ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಕೊಡುಗೆಯನ್ನು ನೀಡಿದವರು ಸುಬ್ಬಯ್ಯ ನಾಯ್ಡು. ಕನ್ನಡದ ಮೊದಲ ವಾಕ್ಚಿತ್ರವಾದ ಸತಿ ಸುಲೋಚನಾ'ಗೆ ನಾಯಕರಾದವರು ಅವರು. ಅವರ ಪುತ್ರ ಲೋಕೇಶ್ ಅವರಂತೂ ರಂಗಭೂಮಿ ಕಲಾವಿದರಾಗಿ, ಸಿನಿಮಾ ನಾಯಕನಾಗಿ, ಪೋಷಕನಾಗಿ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿದವರು. ಅವರ ಪುತ್ರ ಸೃಜನ್ ಲೋಕೇಶ್ ಸಿನಿಮಾ ನಟನಾಗಿ, ರಿಯಾಲಿಟಿ ಶೋಗಳ ನಿರ್ಮಾಪಕನಾಗಿ, ನಿರೂಪಕರಾಗಿ ಹೆಸರು ಮಾಡಿದ್ದಾರೆ. ಅವರ ಸಹೋದರಿ ಪೂಜಾ ಲೋಕೇಶ್ ಆರಂಭ ಕಾಲದಲ್ಲಿ ಕನ್ನಡ ಸಿನಿಮಾಗಳ ನಾಯಕಿಯಾಗಿ ಗುರುತಿಸಿಕೊಂಡವರು. ಬಳಿಕ ತಮಿಳು ಧಾರಾವಾಹಿಗಳಲ್ಲಿ ಖಳನಾಯಕಿದರು. ಪ್ರಸ್ತುತ
ಮಜಾ ಟಾಕೀಸ್’ ರಿಯಾಲಿಟಿ ಶೋನ ಕಾಸ್ಟ್ಯೂಮ್ ಡಿಸೈನರಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ 26ನೇ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡ ಪೂಜಾ ಲೋಕೇಶ್, ಅದುವರೆಗೆ ತಂದೆಯ ಪ್ರೀತಿಯಲ್ಲಿ ಬೆಳೆದ ಬಗೆಯನ್ನು ಸಿನಿಕನ್ನಡ.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ. ಇದು ಫಾದರ್ಸ್ ಡೇ ಪ್ರಯುಕ್ತ ಪೂಜಾ ಹಂಚಿಕೊಂಡ ವಿಶೇಷ ಮಾಹಿತಿ.
ಸೃಜನ್ ಮತ್ತು ನಿಮ್ಮ ನಡುವೆ ತಂದೆಗೆ ಯಾರಿಗೆ ಹೆಚ್ಚು ಪ್ರೀತಿ ತೋರಿದ್ದರು?
ಬಹುಶಃ ತಂದೆಯಾಗಿ ಇಬ್ಬರ ಮೇಲೆ ಸಮಾನವಾದ ಪ್ರೀತಿ ಇರಬಹುದೇನೋ. ಆದರೆ ಅವರು ಪ್ರೀತಿ ವ್ಯಕ್ತಪಡಿಸುತ್ತಿದ್ದುದೆಲ್ಲ ನನ್ನ ಮೇಲೆ. ಹಾಗಂತ ನಮ್ಮಮ್ಮ ನಮ್ಮಿಬ್ಬರಲ್ಲಿ ಯಾರನ್ನೇ ಬೈದರೂ ಅಮ್ಮನನ್ನೇ ಬೈಯ್ಯುತ್ತಿದ್ದರು ಅಪ್ಪ! ಯಾಕೆಂದರೆ ಅವರಿಗೆ ತಮ್ಮ ಮಕ್ಕಳನ್ನು ಅಮ್ಮನೂ ಸೇರಿದಂತೆ ಯಾರೂ ಏನೂ ಅನ್ನಬಾರದು! ನನ್ನ ಪಾಲಿಗಂತೂ ಅವರು ಓರ್ವ ತಂದೆ ಎನ್ನುವುದಕ್ಕಿಂತ ಒಬ್ಬ ಕ್ಲೋಸ್ ಫ್ರೆಂಡ್ ತರಹ ಇದ್ದರು. ಫ್ರೆಂಡ್ಸ್ ಜತೆಗೆ ಹೇಗೆ ಎಲ್ಲವನ್ನು ಹೇಳಿಕೊಳ್ಳುತ್ತೇವೆಯೋ ಅದೇ ರೀತಿ ತಂದೆಯೊಂದಿಗೆ ನಾನು ಎಲ್ಲವನ್ನು ಹಂಚಿಕೊಳ್ಳುವ ಅವಕಾಶವನ್ನು ಅವರು ನೀಡಿದ್ದರು. ಆದರೆ ಅಮ್ಮ ಸ್ವಲ್ಪ ಸ್ಟ್ರಿಕ್ಟ್ ಆಗಿದ್ದರು. ಅಪ್ಪ ಸಲುಗೆ ನೀಡಿದ್ದರೂ ಸಹ, ಮನೆಯ ಕೆಲಸವನ್ನು ಖುದ್ದಾಗಿ ಮಾಡಲು ಕಲಿಸಿದ್ದರು. ಅವರು ಅಂದು ನೀಡಿದ ಪ್ರೋತ್ಸಾಹ ಪ್ರಸ್ತುತ ಲಾಕ್ಡೌನ್ ದಿನಗಳಿಗೂ ಉಪಯುಕ್ತವಾಯಿತು.
ಲಾಕ್ಡೌನ್ ದಿನಗಳನ್ನು ಹೇಗೆ ಕಳೆದಿರಿ?
ಲಾಕ್ಡೌನಲ್ಲಿ ಯಾರ ಸಹಾಯವೂ ಇಂದಿಗೂ ನಾವು ಜೀವನ ನಡೆಸಬಲ್ಲೆವು ಎನ್ನುವುದನ್ನು ಸಾಬೀತು ಪಡಿಸಿದೆವು. ನಾನೇ ಅಡುಗೆ ಮಾಡುತ್ತಿದ್ದೆ. ನಿಜ ಹೇಳಬೇಕೆಂದರೆ ನನಗೆ ಅಡುಗೆಯ ಬೇಸಿಕ್ಸ್ ಕಲಿಸಿದ್ದೇ ಅಪ್ಪ. ಈ ದಿನಗಳಲ್ಲಿ ಬೆಳಿಗ್ಗೆಯಿಂದ ರಾತ್ರಿ ತನಕ ಅಡುಗೆ ಮನೇಲಿದ್ದೆ. ಸೃಜನ್ ಹೆಂಡತಿ ಗ್ರೀಷ್ಮಾ ಕ್ಲೀನ್ ಮಾಡುವುದು, ಮನೆಯ ಕೇರ್ ಟೇಕಿಂಗ್ ಕೆಲಸ ವಹಿಸಿಕೊಂಡಿದ್ದಳು. ಕಸಿನ್ ಇದ್ದವಳು ಹೊರಗಡೆ ಕೆಲಸ ಎಲ್ಲ ಅವಳದಾಗಿತ್ತು. ಎಲ್ಲರೂ ಹಂಚಿಕೊಂಡು ಕೆಲಸ ಮಾಡುತ್ತಿದ್ದರೆ ದಿನ ಹೋಗಿದ್ದೇ ಗೊತ್ತಾಗಲಿಲ್ಲ. ವೀಕೆಂಡ್ಸಲ್ಲಿ ಕಸಿನ್ಸ್ ಸೇರಿದಂತೆ ನಾಲ್ಕೈದು ಮಕ್ಕಳೆಲ್ಲ ಜತೆಗೂಡುತ್ತಿದ್ದರು. ಅವರಿಗೊಂದು ಟಾಸ್ಕ್ ಕೊಟ್ಟು ಟ್ಯಾಲೆಂಟ್ ಶೋ ಮಾಡಿಸುತ್ತಿದ್ದೆವು. ಶನಿವಾರದಂದು ಮನೆಯಲ್ಲಿ ಇರುವ ವಸ್ತುಗಳನ್ನೇ ಬಳಸಿ ಪಿಜ್ಜಾ ಮೊದಲಾದ ಹೊಸರುಚಿ ಮಾಡುತ್ತಿದ್ದೆವು. ಪ್ರತಿದಿನ ಸಂಜೆ ಐದರಿಂದ ಏಳೂವರೆ ತನಕ ಬಾಲ್ಕನಿಯಲ್ಲಿ ಕಂಪಲ್ಸರಿಯಾಗಿ ಎಲ್ಲರೂ ವರ್ಕೌಟ್ ಮಾಡುತ್ತಿದ್ದೆವು. ಭಾನುವಾರ ಇನ್ಡೋರ್ ಗೇಮ್ಸ್. ಬಹುಶಃ ನಮಗೆಲ್ಲ ಕುಟುಂಬದ ಜತೆಗೆ ಬೆರೆಯಲು ಇಷ್ಟೊಂದು ಅವಕಾಶ ಸಿಕ್ಕಿದ್ದು ಇದೇ ಮೊದಲು.
ನಿಮಗೆ ತಂದೆ ಯಾವ ವಿಚಾರಗಳಲ್ಲೆಲ್ಲ ಸ್ಫೂರ್ತಿಯಾಗಿದ್ದಾರೆ?
ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವ ಬಗ್ಗೆ, ಜೀವನ ಮೌಲ್ಯಗಳ ಬಗ್ಗೆ ತುಂಬ ಚೆನ್ನಾಗಿ ಕಲಿಸಿಕೊಡುತ್ತಿದ್ದರು. ನಾನು ಕಾರು ಬೇಕೆಂದು ಕೇಳಿದಾಗ ಪ್ರಯಾಣಕ್ಕೆ ಟು ವೀಲರ್ ಸಾಕಲ್ಲವೇ ಎಂದು ಕೇಳಿದ್ದರು. ಬಳಿಕ ಅವರು ನನ್ನ ಬರ್ತ್ ಡೇಗೆ ಕೊಡಿಸಿದ್ದು ಕೂಡ ಸೆಕೆಂಡ್ ಹ್ಯಾಂಡ್ ಫಿಯೆಟ್ ಕಾರು ಆಗಿತ್ತು! ಕಾರಣ ಹೊಸದನ್ನೇ ಕೊಡಿಸಿದರೂ ನಾನು ಎಲ್ಲಾದರೂ ಹೋಗಿ ಗುದ್ಕೊಂಡು ಬರ್ತೀನಿ ಎಂದಿದ್ದರು. ಅವರು ಹೇಳಿದಂತೆ ಗುದ್ಕೊಂಡು, ಬಿದ್ಕೊಂಡು ತೀರ ಇತ್ತೀಚಿನವರೆಗೆ ನಾನು ಆ ಕಾರನ್ನು ಬಳಸುತ್ತಿದ್ದೆ. ಅದು ನನ್ನ ತುಂಬ ಇಷ್ಟದ ಗಿಫ್ಟ್ ಆಗಿತ್ತು. ಬಳಿಕ ನಾನು ಸಂಪಾದಿಸಲು ಶುರು ಮಾಡಿದಾಗ ಮಾರುತಿ 800 ತೆಗೆದುಕೊಂಡೆ. ಈಗಲೂ ಕೂಡ ಯಾರಾದರೂ ಬಂದು “ನಾನು ಈ ಕಾರ್ ಗೆ ಇಷ್ಟು ಕೊಟ್ಟೆ” ಎಂದು ಹೇಳಬೇಕಾದರೆ, ಅಯ್ಯೋ ಅದರ ಬದಲು ಒಂದು ಮನೆಯನ್ನಾದರೂ ಕಟ್ಟಿಸಬಹುದಿತ್ತು ಎಂದು ಯೋಚಿಸುತ್ತೇನೆ. ಇಂದು ಮನೆಯಲ್ಲಿ ನಾಲ್ಕೈದು ಕಾರುಗಳಿದ್ದರೂ ಇರುವುದರಲ್ಲಿ ಚಿಕ್ಕ ಕಾರನ್ನೇ ಬಳಸುತ್ತೇನೆ. ಇದರ ನಡುವೆ ಆಟೋದಲ್ಲಿ, ಬಸ್ಸಲ್ಲಿಯೂ ಪ್ರಯಾಣಿಸುತ್ತೇನೆ. ಚೆನ್ನೈನಿಂದ ಬೆಂಗಳೂರಿಗೆ ಬಸ್ಸಲ್ಲೇ ಬರುತ್ತಿದ್ದೆ. ಯಾಕೆಂದರೆ ಬಸ್ಸು ಪ್ರಯಾಣ ಇಷ್ಟ. ಒಟ್ಟಿನಲ್ಲಿ ಇಂದಿಗೂ ಕೂಡ ಮಧ್ಯಮ ವರ್ಗದ ಮೈಂಡ್ ಸೆಟ್ಟಲ್ಲೇ ಇದ್ದೀನಿ. ಆದರೆ ಆ ಗ್ರೌಂಡೆಡ್ ನೇಚರ್ ಒಳ್ಳೆಯದು ಎಂದು ನನ್ನ ಭಾವನೆ. ಅಂದಹಾಗೆ ಕಾರಲ್ಲಿ ಲಾಂಗ್ ಡ್ರೈವ್ ಮಾಡುತ್ತೇನೆ. ಅದಕ್ಕೂ ಕೂಡ ತಂದೆಯೇ ಸ್ಫೂರ್ತಿ.
ಕಲಾವಿದೆಯಾಗಿ ನೀವು ಲೋಕೇಶ್ ಅವರಿಂದ ಕಲಿತಿರುವುದೇನು?
ಪ್ರತಿಯೊಂದನ್ನು ಅವರಿಂದಲೇ ಕಲಿತೆ. ಕಲಾವಿದೆಗೆ ಬೇಕಾದ ಶಿಸ್ತು, ಸಮಯ ಪಾಲನೆಯಿಂದ ಹಿಡಿದು, ಸ್ವತಃ ಮೇಕಪ್ ಮಾಡಿಕೊಳ್ಳುವ ಬಗ್ಗೆ, ವಾಯ್ಸ್ ಮಾಡ್ಯುಲೇಶನ್ ಬಗ್ಗೆ ಹೀಗೆ ಎಲ್ಲವನ್ನು ಹೇಳಿಕೊಟ್ಟಂಥ ಗುರು ಅವರು. ಒಮ್ಮೆ ಮುಂಬೈಗೆ ತಂದೆಯ ಜತೆಗೆ ಒಂದು ಡ್ರಾಮ ಫೆಸ್ಟಿವಲ್‌ಗೆ ಹೋಗಿದ್ದೆ. ಅವರು ನಟಿಸಲಿದ್ದಶೆರ್ಲಾಕ್' ನಾಟಕದಲ್ಲಿ ಒಂದು ಸಣ್ಣ ಪಾತ್ರ ಮಾಡುವವರಿಗೆ ಫುಡ್ ಪಾಯ್ಸನಿಂಗ್ ಆಗಿತ್ತು. ಆಗ ತಕ್ಷಣ ಆ ಪಾತ್ರವನ್ನು ನನ್ನಲ್ಲಿ ಟ್ರೈ ಮಾಡುವಂತೆ ಹೇಳಿದರು. ಹಾಗೆ ಮೊದಲ ಬಾರಿಗೆ ಅವರೊಂದಿಗೆ ವೇದಿಕೆ ಏರುವ ಅವಕಾಶವಾಯಿತು. ಅದರ ಬಳಿಕ ನಟರಂಗದಲ್ಲಿ ಅಪ್ಪನದೇ ನಿರ್ದೇಶನದ
ಕಾಕನ ಕೋಟೆ’ಯಲ್ಲಿಯೂ ನಟಿಸಿದ್ದೆ. ಅಪ್ಪ ಕಾಕ ಮಾಡಿದ್ದರೆ ನಾನು ಅವರ ಪುತ್ರಿ ಮೊಲ್ಲೆಯ ಪಾತ್ರ ಮಾಡಿದ್ದೆ. ನನಗೆ ಕಣ್ಣಲ್ಲೇ ನಟಿಸಲು ಹೇಳುತ್ತಿದ್ದರು. ಅದು ಹೇಗೆ ಎಂದು ಅರ್ಥಮಾಡಿಕೊಳ್ಳಲು ತುಂಬ ಸಮಯ ಹಿಡಿಯಿತು! ಆಮೇಲೆ ಮಗಳ ಪಾತ್ರವನ್ನು ಅಮ್ಮನೇ (ಗಿರಿಜಾ ಲೋಕೇಶ್) ಮಾಡಿದ್ದರು!
ನಿಮ್ಮನ್ನು ಅಪ್ಪ ಫೂಲ್ ಮಾಡಿದಂಥ ತಮಾಷೆಯ ಘಟನೆಗಳೇನಾದರೂ ಇವೆಯೇ?
ಚಿಕ್ಕ ವಯಸ್ಸಲ್ಲಿ ಹಲ್ಲು ಹೋಗಿದ್ದಾಗ ನಾನು ಬಾಯಿಯೇ ತೆಗೆಯುತ್ತಿರಲಿಲ್ಲ. ಆದರೆ ಅಪ್ಪ ಆ ನೆನಪು ಉಳಿಸಿಕೊಳ್ಳಲು ಫೊಟೊ ತೆಗೆಯಬಯಸಿದ್ದರು. ನನ್ನನ್ನು ಒಪ್ಪಿಸಲಿಕ್ಕಾಗಿ ಬಾಯ್ತೆರೆದು ನಕ್ಕ ಫೊಟೋ ಇದ್ದರಷ್ಟೇ ಪಾಸ್ಪೋರ್ಟ್ ಆಫೀಸಲ್ಲಿ ಒಪ್ಪುತ್ತಾರೆ ಎಂದಿದ್ದರು. ಹಾಗೆ ಅವರು ತೆಗೆದ ಫೊಟೋ ಈಗಲೂ ನನ್ನ ಬಳಿ ಇದೆ. ಅಪ್ಪ ಕ್ಷಮಾ' ಎನ್ನುವ ಧಾರಾವಾಹಿ ನಿರ್ದೇಶಿಸಿದ್ದರು. ಅದಕ್ಕೆ ನಾನೇ ಅಸೋಸಿಯೇಟಾಗಿದ್ದೆ. ಸಂಭಾಷಣೆ ಎಲ್ಲ ನಾನೇ ಬರೆದಿದ್ದೆ. ಅಪ್ಪನಿಗೆ ನನ್ನಿಂದ ಹೇಗೆ ಕೆಲಸ ತೆಗೆಸಬೇಕು ಎಂದು ಚೆನ್ನಾಗಿ ಗೊತ್ತಿತ್ತು. ತಮಿಳು ಧಾರಾವಾಹಿಯಲ್ಲಿ ನಟಿಸಲೆಂದು ಹೋಗಿ ಮೊದಲ ದಿನವೇ ನನಗಿದು ಬೇಡ ಅನಿಸಿ ಮನೆಗೆ ಫೋನ್ ಮಾಡಿದ್ದೆ. ಅದಕ್ಕೆ ಅವರು "ಸರಿ ನಿನಗೆ ಆಗಲ್ವಾ? ಹಾಗಿದ್ದರೆ ಬಾ. ಬೇರೆ ಯಾರಾದರೂ ಮಾಡ್ತಾರೆ" ಎಂದಿದ್ದರು. ಅವರು ಕೂಲಾಗೇ ಹೇಳಿದ್ದರೂ
ನಿನ್ನಿಂದ ಆಗಲ್ಲ’ ಎನ್ನುವ ಮಾತಿನ ಮೂಲಕ ನನ್ನ ಈಗೋಗೆ ಬೇಕೆಂದೇ ಹರ್ಟ್ ಮಾಡಿದ್ದರು. ನನಗೀಗ ತಮಿಳು ಧಾರಾವಾಹಿಯಲ್ಲಿ ಸಿಕ್ಕ ಯಶಸ್ಸು ಚೆನ್ನೈ ಮೊದಲ ಮನೆಯೆಂಬಂತೆ ಮಾಡಿದೆ. ಇಂದು ನಾವೆಲ್ಲ ಅವರನ್ನು ಪ್ರತಿ ಸೆಕೆಂಡಲ್ಲಿಯೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರು ಇದ್ದಿದ್ದರೆ ಮಕ್ಕಳ ಬೆಳವಣಿಗೆ, ಮೊಮ್ಮಕ್ಕಳ ಆಟ ಎಲ್ಲವನ್ನು ಎಂಜಾಯ್ ಮಾಡುತ್ತಿದ್ದರು. ಸೃಜನ್ ಮಕ್ಕಳು ಬಂದ ಮೇಲಂತು ತುಂಬ ಅಂದ್ಕೋತೀವೀ. ಎರಡನೆಯವನಂತೂ ನಮ್ಮ ಅಪ್ಪನ ಪಡಿಯಚ್ಚೇ ಆಗಿದ್ದಾನೆ. ಆತನನ್ನು `ಬಿಳಿ ಲೋಕೇಶ್’ ಅಂತಾನೇಕರೀತೀವಿ ನಾವು. ಹಾಗಾಗಿ ಪ್ರತಿಯೊಂದು ಕ್ಷಣವೂ ಅವರಿರುವ ಫೀಲ್ ಇರುತ್ತದೆ.