‘ಉಳಿದವರು ಕಂಡಂತೆ’ ಚಿತ್ರದ ಮೂಲಕ ಕನ್ನಡ ಸಿನಿಮಾ ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದವರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಅವರು ಹಾಡಿನ ಸಂಗೀತದ ಜತೆಗೆ ಹಿನ್ನೆಲೆ ಸಂಗೀತದಲ್ಲೂ ತಮ್ಮದೇ ಆದ ಗುರುತು ಮೂಡಿಸಿದವರು. ಅನೂಪ್ ಭಂಡಾರಿ ನಿರ್ದೇಶನದ ‘ರಂಗಿತರಂಗ’ ಮತ್ತು ‘ರಾಜರಥ’ ಸಿನಿಮಾದ ಹಿನ್ನೆಲೆ ಸಂಗೀತದ ಹೊಣೆ ಹೊತ್ತಿದ್ದ ಅಜನೀಶ್ ಲೋಕನಾಥ್ ಈಗ ಅವರದೇ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ‘ಫ್ಯಾಂಟಮ್’ ಗೆ ಕೂಡ ಸಂಗೀತ ನೀಡುತ್ತಿದ್ದಾರೆ.
ಚಿತ್ರದ ಸಂಗೀತದ ಬಗ್ಗೆ ಸಿನಿಕನ್ನಡ.ಕಾಮ್ ನೊಂದಿಗೆ ವಿಶೇಷ ಮಾಹಿತಿ ನೀಡಿದ್ದಾರೆ.
‘ಫ್ಯಾಂಟಮ್’ ಚಿತ್ರಕ್ಕೆ ನಿಮ್ಮದೇ ಸಂಗೀತ ಎಂದು ಹೇಗೆ ನಿರ್ಧಾರವಾಯಿತು?
‘ರಂಗಿತರಂಗ’ ಚಿತ್ರದ ಸಮಯದಿಂದಲೂ ಅನೂಪ್ ನನಗೆ ಒಳ್ಳೆಯ ಪರಿಚಯ, ಅವರ ನಿರ್ದೇಶನದಲ್ಲಿ ಹೊರ ಬಂದ ‘ರಂಗಿತರಂಗ’ ಹಾಗೂ ‘ರಾಜರಥ’ ಚಿತ್ರಗಳಿಗೆ ಹಿನ್ನಲೆ ಸಂಗೀತದ ಜವಾಬ್ದಾರಿ ನನ್ನದೇ ಆಗಿತ್ತು. ಸಮಯ ಸಿಕ್ಕಾಗೆಲ್ಲಾ ”ಏನ್ ಸಾರ್ ಬರೀ ಹಿನ್ನೆಲೆ ಸಂಗೀತ ಮಾತ್ರ ಮಾಡಿಸ್ತೀರಿ, ಸಂಗೀತ ಮಾಡೋಕೆ ಯಾವಾಗ ಅವಕಾಶ ಕೊಡ್ತೀರಿ” ಅಂತ ರೇಗಿಸುತ್ತಿದ್ದೆ. ಆಗ ಅವರು ”ಮೊದಲೆರಡು ಸಿನಿಮಾ ನಾನೇ ಸಂಗೀತ ಮಾಡ್ತೀನಿ ಮೂರನೆಯ ಸಿನಿಮಾಗೆ ನಿಮ್ಮದೇ ಸಂಗೀತ” ಎನ್ನುತ್ತಿದ್ದರು. ದೇವರ ದಯೆಯಿಂದ ಅವರ ಮಾತು ಇವತ್ತು ನಿಜ ಆಗಿದೆ. ಒಂದು ದಿನ ಅನೂಪ್ ಅವರು ಕರೆ ಮಾಡಿ ‘ಅಜನೀಶ್ ನನ್ನ ಮುಂದಿನ ಸಿನಿಮಾಗೆ ನಿಮ್ಮದೇ ಸಂಗೀತ. ಜಾಕ್ ಮಂಜು ನಿರ್ಮಾಣ ಮಾಡ್ತಾ ಇದ್ದಾರೆ. ಕಿಚ್ಚ ಸುದೀಪ್ ಹೀರೋ’ ಅಂದರು. ಸುದೀಪ್ ಸರ್ ಸಿನಿಮಾಕ್ಕೆ ಸಂಗೀತ ಮಾಡೋದು ನನ್ನ ಬಹಳ ವರ್ಷಗಳ ಕನಸಾಗಿತ್ತು, ಆ ಕನಸು ಇಂದು ನನಸಾಗುತ್ತಿದೆ ಎಂಬ ಖುಷಿಯಿದೆ.
‘ಫ್ಯಾಂಟಮ್’ ಚಿತ್ರದಲ್ಲಿ ಎಷ್ಟು ಹಾಡುಗಳು ಇರಲಿವೆ?
ಮೂರು ತಿಂಗಳ ಹಿಂದೆಯೇ ಕೆಲಸ ಶುರು ಮಾಡಿದ್ದೇನೆ. ಮೊನ್ನೆ ಅಧಿಕೃತವಾಗಿ ಹೇಳಿಕೆ ಕೊಟ್ಟದಷ್ಟೇ. ಚಿತ್ರದಲ್ಲಿ ಐದು ಹಾಡುಗಳು ಮತ್ತು ನಾಲ್ಕರಿಂದ ಐದು ಥೀಮ್ ಸಾಂಗ್ ಇರಲಿವೆ. ಮೂರು ಹಾಡುಗಳ ಕೆಲಸ ಸಂಪೂರ್ಣವಾಗಿ ಮುಗಿದಿದೆ, ಇನ್ನೆರಡು ಹಾಡುಗಳ ಸಂಯೋಜನೆ ಮುಗಿದಿದ್ದು ಸಾಹಿತ್ಯವನ್ನು ಕೂಡಿಸುವ ಕೆಲಸವಷ್ಟೇ ಬಾಕಿಯಿದೆ. ಅಂದಹಾಗೆ ಅನೂಪ್ ಸ್ವತಃ ತಾವೇ ಸಂಗೀತ ನಿರ್ದೇಶಕರಾಗಿರುವ ಕಾರಣ ನನ್ನ ಕೆಲಸ ತುಂಬಾ ಸರಳವಾಗಿದೆ.
‘ಕಿಚ್ಚ ಸುದೀಪ್’ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಸುದೀಪ್ ಸರ್ ನನಗೆ ‘ಉಳಿದವರು ಕಂಡಂತೆ’ ಚಿತ್ರ ಬಿಡುಗಡೆಯಾದ ಸಮಯದಿಂದಲೂ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಜೊತೆಗೆ ನನ್ನ ಹಲವಾರು ಸಿನಿಮಾಗಳ ಬಗ್ಗೆ ಸ್ವತಃ ತಾವೇ ಟ್ವೀಟ್ ಸಹ ಮಾಡಿ ಹುರಿದುಂಬಿಸುತ್ತಿದರು. ಅದೂ ಅಲ್ಲದೆ ರಕ್ಷಿತ್ ಶೆಟ್ಟಿ ನಿರ್ದೇಶಿಸಬೇಕಾಗಿದ್ದ ‘ಥ ಗ್ಸ್ ಆಫ್ ಮಾಲ್ಗುಡಿ’ ಚಿತ್ರಕ್ಕಾಗಿ ಸಂಯೋಜಿಸಿದ್ದ ಕೆಲವು ಥೀಮ್ ಮೂಸಿಕ್ ಕೇಳಿಸಿದ್ದೆ ಆಗ ತುಂಬಾನೇ ಥ್ರಿಲ್ ಆಗಿದ್ದರು. ‘ಫ್ಯಾಂಟಮ್’ ಚಿತ್ರದ ವಿಷಯಕ್ಕೆ ಬಂದರೆ ಕೆಲವು ಹಾಡುಗಳನ್ನು ಸಂಯೋಜಿಸಿ ಅವರಿಗೆ ಕೇಳಿಸಿದಾಗ ಕೆಲವು ಸಲಹೆ ಸೂಚನೆ ಕೊಟ್ಟದ್ದೂ ಉಂಟು, ಅವರೊಂದು ಉತ್ಸಾಹದ ಚಿಲುಮೆ, ತುಂಬಾ ವಿಷಯಗಳಲ್ಲಿ ನನಗೆ ಸ್ಪೂರ್ತಿ.
ಬೇರೆ ಯಾವ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದೀರಿ?
‘ಬೆಲ್ ಬಾಟಮ್’ ಖ್ಯಾತಿಯ ನಿರ್ದೇಶಕ ಜಯತೀರ್ಥ ನಿರ್ದೇಶನದ ‘ಬನಾರಸ್’ ಎಂಬ ಹೊಸ ಚಿತ್ರಕ್ಕೆ ನಾನೇ ಸಂಗೀತ ನಿರ್ದೇಶಕ. ಗಿರಿ ಕೃಷ್ಣ ನಿರ್ದೇಶನದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿರುವ ಹೊಸ ಚಿತ್ರ ‘ಹರಿ ಕಥೆ ಅಲ್ಲ ಗಿರಿ ಕಥೆ’ ಸಿನಿಮಾಕ್ಕೂ ಸಹ ನನ್ನದೇ ಸಂಗೀತ ಸಂಯೋಜನೆ ಇರಲಿದೆ
ಸಂದರ್ಶಕ: ಸುಜಯ್ ಬೆದ್ರ