
ಸಿಂಪಲ್ ಸುನಿ ಇಂದು ತಮ್ಮ ಫೇಸ್ಬುಕ್ ವಾಲ್ ನಲ್ಲಿ ‘ದಿ ಸ್ಟೋರಿ ಆಫ್ ರಾಯಗಢ’ ಎಂಬ ಶೀರ್ಷಿಕೆಯುಳ್ಳ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ನಾಯಕ, ನಾಯಕಿ, ಚಿತ್ರ ತಂಡ ಯಾವುದರ ಬಗ್ಗೆಯೂ ಮಾಹಿತಿ ಇಲ್ಲದ ಪೋಸ್ಟರ್ ಸಕ್ಕತ್ ವೈರಲ್ ಆಗಿದೆ. ಪೋಸ್ಟರ್ ಬಗ್ಗೆ ಸುನಿ ಸಿನಿಕನ್ನಡ.ಕಾಮ್ ಗೆ ಎಕ್ಸ್ ಕ್ಲೂಸಿವ್ ಮಾಹಿತಿ ನೀಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸುನಿ ಕಾಂಬಿನೇಶನ್ನಲ್ಲಿ ಮತ್ತೊಂದು ಹೊಸ ಚಿತ್ರ ಮಾಡಲಿದ್ದಾರೆ ಎನ್ನುವುದು ವರ್ಷಾರಂಭದಲ್ಲೇ ಸುದ್ದಿಯಾಗಿತ್ತು. ಆದರೆ ಇಂದು ಚಿತ್ರದ ಪೋಸ್ಟರ್ ಬಿಡುಗಡೆಯ ಮೂಲಕ ಸುದ್ದಿಯನ್ನು ಅಧಿಕೃತಗೊಳಿಸಿದ್ದಾರೆ ಸುನಿ.
‘ಚಮಕ್’ ಬಳಿಕ ‘ಸಕತ್’ ಎನ್ನುವ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸುನಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಮೂರನೇ ಚಿತ್ರವನ್ನು ನಿರ್ದೇಶಿಸುವುದಾಗಿ ಅನೌನ್ಸ್ ಮಾಡಿದ್ದಾರೆ.
‘ಚಮಕ್’ ಸಿನಿಮಾದಲ್ಲಿ ಗಣೇಶ್ ರನ್ನು ಲವರ್ ಬಾಯ್ ನಂತೆ ತೋರಿಸಿದ್ದ ‘ಸುನಿ’ ಗಣೇಶ್ ಗೆ ಒಂದು ಯಶಸ್ವಿ ಚಿತ್ರ ನೀಡಿದ್ದರು. ಈಗ ಒಂದು ಪಕ್ಕ ಮಾಸ್ ಮತ್ತು ರಾ ಶೈಲಿಯ ಕತೆ ಮಾಡಿಕೊಂಡಿದ್ದಾರೆ. ಅದುವೇ ‘ದ ಸ್ಟೋರಿ ಆಫ್ ರಾಯಗಢ.’ ಸಂಪೂರ್ಣವಾಗಿ ಉತ್ತರ ಕರ್ನಾಟಕ ಭಾಗದ ಕಥಾ ಹಂದರ ಈ ಸಿನಿಮಾದಲ್ಲಿ ಇರಲಿದ್ದು ಸದ್ಯ ಒನ್ ಲೈನ್ ಅಷ್ಟೇ ರೆಡಿ ಆಗಿದೆಯಂತೆ.
ಈ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುನಿ ‘ಶರಣ್ ಅವರ ಅಭಿನಯದ ‘ಅವತಾರ್ ಪುರುಷ’ ಸಿನಿಮಾ ಕೊನೆ ಹಂತದಲ್ಲಿದ್ದು, ಅದರ ಬಿಡುಗಡೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದೇನೆ. ಆನಂತರ ನನ್ನ ಮತ್ತು ಗಣೇಶ್ ಅವರ ಕಾಂಬಿನೇಷನ್ ನಲ್ಲೇ ‘ಸಕ್ಕತ್’ ಸಿನಿಮಾ ಸೆಟ್ಟೇರಲಿದೆ. ಇವೆರಡೂ ಚಿತ್ರ ಮುಗಿದ ಮೇಲಷ್ಟೇ ‘ದ ಸ್ಟೋರಿ ಆಫ್ ರಾಯಗಢ’ ಕೈಗೆತ್ತಿಕೊಳ್ಳುತ್ತೇನೆ. ಸ್ಕ್ರಿಪ್ಟ್ ಕೆಲಸ, ನಾಯಕಿ, ತಾಂತ್ರಿಕ ವರ್ಗ ಮತ್ತು ಇತರ ಪಾತ್ರಗಳ ಅನ್ವೇಷಣೆ ಇನ್ನಷ್ಟೇ ಆಗಬೇಕಿದೆ’ ಎಂದು ಮಾಹಿತಿ ನೀಡಿದರು.

ಅಂದಹಾಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬಕ್ಕೆ ‘ದ ಸ್ಟೋರಿ ಆಫ್ ರಾಯಗಢ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜುಲೈ 2 ರಂದು ಬಿಡುಗಡೆಯಾಗಲಿದೆ.
ಲೇಖಕರು: ಸುಜಯ್ ಬೆದ್ರ