ಸಂಭಾಷಣೆಗಳ ಫುಲ್ ಪ್ಯಾಕೇಜ್ ಆಸ್ತಿ: ಮಾಸ್ತಿ!

‘ಕಡ್ಡಿಪುಡಿ’ ಸಿನಿಮಾ ನೋಡಿದವರು ಒಂದು ದೃಶ್ಯವನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಅದು ಚಿತ್ರದ ನಾಯಕ ಶಿವರಾಜ್ ಕುಮಾರ್ ಮತ್ತು ರಂಗಾಯಣ ರಘು ವಾಹನವೊಂದರಲ್ಲಿ ಸಾಗುವ ಸನ್ನಿವೇಶ. ಹೊರಗೆ ಜೋರಾಗಿ ಸುರಿಯುತ್ತಿರುವ ಮಳೆ, ಸಿಗ್ನಲ್ ಒಂದರಲ್ಲಿ ಬೈಕ್ ಸವಾರನೊಂದಿಗೆ ಮಾತಿನ ಸಂಘರ್ಷ ನಡೆಯುತ್ತದೆ. ಬೈಕ್ ಸವಾರ ನಾಯಕನಿಗೆ “ಈ ರೋಡ್ ಏನ್ ನಿಮ್ಮಪ್ಪಂದ?” ಎನ್ನುತ್ತಾನೆ, ಕ್ಯಾಮೆರಾ ಡಾ. ರಾಜ್ ಕುಮಾರ್ ರಸ್ತೆ ಎಂಬ ಫಲಕದ ಮೇಲೆ ಹೊರಳುತ್ತದೆ. ನಾಯಕನಾಗಿ ನಟಿಸುವ ಶಿವರಾಜ್ ಕುಮಾರ್ ಅವರ ಪಾತ್ರಕ್ಕಿಂತ ಹಿರಿದಾದ ಇಮೇಜ್ ಗೆ ಹೊಂದಿಕೊಂಡಂಥ ಇಂಥ ಹತ್ತು ಹಲವಾರು ಮೈನವಿರೇಳಿಸುವ ದೃಶ್ಯಗಳು ಚಿತ್ರದಲ್ಲಿವೆ. ನಿರ್ದೇಶಕ ಸೂರಿ ಅವರ ಸೃಜನಶೀಲತೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಈ ಸನ್ನಿವೇಶ ಮೂಡಿ ಬರುವಲ್ಲಿ ಸಂಭಾಷಣೆಕಾರ ‘ಮಾಸ್ತಿ’ಯವರ ಕೊಡುಗೆ ಪ್ರಮುಖವಾದದ್ದು.

ವಾಸ್ತವದಲ್ಲಿ ಆ ದೃಶ್ಯದಲ್ಲಿ ಸಂಭಾಷಣೆಗಿಂತ ಪಂಚ್ ನೀಡಿರುವುದು ಡಾ.ರಾಜಕುಮಾರ್ ರಸ್ತೆ ಎನ್ನುವ ರಸ್ತೆಯಲ್ಲಿನ ಫಲಕ. ಹಾಗಾದ ಅಂಥ ಸನ್ನಿವೇಶವನ್ನು ಊಹಿಸಿ ಬರೆಯಬಲ್ಲ ಮಾಸ್ತಿ ಎಂದರೆ ನಿರ್ದೇಶಕರ ಪಾಲಿಗೆ ಒಂದು ಫುಲ್ ಪ್ಯಾಕೇಜ್ ಇದ್ದಂತೆ. ಹಾಗಾಗಿಯೇ ಮೈಲೇಜ್ ಸಂಭಾಷಣೆಗಳ ಫುಲ್ ಪ್ಯಾಕೇಜ್ ಎಂದೇ ಮಾಸ್ತಿಯವರನ್ನು ಹೇಳಬಹುದು. ಇಂತಹ ಮಾಸ್ತಿ ಇಂದು‌ ಮೋಶನ್ ಪೋಸ್ಟರ್ ಬಿಡುಗಡೆಯ ಮೂಲಕ ಸುದ್ದಿಯಾದ ‘ಫ್ಯಾಮಿಲಿ ಪ್ಯಾಕ್’ ಚಿತ್ರಕ್ಕೂ‌ ಸಂಭಾಷಣೆ ರಚಿಸಲಿರುವುದಾಗಿ ತಿಳಿದು‌ ಬಂದಿದೆ. ಅವರ ಈ ಸಂಭಾಷಣಾ ಪಯಣದ ಕುರಿತಾದ ಸಣ್ಣದೊಂದು ಕಣ್ಣೋಟ ಇಲ್ಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಸುಂಟರಗಾಳಿ’ ಚಿತ್ರದಿಂದ ಚಂದನವನದಲ್ಲಿ ಸಕ್ರಿಯರಾದವರು ಮಾಸ್ತಿ. ಅವರಿಗೆ ಸೂರಿಯವರ ಪರಿಚಯವಾಗಿದ್ದು ಯೋಗರಾಜ್ ಭಟ್ ನಿರ್ದೇಶನದ ‘ಮಣಿ’ ಸಿನಿಮಾ ಚಿತ್ರೀಕರಣದಲ್ಲಿ. ಅಲ್ಲಿಂದ ಶುರುವಾದ ಸೂರಿ ಅವರೊಂದಿಗಿನ ನಂಟು ‘ಇಂತಿ ನಿನ್ನ ಪ್ರೀತಿಯ’, ‘ಜಾಕಿ’, ‘ಕೆಂಡಸಂಪಿಗೆ’ ಸೇರಿದಂತೆ ಇತ್ತೀಚಿನ ಸೂಪರ್ ಹಿಟ್ ‘ಟಗರು’ ತನಕ ಮುಂದುವರಿದಿದೆ. ಸದ್ಯ ಬಿಡುಗಡೆಗೆ ಸಿದ್ಧವಿರುವ ದುನಿಯಾ ವಿಜಯ್ ಅಭಿನಯದ ‘ಸಲಗ’ ಚಿತ್ರದ ಸಂಭಾಷಣೆಯು ಮಾಸ್ತಿ ಅವರದ್ದೇ.

ಸೂರಿ ಅವರಿಗೆ ಗುರು ಸ್ಥಾನ ನೀಡುವ ಮಾಸ್ತಿ, ಕೇವಲ ಮಾಸ್ ಸಿನಿಮಾಗಳಿಗಷ್ಟೇ ಸೀಮಿತರಾಗದೇ ‘ಬಾಲ್ ಪೆನ್’ ನಂತಹ ಮಕ್ಕಳ ಚಿತ್ರ ಹಾಗೂ ‘ಕಾಲೇಜ್ ಕುಮಾರ’ದಂತಹ ಕೌಟುಂಬಿಕ ಹಾಗೂ ತಿಳಿ ಹಾಸ್ಯವಿರುವ ಚಿತ್ರಗಳಿಗೂ ಸಂಭಾಷಣೆ ಬರೆದದ್ದು ಅವರ ಸೃಜನಾತ್ಮಕತೆಗೆ ಸಾಕ್ಷಿ.

ಮಾಸ್ತಿ ಅವರು ಪ್ರಸ್ತುತ ಪಿ ಆರ್ ಕೆ ಅಡಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿರ್ಮಿಸುತ್ತಿರುವ ಹೊಸ ಚಿತ್ರ ‘ಫ್ಯಾಮಿಲಿ ಪ್ಯಾಕ್’ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮತ್ತು ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಬಗ್ಗೆ ಅವರಲ್ಲಿ ಕೇಳಿದಾಗ “ಈ ಚಿತ್ರ ಆರರಿಂದ ಅರವತ್ತು ವರ್ಷದ ವಯೋಮಾನದವರಿಗೂ ಇಷ್ಟವಾಗುವಂತಹ ಸಂಪೂರ್ಣ ಮನರಂಜನಾತ್ಮಕ ಕಥಾಹಂದರವನ್ನು ಹೊಂದಿದ್ದು, ಹಾಸ್ಯವೇ ಪ್ರಧಾನವಾಗಿ ಇರಲಿದೆ. ಅದಲ್ಲದೆ ಬರೀ ಮಾಸ್ ಸಿನಿಮಾಗಳಿಗೆ ಸೀಮಿತವಾಗಿದ್ದ ನನಗೆ ಒಂದು ಪರಿಪೂರ್ಣ ಲಘು ಹಾಸ್ಯ ಮಿಶ್ರಿತ ಕೌಟುಂಬಿಕ ಕತೆಯೊಂದಕ್ಕೆ ಸಂಭಾಷಣೆ ಬರೆಯುತ್ತಿರುವುದು ಸವಾಲಿನ ಕೆಲಸ, ಅಷ್ಟೇ ಅಲ್ಲದೆ ಸದಭಿರುಚಿಯ ಚಿತ್ರಗಳನ್ನೇ ಪ್ರೇಕ್ಷಕರಿಗೆ ಉಣಬಡಿಸುವ ಪಿ ಆರ್ ಕೆ ಬ್ಯಾನರ್ ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಖುಷಿ ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ” ಎನ್ನುತ್ತಾರೆ.

‘ಸಂಕಷ್ಟಕರ ಗಣಪತಿ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಲಿಖಿತ್ ಶೆಟ್ಟಿ ಈ ಚಿತ್ರದ ನಾಯಕ. ಅದೇ ಚಿತ್ರದ ನಿರ್ದೇಶಕ ಅರ್ಜುನ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರೆ. ಕಚಗುಳಿ ಇರುವಂತಹ ಸಂಭಾಷಣೆಯಿಂದ ಗಮನ ಸೆಳೆದಿದ್ದ ‘ಕಾಲೇಜ್ ಕುಮಾರ್’ ಚಿತ್ರವನ್ನು ಮೆಚ್ಚಿದ್ದ ಚಿತ್ರತಂಡಕ್ಕೆ ಹೊಸ ಸೇರ್ಪಡೆ ಎಂಬಂತೆ ಮಾಸ್ತಿ ಜತೆಯಾಗಿದ್ದಾರೆ. ಉಳಿದಂತೆ ‘ಪಾಪ್ಕಾರ್ನ್ ಮಂಕಿ ಟೈಗರ್’ ಮತ್ತು ‘ಲವ್ ಮಾಕ್ಟೇಲ್’ ಚಿತ್ರದ ಮೂಲಕ ಗಮನ ಸೆಳೆದಿದ್ದ ಅಮೃತಾ ಅಯ್ಯಂಗಾರ್ ಚಿತ್ರದ ನಾಯಕಿಯಾಗಿದ್ದರೆ, ರಂಗಾಯಣ ರಘು ಒಂದು ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಗುರುಕಿರಣ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕೆ ಇರುವುದು ಮತ್ತೊಂದು ವಿಶೇಷ.

ಮಾಸ್ತಿ ಅವರ ಮಾತಿನಂತೆ ಮನರಂಜನೆಯೇ ಮುಖ್ಯವಾಗಿರುವ ಈ ಚಿತ್ರದಲ್ಲಿ ಸಂಭಾಷಣೆಯೇ ಪ್ರಧಾನ ಅಂಶವಾಗಿದೆ. ತಮ್ಮ ಮೊನಚಾದ ಸಂಭಾಷಣೆಯಿಂದಲೇ ಚಿತ್ರರಸಿಕರಲ್ಲಿ ಛಾಪು ಮೂಡಿಸಿರುವ ಮಾಸ್ತಿ ಅವರಿಗೆ ಈ ಚಿತ್ರವು ಹೆಸರು ತಂದುಕೊಡಲಿ ಹಾಗೆಯೇ ಇನ್ನಷ್ಟು ಸದಭಿರುಚಿಯ ಚಿತ್ರಗಳ ಮಾತು ಇವರ ಲೇಖನಿಯದ್ದೇ ಆಗಿರಲಿ ಎಂದು ಆಶಿಸೋಣ.

ಲೇಖಕರು: ಸುಜಯ್ ಬೆದ್ರ

Recommended For You

Leave a Reply

error: Content is protected !!