ವಿಕ್ಕಿಯ ಆ ದಿನಗಳ‌ ನೆನೆದ ಮಾಸ್ತಿ!

ಮಾಸ್ತಿ ಎಂದೊಡನೆ ಕನ್ನಡ ಸಾಹಿತ್ಯ ಲೋಕದಲ್ಲಿ ಖ್ಯಾತನಾಮರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ನೆನಪಾಗಲೇಬೇಕು. ಆದರೆ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಸಂಭಾಷಣಾ ಕ್ಷೇತ್ರದ ಆಸ್ತಿಯಾಗಿರುವ ಮಾಸ್ತಿ ಬೇರೆಯೇ ಇದ್ದಾರೆ. ಅದರಲ್ಲೂ ನಿರ್ದೇಶಕ ಸೂರಿ ತಂಡದ ಚಿತ್ರಗಳಲ್ಲಿ ಇವರು‌ ಇದ್ದೇ ಇರುತ್ತಾರೆ. ಇಲ್ಲಿ ಅವರು ಸೂರಿಯ ‘ಕೆಂಡ ಸಂಪಿಗೆ’ ಚಿತ್ರಕ್ಕೆ ನಾಯಕ ಮತ್ತು ನಾಯಕಿಯನ್ನು ಆಯ್ಕೆ ಮಾಡಿದ ವಿಧಾನದ ಬಗ್ಗೆ ಮಾತನಾಡಿದ್ದಾರೆ. ಇಷ್ಟು ವರ್ಷಗಳ ಆ ಘಟನೆಗಳನ್ನು ‌ನೆನಪಿಸಿಕೊಳ್ಳಲು ಒಂದು ಪ್ರಮುಖ ಕಾರಣ ಇದೆ. ನಿನ್ನೆ ಅಂದರೆ ಜೂನ್ 2ರಂದು ಕೆಂಡ ಸಂಪಿಗೆಯ ನಾಯಕ ‘ವಿಕ್ಕಿ ವರುಣ್’ ಜನ್ಮದಿನ. ಆ ನೆನಪಲ್ಲಿ ಮಾಸ್ತಿ ಬರೆದ ಬರಹವನ್ನು ಇಲ್ಲಿ ಸಿನಿಕನ್ನಡ.ಕಾಮ್ ನಿಮ್ಮ ಮುಂದಿಡುತ್ತಿದೆ.

ಅದು ಬೆಂಗಳೂರಿನ ಬನಶಂಕರಿಯಲ್ಲಿರುವ ಬಾಟಾ ಶೋರೂಂ ಪಕ್ಕದ ಆಫೀಸು. ಸೂರಿಯವರು ಕೆಂಡಸಂಪಿಗೆ ಸಿನಿಮಾ ಕತೆ ಬರೆಯೋ ಕೆಲಸದಲ್ಲಿದ್ದರು.
ಕತೆಯೊಂದಿಗೆ ಚಿತ್ರಕತೆಯೂ ರೆಡಿಯಾಗಿ, ಸಿನಿಮಾವನ್ನು ಹೊಸಬರಿಗೆ ಮಾಡೋದು ಅಂತ ಆಗಿತ್ತು. “ನೀನು ಹೊಸಬರಿಗೆ ಮಾಡೋದಾದ್ರೆ ಪ್ರೊಡ್ಯೂಸರ್ಸ್ ನ ನಾನು ಕರ್ಕೊಂಡ್ ಬರ್ತೀನಿ” ಅಂತ ಸೂರಿಯವರ ಕೋ ಡೈರೆಕ್ಟರ್ ರಾಜೇಶ್ ನಟರಂಗ ಹೇಳಿದ್ದರು. ಅವರ ಸ್ನೇಹಿತರ ಬಳಗದಲ್ಲಿದ್ದ ಚಾಮರಾಜಪೇಟೆಯ ವಿಜಿಯಣ್ಣ ಮತ್ತು ಕಾರಂತರೇ ಹಣ ಹಾಕೋದು ಅಂತ ನಿಗದಿಯಾಯ್ತು. ಪಾತ್ರಗಳಿಗೆ ಯಾರು ಸೂಕ್ತ ಅಂತ ಒಂದಷ್ಟು ಹುಡುಗ ಹುಡುಗಿಯರ ಫೋಟೋಗಳನ್ನ ನೋಡಕ್ಕೆ ಶುರು ಮಾಡಿದ್ದೆವು. ಸೂರಿಯವರ ಗೆಳೆಯ , ನಟ ನಂದಗೋಪಾಲ್ “ಇದಕ್ಕೆ ಮುಂಚೆ ರೇಡಿಯೋದಲ್ಲಿ ಒಂದು ಒಳ್ಳೇ ಹುದ್ದೇಲಿದ್ದೋವ್ರು , ಬಿಗ್ ಬಾಸ್ ಮೊದಲ ಸಂಚಿಕೆಯ ವಾಯ್ಸ್ ಕೊಟ್ಟಂಥ ನನಗೆ ಗೊತ್ತಿರುವ ಹುಡುಗಿಯೊಬ್ಬಳು ಮಂಗಳೂರು ಎಫ್ ಎಮ್ ನಲ್ಲಿ ಒಬ್ಬಳು ಇದ್ದಾಳೆ ಎಂದು ಫೊಟೊ ತೋರಿಸಿದರು. ಸೂರಿಯವರ ಅಣತಿಯ ಮೇರೆಗೆ ಮಂಗಳೂರಿನಿಂದ ಕರೆಸಿ, ಆ ಹುಡುಗಿಗೆ ಆಫೀಸಿನಲ್ಲಿ ಒಂದೆರಡು ಡೈಲಾಗ್ಸ್ ಕೊಟ್ಟು ಆಡಿಷನ್ ಮಾಡಿದೆವು. ಅಭಿನಯ ನೋಡಿದ ಸೂರಿಯವರಿಗೆ ಆಕೆಯ ಕೈಲಿ ಪಾತ್ರ ಮಾಡಿಸಬಹುದು ಅಂತ ಅನಿಸಿತು. ಆದ್ರೆ ಈ ಸಿನಿಮಾಗೆ ಎಲ್ಲದಕ್ಕಿಂತಾ ಹೆಚ್ಚಾಗಿ ಹುಡುಗಿಗೆ ಕಾರ್ ಡ್ರೈವಿಂಗ್ ಬರೋದು ಮುಖ್ಯ ಅಗಿತ್ತು. ಹುಡುಗಿ ಟಚ್ ಇದೆ ಕಲ್ತ್ಕೋತೀನಿ ಅಂತ ಭರವಸೆ ಕೊಟ್ಟಳು. ಸೆಲೆಕ್ಟ್ ಆದ ಆ ಹುಡುಗಿಯ ಹೆಸರೇ ಮಾನ್ವಿತಾ ಕಾಮತ್.

ಸಂತು ವಿಕ್ಕಿ ವರುಣ್ ಆದ ಕತೆ

ಹುಡುಗ ಇನ್ನೂ ಸಿಕ್ಕಿರ್ಲಿಲ್ಲ. ತುಂಬಾ ಹುಡುಗರ ಫೊಟೋಗಳನ್ನ ನೋಡಿದ ನಂತರ ಒಮ್ಮೆ ಸೂರಿಯವರು ಒಬ್ಬ ಕಟ್ಟುಮಸ್ತಾಗಿ ಸಿಕ್ಸ್ ಪ್ಯಾಕ್ ಮಾಡಿರೋ ಹುಡುಗನನ್ನು ಆಫೀಸಿಗೆ ಕರೆಸಿದ್ದರು. ಲುಕ್ ಟೆಸ್ಟು ಆಯ್ತು , ಹೇರ್ ಸ್ಟೈಲ್ ಚೆಂಜ್ ಮಾಡಿ ಒಂದೆರಡು ಫೋಟೋಗಳನ್ನೂ ತೆಗೆಸಿದ್ರು , ಅವನು ಹೋದ್ಮೇಲೆ ನನ್ನ ಕೇಳಿದ್ರು ಹೇಗೆ , ಆಗ್ತಾನ ? ಅಂತ. ಅದಕ್ಕೆ ನಾನಂದೆ “ಅವನ ತೋಳು ದೇಹ ಎಲ್ಲಾ ಬಲಿಷ್ಟವಾಗಿ ಇದಾವೆ ಅವನಿಂದ ಜನ ಆ್ಯಕ್ಷನ್ ಎಕ್ಸ್ ಪೆಕ್ಟ್ ಮಾಡ್ತಾರೆ , ಈ ಕತೆಯಲ್ಲಿ ಹುಡುಗ ಹೆದರ್ಕೊಂಡು ಓಡೋಗೋ ಕ್ಯಾರೆಕ್ಟ್ರು. ನಮಗೆ ಬೇಕಾಗಿರೋ ಹುಡುಗ ನಮ್ ಸಂತು ಥರ ಇರ್ಬೇಕು” ಅಂತ ನಮ್ಮ ಡೈರೆಕ್ಷನ್ ಟೀಂನಲ್ಲಿದ್ದ ಹುಡುಗನ್ನ ತೋರಿಸಿದೆ. ಸೂರಿಯವರು ಇದಕ್ ಮುಂಚೆ ‘ಕಡ್ಡಿಪುಡಿ’ ಚಿತ್ರದಲ್ಲಿ ಅವನ ಕೈಲಿ ಸಣ್ಣ ಪಾತ್ರ ಮಾಡ್ಸಿದ್ರು. ನಂದಣ್ಣ ಮತ್ತು ರಾಜೇಶಣ್ಣನತ್ರ ಮಾತಾಡಿದ್ರು ಅವರೂ ಸಹ ಸಂತು ಪರ ಒಲವು ತೋರಿದರು. ನಿರ್ಮಾಪಕರನ್ನ ಕೇಳಿದ್ರೆ “ಅಣ್ಣಾ ನೀವು ಯಾರ್ನಾದ್ರು ಹಾಕ್ರಣ್ಣ ನಾವು ದುಡ್ಡು ಹಾಕ್ತಿವಿ” ಅಂದ್ಬಿಟ್ರು . ಸರಿ ಸೂರಿ ಸಂತುವಿಗೆ ‘ವಿಕ್ಕಿ’ ಅಂತ ಹೆಸರಿಟ್ಟು ‘ಕೆಂಡಸಂಪಿಗೆ’ ಹೀರೋ ಅಂತ ಅನೌನ್ಸ್ ಮಾಡಿಯೇ ಬಿಟ್ಟರು. ಅಸಿಸ್ಟೆಂಟ್ ಡೈರೆಕ್ಟರ್ ನಿಂದ ಅಸೋಸಿಯೇಟ್ ಡೈರೆಕ್ಟರ್ ಆಗ್ಬೇಕು ಅಂತ ಕಾಯ್ತಿದ್ದ ಸಂತು ಏಕ್ ದಮ್ ಸೂರಿ ಸಿನಿಮಾ ಹೀರೋ! ಲಕ್ಕಿಯಲ್ಲಿ ವಿಕ್ಕಿಯಾದ!! “ಹೆಂಗಣ್ಣಾ ಆ್ಯಕ್ಟಿಂಗು ಅದೆಲ್ಲಾ ಮಾಡೋದು” ಅಂತ ನನ್ನಲ್ಲೇ ಕೇಳಿದ. “ನೀನು ಆ್ಯಕ್ಟಿಂಗ್ ಮಾಡಿದ್ರೆ ಓಡಿಸ್ಬಿಡ್ತಾರೆ ಕಣೋ, ನೀನು ಹೆಂಗಿದಿಯೋ ಹಂಗೇ ಇರು ಅದೇ ಈ ಸಿನಿಮಾ ಕ್ಯಾರೆಕ್ಟ್ರು” ಅಂತ ನಾನು. ನಂದಣ್ಣ , ರಾಜೇಶ್ ನಟರಂಗ ಎಲ್ಲಾ ಹೇಳಿ ಅವನನ್ನ ಅಖಾಡಕ್ಕೆ ಇಳಿಸಿದೆವು. ನಾವೇನೋ ಅಖಾಡಕ್ಕೆ ಇಳಿಸಿದ್ದೆವು. ಆದ್ರೆ ಸೂರಿ ಇವನನ್ನ ಮೋರಿ ಪಾರೀಗೆಲ್ಲಾ ಇಳಿಸ್ಬಿಟ್ರು .

ಶೂಟಿಂಗಿಗೂ ಮುಂಚೆ ವಿಕ್ಕಿಗೆ ಬಟ್ಟೆ ತರಬೇಕೆಂದು ನಿರ್ಮಾಪಕರ ಹತ್ತಿರ ಹಣ ಪಡೆದು ನಾನು ವಿಕ್ಕಿ ಕಮರ್ಷಿಯಲ್ ಸ್ಟ್ರೀಟ್ ಗೆ ಹೋಗಿ ಹತ್ತು ಜೊತೆ ಬಟ್ಟೆ ಖರೀದಿಸಿ, ಹೊರಗಡೆ ಬಂದು ಆಟೋಗೆ ಕಾಯ್ತಿದ್ದೆವು. ಯಾವ ಆಟೋ ಕರೆದ್ರೂ ಬನಶಂಕರಿ ಅಂದ ತಕ್ಷಣ ಬರಲ್ಲ ಅಂತ ತಲೆ ಆಡಿಸೋವ್ರು. ವಿಕ್ಕಿ “ಏನ್ ಅಣ್ಣಾ ಒಬ್ಬರೂ ಬರಲ್ಲ ಅಂತಾ ಇದಾರೆ!” ಅಂದ , ಅದಕ್ಕೆ ನಾನು “ಈ ಆಟೋದವರು ಒಂಥರ ಅಮ್ಮನ ಕಂಕಳಲ್ಲಿರೋ ಮಗು ಥರ ಕಣೋ, ಯಾರು ಕರೆದ್ರೂ ಬರಲ್ಲ , ಅವರಿಗೆ ಇಷ್ಟ ಆದ್ರೇನೇ ಬರೋದು” ಅಂದೆ. ಅವನಿಗೆ ನಗು ತಡೆಯಕ್ಕಾಗಲಿಲ್ಲ. ನಗಾಡ್ಕೊಂಡು ಹೆಂಗೋ ಬನಶಂಕರಿ ಆಫೀಸು ತಲುಪಿದೆವು. ಒಳಗೆ ಹೋದವರೆ ಹತ್ತು ಜೊತೆ ಬಟ್ಟೆಗಳನ್ನೂ ಸೂರಿಗೆ ತೋರಿಸಿದ್ವಿ. ಸೂರಿ ಗಂಭೀರವಾಗಿ ನಮ್ಮಿಬ್ಬರನ್ನು ಒಮ್ಮೆ ನೊಡಿದ್ರು , ನಮಗೆ ಅವರು ಯಾಕ್ ಹಂಗ್ ನೋಡಿದ್ರು ಅನ್ನೋದು ಅರ್ಥ ಆಗಲಿಲ್ಲ. ಇಡೀ ಸಿನಿಮಾ ವಿಕ್ಕಿಗೆ ಬ್ಲಾಕ್ ಷರ್ಟು ನೀಲಿ ಜೀನ್ಸ್ ಹಾಕಿಸಿ ಆ್ಯಕ್ಟ್ ಮಾಡಿಸಿದಾಗ ಆ ನೋಟದ ಅರ್ಥ ಆಯ್ತು!

ವಿಕ್ಕೀದು ಫಸ್ಟ್ ಡೇ ಶೂಟಿಂಗ್ ರಾಯ ರಾಯ ಕಲ್ಯಾಣ ಮಂಟಪದಲ್ಲಿತ್ತು. ಪೋಲೀಸ್ ಸ್ಟೇಷನ್ ಸೆಟ್ , ಗಾಂಜಾ ಕೇಸ್ ಅಲ್ಲಿ ತಗಲಾಕ್ಕೊಂಡಿದ್ದ ವಿಕ್ಕಿಯನ್ನ ಲೇಡಿ ಕಾನ್ಸ್ಟೇಬಲ್ ಒಬ್ಬರು ಹೊಡಿಯೋ ಸೀನು. ಏನೇ ಪ್ಯಾಂಟ್ ಒಳಗಡೆ ಪ್ಯಾಡ್ ಹಾಕಿದ್ರು ಲಾಠೀ ಏಟು ಸರಿಯಾಗಿ ಬೀಳೋದು. ಸೂರಿ ಕಟ್ ಹೇಳಿದ್ ಕೂಡ್ಲೇ ಹೆಂಗ್ ಬಂತು ಅಣ್ಣಾ ಅಂತ ಕೇಳೋವ್ನು. ಅವನ ಕಣ್ಣಲ್ಲಿ ನಿಜವಾದ ನೋವು ಕಣ್ಣೀರಾಗಿ ಕಾಣೋದು. ಈಗ್ಲೂ ಹೇಳ್ತಾನೆ ಫಸ್ಟ್ ಡೇ ಶೂಟಿಂಗ್ ಅಂತು ಲೈಫಲ್ಲಿ ಮರೆಯಲ್ಲಣ್ಣ ಅಂತ! ಆಮೇಲೆ ಸಿನಿಮಾ ರಿಲೀಸ್ ಆಗಿ ಹಿಟ್ ಆಯ್ತು. ವಿಕ್ಕಿ ಹೀರೋ ಆದ.

ಎರಡನೇ ಸಿನಿಮಾ ಅಲೆಮಾರಿ ಸಂತು ಡೈರೆಕ್ಟ್ ಮಾಡಿದ್ದರು. ‘ಕಾಲೇಜ್ ಕುಮಾರ’ದಲ್ಲಿ ತುಂಬಾ ಒಳ್ಳೇ ಲೈನ್, ಅಪ್ಪ ಮಗನ ನಡುವೆ ನಡೆಯುವಂತಹ ಕಲಹದ ಕತೆ ಇತ್ತು. ರವಿಶಂಕರ್ ಅಪ್ಪನ ಪಾತ್ರ ನಿರ್ವಹಿಸಿದರು. ನಾನು ಸಂಭಾಷಣೆ ಬರೆದೆ ಸಿನಿಮಾ ರಿಲೀಸ್ ಆಗಿ ಯಶಸ್ವಿಯಾಯ್ತು .

“ವಿಕ್ಕಿ” ಸಿನಿಮಾ ಕನಸು ಕಟ್ಕೊಂಡು ಅವಕಾಶಕ್ಕಾಗಿ ದೂರದೂರಿಂದ ಬೆಂಗಳೂರಿಗೆ ಬಂದಂತಹ ಹುಡುಗ. ಅದೃಷ್ಟ ಇವನನ್ನ ಹುಡುಕ್ಕೊಂಡ್ ಬಂತು. ಮಾಡಿರೋದು ಎರಡೇ ಸಿನಿಮಾ ಅದ್ರೂ ಎರಡೂ ಯಶಸ್ವೀ ಚಿತ್ರಗಳೇ. ಹಮ್ಮು ಬಿಮ್ಮು ಇಲ್ಲದ ಸಾಮಾನ್ಯ ಹುಡುಗ. ಸುತ್ತಾಡ್ತಾನೆ, ಪುಸ್ತಕಗಳನ್ನ ಓದ್ತಾನೆ, ಎಲ್ಲಾ ಭಾಷೆಯ ಸಿನಿಮಾಗಳನ್ನ ನೋಡ್ತಾನೆ. ಒಂದು ಕ್ಷಣಾನೂ ಸಿನಿಮಾ ಬಿಟ್ಟು ಬೇರೆ ಯೋಚನೆ ಮಾಡಲ್ಲ, ತಲೆಯಲ್ಲಿ ಹೊಸ ಆಲೋಚನೆಗಳಿವೆ. ಇವನ ಒಳಗಡೆ ಸ್ವಚ್ಛವಾದ ಸಿನಿಮಾ ಇದೆ. ಕತೆಗಳು ಬರೆದಿಟ್ಕೊಂಡಿದಾನೆ. ಸೂರಿ, ಭಟ್ಟರ ಹತ್ತಿರ ಕೆಲಸ ಕಲ್ತಿರೋ ಅತ್ಯುತ್ತಮ ಸಹ ನಿರ್ದೇಶಕ, ಇಷ್ಟು ಸಣ್ಣ ವಯಸ್ಸಿಗೇ ಅಗಾಧವಾದ ಸಹನೆ ಕೂಡ ಹೊಂದಿದಾನೆ. ಆತುರಕ್ಕೆ ಬಿದ್ದು ಯಾವುದೇ ನಿರ್ಧಾರ ತಗೋಳಲ್ಲ. ನಿಮ್ಮ‌ ಮುಂದೆ ನಟನಾಗೋ ನಿರ್ದೇಶಕನಾಗೋ ಬರುವ ತಯಾರಿಯಲ್ಲಿದ್ದಾನೆ. ಇಂದು (ಜೂನ್ 2) ವಿಕ್ಕಿಯ ಹುಟ್ಟಿದ ದಿನ‌. ನಿಮ್ಮೆಲ್ಲರ ಹಾರೈಕೆ ಆಶೀರ್ವಾದ ಈ ಪುಟ್ಟ ನಟನ ಮೇಲಿರಲಿ.

Recommended For You

Leave a Reply

error: Content is protected !!