ಕಳೆದ ವರುಷ ಬಿಡುಗಡೆಯಾದ ‘ಲುಂಗಿ’ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸದಿದ್ದರೂ, ಚಿತ್ರ ನೋಡಿದವರಿಗೆ ವಿಭಿನ್ನ ಅನುಭವ ನೀಡಿದ್ದು ನಿಜ. ಉತ್ಸಾಹಿ ಯುವಕನ ಜೀವನಗಾಥೆಯನ್ನು ಉತ್ತಮ ಸಾಹಿತ್ಯ, ಸಂಗೀತ, ಛಾಯಾಗ್ರಹಣ ಸೇರಿದಂತೆ ಮಂಗಳೂರು ಪ್ರದೇಶದ ನೈಜ ಚಿತ್ರಣದೊಂದಿಗೆ ತೆರೆ ಮೇಲೆ ತಂದಿದ್ದ ‘ಲುಂಗಿ’ ಚಿತ್ರದ ನಿರ್ದೇಶಕ ಅರ್ಜುನ್ ಲೂಯಿಸ್ (ಇವರು ಅಕ್ಷಿತ್ ಶೆಟ್ಟಿ ಅವರೊಂದಿಗೆ ಜಂಟಿಯಾಗಿ ಈ ಸಿನಿಮಾ ನಿರ್ದೇಶಿಸಿರುತ್ತಾರೆ) ತಮ್ಮ ಸಿನಿಮಾ ಹಾದಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸಿನಿಕನ್ನಡ.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.
‘ಲುಂಗಿ’ ಆಯಿತು ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅರ್ಜುನ್ ಲೂಯಿಸ್, ”ವರ್ಷದ ಆರಂಭದಲ್ಲಿಯೇ ‘ಸ. ಹಿ. ಪ್ರಾ. ಶಾಲೆ’ ಖ್ಯಾತಿಯ ‘ಪ್ರಕಾಶ್ ತುಮಿನಾಡ್’ ಅವರನ್ನು ಗಮನದಲ್ಲಿರಿಸಿ ಸ್ಕ್ರಿಪ್ಟ್ ಸಿದ್ಧಪಡಿಸಿದ್ದೆ. ಮಾತುಕತೆ ಎಲ್ಲ ಮುಗಿದು ಚಿತ್ರೀಕರಣ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಲಾಕ್ ಡೌನ್ ಅನೌನ್ಸ್ ಮಾಡಲಾಯಿತು, ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಬೇಕೆಂಬ ನಿಟ್ಟಿನಲ್ಲಿ ಹಲವಾರು ಕಥೆ, ಕಾದಂಬರಿಗಳನ್ನು ಓದಿದೆ. ವಿವಿಧ ಭಾಷೆಗಳ ಸಿನಿಮಾಗಳನ್ನು ವೀಕ್ಷಿಸಿದೆ. ಸಾಕಷ್ಟು ಸಮಯ ಇದ್ದುದರಿಂದ ಬರೆಯಲು ಶುರುಮಾಡಿದೆ ಅದರ ಫಲವಾಗಿ ಸಧ್ಯ ಮೂರು ಸ್ಕ್ರಿಪ್ಟ್ ಸಿದ್ಧವಾಗಿದೆ. ಲಾಕ್ ಡೌನ್ ತೆರವಾಗಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕ ಬಳಿಕ ಹಂತ ಹಂತವಾಗಿ ಒಂದೊಂದು ಸ್ಕ್ರಿಪ್ಟ್ ಕೈಗೆತ್ತಿಕೊಳ್ಳುತ್ತೇನೆ. ಅದಕ್ಕೂ ಮೊದಲು ನನ್ನದೇ ಸಮಾನ ಮನಸ್ಕರ ತಂಡದೊಂದಿಗೆ ಜಂಟಿಯಾಗಿ ‘ಕಾರ್ನರ್ ಸೀಟ್ ಫಿಲ್ಮ್ಸ್ ‘ ಎಂಬ ಬ್ಯಾನರ್ ಅಡಿಯಲ್ಲಿ ಒಂದು ಥ್ರಿಲ್ಲರ್ ಸಿನೆಮಾ ಪ್ರಾರಂಭಿಸುವ ಕುರಿತು ಚಿಂತನೆ ನಡೆದಿದೆ. ಸ್ಕ್ರಿಪ್ಟ್ ಕೆಲಸ ಒಂದು ತಿಂಗಳ ಹಿಂದೆಯೇ ಪೂರ್ಣವಾಗಿದೆ. ಇದು ನನ್ನದೇ ನಿರ್ದೇಶನದ ಪ್ರಯೋಗಾತ್ಮಕ ಸಿನಿಮಾ ಆಗಲಿದ್ದು, ‘ನಾನ್ ಲೀನಿಯರ್’ ನಿರೂಪಣೆ ಹೊಂದಿರುತ್ತದೆ. ಚಿತ್ರದ ಶೀರ್ಷಿಕೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಪೋಸ್ಟರ್ ಮೂಲಕ ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳಿಸುತ್ತೇವೆ” ಎಂದಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂಬ ಆಸೆಯಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿ ಚಂದನವನದತ್ತ ಮುಖಮಾಡುವ ಯುವಕರಿಗೆ ಲೆಕ್ಕವಿಲ್ಲ. ಎಂಜಿನಿಯರಿಂಗ್ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಸಿನಿಮಾ ನಿರ್ದೇಶಿಸುವ ಒಲವು ಹೊಂದಿದ್ದ ಅರ್ಜುನ್ ಲೂಯಿಸ್ ಇದೇ ಸಾಲಿಗೆ ಸೇರುತ್ತಾರಾದರು, ಅವರಲ್ಲಿ ಇದ್ದದ್ದು ಕೇವಲ ಹೆಸರು ಮಾಡುವ ಆಸೆ ಅಲ್ಲ ಬದಲಾಗಿ ಮಹತ್ತರವಾದುದನ್ನು ಸಾಧಿಸಬೇಕೆಂಬ ‘ಕನಸು’ ಹಾಗೂ ಮಾಡಿಯೇ ತೀರುತ್ತೇನೆ ಎಂಬ ‘ಗುರಿ’. ಬಹುಶಃ ಇದುವೇ ಅವರನ್ನು ಉಳಿದ ಯುವಕರಿಂದ ಪ್ರತ್ಯೇಕಿಸುವ ಅಂಶ.
ಕಾಲೇಜು ದಿನಗಳಲ್ಲೇ ಬರವಣಿಗೆಯ ಮತ್ತು ಓದುವ ಹುಚ್ಚು ಹಿಡಿಸಿಕೊಂಡಿದ್ದ ಅರ್ಜುನ್ ಅವರಿಗೆ ಕಥೆ ಬರೆಯುವ ಗೀಳಿತ್ತು. ಹಾಗೊಮ್ಮೆ ಅವರ ಕಥೆಗಳನ್ನು ಓದಿದ ಮುರಳಿ ಎಂಬ ಗಣಿತದ ಪ್ರಾಧ್ಯಾಪಕರಿಂದ ಪ್ರಶಂಸೆ ಹಾಗೂ ಪ್ರೋತ್ಸಾಹ ದೊರೆತದ್ದೇ ತಡ ತಮ್ಮ ಮನಸ್ಸು ಯಾವುದರ ಕಡೆಗೆ ತುಡಿಯುತ್ತಿದೆ ಎಂಬುದರ ಅರಿವಾಗಿ ಕಾಲೇಜು ತೊರೆಯುತ್ತಾರೆ. ಅಲ್ಲಿಂದ ಮುಂದುವರೆದು ಬೆಂಗಳೂರು ಸೇರಿಕೊಂಡು ನಿರ್ದೇಶಕರೊಬ್ಬರ ಸಹಾಯದಿಂದ ಚಿತ್ರಕಥೆ, ಸಂಭಾಷಣೆ, ಸೇರಿದಂತೆ ಸಿನಿಮಾ ತಯಾರಿಕೆಯ ಹಲವಾರು ವಿಭಾಗಗಳ ಬಗ್ಗೆ ಕಲಿತುಕೊಳ್ಳುತ್ತಾರೆ. ನೋಡಿ ಕಲಿಯುವುದಕ್ಕಿಂತಲೂ ಮಾಡಿ ಕಲಿಯುವುದರಲ್ಲಿ ನಂಬಿಕೆ ಇರುವ ಅರ್ಜುನ್ ಲೂಯಿಸ್ ರವರು ತಮ್ಮ ತಪ್ಪುಗಳನ್ನು ತಿಳಿದುಕೊಳ್ಳಲೆಂದೇ ಒಂದೆರಡು ಕಿರುಚಿತ್ರಗಳನ್ನು ನಿರ್ದೇಶಿಸುತ್ತಾರೆ, ಅದರಿಂದ ಅವರಿಗೆ ಸಮಯದ ನಿರ್ವಹಣೆ, ಸ್ಕ್ರಿಪ್ಟಿಂಗ್, ದೃಶ್ಯ ಸಂಯೋಜನೆ ಹಾಗೂ ಸಿನಿಮಾ ನಿರ್ಮಾಣದ ಹಲವು ಮಜಲುಗಳನ್ನು ತಿಳಿದುಕೊಳ್ಳಲು ಸಹಾಯವಾಯಿತಂತೆ.
ಸಿನಿಮಾ ಕಲಿಕೆಯ ಜೊತೆ ಜೊತೆಗೆ ಕಥೆ, ಕವನ, ಸ್ಕ್ರಿಪ್ಟ್ ಗಳನ್ನು ಬರೆಯುತ್ತಿದ್ದ ಅರ್ಜುನ್ ಉತ್ತಮ ಅವಕಾಶಗಳಿಗಾಗಿ ಕಾಯುತ್ತಿರುವಾಗಲೇ ಸುನಿ ನಿರ್ದೇಶನದ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ‘ ಬಿಡುಗಡೆಯಾಗುತ್ತದೆ. ಫೇಸ್ಬುಕ್ ಮುಖಾಂತರ ಸುನಿ ಅವರನ್ನು ಸಂಪರ್ಕಿಸಿ ತಾವು ಬರೆದ ಕವನ, ಕಥೆಗಳನ್ನು ಹಂಚಿಕೊಂಡಾಗ ತಮನ್ನು ಬಂದು ಕಾಣುವಂತೆ ಹೇಳುತ್ತಾರೆ, ಅಲ್ಲಿಂದ ಶುರುವಾದ ಸುನಿ ಅವರೊಂದಿಗಿನ ಒಡನಾಟ ಅರ್ಜುನ್ ಅವರಿಗೆ ಸಿನಿಮಾ ಭಾಷೆಯನ್ನು ಹಂತ ಹಂತವಾಗಿ ಕಲಿಯುವುದಕ್ಕೆ ಸಹಕಾರಿಯಾಗುತ್ತದೆ. ಸದ್ಯ ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅರ್ಜುನ್ ಲೂಯಿಸ್ ಅವರು ‘ಲುಂಗಿ’ ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ನಿರ್ದೇಶನದ ಜೊತೆಗೆ ಹಾಡುಗಳಿಗೆ ನವಿರಾದ ಸಾಹಿತ್ಯ ಬರೆಯುವ ಪರಿಣತಿ ಸಹ ಅವರಿಗೆ ಸಿದ್ಧಿಸಿದೆ. 2014 ರಲ್ಲಿ ಬಿಡುಗಡೆಯಾದ ‘ಚಾಲಿ ಪೋಲಿಲು’ ಎಂಬ ತುಳು ಚಿತ್ರದ ಹಾಡೊಂದಕ್ಕೆ ಮೊದಲ ಬಾರಿ ಸಾಹಿತ್ಯ ಬರೆಯಲು ಅರ್ಜುನ್ ಗೆ ಅವಕಾಶ ನೀಡಿದ್ದು ವಿ. ಮನೋಹರ್. ಅಲ್ಲಿಂದ ಶುರುವಾಗಿ ಕನ್ನಡ, ಕೊಂಕಣಿ, ಹಾಗೂ ತುಳು ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ತಮ್ಮದೇ ನಿರ್ದೇಶನದ ‘ಲುಂಗಿ ‘ ಚಿತ್ರದ ಎಲ್ಲಾ ಹಾಡುಗಳು, ಸಿಂಪಲ್ ಸುನಿ ನಿರ್ದೇಶನದ ‘ಚಮಕ್’ ಚಿತ್ರದ ‘ಅರೆ ಅರೆ ಏನಿದು ಹೊಸ ದಾಳಿ’ ಹಾಡಿನ ಸಾಹಿತ್ಯವೂ ಅರ್ಜುನ್ ಲೂಯಿಸ್ ಅವರದ್ದೇ.
ಪ್ರಸ್ತುತ ಬಿಡುಗಡೆಗೆ ಸಿದ್ಧವಿರುವ ಸೂರಜ್ ಶೆಟ್ಟಿ ನಿರ್ದೇಶನದ ತುಳು ಚಿತ್ರ ‘ಇಂಗ್ಲಿಷ್’ ಗೆ ಎರಡು, ಅವರದೇ ನಿರ್ದೇಶನದ ‘ನಾನ್ ವೆಜ್’ ಸಿನಿಮಾಕ್ಕೆ ಎಲ್ಲ ಹಾಡುಗಳು, ಬಿಡುಗಡೆಗೆ ಸಿದ್ಧವಿರುವ ಹೊಸ ತಂಡದ ಇನ್ನೂ ಹೆಸರಿಡದ ಚಿತ್ರಕ್ಕೆ ಐದು, ಸುನಿ ನಿರ್ದೇಶನದ ಮುಂದಿನ ಸಿನಿಮಾ ‘ಸಕ್ಕತ್’ ಗೆ ಒಂದು ಹಾಡು ಹೀಗೆ ಸುಮಾರು ಹತ್ತು ಸಿನೆಮಾಗಳ ಹಾಡುಗಳಿಗೆ ಸಾಹಿತ್ಯ ಹಾಗೂ ಕೆಲವು ಸಿನಿಮಾಗಳ ಸ್ಕ್ರಿಪ್ಟ್ ಕೆಲಸ ಹೀಗೆ ಸಾಲು ಸಾಲು ಚಿತ್ರಗಳು ಅರ್ಜುನ್ ಲೂಯಿಸ್ ಅವರ ಕೈಯಲ್ಲಿವೆ. ಸದಾ ಹೊಸತನದತ್ತ ತುಡಿಯುವ, ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂಬ ನಿಲುವಿನಲ್ಲಿ ದಾಪುಗಾಲು ಇಟ್ಟಿರುವ ಅರ್ಜುನ್ ಲೂಯಿಸ್ ಅವರ ಎಲ್ಲಾ ಆಸೆ ಈಡೇರಲಿ ಹಾಗೂ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಮುನ್ನುಗ್ಗಲಿ ಎಂದು ಆಶಿಸೋಣ.
ಲೇಖಕರು: ಸುಜಯ್ ಬೆದ್ರ