
ಸಿನಿಮಾ ಪ್ರಮೋಶನ್ ಹಲವು ರೂಪ ಪಡೆಯುತ್ತಿದೆ. ಅವುಗಳಲ್ಲೊಂದು ಕಿರುಚಿತ್ರದ ಮೂಲಕ ನೀಡಲಾಗುತ್ತಿರುವ ಪ್ರಚಾರ. ಬಹುಶಃ ಇಂಥದೊಂದು ಪ್ರಯತ್ನ ಕನ್ನಡದ ಮಟ್ಟಿಗೆ ಇದೇ ಪ್ರಥಮ ಎನ್ನಬಹುದು ಎನ್ನುತ್ತಾರೆ ನಿರ್ದೇಶಕ ಚಂದ್ರಮೌಳಿ. ಅವರು ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ‘ದಿಲ್ಮಾರ್’ ನ ಪ್ರಚಾರಕ್ಕಾಗಿ ‘ಫಾದರ್ಸ್ ಡೇ’ ಪ್ರಯುಕ್ತ ನಾಲ್ಕು ನಿಮಿಷದ ಕಿರುಚಿತ್ರ ಬಿಡುಗಡೆಗೊಳಿಸಿದ್ದಾರೆ. ‘ಅಪ್ಪ’ ಎನ್ನುವ ಆ ಚಂದ್ರಮೌಳಿ. ಅದರ ಹೆಸರು ‘ಅಪ್ಪ’ ಎನ್ನುವ ಆ ಚಿತ್ರದ ಬಗ್ಗೆ ಅವರು ಸಿನಿಕನ್ನಡ. ಕಾಮ್ ಜತೆಗೆ ವಿಶೇಷ ಮಾಹಿತಿ ನೀಡಿದ್ದಾರೆ.
‘ಅಪ್ಪ’ ಎನ್ನುವ ಅಪರೂಪದ ಪ್ರಯತ್ನ!
ಸಿನಿಮಾ ಬಿಡುಗಡೆಗೆ ಮೊದಲು ಟೀಸರ್, ಟ್ರೇಲರ್ ಬಿಡುಗಡೆ ಸಾಮಾನ್ಯ. ಆದರೆ ನಾಯಕನ ಸ್ನೇಹಿತ ಕುಮಾರ್ ಎನ್ನುವ ಪಾತ್ರಕ್ಕೆ ಸಂಬಂಧಿಸಿದಂತೆ, ಚಿತ್ರದಿಂದ ಆಚೆಗಿರುವ ಒಂದಷ್ಟು ಸನ್ನಿವೇಶವನ್ನು ಮತ್ತು ಅದರ ಮೂಲಕ ತಂದೆಗಿರುವ ಪ್ರಾಧಾನ್ಯತೆಯನ್ನು ತೋರಿಸಿದ್ದಾರೆ ನಿರ್ದೇಶಕ ಚಂದ್ರಮೌಳಿ. “ದಿಲ್ ಮಾರ್ ಚಿತ್ರದಲ್ಲಿ ಸ್ನೇಹಿತ ಪಾತ್ರಧಾರಿಯ ತಂದೆತಾಯಿಯನ್ನು ತೋರಿಸಿಲ್ಲ. ಆದರೆ ಈ ಕಿರುಚಿತ್ರದಲ್ಲಿ ತಂದೆಯಾಗಿ ನಟ ಸಂದೀಪ್ ಮಲಾನಿ ಮತ್ತು ತಾಯಿಯಾಗಿ ಮೋನಿಕಾ ಅಂದ್ರಾದೆ ಅಭಿನಯಿಸಿದ್ದಾರೆ” ಎನ್ನುತ್ತಾರೆ ಚಂದ್ರಮೌಳಿ. ಅವರಿಬ್ಬರ ಪ್ರೌಢ ನಟನೆ ಮತ್ತು ಛಾಯಾಗ್ರಹಣ ಚಿತ್ರಕ್ಕೆ ಮೆರುಗು ನೀಡಿದೆ. ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದು, ತನ್ವಿಕ್ ಅವರ ಛಾಯಾಗ್ರಹಣವಿದೆ. ನಾಲ್ಕೇ ನಿಮಿಷದ ಕಿರುಚಿತ್ರದಲ್ಲಿ ಕೂಡ ಸಂಭಾಷಣೆ ಮನಮುಟ್ಟುವಂತಿದೆ. ಅದಕ್ಕೆ ಕಾರಣ ಹುಡುಕಿದರೆ ಚಂದ್ರಮೌಳಿ ‘ಕೆಜಿಎಫ್’ ಎನ್ನುವ ಮಹಾಚಿತ್ರದ ಸಂಭಾಷಣಾಕಾರರಾಗಿ ಪ್ರಶಾಂತ್ ನೀಲ್ ಜತೆಗೆ ಕೆಲಸ ಮಾಡಿದ್ದಾರೆ ಎನ್ನುವ ಸತ್ಯ ಅರಿವಾಗುತ್ತದೆ!
“ತಾಯಿ ಪ್ರೀತಿ ನೀರು ಇದ್ದಂಗೆ, ಕಣ್ಣಿಗೆ ಕಾಣುತ್ತದೆ; ಸಾಗರದಷ್ಟು ಅಂತ ಲೆಕ್ಕ ಹೇಳಬಹುದು, ಆದ್ರೆ ತಂದೆ ಪ್ರೀತಿ ಗಾಳಿ ಇದ್ದಂಗೆ ಅದು ಕಣ್ಣಿಗೆ ಕಾಣೋದೂ ಇಲ್ಲ; ಲೆಕ್ಕ ಹಾಕಕ್ಕೂ ಬರಲ್ಲ..!” ಇಂಥ ಅದ್ಭುತ ಸಾಲುಗಳನ್ನು ಬರೆದು ಕಿರುಚಿತ್ರದಲ್ಲೇ ತಮ್ಮ ಸಂಭಾಷಣೆಯ ಜಲಕ್ ಹೇಗಿರುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರಮೌಳಿ.
‘ಅಪ್ಪ’ ಕಿರುಚಿತ್ರ ಬಿಡುಗಡೆಯ ಜತೆಯಲ್ಲೇ ದಾಖಲೆಯ ವ್ಯೂವ್ಸ್ ಪಡೆಯುತ್ತಾ ಮುಂದುವರಿದಿದೆ. ಅದೇ ವೇಳೆ ಚಂದ್ರಮೌಳಿಯವರ ‘ದಿಲ್ಮಾರ್’ ಸಿನಿಮಾದ ಕುರಿತು ಕುತೂಹಲವನ್ನೂ ಸೃಷ್ಟಿಸಿದೆ. ಚಿತ್ರದ ಮೂಲಕ ರಾಮ್ ಎನ್ನುವ ನವನಾಯಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಅದಿತಿ ಪ್ರಭುದೇವ ಹಾಗೂ ತೆಲುಗು ನಟಿ ಡಿಂಪಲ್ ಹಯತಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಚಿತ್ರದ ಶೂಟಿಂಗ್ ಈಗಾಗಲೇ ಎಂಬತ್ತು ಪರ್ಸೆಂಟ್ ಮುಗಿದಿದ್ದು ಚಿತ್ರಮಂದಿರದಲ್ಲೇ ಬಿಡುಗಡೆಗೊಳಿಸಬೇಕೆನ್ನುವ ಆಕಾಂಕ್ಷೆ ನಿರ್ದೇಶಕರದ್ದಾಗಿದೆ. ‘ಅರ್ಜುನ್ ರೆಡ್ಡಿ’ ಖ್ಯಾತಿಯ ರಾದನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ವಿಶೇಷ. ಕೆ ಮಹೇಶ್ ಮತ್ತು ನಾಗರಾಜ್ ಭದ್ರಾವತಿ ಬಂಡವಾಳ ಹೂಡಿದ್ದಾರೆ.
ಲೇಖಕರು: ಸುಜಯ್ ಬೆದ್ರ