ನನಗೆ ಕೊರೊನ ಇಲ್ಲ..! – ದೊಡ್ಡಣ್ಣ

ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಕೂಡ ಕೊರೊನ ಶಂಕಿತರಾಗಿದ್ದು, ಕ್ವಾರಂಟೈನಲ್ಲಿದ್ದಾರೆ ಎನ್ನುವ ಸುದ್ದಿ ಬೆಳಗ್ಗಿನಿಂದ ಹರಡುತ್ತಲಿತ್ತು. ಈ ಬಗ್ಗೆ ದೊಡ್ಡಣ್ಣ ಅವರನ್ನೇ ನೇರವಾಗಿ ಸಂಪರ್ಕಿಸಿದ ಸಿನಿಕನ್ನಡ.ಕಾಮ್ ಜತೆಗೆ ಅವರು‌ ನೀಡಿರುವ ಮಾಹಿತಿಗಳು‌ ಇಲ್ಲಿವೆ.

“ನಾನು ಆರಾಮಾಗಿದ್ದೀನಿ. ತುಂಬ ಚೆನ್ನಾಗಿದ್ದೀನಿ, ಆರೋಗ್ಯವಾಗಿಯೂ‌ ಇದ್ದೇನೆ. ಈಗಷ್ಟೇ ಟ್ರೆಡ್ಮಿಲ್ ನಲ್ಲಿ ವ್ಯಾಯಾಮ ಮುಗಿಸಿ ಬಂದು ಕೆಳಗೆ ಕುಳಿತಿದ್ದೇನೆ. ನನ್ನ ಪಕ್ಕದಲ್ಲೇ ಶ್ರೀಮತಿಯೂ ಇದ್ದಾಳೆ; ಬೇಕಿದ್ರೆ ಒಮ್ಮೆ ನೀವೇ ಮಾತನಾಡಿ” ಎಂದು ಫೋನ್ ತೆಗೆದು ತಮ್ಮ ಪತ್ನಿಯ ಕೈಗೆ ಕೊಟ್ಟರು ದೊಡ್ಡಣ್ಣ. ಆ ಕಡೆಯಿಂದ ಹಲೋ ಎಂದು ಮಾತು ಶುರು ಮಾಡಿದ ದೊಡ್ಡಣ್ಣನ ಪತ್ನಿ “ಇವರು 29ರಂದು ಸಿಎಂ ಅವರ ಬಳಿಗೆ ಹೋಗಿ ಮನವಿ ಕೊಟ್ಟು ಬಂದ ಮೇಲೆ ಎಲ್ಲೂ ಹೊರಗಡೆ ಹೋಗಿಲ್ಲ. ಯಾಕೆ ನಮ್ಮನೇಲಿ ಬಸುರಿ ಸೊಸೆ ಕೂಡ ಇದ್ದಾಳೆ. ಹಾಗಾಗಿ ತಾವು ಹೊರಗಡೆ ಹೋಗಿ ಸೋಂಕಿತ ಆಗಬಾರದು ಅಂತಾನೇ ಯಾವಾಗಲೂ ಮನೇಲೇ ಇರ್ತಾರೆ” ಎಂದು ಗಂಡನ‌ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಮತ್ತೆ ಫೋನ್ ಪಡೆದುಕೊಂಡ ದೊಡ್ಡಣ್ಣ, “ಸುದ್ದಿಯಾಗಿರೋದು ನನಗೂ ಗೊತ್ತು. ಅದಕ್ಕೇನೇ ಟ್ರೆಡ್ಮಿಲ್ಲಲ್ಲಿ ವ್ಯಾಯಾಮ ಮಾಡೋದನ್ನು ನನ್ನ ವೈಫು ಶಾಂತಾ ವಿಡಿಯೋ ಮಾಡಿದ್ದಾಳೆ. ನಿಮಗೂ ಅದನ್ನು ಕಳಿಸ್ತೀನಿ” ಎಂದು ಎಂದಿನ‌ ಕಂಚಿನ ಕಂಠದಲ್ಲಿ ಹೇಳಿದರು.

ಸುದ್ದಿಯಾಗಲು ಕಾರಣ

ನಟಿ, ಸಂಸದೆ ಸುಮಲತಾ ಅವರು ತಮಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ರಾಕ್ಲೈನ್ ವೆಂಕಟೇಶ್ ಅವರು‌ ಕೂಡ ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿ ಬಂದಿತ್ತು. ಅಂಬರೀಷ್ ಇರುವ ದಿನಗಳಿಂದಲೂ ರಾಕ್ ಲೈನ್ ಮತ್ತು ದೊಡ್ಡಣ್ಣ ಆ ಕುಟುಂಬಕ್ಕೆ ಅತ್ಯಾಪ್ತರು ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಕಳೆದ ಗುರುವಾರವಷ್ಟೇ ಅಂಬರೀಶ್ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಸುಮಲತಾ ಮತ್ತು ರಾಕ್ ಲೈನ್ ವೆಂಕಟೇಶ್ ಅವರೊಂದಿಗೆ ದೊಡ್ಡಣ್ಣ ಕೂಡ ವಿಧಾನಸೌಧಕ್ಕೆ ಭೇಟಿ ನೀಡಿದ್ದರು. ಹಾಗಾಗಿ ದೊಡ್ಡಣ್ಣ ಅವರಿಗೂ ಸೋಂಕು ತಗಲಿರಬಹುದೆನ್ನುವ ಸುದ್ದಿ ಹರಡಿತ್ತು. ಆದರೆ ಅದೆಲ್ಲ ಸುಳ್ಳು; ತಾನು ಆರೋಗ್ಯವಾಗಿದ್ದೇನೆ ಎಂದು ಸ್ವತಃ ದೊಡ್ಡಣ್ಣ ಸಿನಿಕನ್ನಡ. ಕಾಮ್ ಜತೆಗೆ ತಿಳಿಸಿದ್ದಾರೆ. ಸಾಕ್ಷಿಯಾಗಿ ಟ್ರೆಡ್ಮಿಲ್ ನಲ್ಲಿರುವ ಫೊಟೋಗಳನ್ನು ಕೂಡ‌ ತರಿಸಿಕೊಂಡಿದ್ದಾರೆ. ಅವರಿಗೆ ವಂದನೆಗಳು ಮಾತ್ರವಲ್ಲ, ಯಾರಿಗೂ ಕೂಡ ಕೋವಿಡ್ ಹೆಚ್ಚಿನ‌ ಆತಂಕ ನೀಡದೆ ಆದಷ್ಟು ಬೇಗ ಅದು ಪ್ರಪಂಚದಿಂದಲೇ ತೊಲಗುವಂತಾಗಲಿ.

Recommended For You

Leave a Reply

error: Content is protected !!
%d bloggers like this: