ಸಾಹಸ ಸಿಂಹ ಬರೆದ ಪತ್ರ..!

ಈ ಪತ್ರ ಎನ್ನುವುದೇ ಹಾಗೆ ಒಂದು‌ ಇತಿಹಾಸವನ್ನೇ ತೆರೆದಿಡುತ್ತದೆ. ಈಗಿನಂತೆ ವಾಟ್ಸ್ಯಾಪ್ ನಲ್ಲಿ‌ ಸಂದೇಶ ಕಳಿಸಿ ಕ್ಲಿಯರ್ ಚಾಟ್ ಮೂಲಕ ಅಳಿಸಿ‌ ಹಾಕುವಂಥದ್ದಲ್ಲ. ನಾಡಿನ‌ ಜನಪ್ರಿಯ ನಟ ವಿಷ್ಣುವರ್ಧನ್ ಅವರು ಆರಂಭ ಕಾಲದಲ್ಲಿ ಒಂದೆರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಅದನ್ನು ಕನ್ನಡದ ಮೇಲೆ ಅಭಿಮಾನ ಇರಿಸಿಕೊಂಡ ಅಭಿಮಾನಿಗಳು ಮೆಚ್ಚಿರಲಿಲ್ಲ. ಪ್ರಸ್ತುತ ಡಿಆರ್ ಡಿ ಒ ನಿಂದ ನಿವೃತ್ತರಾಗಿರುವ ನಾಡಿನ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿಯವರು ಕೂಡ ಅವರಲ್ಲಿ ಒಬ್ಬರು. ಸುಮಾರು 40 ವರ್ಷಗಳ ಹಿಂದೆ ಅವರು ವಿಷ್ಣುವರ್ಧನ್ ಅವರಿಗೆ ಬರೆದ ಪತ್ರಕ್ಕೆ ಸ್ವತಃ ವಿಷ್ಣುವರ್ಧನ್ ಅವರು ಕಳಿಸಿದ ಪ್ರತಿಕ್ರಿಯೆ ಏನು? ಇಲ್ಲಿದೆ ನೋಡಿ.

ಆತ್ಮೀಯ ಅಭಿಮಾನಿ

ನೀವು ಬರೆದ ಪತ್ರ ಕೈ ಸೇರಿತು. ನೀವು ನಿಮ್ಮ ಪತ್ರದಲ್ಲಿ ಸೂಚಿಸಿರುವ ವಿಷಯಕ್ಕೆ ಧನ್ಯವಾದಗಳು. ನಾನು ಬೇರೆ ಭಾಷೆಯಲ್ಲಿ ನಟಿಸಿದ ಮಾತ್ರಕ್ಕೆ ಕನ್ನಡವನ್ನು ಎಂದಿಗೂ ಮರೆಯುವುದಿಲ್ಲ. ನೀವುಗಳು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಯಾವಾಗಲೂ ಇರಲಿ ಎಂದು ಕೋರುವ

ಇಂತೀ ನಿಮ್ಮವನೇ ಆದ

ವಿಷ್ಣುವರ್ಧನ್

ಅದರ ಕೆಳಗೆ ಪತ್ರದ ವಿಳಾಸ ಬರೆದಿರುವ ಭಾಗವನ್ನು ಕೂಡ ಫೊಟೊ ತೆಗೆದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಲಗತ್ತಿಸಿದ್ದಾರೆ ಸುಧೀಂದ್ರ ಹಾಲ್ದೊಡ್ಡೇರಿ. ಅಕ್ಷರ ಗಮನಿಸಿದರೆ ವಿಳಾಸವನ್ನು ಕೂಡ ವಿಷ್ಣು ಅವರೇ ಬರೆದಂತಿದೆ. ಜತೆಗೆ ಪತ್ನಿ ಭಾರತಿಯವರ ಜತೆಗಿನ‌ ಒಂದು ಫೊಟೊವನ್ನು ಕೂಡ ಅಭಿಮಾನಿಗೆ ಕಳುಹಿಸಿದ್ದಾರೆ ವಿಷ್ಣು!

ವಿಷ್ಣುವರ್ಧನ್ ಅವರು ನೀಡಿರುವ ಪ್ರತಿಕ್ರಿಯೆ ಯಾರಿಗೆ ಮತ್ತು ಯಾವ ಕಾಲದ್ದು ಎನ್ನುವುದು ಇಲ್ಲಿ ತುಂಬ ಪ್ರಾಮುಖ್ಯತೆ ಪಡೆಯುತ್ತದೆ. ಅಂದು
ತಮಿಳಲ್ಲಿ ರಜನೀಕಾಂತ್ ಜತೆಗೆ ನಟಿಸಿದ್ದಂಥ ವಿಷ್ಣುವರ್ಧನ್ ಅಂಥ ಹೆಸರಾಂತ ತಾರೆಯಾಗಿದ್ದುಕೊಂಡು ಕೂಡ ಒಬ್ಬ ಸಾಮಾನ್ಯ ಅಭಿಮಾನಿಯ ಪತ್ರಕ್ಕೆ ಉತ್ತರಿಸಿದ್ದಾರೆ ಎಂದರೆ ಕಲಾವಿದನಾಗಿ ಅವರಿಗೆ ಚಿತ್ರರಂಗದ ಮೇಲೆ, ಅಭಿಮಾನಿಗಳ ಮೇಲೆ ಮತ್ತು ಕನ್ನಡದ ಮೇಲೆ ಇದ್ದ ಬದ್ಧತೆಯ ಆಳ ಎಷ್ಟು ಎಂದು ಅರ್ಥ ಮಾಡಿಕೊಳ್ಳಬಹುದಾಗಿದೆ. ಅವರೇ ಉತ್ತರ ನೀಡಿರುವ ಹಾಗೆ ಪರಭಾಷೆಯಲ್ಲಿ ನಟಿಸಿದೊಡನೆ ಕನ್ನಡ ಮರೆಯುತ್ತಾರೆ ಎನ್ನುವ ನಂಬಿಕೆಯೇ ತಪ್ಪಾಗಿತ್ತು. ಆದರೆ ಅಭಿಮಾನಿಗಳಲ್ಲಿ ಅಂಥದೊಂದು ಭಾವನೆಗೆ ಡಾ.ರಾಜ್ ಕುಮಾರ್ ಅವರೇ ಕಾರಣ ಆಗಿರಬಹುದು ಎಂದರೆ ಅಚ್ಚರಿ‌ ಬೇಡ. ಡಾ.ರಾಜ್ ಪರಭಾಷೆಯಿಂದ ಎಂಥ ಆಫರ್ ಬಂದರೂ ತಿರಸ್ಕಾರ ಮಾಡಿದ್ದರು. ಯಾಕೆಂದರೆ ಆಗ ಜನಗಳ ನಡುವೆ ಭಾಷಾ ದ್ವೇಷ ಆ ಮಟ್ಟಕ್ಕೆ ಹರಡಿತ್ತು. ಹಾಗಾಗಿ ಕನ್ನಡಿಗರಿಗೆ ನೋವು ಮಾಡುವ ತೀರ್ಮಾನ ತೆಗೆದುಕೊಳ್ಳಲು ರಾಜ್ ಸಿದ್ಧರಿರಲಿಲ್ಲ. ಆದರೆ ಕನ್ನಡದಲ್ಲಿ ಅವಕಾಶ ಸಿಗದೆ ತಮಿಳುನಾಡು ಸೇರಿಕೊಂಡು ತಾರೆಯಾದವರು ರಜನಿಕಾಂತ್. ಅಂಥ ರಜನಿಕಾಂತ್ ಚಿತ್ರದಲ್ಲಿ ವಿಷ್ಣುವರ್ಧನ್ ಜತೆ ಸೇರಿರುವುದು ಕಂಡು, ವಿಷ್ಣು ಕೂಡ ಪರ್ಮನೆಂಟ್ ಆಗಿ ತಮಿಳಲ್ಲೇ ಸೇರಿಕೊಳ್ಳುತ್ತಾರೇನೋ ಎನ್ನುವ ಆತಂಕ ಅಭಿಮಾನಿಗಳಲ್ಲಿತ್ತು. ಅದಕ್ಕೆ ವಿಷ್ಣುವರ್ಧನ್ ನೀಡಿರುವ ಪ್ರತಿಕ್ರಿಯೆ ಇದು.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ಕಾಲದೊಂದಿಗೆ, ಪ್ರೇಕ್ಷಕರ ನಂಬಿಕೆಗಳಲ್ಲಿ ಆಗಿರುವ ಬದಲಾವಣೆ ಅಚ್ಚರಿ ಮೂಡಿಸುತ್ತದೆ. ಇಂದು ಕನ್ನಡದ ನಟನೋರ್ವ ಪರಭಾಷೆಗಳಲ್ಲಿ‌ ನಟಿಸುವುದನ್ನು ಹೆಮ್ಮೆಯಾಗಿ ಕಾಣಲಾಗುತ್ತದೆ. ಆದರೆ ವಿಷ್ಣುವರ್ಧನ್ ಅವರು ಆ ಕಾಲದಲ್ಲೇ ಅಕ್ಷಯ್ ಕುಮಾರ್ ಜತೆಗೆ ಬಾಲಿವುಡ್ ನಲ್ಲಿ ಟೈಟಲ್ ರೋಲ್ ನಿರ್ವಹಿಸಿ ಬಂದಿದ್ದರು. ಇಂದು ಇಲ್ಲಿ‌ ನಾಯಕರಾಗಿರುವವರು ಪರಭಾಷೆಗಳಲ್ಲಿ ಖಳನಾಗಿ ನಟಿಸಬಾರದು ಎಂದು ಅಭಿಮಾನಿಗಳೇ ಆಗ್ರಹಿಸಿದರೂ ಅದನ್ನು ಒಪ್ಪಿಕೊಳ್ಳಲು ಯಾವ ನಟರು ಸಿದ್ಧರಿದ್ದಾರೆ? ಅಭಿಮಾನಿಗಳ ಪರವಾಗಿ ಮಾಧ್ಯಮದವರೇ ಈ ಪ್ರಶ್ನೆ ಕೇಳಿದರೂ ಅದಕ್ಕೆ ನಾವು ಉತ್ತರಿಸಬೇಕಿಲ್ಲ ಎಂದು ಮುಂದೆ ಸಾಗುತ್ತಾರೆ. “ಕಲಾವಿದರಿಗೆ ಯಾವುದೇ ಭಾಷೆಗಳ ಬಂಧನವಿಲ್ಲ. ನಟನೆಯೇ ಕೈಲಾಸ” ಎನ್ನುವುದು ಇಂದು ಮಾತ್ರವಲ್ಲ ಅಂದೇ ಎಲ್ಲರಿಗೂ ತಿಳಿದಿತ್ತು. ಆದರೆ ಅಭಿಮಾನಿಗಳಿಗೆ ನೋವು ಮಾಡಿ ತೀರ್ಮಾನ ತೆಗೆದುಕೊಳ್ಳಲು ರಾಜ್, ವಿಷ್ಣು ಅವರಂಥ ದೊಡ್ಡ ನಟರೇ ತಯಾರು ಇರುತ್ತಿರಲಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಅಭಿಮಾನಿಗಳಿಗೆ ಹೀಗೆ ತಮ್ಮ ಅಭಿಪ್ರಾಯ ಹಂಚಿಕೊಂಡು ಅದಕ್ಕೆ ತಾರೆಯಿಂದ ಪ್ರತಿಕ್ರಿಯೆ ಪಡೆಯುವ ಅವಕಾಶ ಇರಬೇಕೇ ಹೊರತು ಪರಸ್ಪರರ ಅಭಿಮಾನಿಗಳೇ ಕಚ್ಚಾಡುವ ಪರಿಸ್ಥಿತಿ ಇರಬಾರದು.

ಅಂದಹಾಗೆ ಈ ಲಾಕ್ಡೌನ್ ದಿನಗಳು ಹಲವರಿಂದ ಇಂಥ ಮನೆಯ ಅಟ್ಟ ಸೇರಿದ್ದ ಇತಿಹಾಸದ ಕುರುಹುಗಳನ್ನು ಹೊರಗೆ ತರಲು ಸಹಾಯ ಮಾಡಿದೆ. ಹಂಚಿಕೊಂಡಿರುವ ಸುಧೀಂದ್ರ ಹಾಲ್ದೊಡ್ಡೇರಿಯವರಿಗೆ ವಂದನೆಗಳು.

Recommended For You

Leave a Reply

error: Content is protected !!