣೆ ಮಾಡಿದ್ದಾರೆ ಮಾತ್ರವಲ್ಲ ಸ್ವತಃ ಖರ್ಚು ಮಾಡಿ ದಿನಗೂಲಿ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಈ ಎರಡು ರೀತಿಯ ಸೇವೆಗಳು ಎಲ್ಲೆಡೆಯೂ ನಡೆದಿದೆ. ಆದರೆ ಮೂರನೇ ರೀತಿಯ ಸಮಾಜ ಸೇವೆಯನ್ನು ಇಂದಿನ ಜನತೆ ಅರ್ಥಮಾಡಿಕೊಳ್ಳಲಾಗದೆ ಕಷ್ಟ ಪಡುತ್ತಿದೆ. ಅದು ರಚಿತಾ ರಾಮ್ ಮಾಡಿರುವಂಥ ಸೇವೆ.
ರಚಿತಾ ಮಾತ್ರವಲ್ಲ, ತುಂಬ ಮಂದಿ ಸ್ಟಾರ್ ಗಳು ಜನಸೇವೆ ಮಾಡಿದ್ದಾರೆ. ಆದರೆ ಅವರು ಕೂಡ ಅದನ್ನು ಹೊರಗಡೆ ಹಂಚಿಕೊಳ್ಳಲು ಇಷ್ಟಪಡುತ್ತಿಲ್ಲ. ಇದಕ್ಕೆ ಬಹುತೇಕ ಭಾರತೀಯರು ನಂಬಿರುವ ಒಂದು ಅಂಶವೇ ಕಾರಣ. ಅದೇನೆಂದರೆ ಬಲಗೈಲಿ ಕೊಟ್ಟಿರುವುದು ಎಡಗೈಗೆ ಗೊತ್ತಾಗಬಾರದು ಎನ್ನುವ ನುಡಿಕಟ್ಟು! ಅಂದರೆ ದಾನ ಮಾಡಿದ್ದು ಅಷ್ಟೊಂದು ಗುಟ್ಟಾಗಿರಬೇಕು ಎನ್ನುವುದು ಸಾರ. ಆಗ ಮಾತ್ರ ಅದರ ಪುಣ್ಯ ದಾನಿಗಳಿಗೆ ಸಿಗುತ್ತದೆ ಎಂದು ಕೂಡ ಹೇಳಲಾಗುತ್ತದೆ. ಪುಣ್ಯ ಸಿಗಲಿ ಎನ್ನುವ ಕಾರಣಕ್ಕಾಗಿ ಗುಟ್ಟು ಮಾಡುತ್ತಾರೋ ಗೊತ್ತಿಲ್ಲ. ಆದರೆ ಗುಟ್ಟು ಮಾಡುವುದರಿಂದಾಗಿ ಒಂದು ಬಾಳೆಹಣ್ಣು ಕೊಟ್ಟರೂ ಫೊಟೊ ತೆಗೆದು ಮಾಧ್ಯಮಗಳಲ್ಲಿ ಹಂಚುವ ಪ್ರಚಾರ ಪ್ರಿಯರಿಂದ ನಿರ್ಗಗತಿಕರು ವ್ಯಂಗ್ಯಕ್ಕೆ, ತಮಾಷೆಗೆ ಈಡಾಗುವ ಸಂದರ್ಭಗಳು ಇರುವುದಿಲ್ಲ.
ಅಣ್ಣಾವ್ರ ದಾನದ ರೀತಿಯೇ ಇಂದಿಗೂ ಆದರ್ಶ!
ಕರ್ನಾಟಕದಲ್ಲಿ, ಚಿತ್ರರಂಗದಲ್ಲಿ ಹಲವಾರು ವಿಚಾರಗಳಿಗೆ ಆದರ್ಶವಾಗಿ ಗುರುತಿಸಲ್ಪಡುವ ಡಾ.ರಾಜ್ ಕುಮಾರ್ ಅವರು ಅನುಸರಿಸಿಕೊಂಡು ಬಂದಿರುವ ರೀತಿ ಇದು. ಹಾಗಾಗಿಯೇ ಇಂದು ಶಿವರಾಜ್ ಕುಮಾರ್ ಅದೇ ದಾರಿಯನ್ನು ತುಳಿದಿದ್ದಾರೆ. ಆದರೆ ಇಂದಿನ ಜಮಾನದಲ್ಲಿ ಬಹುತೇಕರಿಗೆ ಅವರ ಧೋರಣೆಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯೇ ಇಲ್ಲ. ಹಾಗಾಗಿಯೇ ಡಾ.ರಾಜ್ ಈ ನಾಡಿಗಾಗಿ ಏನು ಮಾಡಿದ್ದಾರೆ? ಶಿವರಾಜ್ ಕುಮಾರ್ ಅವರೇಕೆ ಪುನೀತ್ ಅವರಂತೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಿಲ್ಲ ಎನ್ನುವ ಪ್ರಶ್ನೆಗಳು ಬರುತ್ತಿರುತ್ತವೆ. ಆದರೆ ದಾನ ಗುಟ್ಟಾಗಿಯೇ ಇರಬೇಕಾದ ಕಾರಣ ಇದಕ್ಕೆ ಉತ್ತರವಾಗಿ ಇಲ್ಲೆಲ್ಲ ಖರ್ಚು ಮಾಡಿದ್ದೇವೆ ಎನ್ನುವುದನ್ನು ಅವರು ಉತ್ತರವಾಗಿ ನೀಡಲು ಸಾಧ್ಯವಾಗುವುದೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶಿವರಾಜ್ ಕುಮಾರ್ ಅವರೇ ಹೇಳುವಂತೆ, “ನಾನು ಕೊಡಲೇ ಬೇಕು, ಕೊಟ್ಟಿದ್ದನ್ನು ನಿಮ್ಮಲ್ಲಿ ಹಳಲೇಬೇಕು ಎನ್ನುವುದನ್ನು ನೀವು ಹೇಗೆ ನಿರೀಕ್ಷಿಸುತ್ತೀರಿ?” ಎನ್ನುವ ಪ್ರಶ್ನೆಯೂ ಅರ್ಥಪೂರ್ಣ. ಯಾಕೆಂದರೆ ನಾವು ನಿರೀಕ್ಷೆ ಮಾಡಲು ನಾವೇ ನಮ್ಮ ಸೇವೆಗೆಂದು ಆಯ್ಕೆ ಮಾಡಿದ ರಾಜಕಾರಣಿಗಳು ಹುದ್ದೆಯಲ್ಲಿದ್ದಾರೆ. ಆದರೆ ಸ್ಪಂದಿಸಂದಥ ಗಾಢ ನಿದ್ದೆಯಲ್ಲಿದ್ದಾರೆ. ಆದರೆ ತಾರೆಗಳು ಮಾಡುವ ಸಮಾಜ ಸೇವೆ ಅವರ ಔದಾರ್ಯವೇ ಹೊರತು ನಾವು ಕೇಳಿ ಪಡೆಯಲು ಅದು ನಮ್ಮ ಹಕ್ಕಲ್ಲ. ಹೆಚ್ಚೆಂದರೆ ಕೊಟ್ಟ ಟಿಕೆಟ್ ದರಕ್ಕೆ ತೃಪ್ತಿಯಾಗುವಂಥ ಸಿನಿಮಾಗಳನ್ನು ಮಾತ್ರ ನಾವು ಅವರಿಂದ ಬಯಸಬಹುದು. ಅದರಾಚೆಗೆ ನಾವು ನಿರೀಕ್ಷಿಸುವುದೇ ತಪ್ಪು. ಹಾಗಾಗಿ ಸಿನಿಮಾ ಬಿಟ್ಟು ಅವರು ಇದುವರೆಗೆ ಮಾಡಿರುವ, ಮಾಡುವ ಎಲ್ಲ ಸಮಾಜ ಸೇವೆಗಳನ್ನು ಮೆಚ್ಚುಗೆಯಿಂದ ನೋಡಬಹುದೇ ಹೊರತು ಅವರನ್ನು ಪ್ರಶ್ನಿಸುವ ನೈತಿಕತೆ ನಮಗಿರುವುದಿಲ್ಲ.
ಆದರೆ ಇಂದು ಸುದೀಪ್, ದರ್ಶನ್ ಅವರಂಥ ತಾರೆಯರ ಅಭಿಮಾನಿಗಳು ಕಟೌಟ್ ಆರಾಧಿಸುವುದಕ್ಕಷ್ಟೇ ಸೀಮಿತರಾಗದೆ, ಸಾಕಷ್ಟು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ತಮ್ಮ ಹೆಸರಿನಲ್ಲಿ ಅಭಿಮಾನಿಗಳು ನಡೆಸುವ ಸಮಾಜ ಸೇವೆಯನ್ನು ಕಂಡ ತಾರೆಯರು ಅವರ ಕೈಗೆ ತಾವೇ ದುಡ್ಡು ನೀಡಿ ಸಮಾಜ ಸೇವೆಗಳಿಗೆ ಜತೆ ನೀಡಿದ ಉದಾಹರಣೆಗಳು ಕೂಡ ಇವೆ. ಯಾಕೆಂದರೆ ಅವರ ಕೈಗಳ ಮೂಲಕ ತಮ್ಮ ದುಡಿಮೆಯ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗುವ ನಂಬಿಕೆ ತಾರೆಗಳಿಗೂ ಇರುತ್ತವೆ. ಜತೆಗೆ ತಾವೇ ಒಂದು ಫೌಂಡೇಶನ್ ಮೂಲಕ ಸೇವಾಕಾರ್ಯ ನಡೆಸುವ ಸ್ಟಾರ್ಸ್ ಕೂಡ ನಮ್ಮಲ್ಲಿದ್ದಾರೆ. ಹಾಗಾಗಿ ಸಿನಿಮಾ ನೋಡುವುದರ ಜತೆಗೆ ನಮ್ಮ ಕೈಲಾದ ಸಮಾಜ ಸೇವೆಗಳನ್ನು ಮಾಡುವವರಿಗಷ್ಟೇ ತಾರೆಯರ ಸೇವಾಕಾರ್ಯಗಳ ಬಗ್ಗೆ ಪ್ರಶ್ನಿಸುವ ಅರ್ಹತೆ ಇರುತ್ತದೆ! ಆದರೆ ಹಾಗೆ ನಾವು ಸೇವಕರಾಗಿ ನಿಸ್ವಾರ್ಥ ಸೇವಕರಾಗಿ ಬದಲಾಗಿದ್ದಲ್ಲಿ ಇನ್ನೊಬ್ಬರನ್ನು ಪ್ರಶ್ನಿಸುವ ಬದಲು ನಮ್ಮ ನಮ್ಮ ಕರ್ತವ್ಯದ ಆಳ ಅರಿಯಲು ಸಾಧ್ಯವಾಗುತ್ತದೆ.
ಏನೇ ಇರಲಿ, ರಚಿತಾ ಅವರಿಂದ ಆಹಾರ ಪಡೆದುಕೊಂಡವರಲ್ಲಿ ಅವರ ಸಿನಿಮಾ ಪ್ರಿಯರು ಅಥವಾ ರಚ್ಚುವಿನ ಕಟ್ಟಾ ಅಭಿಮಾನಿಗಳು ಯಾರಾದರೂ ಇದ್ದಿದ್ದರೆ, ತಮಗೆ ಆಹಾರ ಕೊಟ್ಟವರೇ ರಚಿತಾ ಎನ್ನುವ ಸತ್ಯ ಗೊತ್ತಾದಾಗ ಆಗುತ್ತಿದ್ದ ಸಂಭ್ರಮಾಶ್ಚರ್ಯಕ್ಕೆ ಎಣೆ ಇರುತ್ತಿರಲಿಲ್ಲ. “ಒಂದು ದಿನ ಉಪವಾಸವಾದರೂ ಇರುತ್ತಿದ್ದೆ; ಆದರೆ ರಚಿತಾ ಮೇಡಂ ಅವರ ಮುಖವನ್ನು ಹತ್ತಿರದಿಂದ ನೋಡಬೇಕಿತ್ತು” ಎನ್ನುವ ಅಭಿಮಾನಿಗಳಿಗೂ ಕೊರತೆ ಇಲ್ಲ ಎನ್ನುವುದು ಸತ್ಯ!
ಗುಟ್ಟಾಗಿ ಕೊಟ್ಟದ್ದುಅಂತಿರಿ ಮತ್ತೆ ಸುದ್ದಿ ಹೇಗಾಯಿತು ಒಬ್ಬರಿಂದ ಎರಡನೇಯವರಿಗೆ ಗೊತ್ತಾದರೆ ಅದು ಗುಟ್ಟಾ ?
ರಟ್ಟಾದ ಗುಟ್ಟು. ಆದರೆ ಅವರು ಅದನ್ನು ಈಗಲೂ ವಿವರವಾಗಿ ಒಪ್ಪಿಕೊಂಡಿಲ್ಲ. ಪಡೆದವರಿಗೂ ತಿಳಿದಿಲ್ಲ. ಆದರೆ ಇಂಥ ಗುಟ್ಟಿನ ಘಟನೆ ನಡೆದಿದೆ ಎನ್ನುವುದನ್ನಷ್ಟೇ ನಾವು ಹೇಳಿದ್ದೇವೆ.