ಚಿಕ್ಕಂದಿನಲ್ಲೇ ನನಗೆ ಸೆಲೆಬ್ರಿಟಿಯಾಗುವ ಆಸೆ. ಸಾಮಾನ್ಯವಾಗಿ ಮಕ್ಕಳಾಸೆಗಳು ಬೆಳೆಯುತ್ತಿದ್ದಂತೆ ಬದಲಾಗುತ್ತವೆ. ಆದರೆ ಕುಂದನಾ ವಿಚಾರ ಹಾಗಲ್ಲ. ತನ್ನ ಅಂದಿನ ಆಸೆಯನ್ನು ನಿಜಗೊಳಿಸುವ ಹಂತ ಸೇರಿದ್ದಾರೆ. ಶಾಲಾ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಕುಂದನಾ ಅದರಲ್ಲಿ ಗೆಲುವನ್ನು ಕಾಣುತ್ತಿದ್ದರು. ಇದೀಗ `ಪಂಖುರಿ’ ಎನ್ನುವ ಚಿತ್ರಕ್ಕೆ ನಾಯಕಿಯಾಗಿ ಚಿತ್ರರಸಿಕರ ಮನಗೆಲ್ಲಲು ಮುಂದಾಗಿದ್ದಾರೆ.
ಸಿಗುತ್ತಿದೆ ಬ್ಯಾಕ್ ಟು ಬ್ಯಾಕ್ ಅವಕಾಶ!
ಕುಂದನಾ ಮೂಲತಃ ಆಂಧ್ರದವರು. ವರ್ಷಗಳಿಂದ ಬೆಂಗಳೂರಲ್ಲೇ ನೆಲೆಸಿದ್ದು, ಸ್ಪಷ್ಟವಾಗಿ ಕನ್ನಡ ಮಾತನಾಡುವ ಮೂಲಕ ಕನ್ನಡತಿಯೇ ಆಗಿದ್ದಾರೆ.
ಇ ಕಾಮರ್ಸ್ ನಲ್ಲಿ ಪೋಸ್ಟ್ ಗ್ರಾಜುಯೇಶನ್ ಮಾಡಿರುವ ಇವರು, ಎಂಎನ್ ಸಿ ಸಂಸ್ಥೆಯೊಂದರಲ್ಲಿ ಸೀನಿಯರ್ ಸೇಲ್ಸ್ ಕೋ ಆರ್ಡಿನೇಟರಾಗಿ ವೃತ್ತಿಯಲ್ಲಿದ್ದಾರೆ. ಆದರೆ ಚಿತ್ರರಂಗದ ಮೇಲಿರುವ ಆಸಕ್ತಿ ಜತೆಯಲ್ಲೇ ಇತ್ತು. ಬೆಂಗಳೂರಿನಂಥ ಮಹಾನಗರದಲ್ಲಿದ್ದರೂ, ಪಕ್ಕದ್ಮನೆ ಹುಡುಗಿ ಆತ್ಮೀಯತೆ ನೀಡಬಲ್ಲ ಇವರ ಮುಖಭಾವ. ಅಂಥದೊಂದು ಪಾತ್ರಕ್ಕಾಗಿ ಹುಡುಕುತ್ತಿದ್ದ ನಿರ್ದೇಶಕ ದೋಸ್ತಿ ವಿ ಆನಂದ್ ಕಣ್ಣಿಗೆ ಬಿದ್ದ ಕುಂದನಾಗೆ ಪಂಖುರಿ' ಚಿತ್ರದೊಳಗೆ ಸುಲಭವಾದ ಎಂಟ್ರಿ ಸಿಕ್ಕಿದೆ. ಆದರೆ ಇದು ಚಿತ್ರರಂಗದೊಳಗಿನ ಎಂಟ್ರಿಯಾಗಿ ಇಲ್ಲಿಯೇ ನೆಲೆಯಾಗುವ ಕನಸು ಈ ಕಲಾಪ್ರಿಯೆಗೆ. ಅಂದಹಾಗೆ ಪಂಖುರಿಯಲ್ಲಿ ನಟಿಸುತ್ತಿರುವ ಹಾಗೆ ಇನ್ನೆರಡು ಚಿತ್ರಗಳಿಗೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಅವುಗಳಲ್ಲಿ ಒಂದು ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರು ಜತೆಗೆ ನಟಿಸಿರುವ
ಒಂದು ದಿನ ಒಂದು ಕ್ಷಣ’ ಎನ್ನುವ ಚಿತ್ರ. ಮತ್ತೊಂದು ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.
ಅಭಿನಯ ಪ್ರಧಾನ ಪಾತ್ರಗಳಲ್ಲಿ ಆಸಕ್ತಿ
ಅಂದಹಾಗೆ ಕುಂದನಾಗೆ ಸಿನಿಮಾರಂಗದ ಯಾವುದೇ ನಂಟುಗಳಿಲ್ಲ. ಆದರೆ ಅಭಿಮಾನದ ತಾರೆಯರಿದ್ದಾರೆ. ಹಿರಿಯ ನಟಿ ಲಕ್ಷ್ಮಿಯವರಿಂದ ಹಿಡಿದು ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ತನಕ ಒಂದಷ್ಟು ನಟಿಯರ ಅಭಿನಯಕ್ಕೆ ಇವರು ಫ್ಯಾನ್ ಆಗಿದ್ದಾರೆ. ಆಪ್ತಮಿತ್ರ',
ಶ್ರೀ ಮಂಜುನಾಥ’ ಚಿತ್ರಗಳಲ್ಲಿನ ಸೌಂದರ್ಯ ಅವರ ನಟನೆಯನ್ನು ಬಹುವಾಗಿ ಮೆಚ್ಚುವ ಕುಂದನಾಗೆ ಅಂಥ ಪಾತ್ರಗಳನ್ನು ತಮಗೂ ಮಾಡುವ ಆಸೆ ಇದೆ. “ಸೌಂದರ್ಯ ಅವರ ಅಭಿನಯ ಮುಖದಲ್ಲೇ ಕಾಣುತ್ತಿತ್ತು. ಹಾಗೆಯೇ ನನಗೆ ಡೇರಿಂಗ್ ಡ್ಯಾಶಿಂಗ್ ಆಗಿರುವಂಥ ಪಾತ್ರಗಳನ್ನು ಮಾಡುವ ಆಸೆ ಇದೆ” ಎನ್ನುವ ಕುಂದನಾ, “ಹಾಗಂತ ಡೇರಿಂಗ್ ಅಂದರೆ ಎಕ್ಸ್‌ಪೋಸ್ ಮಾಡಲು ತಯಾರಿದ್ದೇನೆ ಎಂದು ಅರ್ಥ ಅಲ್ಲ” ಎನ್ನುವುದನ್ನು ಸ್ಪಷ್ಟ ಪಡಿಸುವ ಮೂಲಕ ಬುದ್ಧಿವಂತೆಯಾಗುತ್ತಾರೆ. ಒಟ್ಟಿನಲ್ಲಿ ಪಕ್ಕದ್ಮನೆ ಹುಡುಗಿಯಾಗಿ, ಲವ್ ಸ್ಟೋರಿ ಸಿನಿಮಾಗಳಲ್ಲಿ ಮಾತ್ರವಲ್ಲ, ಪೊಲೀಸ್ ಅಧಿಕಾರಿಯಂಥ ಪಾತ್ರಗಳನ್ನು ಮಾಡಲು ಸಿದ್ಧವಿರುವ ಸೂಚನೆಯನ್ನು ಅವರು ನೀಡುತ್ತಾರೆ.
`ಪಂಖುರಿ’ಯಲ್ಲಿ ಶಾರದಾ
ಕುಂದನಾಗೆ ನಟನೆಯ ಜತೆಗೆ ನೃತ್ಯದಲ್ಲಿಯೂ ಆಸಕ್ತಿ. ಶಾಸ್ತ್ರೀಯವಾಗಿ ಅಭ್ಯಾಸ ಮಾಡಿಲ್ಲವಾದರೂ ಕಾಲೇಜ್ ದಿನಗಳಿಂದ ಹಿಡಿದು ಪ್ರಸ್ತುತ ತಾವು ವೃತ್ತಿಯಲ್ಲಿರುವ ಸಂಸ್ಥೆಯ ವಾರ್ಷಿಕೋತ್ಸವದಲ್ಲಿಯೂ ಡಾನ್ಸ್ ಮಾಡುತ್ತಾರೆ. ಬಹುಶಃ ಇವರ ದೇಹದ ಫ್ಲೆಕ್ಸಿಬಿಲಿಟಿಗೆ ಅದೂ ಒಂದು ಕಾರಣ ಇರಬಹುದು. ಜತೆಗೆ ನಿತ್ಯ ಯೋಗಾಭ್ಯಾಸ ಮಾಡುತ್ತಾರೆ. ವಾಕಿಂಗ್, ಸೈಕ್ಲಿಂಗ್ ಅಭ್ಯಾಸಗಳೂ ಇವೆ. ಹಾಗಾಗಿ ಅಂಗಸೌಷ್ಠವದ ಬಗ್ಗೆ ವಿವರಿಸಬೇಕಿಲ್ಲವಲ್ಲ?
ಪ್ರಸ್ತುತ ಕುಂದನಾ ನಾಯಕಿಯಾಗಿರುವ ಪಂಖುರಿ' ಮಹಿಳಾ ದೌರ್ಜನ್ಯದ ವಿರುದ್ಧದ ಕತೆ ಹೊಂದಿದೆ. ಚಿತ್ರದಲ್ಲಿ ಒಂಟಿಯಾಗಿರುವ ಹೆಣ್ಣಿಗೆ ಸಮಾಜದಿಂದ ಎದುರಾಗುವ ಸಮಸ್ಯೆಗಳೇನು ಎನ್ನುವುದನ್ನು ತೋರಿಸಲಾಗಿದೆ. "ಚಿತ್ರದಲ್ಲಿ ನನ್ನ ಜತೆ ಶಶಿಶೇಖರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಶಾರದಾ ಎನ್ನುವುದು ನನ್ನ ಪಾತ್ರದ ಹೆಸರು. ನಿರೀಕ್ಷೆಯಂತೆ ನಟನೆಗೆ ಉತ್ತಮ ಅವಕಾಶ ದೊರಕಿದೆ. ನಿಜಹೇಳಬೇಕೆಂದರೆ, ನನ್ನ ಪೂರ್ತಿ ಹೆಸರು ಕುಂದನಾ ಶಾರದಾ ರೆಡ್ಡಿ
ಎಂದೇ ಆಗಿತ್ತು. ಸಿನಿಮಾರಂಗಕ್ಕಾಗಿ ‘ಕುಂದನಾ’ ಎಂದಷ್ಟೇ ಇರಿಸಿಕೊಂಡಿದ್ದೇನೆ. ಪ್ರಕೃತಿ ಪಿಕ್ಚರ್ಸ್' ಬ್ಯಾನರ್ ನಲ್ಲಿ '
ನಮ್ಮ ಸೂಪರ್ ಸ್ಟಾರ್’ ಅಫ್ಜಲ್ ಅವರ ಸಹಯೋಗದೊಂದಿಗೆ ಸಿನಿಮಾ ನಿರ್ಮಾಣದಲ್ಲಿಯೂ ಭಾಗಿಯಾಗಿದ್ದೇನೆ” ಎನ್ನುವ ಕುಂದನಾರಿಗೆ ಚಂದನವನದಲ್ಲಿ ಉತ್ತಮ ಅವಕಾಶಗಳು ಲಭಿಸುವಂತಾಗಲಿ.