‘ಚಾರ್ಲಿ’ಯ ಸಾರಥಿ ಕಿರಣ್ ರಾಜ್ ಹೇಳಿದ ಸಂಗತಿ..

“ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬಿಯರ್…” ಈಚೆಗೆ ಸಿನಿರಸಿಕರ ಬಾಯಲ್ಲಿ ಈ ಪದಗಳದೇ ಕಾರುಬಾರು. ಅಂದಹಾಗೆ ರಕ್ಷಿತ್ ಶೆಟ್ಟಿ ಅಭಿನಯದ ಹೊಸ ಚಿತ್ರ ‘ 777 ಚಾರ್ಲಿ’ ಯಲ್ಲಿ ನಾಯಕ ಧರ್ಮನ ದಿನಚರಿಯನ್ನು ಸರಳವಾಗಿ ಹೇಳುವ ಸಲುವಾಗಿ ಚಿತ್ರದ ನಿರ್ದೇಶಕ ಕಿರಣ್ ರಾಜ್ ಕೆ ಅವರು ಈ ರೀತಿ ವಿಭಿನ್ನ ಶೈಲಿಯಲ್ಲಿ ವರ್ಣನೆ ಮಾಡಿದ್ದರು. ಇದನ್ನೇ ಮೂಲವಾಗಿಟ್ಟುಕೊಂಡು ‘ಲೈಫ್ ಆಫ್ ಧರ್ಮ’ ಎಂಬ ಸಣ್ಣ ಟೀಸರ್ ಮೊನ್ನೆ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿ ಭಾರಿ ಸುದ್ದಿ ಮಾಡಿದೆ. ಚಿತ್ರದ ಕುರಿತು ಸಿನಿಕನ್ನಡ.ಕಾಮ್ ನೊಂದಿಗೆ ವಿಶೇಷಗಳನ್ನು ಹಂಚಿಕೊಂಡಿದ್ದಾರೆ ಚಿತ್ರದ ನಿರ್ದೇಶಕ ಕಿರಣ್ ರಾಜ್ ಕೆ.

777 ಚಾರ್ಲಿ ಚಿತ್ರದ ವರೆಗಿನ‌ ನಿಮ್ಮ ಪಯಣ ಹೇಗಿತ್ತು?

ಇಮ್ರಾನ್ ಸರ್ದಾರಿಯಾ ಅವರು ನಿರ್ದೇಶಿಸಿದ ‘ಎಂದೆಂದಿಗೂ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಯಸ್. ವಿ. ಬಾಬು ಚಿತ್ರದ ನಿರ್ಮಾಪಕರು, ಮುಂದೆ ಅವರು ‘ರಿಷಬ್ ಶೆಟ್ಟಿ’ ನಿರ್ದೇಶನದ ‘ರಿಕ್ಕಿ’ ಸಿನಿಮಾ ಮಾಡಲು ಮುಂದಾದಾಗ ರಿಷಬ್ ಶೆಟ್ಟಿ ಅವರ ಪರಿಚಯವಾಯಿತು. ನಂತರ ‘ರಿಕ್ಕಿ’ ಹಾಗೂ ‘ಕಿರಿಕ್ ಪಾರ್ಟಿ’ ಚಿತ್ರಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದೆ, ಆಮೇಲೆ ‘ಕಥಾ ಸಂಗಮ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯವಿರುವ ‘ಸಾಗರ ಸಂಗಮ’ ಎಂಬ ಕಿರುಚಿತ್ರ ಒಂದನ್ನು ನಿರ್ದೇಶಿಸಿದ್ದೇನೆ. ಅಂದಹಾಗೆ ರಕ್ಷಿತ್ ಶೆಟ್ಟಿ ಸಾರಥ್ಯದ ‘ಸೆವೆನ್ ಒಡ್ಸ್’ ನಲ್ಲಿ ನಾನೂ ಒಬ್ಬ ಎಂಬ ಹೆಮ್ಮೆ ಇದೆ.
‘777 ಚಾರ್ಲಿ’ ಕಥೆಯ ಎಳೆ ‘ಕಿರಿಕ್ ಪಾರ್ಟಿ’ ಚಿತ್ರೀಕರಣದ ಕೊನೆ ಹಂತದಲ್ಲಿರುವಾಗ ನನಗೆ ಹೊಳೆಯಿತು, ರಕ್ಷಿತ್ ಬಳಿ ಹಂಚಿಕೊಂಡಾಗ ಬಹಳ ಇಷ್ಟಪಟ್ಟರು, ಜೊತೆಗೆ ನಾನೇ ಮುಂದೆ ಇದನ್ನು ನಿರ್ಮಾಣ ಮಾಡುತ್ತೇನೆ ನೀವೇ ನಿರ್ದೇಶನ ಮಾಡಿ ಎಂದು ಹೇಳಿದ್ದರು. ಈ ಮೊದಲು ‘ಧರ್ಮ’ ಪಾತ್ರಕ್ಕೆ ‘ಕಿರಿಕ್ ಪಾರ್ಟಿ’ ಖ್ಯಾತಿಯ ಅರವಿಂದ್ ಅಯ್ಯರ್ ಆಯ್ಕೆಯಾಗಿದ್ದರು. ಮುಂದೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರನ್ನು ಕೈಬಿಡಲಾಯಿತು, ಅಲ್ಲದೇ ರಕ್ಷಿತ್ ಶೆಟ್ಟಿ ಸ್ವತಃ ತಮಗೆ ಇಷ್ಟವಾದ ಕಥೆ ಆದ ಕಾರಣ ನಾನೇ ಮಾಡುತ್ತೇನೆ ಎಂದರು. ಈಗ ಚಿತ್ರವಾಗಿದೆ.

ಚಿತ್ರದ ಕಥೆ ಮತ್ತು ಪಾತ್ರಗಳ ಬಗ್ಗೆ ಹೇಳಿ!

ಚಿತ್ರದ ಮುಖ್ಯ ಪಾತ್ರಧಾರಿ ‘ಧರ್ಮ’ ಹೆಚ್ಚು ಮಾತನಾಡದ, ತಾನಾಯ್ತು ತನ್ನ ಮನೆ, ಕೆಲಸ ಆಯಿತು ಎಂದು ಬದುಕುವ ಒಬ್ಬ ಸಾಮಾನ್ಯ ಮನುಷ್ಯ, ಮೇಲಾಗಿ ಆತ ಅಂತರ್ಮುಖಿ ಯಾರೊಂದಿಗೂ ಹೆಚ್ಚು ಬೆರೆಯುವುದೂ ಇಲ್ಲ. ಇಂಥವನ ಜೀವನದಲ್ಲಿ ತುಂಬಾನೇ ತರ್ಲೆ ಸ್ವಭಾವದ ‘ಧರ್ಮ’ ನಿಗೆ ಸಂಪೂರ್ಣ ತದ್ವಿರುದ್ಧವಾದ ‘ಚಾರ್ಲಿ’ ಎಂಬ ಶ್ವಾನ ಜೊತೆಯಾಗುತ್ತದೆ. ಆ ನಂತರ ಧರ್ಮನ ಜೀವನದಲ್ಲಿ ಆಗುವ ಬದಲಾವಣೆಗಳು, ಒಬ್ಬ ಮನುಷ್ಯ ಹಾಗೂ ಶ್ವಾನದ ನಡುವೆ ಏರ್ಪಡುವ ಅನುಬಂಧ, ನಾನಾ ರೀತಿಯ ಏಳು – ಬೀಳುಗಳು, ಇವೆಲ್ಲದರ ಒಟ್ಟು ಹೂರಣವೆ ಚಿತ್ರದ ಕಥೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅಲ್ಲದೇ ಸುಮಾರು ಏಳರಿಂದ ಎಂಟು ಪಾತ್ರಗಳು ಇರಲಿವೆ, ಪ್ರತಿಯೊಂದು ಪಾತ್ರವೂ ಚಿತ್ರದಲ್ಲಿ ತಮ್ಮದೇ ಆದ ಪ್ರಾಮುಖ್ಯತೆ ಪಡೆದಿವೆ. ಹಾಗೆ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಡುತ್ತಿರುವ ನಾಯಕಿ ಸಂಗೀತ ಶೃಂಗೇರಿ ಬಹಳ ಮುಖ್ಯವಾದ ಪಾತ್ರ ನಿರ್ವಹಿಸಿದ್ದಾರೆ, ಚಿತ್ರದಲ್ಲಿ ಅವರೊಬ್ಬ ‘ಅನಿಮಲ್ ವೆಲ್ಫೇರ್ ಆಫೀಸರ್’ ಆಗಿರುತ್ತಾರೆ. ಅದು ಬಿಟ್ಟರೆ ರಾಜ್ ಬಿ ಶೆಟ್ಟಿ ಅವರು ಓರ್ವ ವೆಟರ್ನರಿ ಡಾಕ್ಟರ್ ಪಾತ್ರ ನಿರ್ವಹಿಸಿದ್ದು ಚಾರ್ಲಿ ಎಂಬ ಶ್ವಾನ ಧರ್ಮನ ಜೀವನಕ್ಕೆ ಪ್ರವೇಶ ಪಡೆಯುವುದರಲ್ಲಿ ಇವರದೇ ಕೈವಾಡ ಇರುತ್ತದೆ. ಅಲ್ಲದೇ ‘ಹಂಬಲ್ ಪೊಲಿಟೀಶಿಯನ್ ನಾಗರಾಜ್’ ಖಾತಿಯ ಡ್ಯಾನಿಶ್ ಸೇಠ್ ಚಿತ್ರದಲ್ಲಿ ‘ಕರ್ಷನ್ ರಾಯ್’ ಎಂಬ ಪಾತ್ರ ಮಾಡುತ್ತಿದ್ದಾರೆ.

‘777 ಚಾರ್ಲಿ’ ಯನ್ನು ಐದು ಭಾಷೆಗಳಲ್ಲಿ ಬಿಡುಗಡೆಗೊಳಿಸುತ್ತಿರುವುದರ ಬಗ್ಗೆ ಹೇಳಿ

ಸ್ಕ್ರಿಪ್ಟಿಂಗ್ ಹಂತದಲ್ಲಿ ಈ ಚಿತ್ರವನ್ನು ಪಾನ್ ಇಂಡಿಯಾ ರಿಲೀಸ್ ಮಾಡುವ ಕುರಿತು ಯಾವುದೇ ಮಾತುಕತೆ ನಡೆದಿರಲಿಲ್ಲ. ‘ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದರಿಂದ ಈ ಚಿತ್ರವನ್ನು ಹಾಗೆಯೇ ಬಿಡುಗಡೆ ಮಾಡುವ ಸುಳಿವನ್ನು ರಕ್ಷಿತ್ ಶೆಟ್ಟಿ ಕೊಟ್ಟಿದ್ದರು. ಅಲ್ಲದೇ ಚಿತ್ರದಲ್ಲಿ ಯಾವುದೋ ಒಂದು ಪ್ರಾದೇಶಿಕತೆಗೆ ಮಾತ್ರ ಸೀಮಿತವಾಗಬಹುದಾದಂತಹ ಕಥೆ ಇಲ್ಲ. ಹಾಗಾಗಿ ಐದು ಭಾಷೆಯಲ್ಲಿ ಬಿಡುಗಡೆ ಎಂಬ ನಿರ್ಧಾರ ನನಗೆ ಹೆಚ್ಚೇನೂ ಹೊರೆ ಎನಿಸಲಿಲ್ಲ. ಹಾಗಾಗಿ ಮೊದಲು ಬರೆದ ಕಥೆಯಲ್ಲಿ ಐದೂ ಭಾಷೆಯ ಪ್ರೇಕ್ಷಕರಿಗೆ ಒಗ್ಗುವಂತೆ ಕೇವಲ ಹತ್ತು ಪ್ರತಿಶತ ಬದಲಾವಣೆ ಮಾಡಿಕೊಂಡಿದ್ದೇನೆ ಅಷ್ಟೇ.

ಚಿತ್ರದ ಬಿಡುಗಡೆ ಕುರಿತು ಯಾವ ಯೋಜನೆ ಹಾಕಿದ್ದೀರಿ?

ಎಲ್ಲ ಸರಿ ಇರುತ್ತಿದ್ದರೆ ಮೇ ನಲ್ಲಿ ಚಿತ್ರೀಕರಣ ಮುಗಿದು
ಈಗ ಬಿಡುಗಡೆ ಮಾಡುವ ಹಂತದಲ್ಲಿ ಇರುತ್ತಿದ್ದೆವು. ಸಧ್ಯ ಎಪ್ಪತ್ತೈದು ಭಾಗ ಚಿತ್ರೀಕರಣ ಮುಗಿದಿದೆ. ಲಾಕ್ ಡೌನ್ ಸಮಯದಲ್ಲಿ ಇಂಟರ್ವಲ್ ತನಕದ ಸಂಕಲನ, ರೀರೆಕಾರ್ಡಿಂಗ್ ಕೆಲಸ ಸಹ ಮುಗಿದಿದ್ದು ಐದೂ ಭಾಷೆಯ ಡಬ್ಬಿಂಗ್ ಕೆಲಸ ಪ್ರಾರಂಭವಾಗಿದೆ. ಈಗ ಲಾಕ್ ಡೌನ್ ಸಡಿಲಗೊಂಡಿದ್ದರೂ ಸಹ ಉಳಿದ ಭಾಗದ ಚಿತ್ರೀಕರಣಕ್ಕೆ
ತುಂಬಾ ಜನರ ಅಗತ್ಯವಿದೆ. ಹಾಗಾಗಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ಚಿತ್ರೀಕರಣ ಮಾಡಿದರೂ ಅಪಾಯದ ಸಂಭವವಿದೆ, ಹಾಗಾಗಿ ಕೋರೋನ ಗದ್ದಲ ಸಂಪೂರ್ಣವಾಗಿ ಮುಗಿಯಲಿ ಎಂದು ಕಾಯುತ್ತಿದ್ದೇವೆ. ಬಿಡುಗಡೆ ವಿಷಯಕ್ಕೆ ಬಂದರೆ ‘ 777 ಚಾರ್ಲಿ’ ಥೇಟರ್ ನಲ್ಲಿ ಕುಳಿತು ಇಡೀ ಕುಟುಂಬ ಸಮೇತವಾಗಿ ನೋಡಿ ಆನಂದಿಸಬೇಕಾದ ಚಿತ್ರ. ಅದಲ್ಲದೆ ಮೊಬೈಲ್ ಪರದೆಯಲ್ಲಿ ಥೇಟರ್ ಕೊಡುವ ಅನುಭವ ಪ್ರೇಕ್ಷಕರಿಗೆ ಸಿಗುವುದೂ ಇಲ್ಲ. ಹಾಗಾಗಿ ಥೇಟರ್ ಹೊರತಾಗಿ ಬೇರೆ ಯಾವುದೇ ವೇದಿಕೆಯಲ್ಲಿ ಬಿಡುಗಡೆ ಮಾಡುವ ಚಿಂತನೆ ಇಲ್ಲ.

ಸಂದರ್ಶಕರು: ಸುಜಯ್ ಬೆದ್ರ

Recommended For You

Leave a Reply

error: Content is protected !!