ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ‘ಬದಲಾಗು ನೀನು ಬದಲಾಯಿಸು ನೀನು' ಎನ್ನುವ ಹಾಡು. ಕೊರೊನ ವೈರಸ್ ವಿರುದ್ಧ ಮೂಡಿಬಂದ ಈ ಜಾಗೃತಿ ಗೀತೆಯಲ್ಲಿ ಡಾ. ಶಿವರಾಜ್ ಕುಮಾರ್ ಅವರಿಂದ ಹಿಡಿದು ಧ್ರುವ ಸರ್ಜಾ ತನಕ ಕನ್ನಡದ ಬಹುತೇಕ ಎಲ್ಲ ತಾರೆಯರು ಕಾಣಿಸಿಕೊಂಡಿದ್ದಾರೆ. ಆದರೆ '
ಅಭಿನಯ ಚಕ್ರವರ್ತಿ’ ಬಿರುದಾಂಕಿತ ಕಿಚ್ಚ ಸುದೀಪ್ ಮಾತ್ರ ಇಲ್ಲ! ಇದು ಸಹಜವಾಗಿ ಸುದೀಪ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಇದರ ಹಿಂದಿನ ವಿಚಾರಗಳ ಬಗ್ಗೆ ಸ್ವತ: ನಿರ್ದೇಶಕ ಪವನ್ ಒಡೆಯರ್ ಸಿನಿಕನ್ನಡ.ಕಾಮ್ ಜತೆಗೆ ಮಾತನಾಡಿದ್ದಾರೆ.
ಪವನ್ ಒಡೆಯರ್ ಮೇಲೆ ಸುದೀಪ್ ಅಭಿಮಾನಿಗಳ ಆಕ್ರೋಶ!
ಈ ಬೃಹತ್ ತಾರಾ ವೃಂದವನ್ನು ಸೇರಿಸಿ ಮಾಡಲಾಗಿರುವ ಗೀತೆಗೆ ನಿರ್ದೇಶಕರು ಪವನ್ ಒಡೆಯರ್. ಹಾಗಾಗಿ ಮೊದಲ ಬಾರಿಗೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದೇ ಪವನ್. ಹಾಡಿನ ಮೇಕಿಂಗ್ ಬಗ್ಗೆ ಪವನ್ ಒಡೆಯರ್ ತಮ್ಮ ಫೇಸ್ಬುಕ್ ಪೇಜಲ್ಲಿ ಬರೆದುಕೊಂಡಾಗಲೆಲ್ಲ ಅಲ್ಲಿ ಬಂದು ಕೆಟ್ಟದಾಗಿ ಕಮೆಂಟ್ ಮಾಡಿದವರಿದ್ದರು. ಆದರೆ ಪವನ್ ಮಾತ್ರ ಅಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲು ಹೋಗಿಲ್ಲ. ಪವನ್ ಅವರಿಗೆ ಯಶ್ ಫೇವರಿಟ್ ನಟನಾಗಿರುವ ಕಾರಣ, ಅವರನ್ನು ಮೆರೆಸಲಿಕ್ಕಾಗಿ ಸುದೀಪ್ ಅವರನ್ನು ಬಳಸಿಕೊಂಡಿಲ್ಲ ಎನ್ನುವುದು ಕಿಚ್ಚನ ಅಭಿಮಾನಿಗಳ ಆಪಾದನೆ. ಈ ಬಗ್ಗೆ ಪವನ್ ಒಡೆಯರ್ ಅವರನ್ನು ಸಿನಿಕನ್ನಡ.ಕಾಮ್ ನೇರವಾಗಿಯೇ ಪ್ರಶ್ನಿಸಿದಾಗ ಸಿಕ್ಕ ಉತ್ತರ ಫ್ಯಾನ್ಸ್ ಗೆ ಸಮಾಧಾನ ನಿಡುವಂತಿದೆ. ಪವನ್ ಹೇಳಿದ್ದು ಇಷ್ಟೇ..”ಈ ಹಾಡಿಗೆ ಪರದೆಯ ಮೇಲಿನ ನಿರ್ದೇಶಕ ನಾನಿರಬಹುದು. ಆದರೆ ಇದು ಒಂದು ಸರ್ಕಾರಿ ಪ್ರಾಜೆಕ್ಟ್. ರಾಜ್ಯ ಸರ್ಕಾರದ ಕಡೆಯಿಂದ ನನ್ನನ್ನು ಸಂಪರ್ಕಿಸುವಾಗಲೇ ಅವರು ಯಾವೆಲ್ಲ ತಾರೆಯರು ಬೇಕು ಎಂದು ಮೊದಲೇ ನಿಗದಿಪಡಿಸಿದ್ದರು. ಅವರು ನನ್ನಲ್ಲಿ ಕೇಳಿದ್ದು, “ಈ ತಾರೆಯರನ್ನು ಬಳಸಿಕೊಂಡು ಒಂದು ಕೊರೊನಾ ವಿರುದ್ಧದ ಜಾಗೃತಿ ಗೀತೆಯನ್ನುಮಾಡಿಕೊಡುತ್ತೀರ?” ಎಂದಷ್ಟೇ ಆಗಿತ್ತು. ನನ್ನ ಪಾಲಿಗೆ ಇದು ಅಪರೂಪದ ಅವಕಾಶವಾಗಿತ್ತು. ಯಾಕೆಂದರೆ ಇಷ್ಟೊಂದು ಮಂದಿ ತಾರೆಯರಿಗೆ ಒಬ್ಬನೇ ಆಕ್ಷನ್ ಕಟ್ ಹೇಳುವಂಥ ಅಪೂರ್ವ ಅವಕಾಶ. ಹಾಗಾಗಿ ಈ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಿ ನಾನು ಅವರಿಗೆ ಇರಿಟೇಶನ್ ಮಾಡಿ ಅವಕಾಶ ಕಳೆದುಕೊಳ್ಳಲು ಸಿದ್ಧನಿರಲಿಲ್ಲ. ಆದರೆ ಹಾಡಿನ ಪೋಸ್ಟರ್ ಪ್ರಕಟವಾದೊಡನೆ, `ಸುದೀಪ್ ಸರ್ ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ’ ಎಂದು ನಾನು ತಕ್ಷಣ ನನಗೆ ಈ ಪ್ರಾಜೆಕ್ಟ್ ನೀಡಿದ ಮಾನ್ಯ ಆರೋಗ್ಯ ಸಚಿವ ಸುಧಾಕರ್ ಅವರಿಗೆ ತಿಳಿಸಿದೆ. ಆಗ ಅವರು “ಅದಕ್ಕೆಲ್ಲ ನೀವು ಉತ್ತರ ಕೊಡಲು ಹೋಗಬೇಡಿ, ಜೂನ್ ಐದರ ಸಂಜೆ ಹಾಡಿನ ಬಿಡುಗಡೆಯ ವೇಳೆ ನಾನೇ ಮಾಧ್ಯಮಗಳ ಮೂಲಕ ತಿಳಿಸುತ್ತೇನೆ ಎಂದಿದ್ದಾರೆ” ಎಂದರು.
ಅಭಿಮಾನಿಗಳ ಆಪಾದನೆ ಏನು..?
ಸುದೀಪ್ ಅವರು ವಿಷ್ಣುವರ್ಧನ ಹೆಸರಿನ ಚಿತ್ರಕ್ಕೆ ನಾಯಕ ಎನ್ನುವುದು ಎಲ್ಲರಿಗೂ ಗೊತ್ತು. ಮಾತ್ರವಲ್ಲ, ಅವರನ್ನು ವಿಷ್ಣುವರ್ಧನ್ ಸ್ಥಾನದಲ್ಲಿರಿಸಿ ನೋಡುವ ಅಭಿಮಾನಿಗಳೂ ಇದ್ದಾರೆ. ಆ ನಿಟ್ಟಿನಲ್ಲಿ ಈ ಹಾಡಿನ ಬಗ್ಗೆ ವೈರಲಾಗುತ್ತಿರುವ ಒಂದು ಹೇಳಿಕೆ ಹೀಗೆ ಇದೆ. “ಡಾ. ವಿಷ್ಣುವರ್ಧನ್ ಅವರನ್ನು ಕೂಡ ಚಿತ್ರರಂಗದಲ್ಲಿ ಒಂದು ಮೂಲೆಗೆ ತಳ್ಳಲಾಗಿತ್ತು. ಇದೀಗ ಬಾಸ್ (ಸುದೀಪ್) ವಿರುದ್ಧ ನಿಂತುಕೊಂಡು ಎಲ್ಲರೂ ಸೇರಿ ಗ್ರೂಪಿಸಮ್ ಮಾಡುತ್ತಿದ್ದಾರೆ” ಎಂದು. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಳಸುವ ಭಾಷೆಗಳು ಓದಲು ಅರ್ಹವೆನಿಸದಷ್ಟು ಕೆಟ್ಟದಾಗಿರುತ್ತವೆ. ಅಭಿಮಾನಿಯ ಹೆಸರಿನಲ್ಲಿ ಆಯಾ ಸ್ಟಾರ್ ಗಳಿಗೆ ಅವಮಾನವಾಗುವಂತೆ ಮಾಡುವ ಕಮೆಂಟ್ಸ್ ಗಳ ಜತೆಗೆ ಇದ್ದಂಥ ವಿಷ್ಣುವರ್ಧನ್ ಅವರಿಗೆ ಹೋಲಿಸಿದ ಕಮೆಂಟ್ ನಿಜಕ್ಕೂ ಒಮ್ಮೆ ಆತ್ಮಾವಲೋಕನ ಮಾಡುವಂತೆ ಇತ್ತು. ಆದರೆ ಸುದೀಪ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ವಿರೋಧಿಸುವವರು ಯಾರಿದ್ದಾರೆ? ಸುದೀಪ್ ಅವರ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿದ, ಇಬ್ಬರು ನಾಯಕರಾಗಿ ನಟಿಸಿದ ಚಿತ್ರದಲ್ಲಿ ಸುದೀಪ್ ಅವರಿಗೆ ಹೆಚ್ಚು ಸ್ಕೋಪ್ ನೀಡುವುದನ್ನು ಒಪ್ಪಿರುವ ಶಿವಣ್ಣನೇ? ಸುದೀಪ್ ಮೇಲಿನ ಪ್ರೀತಿಯಿಂದ ಮೊದಲ ಬಾರಿಗೆ ತಂದೆಯ ಪಾತ್ರದ ಮೂಲಕ ಪೋಷಕ ನಟನಾಗಲು ಒಪ್ಪಿರುವ ರವಿಚಂದ್ರನ್ ಅವರೇ? ಬಾಲ್ಯದಿಂದಲೇ ಸುದೀಪ್ ಜತೆಗೆ ಆತ್ಮೀಯವಾಗಿರುವ ಪುನೀತ್ ರಾಜ್ ಕುಮಾರ್ ಅವರೇ? ಸುದೀಪ್ ಆಹ್ವಾನದ ಮೇರೆಗೆ ಕ್ರಿಕೆಟ್ ಮ್ಯಾಚ್ ಆಡಲು ತಯಾರಾಗಿ ಬಂದ ಯಶ್ ಅವರೇ? ಗಣೇಶ್ ಅವರೇ? ಇವರೆಲ್ಲರಿಗೂ ಸುದೀಪ್ ಎಂದರೆ ಆತ್ಮೀಯತೆ ಇದೆ. ಆದರೆ ದರ್ಶನ್ ಅವರ ಮಾತು ಬೇರೆ. ಅವರು ಈ ಹಿಂದೆಯೇ ಒಂದೇ ಚಿತ್ರೋದ್ಯಮದಲ್ಲಿರುವ ಕಲಾವಿದರೇ ಹೊರತು ಬೇರೆ ಯಾವುದೇ ಸಂಬಂಧ ಹೊಂದಿಲ್ಲ ಎನ್ನುವುದನ್ನು ಅಧಿಕೃತವಾಗಿ ಘೋಷಿಸಿದವರು. ಸಂಬಂಧವೇ ಇಲ್ಲ ಎಂದ ಮೇಲೆ ಅವರು ಸುದೀಪ್ ಅವರ ಬಗ್ಗೆ ಮಾತೇ ಆಡಲು ಹೋಗಲಾರರು. ಹಾಗಾಗಿ ಒಟ್ಟು ಹಾಡಿನಲ್ಲಿ ಪಾಲ್ಗೊಂಡಿರುವ ಯಾವ ಪ್ರಮುಖ ತಾರೆಗೂ ಸುದೀಪ್ ಬಗ್ಗೆ ವೈಮನಸ್ಯ ಇಲ್ಲ. ಹಾಗಾದರೆ ಗ್ರೂಪಿಸಮ್ ಎಲ್ಲಿ ಬಂತು?
ಇನ್ನು ಡಾ.ವಿಷ್ಣುವರ್ಧನ್ ಅವರಿಗೆ ಹೋಲಿಸಿರುವ ಮಾತು. ವಿಷ್ಣು ಅವರನ್ನು ಗಾಂಧಿನಗರ ತುಳಿಯಿತು, ಡಾ.ರಾಜ್ ಮತ್ತು ವಿಷ್ಣು ಅವರ ನಡುವೆ ಗ್ರೂಪಿಸಮ್ ಇತ್ತು ಎನ್ನುವ ಮಾತುಗಳು ಹಿಂದಿನಿಂದಲೂ ಚಾಲ್ತಿಯಲ್ಲಿವೆ. ಎಲ್ಲವೂ ಅವರವರ ಕಟ್ಟಾ ಅಭಿಮಾನಿಗಳೆಂದು ಹೇಳಿಕೊಳ್ಳುವ, ಆದರೆ ನಿಜವಾಗಿ ಅಭಿಮಾನದ ಹೆಸರಲ್ಲಿ ಸ್ವಾರ್ಥಿಗಳಾದವರು ಸೃಷ್ಟಿಸಿಕೊಂಡ ಕಂದಕವೇ ಹೊರತು ಬೇರೇನಲ್ಲ. ನಿಜವಾಗಿ ಒಬ್ಬ ಸಿನಿಮಾ ನಟನ ಅಭಿಮಾನಿಯಾದವನು ಚಿತ್ರರಂಗದ ಅಭಿಮಾನಿ ಕೂಡ ಆಗಿರುತ್ತಾನೆ. ಬಹುತಾರಾಗಣದ ಚಿತ್ರಗಳನ್ನು ಆನಂದಿಸುವ ಗುಣ ಹೊಂದಿರುತ್ತಾನೆ. ತಾರೆಯರು ಒಂದಾಗಿ ನಟಿಸಬೇಕು ಎಂದು ಬಯಸುತ್ತಾನೆ. ಆದರೆ ವಿಪರ್ಯಾಸ ಎನ್ನುವಂತೆ ನಮ್ಮಲ್ಲಿ ಅಭಿಮಾನದ ಹೆಸರಲ್ಲಿ ಸ್ವಾರ್ಥ ಸಾಧಿಸುವವರೇ ಹೆಚ್ಚು. ಡಾ.ರಾಜ್ ಅವರು ವಿಷ್ಣು ಅವರನ್ನಾಗಲೀ, ಅಂಬರೀಶ್ ಅವರನ್ನಾಗಲೀ ತಮಗಿಂತ ಸಣ್ಣ ಕಲಾವಿದರು ಎನ್ನುವ ಭಾವನೆಯನ್ನು ಎಂದಿಗೂ ಹೊಂದಿರಲಿಲ್ಲ. ಯಾಕೆಂದರೆ ಅವರು ಅವರಿಗೂ ಅಭಿಮಾನಿಗಳಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದರು. ಮಾತ್ರವಲ್ಲ, ಯಾವ ಅಭಿಮಾನಿಗಳೊಗೂ ನೋವಾಗುವುದನ್ನು ಇಷ್ಟಪಡದ ವ್ಯಕ್ತಿತ್ವ ರಾಜ್ ಅವರದಾಗಿತ್ತು. ರಾಜ್ ಮತ್ತು ವಿಷ್ಣು ಅವರು ಭೇಟಿಯಾದಾಗಲೆಲ್ಲ ತುಂಬ ಆತ್ಮೀಯವಾಗಿಯೇ ಇರುತ್ತಿದ್ದರು. ಅಂಥ ನೂರು ಫೊಟೋ, ವಿಡಿಯೋಗಳು ನಮಗೆ ಸಾಕ್ಷಿ ಇದ್ದರೂ ನಾವು ಮಾತ್ರ ವಿಷ್ಣು ಅವರನ್ನು ತುಳಿಯಲಾಯಿತು ಎಂದು ಹೇಳುವುದರಲ್ಲೇ ತೃಪ್ತಿ ಕಾಣುತ್ತಿರುವುದು ವಿಪರ್ಯಾಸ. ಇದೀಗ ಸುದೀಪ್ ಕುರಿತಾದ ವಿರೋಧದ ಕಲ್ಪನೆಯೂ ಅಷ್ಟೇ.
ಸುದೀಪ್ ಮತ್ತು ಕಾನ್ಸೆಪ್ಟ್ ಬಗ್ಗೆ ಪವನ್ ಒಡೆಯರ್ ಹೇಳುವುದೇನು?
“ಸುದೀಪ್ ಅವರು ನಮ್ಮ ಚಿತ್ರೋದ್ಯಮದ ಫೈನೆಸ್ಟ್ ಕಲಾವಿದರಲ್ಲಿ ಒಬ್ಬರು. ಅದು ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಿರುವಾಗ ಅಂಥ ನಟನನ್ನು ಬಳಸುವ ಅವಕಾಶ ಸಿಕ್ಕರೆ ಅದನ್ನು ಅವಾಯ್ಡ್ ಮಾಡುವಂಥ ದಡ್ಡ ನಾನಲ್ಲ” ಇದು ಪವನ್ ಒಡೆಯರ್ ಅವರ ಮನದಾಳದ ಮಾತು. ಸಿನಿಮಾರಂಗದಲ್ಲಿ ಒಂದು ಪ್ರಾಜೆಕ್ಟ್ ನಡೆಯುವಾಗ ಅದಕ್ಕೆ ನಿರ್ದೇಶಕ ಕ್ಯಾಪ್ಟನ್ ಆಫ್ ದಿ ಶಿಪ್ ಎಂದು ಕರೆಸಿಕೊಂಡರೂ ಸ್ಟಾರ್ ಸಿನಿಮಾಗಳಾಗುವಾಗ ಅವರ ನಡುವೆ ಹೊಂದಾಣಿಕೆಗಳು ನಡೆಯುತ್ತಿರುತ್ತವೆ. ಆದರೆ ನಿರ್ಮಾಪಕರು ರಾಜಕೀಯ ಕ್ಷೇತ್ರದವರು ಎಂದಾದಮೇಲೆ, ಅದರಲ್ಲಿಯೂ ಸರ್ಕಾರಿ ಪ್ರಾಜೆಕ್ಟ್ ಎಂದಾದಾಗ ಅದರ ಸ್ಟಾರ್ ಕಾಸ್ಟ್ ಎಲ್ಲವೂ ನಿರ್ಮಾಪಕರ ಕೋನದಲ್ಲೇ ಸಾಗಿರುತ್ತದೆ. ಹಾಗಾಗಿ ಇಲ್ಲಿ ನಾವು ಪವನ್ ಅವರು ಹೇಳುವ ಮಾತನ್ನು ನಂಬಲೇಬೇಕು. ಅವರು ಹೇಳುವಂತೆ, ” ಇದರ ಕಾನ್ಸೆಪ್ಟ್ ಮತ್ತು ಡೈರೆಕ್ಷನ್ ಮಾತ್ರ ನನ್ನದು. ವಿಶುವಲ್ ಡಿಸೈನಿಂಗ್ ಇಮ್ರಾನ್ ಸರ್ದಾರಿಯ ಮಾಡಿದ್ದಾರೆ. ಸಂಗೀತ ವಿ ಹರಿಕೃಷ್ಣ ಅವರದು. ಗಾಯಕರಾಗಿ ವಿಜಯ ಪ್ರಕಾಶ್ ಮೊದಲಾದವರಿದ್ದಾರೆ. `ಬದಲಾಗು ನೀನು ಬದಲಾಯಿಸು ನೀನು’ ಎಂದು ನಾನು ನೀಡಿದ ಹುಕ್ ಲೈನ್ ಗೆ ಪ್ರದ್ಯುಮ್ನ ಅವರು ಗೀತ ರಚನೆ ಮಾಡಿದ್ದಾರೆ. ಹದಿನೈದು ದಿವಸಗಳ ಕಾಲ ಹತ್ತು ಹಲವು ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ತಾರೆಯರ ಮನೆಗೇ ಹೋಗಿ ಶೂಟ್ ಮಾಡಿದ್ದೇವೆ. ಪ್ರತಿಯೊಬ್ಬ ತಾರೆಯರನ್ನು ಅವರದೇ ಶೈಲಿಯಲ್ಲಿ, ಇಮೇಜ್ ನಲ್ಲಿ ತೋರಿಸಿದ್ದೇವೆ.”
ಹಾಡಿನಲ್ಲಿ ಸಿನಿಮಾ ತಾರೆಯರು ಮಾತ್ರವಲ್ಲ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಅವರಂಥ ಕ್ರಿಕೆಟ್ ದಿಗ್ಗಜರಿಗೂ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿರುವುದು ಖುಷಿಯಾಗಿದೆ. ಅದರಲ್ಲಿ ಕೂಡ ರಾಜಕೀಯ ಕ್ಷೇತ್ರದಲ್ಲಿ ನಾನು ವೈಯಕ್ತಿಕವಾಗಿ ಇಷ್ಟಪಡುವ ರಾಜಕಾರಣಿಗಳಾದ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರ ಜತೆಗೂ ಒಡನಾಡುವ ಅವಕಾಶ ದೊರಕಿರುವುದು ಖುಷಿಯಾಗಿದೆ. ಅವರಿಬ್ಬರೂ ರಾಜಕೀಯ ಕ್ಷೇತ್ರದ ಮಾಸ್ ಹೀರೋಗಳು. ಇಂಡಿಯಾ ಲೆವೆಲ್ ನಲ್ಲಿ ಈರೀತಿ ಬೇರೆ ಯಾರೂ ಮಾಡಿದ ಉದಾಹರಣೆಗಳಿಲ್ಲ. ಇಂದು ಸಂಜೆ ಐದೂ ಕಾಲು ಗಂಟೆಗೆ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಹಾಡಿನ ಬಿಡುಗಡೆ ನೆರವೇರಲಿದೆ” ಎನ್ನುತ್ತಾರೆ ಪವನ್.
ಒಟ್ಟಿನಲ್ಲಿ ಸುದೀಪ್ ಮಾತ್ರವಲ್ಲ, ಇನ್ನೊಂದಷ್ಟು ತಾರೆಯರು ಈ ಹಾಡಿನಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ನಿಜವಾದರೂ, ಇಷ್ಟು ಮಂದಿಯನ್ನು ನಿರ್ದೇಶಿಸಿದ ಕೀರ್ತಿ ಮಾತ್ರ ಪವನ್ ಒಡೆಯರ್ ಹೆಸರಿನಲ್ಲಿ ದಾಖಲಾಗುತ್ತಿರುವುದು ನಿಜ. ಅವರಿಗೆ ಸಿನಿಕನ್ನಡ.ಕಾಮ್ ವತಿಯಿಂದ ಅಭಿನಂದನೆಗಳು.