
ಸರಿಯಾಗಿ ಹತ್ತು ವರ್ಷದ ಹಿಂದೆ ‘ಪವಿತ್ರ ರಿಷ್ತ’ ಎನ್ನುವ ಧಾರಾವಾಹಿಯಲ್ಲಿ ಕಿರುತೆರೆ ಮೂಲಕ ಗುರುತಿಸಿಕೊಂಡಿದ್ದ ಯುವಕ ಸುಶಾಂತ್ ಸಿಂಗ್ ರಾಜ್ ಪೂತ್. ದಶಕದೊಳಗೆ ಬಾಲಿವುಡ್ ನ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದ ಪ್ರತಿಭಾವಂತ. ಆದರೆ ಆತನ ಈ ಬೆಳವಣಿಗೆ ಕಂಡ ಯಾರು ಕೂಡ ಆತ್ಮಹತ್ಯೆಯ ಬಗ್ಗೆ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಆದರೆ ಇಂದು ಆತನ ಮೃತದೇಹ ಮುಂಬೈ ಬಾಂದ್ರಾದ ಮನೆಯ ಕೋಣೆಯೊಳಗೆ ಪತ್ತೆಯಾಗಿದೆ. ಸುಶಾಂತ್ ಆತ್ಮಹತ್ಯೆಗೆ ಮೊದಲು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದಾಗಿ ತಿಳಿದು ಬಂದಿದೆ. ಖಿನ್ನತೆಗೆ ಈ ವರ್ಷ ವಿಶೇಷ ಕಾರಣಗಳೇನು ಬೇಕಾಗಿಲ್ಲ. ಕೊರೊನ ವೈರಸ್ ಮತ್ತು ಲಾಕ್ಡೌನ್ ಪರಿಣಾಮಗಳೇ ಸಾಕು. ಆದರೆ ಸುಶಾಂತ್ ವಿಚಾರದಲ್ಲಿ ಇನ್ನಷ್ಟು ವಿಚಾರಗಳು ಸೇರಿಕೊಂಡ ಹಾಗಿವೆ. ಅವುಗಳ ಬಗ್ಗೆ ಸಿನಿಕನ್ನಡ.ಕಾಮ್ ವಿಶ್ಲೇಷಣೆ ಇದು.
ಕಾಡುತ್ತಿದ್ದ ತಾಯಿಯ ನೆನಪು..
ಮೊದಲನೆಯ ವಿಚಾರ ಹೇಳುವುದಾದರೆ ಸುಶಾಂತ್ 17ವರ್ಷದವನಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದರು. ತಾಯಿಯ ಸ್ಥಾನ ಜೀವನದಲ್ಲಿ ಮತ್ತೆ ಯಾರಿಂದಲೂ ತುಂಬಲಾಗದು. ಆದರೆ ಅನಾಥ ಹುಡುಗರು ತಾಯಿಯನ್ನು ತಮ್ಮ ಪ್ರೇಯಸಿಯಲ್ಲಿ ಕೂಡ ಕಾಣಬಯಸುತ್ತಾರೆ ಎನ್ನುವುದು ಸಾಬೀತಾಗಿರುವ ಸತ್ಯ. ಅವಕಾಶ ಸಿಕ್ಕ ಮೊದಲ ಧಾರಾವಾಹಿಯ ಜೋಡಿಯನ್ನೇ ಪ್ರೇಮಿಸಿದ. ಆಕೆಯ ಹೆಸರು ಅಂಕಿತಾ ಲೋಖಂಡೆ. ‘ಜಲಕ್ ದಿಖ್ಲಾ ಜ’ ಡ್ಯಾನ್ಸ್ ರಿಯಾಲಿಟಿ ಶೋನ ಸೀಸನ್ ನಾಲ್ಕರಲ್ಲಿ ಡಾನ್ಸ್ ಸ್ಪರ್ಧಿಯಾಗಿದ್ದರು ಸುಶಾಂತ್. ಅಂದಹಾಗೆ ಅಲ್ಲಿ ಅಂಕಿತಾ ಕೂಡ ಇದ್ದರು. ಅದೇ ವೇದಿಕೆಯಲ್ಲಿ ತಾವು ಅಂಕಿತಾ ಕೈ ಹಿಡಿಯಲಿರುವ ಸುದ್ದಿಯನ್ನು ಪ್ರಕಟಿಸಿದರು. ಆ ಕ್ಷಣಕ್ಕೆ ಅದಕ್ಕೆ ಸಾಕ್ಷಿಯಾಗಿ ಶೋನ ತೀರ್ಪುಗಾರರಾದ ಮಾಧುರಿ ದೀಕ್ಷಿತ್, ರೆಮೋ ಡಿಸೋಜ, ಮಲೈಕಾ ಅರೋರ ಇದ್ದರು.
ಅಂಕಿತಾ ಆತ್ಮೀಯತೆಯ ಅಂತ್ಯ
ಸುಶಾಂತ್ ಅಂಕಿತಾ ಸಂಬಂಧ ಒಂದಷ್ಟು ಕಾಲ ‘ಲಿವಿಂಗ್ ಟುಗೆದರ್’ ಮಾದರಿಯಲ್ಲಿ ಮುಂದುವರಿದು, ಬಳಿಕ 2016ರ ಸುಮಾರಿಗೆ ದೂರಾದರು! ಅಷ್ಟು ಹೊತ್ತಿಗಾಗಲೇ ‘ಕೈ ಪೋಚೆ’, ‘ಶುದ್ಧ್ ದೇಸಿ ರೊಮಾನ್ಸ್’ ಮೊದಲಾದ ಚಿತ್ರಗಳ ಮೂಲಕ ಬಾಲಿವುಡ್ ನಟನಾಗಿ ಸ್ಥಾನ ಕಂಡುಕೊಳ್ಳುವ ಪ್ರಯತ್ನ ನಡೆದಿತ್ತು. 2014ರಲ್ಲಿ ತೆರೆಕಂಡ ಆಮೀರ್ ಖಾನ್ ನಾಯಕರಾಗಿರುವ ‘ಪಿ.ಕೆ’ ಚಿತ್ರದಲ್ಲಿ ಸರ್ಫರಾಜ್ ಪಾತ್ರ ಪಾಕಿಸ್ತಾನೀಯರ ಗಮನವನ್ನು ಕೂಡ ಸೆಳೆದಿತ್ತು. ಅದರಲ್ಲಿ ಅವರು ನಿರ್ವಹಿಸಿದ ಪಾಕ್ ಪಾತ್ರಧಾರಿಯ ಪಾಸಿಟಿವ್ ಪಾತ್ರವನ್ನು ನೆನೆದು ಇಂದು ಪಾಕಿಸ್ತಾನೀಯರು ಕೂಡ ಟ್ವೀಟ್ ಮಾಡಿರುವುದು ಅದಕ್ಕೆ ಉದಾಹರಣೆ. ಅಷ್ಟೊಂದು ಯಶಸ್ಸಿನ ನಡುವೆ ಅಂಕಿತಾಳಿಂದ ಬ್ರೇಕ್ ಅಪ್ ಮಾಡಿಕೊಂಡದ್ದನ್ನು ಯೋಚಿಸಿ ಕೂರುವಷ್ಟು ಬಿಡುವು ಇರಲಿಲ್ಲ ಎನ್ನುವುದು ಸತ್ಯ.
2016 ಅಂತೂ ಸುಶಾಂತ್ ಗೆ ಸ್ಟಾರ್ ಪಟ್ಟ ದೊರಕಿದಂಥ ಸಮಯ. ‘ಎಂ.ಎಸ್ ಧೋನಿ: ದಿ ಅನ್ ಟೋಲ್ಡ್ ಸ್ಟೋರಿ’ ಮೂಲಕ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯಾಗಿ ನಟಿಸಿದರು. ಧೋನಿಯ ಮೇಲಿನ ಅಭಿಮಾನದಿಂದ ಥಿಯೇಟರ್ ಗೆ ಬಂದವರೆಲ್ಲ ಚಿತ್ರ ನೋಡಿ ಹಿಂದಿರುಗುವಾಗ ಸುಶಾಂತ್ ನಟನೆಗೆ ಅಭಿಮಾನಿಯಾಗಿದ್ದರು. ಚಿತ್ರದಲ್ಲಿ ಧೋನಿಯ ಮೊದಲ ಪ್ರೇಯಸಿಯ ಸಾವು ಇಂದಿಗೂ ವೀಕ್ಷಕರನ್ನು ಕಾಡುವ ಸನ್ನಿವೇಶ. ಆದರೆ ಇನ್ನು ಮುಂದೆ ಆ ಚಿತ್ರ ನೋಡುವಾಗಲೆಲ್ಲ ಸುಶಾಂತ್ ನೆನಪೇ ಕಾಡಲಿರುವುದು ನಿಜ.
ಮತ್ತೊಂದು ಪ್ರೇಮ ಇರಲಿಲ್ಲ..!
‘ರಾಬ್ತ’ ಚಿತ್ರದಲ್ಲಿ ಸುಶಾಂತ್ ಗೆ ಜೋಡಿಯಾಗಿ ನಟಿಸಿದ್ದು ಕೃತಿ ಸನೊನ್ ಎನ್ನುವ ಪಂಜಾಬಿ ನಟಿ. ತೆಲುಗಿನಲ್ಲಿ ‘ನೇನೊಕ್ಕಡಿನೇ’ ಚಿತ್ರದಲ್ಲಿ ಮಹೇಶ್ ಬಾಬುವಿಗೆ ಜೋಡಿಯಾಗಿ ನಟಿಸಿದಾಕೆ. ರಾಬ್ತ ಸಿನಿಮಾದ ಬಳಿಕ ಕೂಡ ಸುಶಾಂತ್ ಜತೆಗೆ ಕೃತಿ ಸನೊನ್ ತಿರುಗಾಡುವುದನ್ನು ಕಂಡು ಬಾಲಿವುಡ್ ನಲ್ಲಿ ಗಾಸಿಪ್ ಸೃಷ್ಟಿಯಾಗಿತ್ತು. ಆದರೆ ಎರಡು ವರ್ಷಗಳ ಹಿಂದೆ ಕೃತಿ ಮಾಧ್ಯಮಗಳ ಮುಂದೆ ತಾವಿಬ್ಬರೂ ಸ್ನೇಹಿತರಷ್ಟೇ ಎನ್ನುವ ಮೂಲಕ ಅದೆಲ್ಲವನ್ನು ನಿರಾಕರಿಸಿದ್ದರು. ಆದರೆ ಸುಶಾಂತ್ ನ ಮಾಜಿ ಸಂಗಾತಿ ಅಂಕಿತಾಗೆ ಅದಾಗಲೇ ವಿಕ್ಕಿ ಜೈನ್ ಎನ್ನುವ ಉದ್ಯಮಿಯ ಜತೆಗೆ ಪ್ರೇಮಾನುರಾಗ ಆರಂಭವಾಗಿತ್ತು.
ಸಿನಿಮಾರಂಗದೊಳಗಿನ ನಿರಾಶೆ
ಮೊದಲು ತಾಯಿಯ ಅಗಲಿಕೆ, ಬಳಿಕ ತಾನೇ ದೂರ ಮಾಡಿದ ಪ್ರೇಯಸಿ ಮಾತ್ರವಲ್ಲ ಇದರ ನಡುವೆ ‘ಚಿಚೋರೆ’ ಚಿತ್ರ ಮತ್ತೊಮ್ಮೆ ನಟನಾಗಿ ಒಳ್ಳೆಯ ಹೆಸರು ತಂದುಕೊಟ್ಟರೂ, ನಾಯಕನಾಗಿ ನಟಿಸಿದ್ದ ಕೊನೆಯ ಚಿತ್ರ ‘ಡ್ರೈವ್’ ಸಿನಿಮಾ ತೆರೆಕಾಣದೇ ಆನ್ಲೈನಲ್ಲಿ ಮಾತ್ರ ಬಿಡುಗಡೆಯಾಗಿದ್ದು ಕೂಡ ಆತನಲ್ಲಿ ಆತಂಕ ಮೂಡಿಸಿದ ವಿಚಾರವಾಗಿತ್ತು. ಚಿತ್ರ ಥಿಯೇಟರ್ ಬಿಡುಗಡೆಯನ್ನು ಎರಡೆರಡು ಬಾರಿ ಘೋಷಿಸಿ ಬಳಿಕ ಸದ್ದಿಲ್ಲದೆ ಆನ್ಲೈನ್ ಮೂಲಕ ಹೊರಬರುವುದು ಯುವನಾಯಕನಿಗೆ ಆತಂಕ ಮೂಡಿಸುವ ವಿಚಾರವೇ ಹೌದು.
ಮಾಜಿ ಪ್ರೇಯಸಿಯ ನಿಶ್ಚಿತಾರ್ಥ ತಂದ ಅಭದ್ರತೆ
ಇವೆಲ್ಲದರ ನಡುವೆ ಕೇವಲ ನಾಲ್ಕು ದಿನಗಳ ಮಾಜಿ ಪ್ರೇಯಸಿ ಅಂಕಿತಾ ತನ್ನ ಪ್ರಿಯಕರ ವಿಕ್ಕಿ ಜೈನ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಸುದ್ದಿ ಹರಡಿತ್ತು. ಇದರ ಬಗ್ಗೆ ಅಂಕಿತಾ ಯಾವುದೇ ಅಧಿಕೃತ ಪ್ರಕಟಣೆ ನೀಡಿರಲಿಲ್ಲ.
ಆರು ವರ್ಷ ಗಾಢವಾಗಿ ಪ್ರೇಮಿಸಿದ ಬಳಿಕ ಮಾಜಿ ಪ್ರೇಯಸಿಯ ನಿಶ್ಚಿತಾರ್ಥ ಎನ್ನುವುದು ಡಿಪ್ರೆಶನ್ ಗೆ ದೂಡಿದರೆ ಅಚ್ಚರಿ ಏನಿಲ್ಲ. ದೂರಾಗಲು ಸ್ವತಃ ಸುಶಾಂತ್ ಕಾರಣವಾಗಿದ್ದರೂ, ಹೆಚ್ಚು ಕೆಲಸವಿರದ ಈ ಲಾಕ್ಡೌನ್ ದಿನಗಳು, ಸುಮ್ಮನಿರುವ ಮನಸಿಗೆ ಹಳೆಯ ನೆನಪುಗಳನ್ನು ತುಂಬಿ ಇಂಥ ಕೆಲಸ ಮಾಡಲು ಪ್ರೇರೇಪಿಸಿರುವ ಸಾಧ್ಯತೆ ಕೂಡ ಅಧಿಕವಾಗಿದೆ.
ಮಾಜಿ ಮ್ಯಾನೇಜರ್ ದಿಶಾ ಆತ್ಮಹತ್ಯೆ!
ಇಂದಿಗೆ ಸರಿಯಾಗಿ ವಾರದ ಹಿಂದೆ ಸುಶಾಂತ್ ಸಿಂಗ್ ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲ್ಯಾನ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಸೋಮವಾರ 8ನೇ ತಾರೀಕಿನಂದು ರಾತ್ರಿ ಮುಂಬೈನಲ್ಲಿ ಆಕೆ ಮುಂಬೈನ ಮಲಾಡ್ ನಲ್ಲಿರುವ ಬಹುಮಹಡಿ ಕಟ್ಟಡದ 14ನೇ ಅಂತಸ್ತಿನಿಂದ ಧುಮುಕಿ ಸಾವಿಗೀಡಾಗಿದ್ದು, ಪೊಲೀಸ್ ತನಿಖೆ ನಡೆದಿದೆ. ಆದರೆ ಆಕೆ ಸುಶಾಂತ್ ಸಿಂಗ್ ಸೇರಿದಂತೆ ಬಾಲಿವುಡ್ ನ ಇತರ ಸೆಲೆಬ್ರಿಟಿಗಳಾದ ಐಶ್ವರ್ಯಾ ರೈ, ವರುಣ್ ಶರ್ಮ, ಭಾರತೀ ಸಿಂಗ್ ಮೊದಲಾದವರಿಗೂ ಮ್ಯಾನೇಜರ್ ಆಗಿದ್ದವರು. ಆಕೆಯ ಸಾವಿಗೆ ಸುಶಾಂತ್, ಪ್ರಿಯಾಂಕ ಚೋಪ್ರಾ, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವರು ಟ್ವಿಟರ್ ಮೂಲಕ ದುಃಖ ವ್ಯಕ್ತಪಡಿಸಿದ್ದರು.
ಒಟ್ಟಿನಲ್ಲಿ ಸುಶಾಂತ್ ಟ್ವೀಟ್ ಗಳ ಮೂಲಕ ಆತನ ಭಾವನೆಗಳನ್ನು ಗಮನಿಸುವುದಾದರೆ ಈ ತಿಂಗಳ ಆರಂಭದಲ್ಲಿ ತಾಯಿಯನ್ನು ನೆನಪಿಸಿಕೊಂಡು ಆರ್ದ್ರವಾಗಿ ಒಂದಷ್ಟು ಬರೆದುಕೊಂಡಿದ್ದರು. ಕಳೆದ ವಾರ ಮ್ಯಾನೇಜರ್ ಸಾವಿನ ಬಗ್ಗೆ. ಇನ್ನು ಅಂಕಿತಾ ನಿಶ್ಚಿತಾರ್ಥದ ನೋವನ್ನು ಹೊರಗೆ ಹಂಚುವಂತಿರಲಿಲ್ಲ. ಒಟ್ಟಿನಲ್ಲಿ ಈ ಎಲ್ಲವೂ ಕೂಡ ಅವರನ್ನು ಮಾನಸಿಕ ಖಿನ್ನತೆಗೆ ಒಳಪಡಿಸಿರುವ ಸಾಧ್ಯತೆ ಅಧಿಕವಾಗಿದೆ. ಹಾಗಾಗಿಯೇ ಅವರು ಅದಕ್ಕೆ ಔಷಧಿ ಪಡೆದ ಕುರುಹುಗಳು ಲಭಿಸಿವೆ. ಆದರೆ ಸಾವು ಯಾವುದೇ ಸಮಸ್ಯೆಗೂ, ಖಿನ್ನತೆಗೂ ಔಷಧಿ ಆಗಿರಲಿಲ್ಲ ಎನ್ನುವುದು ಮಾತ್ರ ಸತ್ಯ.
ಮರಣೋತ್ತರ ಪರೀಕ್ಷೆಯ ವರದಿ ಸಾವಿನ ಕುರಿತಾದ ಇನ್ನಷ್ಟು ಹೊಸ ಮಾಹಿತಿಗಳನ್ನು ಹೊರಗೆ ತಂದರು ಅಚ್ಚರಿ ಇಲ್ಲ. ಆದರೆ ಅದ್ಯಾವುದು ಕೂಡ ಸುಶಾಂತ್ ಎಂಬ ಕಲಾವಿದನನ್ನು, ಮನುಷ್ಯನನ್ನು ಈ ಜಗತ್ತಿಗೆ ಮರಳಿಸುವುದಿಲ್ಲ ಎನ್ನುವುದೇ ದುಃಖದ ವಿಚಾರ.
