ಬಾಲಿವುಡ್ ನ ಜನಪ್ರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್(71) ಇಂದು ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸರೋಜ್ ಖಾನ್ ಅವರು ಗುರುವಾರ ತಡರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 1972 ರಲ್ಲಿ ನೃತ್ಯ ಸಂಯೋಜಕಿಯಾಗಿ ಪರಿಚಿತರಾದ ಅವರು ಸಾವಿರಾರು ಗೀತೆಗಳಿಗೆ ಕೊರಿಯೋಗ್ರಫಿ ಮಾಡಿದ್ದು, 3 ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸರೋಜ್ ಖಾನ್ ಅವರನ್ನು ಕನ್ನಡಕ್ಕೂ ಕರೆಸಿ ಕೊರಿಯಾಗ್ರಫಿ ಮಾಡಿಸಿದ ಕೀರ್ತಿ ‘ಗರ’ ಚಿತ್ರದ ನಿರ್ದೇಶಕ ಮುರಳೀಕೃಷ್ಣ ಅವರದ್ದು. ಆ ನೆನಪನ್ನು ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
“ಸರೋಜ್ ಖಾನ್ ಬರೀ ಒಂದು ವ್ಯಕ್ತಿಯ ಹೆಸರಲ್ಲ ಒಂದು ಶಕ್ತಿಯ ಹೆಸರು. ಕಲಾಧಾರಕರ ಹೆಸರು. ಅವರ ಸಿನಿಮಾಗಳನ್ನು ನೋಡಿ ಡ್ಯಾನ್ಸ್ ನೋಡಿ ಫಿದಾ ಆಗಿದ್ದೆ. ಇಂತಹ ಒಂದು ಕಲಾವಿದೆಯನ್ನು ನನ್ನ ಸಿನಿಮಾಕ್ಕೆ ಬಳಸ್ಕೋಬೇಕೆಂದು ಆ ಕಾಲದಿಂದನೇ ತುಂಬಾ ಮನಸ್ಸಿತ್ತು. ನಾನು ನಿರ್ದೇಶಕ ನಾಗಲು ಹೊರಟಾಗ ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ (ಮಂಜುಳಾ ಗುರುರಾಜ್ ಪತಿ) ಅವರು ಜಾನಿಲಿವರ್ ಬಳಿಗೆ ಹೋಗಿದ್ದರು. ಅವರಲ್ಲಿ ಮಾತಾಡ್ತಾ ನನಗೆ ಫೋನ್ ಮಾಡಿಸಿ ಮಾತಾಡಿಸಿದ್ರು. ನಾನು ಅವರಲ್ಲಿ “ನನಗೆ ಬಾಲಿವುಡ್ಡಲ್ಲಿ ಸರೋಜ್ ಖಾನ್ ಅಂದರೆ ತುಂಬಾ ಇಷ್ಟ. ಮುಂಬಯಿಗೆ ಬಂದಾಗ ಅವರನ್ನು ಮೀಟ್ ಮಾಡಿಸಬೇಕು” ಎಂದು ಕೇಳಿಕೊಂಡೆ. ಅದಕ್ಕೆ ಅವರು ಆಯಿತು ಎಂದಿದ್ದರು. ಎರಡು ಗಂಟೆ ಕಳೆದ ಮೇಲೆ ನನಗೆ ಗುರು ಅವರಿಂದ ವಾಪಾಸ್ ಫೋನ್ ಬಂತು. ನಾನು ಏರ್ ಪೋರ್ಟ್ ಗೆ ಬಂದಿರಬಹುದು ಎಂದು ಊಹಿಸಿ ಎಲ್ಲಿದ್ದೀರಾ ಎಂದು ಕೇಳಿದಾಗ ನಾನು ಇಲ್ಲೇ ಬಾಂಬೆ ನಲ್ಲಿದ್ದೀನಿ ನಿಮಗೆ ಬೇಕಾದವರೊಬ್ಬರು ನಿಮ್ಮಲ್ಲಿ ಮಾತಾಡಬೇಕಂತೆ ಅಂದ್ರು, ನಾನು ಆಯಿತು ಕೊಡಿ ಎಂದಾಗ ನಾನು ಸರೋಜ್ ಖಾನ್ ಎಂದರು. ನನಗೆ ಸರಿಯಾಗಿ ಕೇಳಿಸದ ಕಾರಣ ಕೌನ್ ಕೌನ್ ಎಂದೆ ಅವರು ಸರೋಜ್ ಖಾನ್ ಅಂದರು. ನನಗೆ ಆ ಕ್ಷಣ ಗಂಟಲು ಒಣಗೋಗ್ಬಿಡ್ತು! ಸುಧಾರಿಸ್ಕೊಂಡು, “ಮೇಡಂ ನಾನು ನಿಮ್ಮ ಫ್ಯಾನ್ ನಾನು ನಿಮ್ಮನ್ನು ಮೀಟ್ ಆಗ್ಬೇಕು, ನಿಮ್ಮ ಮನೆಗೆ ಯಾವಾಗ ಬರಬೇಕು ಹೇಳಿ ಮೇಡಂ” ಎಂದೆ, ಯಾವಾಗಬೇಕಿದ್ರೂ ಬಾ ಅಂದ್ರು. ನಾನು ನನ್ನ ಹೆಂಡ್ತಿನ ಕರೆದುಕೊಂಡು ಬಾಂಬೆಗೆ ಹೋದೆ. ಅಲ್ಲಿ ಗುರು ಜೊತೆ ಮೂರು ಜನ ಸರೋಜ್ ಖಾನ್ ಮನೆಗೆ ಹೋದೆವು. ನಾನು ಅವರಲ್ಲಿ ಮೇಡಂ ನನ್ನದು ಎರಡು ಬೇಡಿಕೆ ಇದೆ. ನಾನು ‘ಗರ’ಅಂತ ಒಂದು ಸಿನಿಮಾ ಮಾಡ್ತಾ ಇದ್ದೀನಿ ಅದರಲ್ಲಿ ನೀವು ಎರಡು ಸಾಂಗ್ ಗೆ ನೃತ್ಯ ಸಂಯೋಜನೆ ಮಾಡಬೇಕು ಅಂದೆ. “ಎಲ್ಲಿ ಹಾಡು ಕೇಳಿಸಿ” ಅಂದ್ರು ಕೇಳಿಸಿದೆ. “ಎಕ್ಸಲೆಂಟ್ ಮ್ಯೂಸಿಕ್” ಅಂದ್ರು. ನಾನು ಮಾಡ್ತೀನಿ ಅಂದ್ರು. ನಾನು ನಿಮ್ಮ ರೆಮ್ಯುನರೇಶನ್ ಏನು ಅಂದೆ, ನಿನಗೆ ಏನು ಮನಸ್ಸಿಗೆ ತೋಚುತ್ತೆ ಅದನ್ನು ಕೊಡು. ಐ ವಿಲ್ ಅಸ್ಸೆಪ್ಟಿಟ್” ಅಂದ್ರು. ಹಾಗೆಯೇ “ಎರಡನೇ ಡಿಮ್ಯಾಂಡ್ ಏನು” ಅಂದ್ರು, ನಾನು ನಿಮ್ಮನ್ನು ತಬ್ಕೋಬೇಕು ಅಂದೆ! ಅಷ್ಟರಲ್ಲಿ ಅವರೇ ಎದ್ಬಿಟ್ಟು ಬಂದು ಗಟ್ಟಿ ಯಾಗಿ ತಬ್ಕೊಂಡು ಬಿಟ್ರು!! ಆರ್ ಯು ಸಾಟಿಸ್ಫೈಡ್ ಅಂತ ಕೇಳಿದ್ರು. ನನಗೆ ಕಣ್ಣಲ್ಲಿ ನೀರು ಬಂತು. ಈಗಲೂ ಆ ಫೊಟೋಸ್ ನನ್ನಲ್ಲಿವೆ. ಇದಾದಮೇಲೆ ನಾನು ಒಂದು ವರ್ಷದವರೆಗೆ ನನಗೆ ‘ಗರ’ ಫಿಲಂ ಮಾಡೋಕೆ ಆಗಿಲ್ಲ. ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದೆ.
ಮತ್ತೆ ನಾನು ಫೋನ್ ಮಾಡಿ ನಾನು “ಮುರಳೀಕೃಷ್ಣ ಫ್ರಮ್ ಬ್ಯಾಂಗಲೂರ್” ಅಂದೆ. ಅವರಿಗೆ ನನ್ನ ನೆನಪಿತ್ತು.! ನಂತರ ಬೆಂಗಳೂರಿಗೆ ಬಂದರು. ಮೇಲುಕೋಟೆ ಯಲ್ಲಿ ಶೂಟಿಂಗ್. ನೇಹಾ ಪಾಟೀಲ್, ಆವಂತಿಕಾ ಮೋಹನ್ ಮತ್ತು ಇನ್ನೊಬ್ಬ ಹೊಸ ಹುಡುಗ ಇದ್ದ. ಈ ಮೂವರನ್ನು ಪಳಗಿಸಿ ಆ ಸಾಂಗನ್ನು ಮಾಡಿಕೊಟ್ರು. ಈ ಇಬ್ಬರು ಹುಡುಗಿಯರಿಗೆ ನಡುಕವಿತ್ತು. ಆದ್ರೆ ಸರೋಜ್ ಖಾನ್ ಬಹಳ ಸ್ನೇಹಮಯವಾಗಿ ಹೇಳಿಕೊಡ್ತಾ ಇದ್ರು.
ಒಮ್ಮೆ ಒಂದು ಕೆರೆ ಪಕ್ಕ ಶೂಟಿಂಗ್ ಆಗ್ತಾ ಇತ್ತು, ಮೇಲುಕೋಟೆಯಲ್ಲಿ. ನಾನು ಕೆರೆ ಪಕ್ಕ ಮಾನಿಟರ್ ಇಟ್ಕೊಂಡು ಅವರ ಅಸಿಸ್ಟೆಂಟ್ ಜೊತೆಗೆ ಕುತ್ಕೊಂಡು ನೋಡ್ತಾ ಇದ್ದೀನಿ. ಮೇಲ್ಗಡೆ ಟೆಂಟ್ ಹಾಕ್ಬಿಟ್ಟು ಕೂರಿಸಿದ್ದೀನಿ ಸರೋಜ್ ಖಾನ್ ಗೆ. ಶಾಟ್ ಇಟ್ಬಿಟ್ಟು ನಾನು ಕೇಳಿದೆ ಅಸಿಸ್ಟೆಂಟ್ ಗೆ ಸರಿನಾ ಅಂತ ಅದಕ್ಕೆ ಆತ ಸರಿ ಅಂದ. ಅಷ್ಟರಲ್ಲಿ ಫೋನ್ ನನಗೆ, “ಡೈರೆಕ್ಟರ್ ಸಾರ್… ದೆರಿಸ್ ರಾಂಗ್ ಇನ್ ಮೈ ಗರ್ಲ್ ಅಂದ್ರು. ಸ್ಟೆಪ್ ಸರಿ ಹಾಕಿಲ್ಲ ಅಂತ. ಅವರು ಮಾನಿಟರ್ ಗಿಂತಲೂ ಸೂಕ್ಷ್ಮವಾಗಿ ಗಮನಿಸ್ತಾ ಇದ್ರು! ಮಾನಿಟರ್ ಒಂದು ಶಾಪ ಅಂತ ಹೇಳ್ತಾ ಇದ್ರು.
ಅದ್ಭುತ ವೃತ್ತಿಪರತೆ ಇತ್ತು
ನಾನು ಕಡೆಯದಾಗಿ ನಿಮ್ಮಲ್ಲಿ ಇನ್ನೊಂದು ವಿಷಯ ಹೇಳಬೇಕು, ಅದಕ್ಕೆ ಮಾಧ್ಯಮದವರೆಲ್ಲರೂ ಸಾಕ್ಷಿದಾರರು. ಮಾರ್ಚ್ 19, 2018ರಂದು ಈ ಚಿತ್ರಕ್ಕೆ ಕುಂಬಳಕಾಯಿ ಪೂಜೆ ಆದಾಗ ನಾನು ದೇವನಹಳ್ಳಿ ಯಿಂದ ಪ್ರೆಸ್ ಮೀಟ್ ಗೆ ಇನ್ ಟೈಂ ಬರಲು ಆಗ್ಲಿಲ್ಲ. ಒಂದು ಗಂಟೆ ಲೇಟಾಗಿ ಬಂದೆ. ಬಂದ ಕೂಡಲೇ ಎಲ್ಲರೂ ಕ್ಷಮಿಸಬೇಕು, ಸರೋಜ್ ಖಾನ್ ಅವರಿಗೆ ಹುಷಾರಿರಲಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿ ಬರ್ತಾ ಇದ್ದೀನಿ ಅಂದಿದ್ದೆ. ಅವರನ್ನು ಅವತ್ತೇ ಫ್ಲೈಟ್ ನಲ್ಲಿ ಕಳಿಸೋ ವಿಚಾರ ತಲೆಯಲ್ಲಿ ಓಡ್ತಾ ಇತ್ತು ನನಗೆ. ಅಷ್ಟರಲ್ಲಿ ನನಗೆ ಒಂದು ಫೋನ್ ಬಂತು. ಸರೋಜ್ ಖಾನ್ ಮೇಡಂ ಕೆಳಗಡೆ ಬಂದಿದ್ದಾರೆ ಎಂದು! ನಾನು ಹೋಗಿ ಕರೆದುಕೊಂಡು ಬಂದೆ. ಅವರು ಡಾಕ್ಟರಲ್ಲಿ ಹೇಳಿದರಂತೆ “ನಾನು ಇಲ್ಲಿ ಕೆಲಸಕ್ಕೆ ಬಂದಿರೋದು. ನಾನು ಇಲ್ಲಿ ಹುಷಾರಿಲ್ಲದೆ ಅಡ್ಮಿಟ್ ಆಗ್ಬಿಟ್ರೆ ಡೈರೆಕ್ಟರ್ ಕಾ ಕ್ಯಾ ಹೋಗ, ನಾನು ಕರ್ನಾಟಕಕ್ಕೆ ಬಂದಿದ್ದೀನಿ, ಮತ್ತೆ ಇಲ್ಲಿ ಪ್ರೆಸ್ ನವರು ನನ್ನ ಕಾಯ್ತಾ ಇದ್ದಾರಲ್ವಾ, ನಾನು ಹೋಗದಿದ್ದರೆ ಅವರಿಗೆ ಅವಮಾನ ಮಾಡಿದ ಹಾಗೆ ಅಲ್ವಾ? ಅವರುಗಳಿಂದ ನಾವು ಮೇಲಕ್ಕೆ ಬಂದಿರೋದಲ್ವಾ ಕಲಾವಿದರು. ವಿ ಶುಡ್ ರೆಸ್ಪೆಕ್ಟ್ . ನನಗೆ ಜರ್ನಲಿಸ್ಟ್ ಮುಖ್ಯ, ಡೈರೆಕ್ಟರ್ ಮುಖ್ಯ” ಎಂದು! ಅಂಥ ಅದ್ಭುತವಾದ ಶಕ್ತಿ ಇಂದು ನಮ್ಮಿಂದ ದೂರ ಆಗಿದೆ. ಆದರೆ ಅವರ ಆದರ್ಶ ನೆನಪುಗಳನ್ನು ನಾನು ಯಾವತ್ತೂ ಮರೆಯೋದಿಲ್ಲ. ಕಣ್ಣು ಮಾನಿಟರ್ ಎಂದು ಹೇಳಿದನ್ನು ನಾನು ಯಾವತ್ತೂ ಮರೆಯೋದಿಲ್ಲ.
ಕನ್ನಡದ ಬಜೆಟ್ ಗೆ ಹೊಂದಿಕೊಂಡಿದ್ರು
ಡೈರೆಕ್ಟರ್ ಗೆ ರೆಸ್ಪೆಕ್ಟ್ ಕೊಟ್ಟು ಮಾತಾಡಿಸ್ತಾ ಇದ್ರು. ನಾನು ಏನೂ ಯೋಗ್ಯತೆ ಇಲ್ಲದವನು. ನನಗೆ ತುಂಬಾ ರೆಸ್ಪೆಕ್ಟ್ ಕೊಟ್ಟು ಮಾತಾಡಿಸ್ತಾ ಇದ್ರು. ಮಾನಿಟರ್ ಕಣ್ಣು ಮನಸ್ಸು ಡೈರೆಕ್ಟರ್ ದ್ದು ಆಗಬೇಕು. ಇದೊಂದು ಚಿತ್ರರಂಗಕ್ಕೆ ಶಾಪ ಅಂತಿದ್ರು. ಒಂದು ಐಟಂ ಸಾಂಗ್ ನಲ್ಲಿ ಜಾನಿಲಿವರ್, ಸಾಧುಕೋಕಿಲ ಇಬ್ಬರೂ ಲೆಜೆಂಡ್ಸ್. ಇವರನ್ನು ಸಂಭಾಳಿಸೋದೇ ಕಷ್ಟ. ಜೊತೆಗೆ ಸರೋಜ್ ಖಾನ್ ಸಾಂಗಿನಲ್ಲಿ ಅವರಿಬ್ಬರೇ ಹಾಕಿದ್ದ. ಸ್ಟೆಪ್ಸ್. ನಾನು ಇಲ್ಲ ಸ್ಟೆಪ್ ಬೇರೆ ಬೇಕು ಅಂದೆ. ಸರೋಜ್ ಖಾನ್ ಆಮೇಲೆ ಅವರಿಬ್ಬರನ್ನು ಪಳಗಿಸಿ ಸಾಂಗ್ ಶೂಟ್ ಮಾಡಿಸಿದ್ರು. ಈ ಸಾಂಗ್ ಶೂಟಲ್ಲಿ ಒಂದು ಅಚಾತುರ್ಯ ಆಯಿತು. ಎಲ್ಲ ಹುಡುಗಿಯರಿಗೆ ಒಂದೇ ತರಹದ ಶಾರ್ಟ್ ಲೆಂತ್ ಡ್ರೆಸ್ ಇತ್ತು. ಆದರೆ ಇಬ್ಬರು ಹುಡುಗಿಯರ ಡ್ರೆಸ್ ಲೆಂತ್ ದೊಡ್ಡದಾಗಿತ್ತು. ನನ್ನ ಕಷ್ಟ ಅರ್ಥ ಮಾಡಿಕೊಂಡು ಅವರಿಬ್ಬರನ್ನು ಕೊನೆಗೆ ಹಾಕಿ ಉಳಿದ ಹುಡುಗಿಯರನ್ನು ಮುಂದೆ ಹಾಕಿ ಸಾಂಗ್ ಮಾಡಿಸಿದ್ರು.ಅವರು ನನ್ನಲ್ಲಿ ಹೇಳಿದ್ರು ಈ ಸಾಂಗ್ ಗೆ 30 ಜನ ಹುಡುಗಿಯರು ಬೇಕು ಅಂತ. ನನಗೆ ಗೊತ್ತು, ರೀಜಿನಲ್ ಪ್ರಾಬ್ಲಂ ಇದೆ ಅಂತ. ವಿ ವಿಲ್ ಡು ಇಟ್ ಅಂದ್ರು. ಹೀಗೆ ಅವರು ಒಬ್ಬ ಡೈರೆಕ್ಟರ್ ನ ನೋವನ್ನು ಅರ್ಥ ಮಾಡಿಕೊಳ್ತಾ ಇದ್ರು.
ಇತ್ತೀಚೆಗಷ್ಟೇ 6 ತಿಂಗಳ ಹಿಂದೆ ನಾನು ಅವರಲ್ಲಿ ಹಿಂದಿ ಸಿನಿಮಾ ಮಾಡ್ತೀನಿ ಮೇಡಂ ನೀವೇ ಅದಕ್ಕೆ ಕೋರಿಯೋಗ್ರಫಿ ಮಾಡಬೇಕು ಅಂದೆ ಅದಕ್ಕೆ ಅವರು ಹೇ ನಾನೇ ಮಾಡ್ತೀನಿ. ನೀನು ಕೊಡ್ಲಿಲ್ಲ ಅಂದ್ರೆ ನಾನು ಅಲ್ಲಿಗೆ ಬಂದ್ಬಿಟ್ಟು ಗಲಾಟೆ ಮಾಡ್ತೀನಿ ಈ ಜೀವ ಇರುವ ವರೆಗೆ ನೀನು ಸಿನಿಮಾ ಮಾಡಿದರೆ ನಾನೇ ಡ್ಯಾನ್ಸ್ ಡೈರೆಕ್ಟರ್. ಇಟ್ ಇಸ್ ಮೈ ರೈಟ್ಸ್ ಅಂದಿದ್ರು.ಇವತ್ತು ಅವರು ಆ ರೈಟನ್ನು ಎನ್ ಫೊರ್ಸ್ ಮಾಡಿಲ್ಲ, ನನಗೆ ಅಂತ ಯೋಗನೂ ಬಂದಿಲ್ಲ. ಇದು ನಾನು ಸರೋಜ್ ಖಾನ್ ಅವರ ಬಗ್ಗೆ ಹೇಳಬೇಕಾಗಿದ್ದ ಅಲ್ಪ ವಿಷಯಗಳು. ನಮಸ್ಕಾರ.