ಮೂಲ ದಕ್ಷಿಣ ಕನ್ನಡದ ಬೆಳ್ತಂಗಡಿ. ಓದಿದ್ದು ಮೆಕ್ಯಾನಿಕಲ್ ಎಂಜನಿಯರಿಂಗ್. ವೃತ್ತಿಯಿಂದಲೂ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಪ್ರತಿಭೆಯೊಂದು ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಹಟಕ್ಕಾಗಿ ಬಹುರಾಷ್ಟ್ರೀಯ ಕಂಪನಿಯ ಕೆಲಸವನ್ನು ತೊರೆದು ಗೆದ್ದೇ ತೀರುವೆ ಎಂದು ಟೊಂಕಕಟ್ಟಿ ನಿಲ್ಲುತ್ತದೆ. ಸರಿಯಾಗಿ ಏಳು ವರ್ಷದ ನಂತರ ಮಾಡಿದ ತ್ಯಾಗಗಳಿಗೆ ತಕ್ಕ ಮನ್ನಣೆ ದೊಡ್ಡ ಮಟ್ಟದಲ್ಲಿಯೇ ಸಿಗುತ್ತದೆ. ಅವರೇ ‘ಲವ್ ಮಾಕ್ಟೈಲ್’ ಚಿತ್ರದ ‘ಲವ್ ಯೂ ಚಿನ್ನ’ ಹಾಡಿನ ಹಿಂದಿರುವ ಧ್ವನಿ! ಪಕ್ಕಾ ಕರ್ನಾಟಕದ ದೇಸಿ ಪ್ರತಿಭೆ ‘ನಕುಲ್ ಅಭ್ಯಂಕರ್’. ಇತ್ತೀಚೆಗೆ ಸಂಗೀತ ಮಾಂತ್ರಿಕ ‘ಎ ಆರ್ ರೆಹಮಾನ್’ ಸಂಗೀತವಿರುವ, ಚಿಯಾನ್ ವಿಕ್ರಂ ಮತ್ತು ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ನಟಿಸಿರುವ ‘ಕೋಬ್ರಾ’ ತಮಿಳು ಚಿತ್ರದ ‘ತುಂಬಿ ತುಳ್ಳಲ್’ ಎಂಬ ಹಾಡನ್ನು ಶ್ರೆಯಾಗೋಷಲ್ ಜೊತೆಗೂಡಿ ಹಾಡಿದ್ದಾರೆ. ಬಿಡುಗಡೆಯಾದ ಒಂದೇ ವಾರದಲ್ಲಿ ಐವತ್ತು ಲಕ್ಷಕ್ಕೂ ಅಧಿಕ ಜನ ಹಾಡನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದು ‘ನಕುಲ್ ಅಭ್ಯಂಕರ್’ ಸಧ್ಯ ತಮ್ಮ ಹಾಡುಗಾರಿಕೆಯಿಂದ ಸಂಗೀತ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅಂದಹಾಗೆ ‘ಡ್ಯಾನಿಷ್ ಸೇಠ್’ ನಟಿಸಿದ್ದ ‘ಹಂಬಲ್ ಪೊಲಿಟಿಶಿಯನ್ ನೊಗ್ರಾಜ್’ ಹೆಸರಿನದೇ ಕನ್ನಡ ವೆಬ್ ಸೀರೀಸ್ ಹೊರಬರುತ್ತಿದ್ದು ಇದಕ್ಕೆ ಇವರದೇ ಸಂಗೀತ ಇರಲಿದೆ. ಎ ಆರ್ ರೆಹಮಾನ್ ಬತ್ತಳಿಕೆಯಿಂದ ಹೊರಬಂದ ಸಂಗೀತ ಪ್ರತಿಭೆ ನಕುಲ್ ಅಭ್ಯಂಕರ್ ಅವರ ಸಿನಿಪಯಣದ ಕುರಿತಾಗಿ ಸಿನಿಕನ್ನಡ.ಕಾಮ್ ನಡೆಸಿರುವ ಎಕ್ಸ್ ಕ್ಲೂಸಿವ್ ಸಂದರ್ಶನ ಇದು.
‘ತುಂಬಿ ತುಳ್ಳಲ್’ ಈಗ ಬಹುದೊಡ್ಡ ಹಿಟ್ ಹಾಡು ಆಗಿರುವ ಖುಷಿ ಎಷ್ಟಿದೆ?
ತುಂಬಾನೇ ಖುಷಿ ಇದೆ. ನಿಜವಾಗಿಯೂ ನನ್ನ ವೃತ್ತಿಜೀವನದಲ್ಲಿ ಇದು ಮಹತ್ವವಾದ ಘಟ್ಟ, ಮೊದಲಿಗೆ ಈ ಹಾಡಿನ ಟ್ರ್ಯಾಕ್ ವರ್ಷನ್ ಹಾಡಿದ್ದೆ, ಈ ಮೊದಲು ಎಷ್ಟೋ ಹಾಡುಗಳಿಗೆ ಟ್ರ್ಯಾಕ್ ವರ್ಷನ್ ಹಾಡಿರುವ ನನಗೆ ಈ ಹಾಡಿಗೆ ನನ್ನ ಕಂಠವೇ ಅಂತಿಮವಾಗಿ ಆಯ್ಕೆಆಗಲಿದೆ ಎಂಬ ವಿಶ್ವಾಸ ಇರಲಿಲ್ಲ, ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುವ ಕೆಲವು ದಿನಗಳ ಹಿಂದಷ್ಟೇ ಹಾಡಿಗೆ ಕೆಲಸ ಮಾಡಿದ ಸೌಂಡ್ ಎಂಜಿನಿಯರ್ ಒಬ್ಬರು ನನಗೆ ಕರೆ ಮಾಡಿ ನನ್ನ ಕಂಠವನ್ನೆ ಎ ಆರ್ ರೆಹಮಾನ್ ಪಕ್ಕ ಮಾಡಿದ್ದಾರೆ ಎಂದು ತಿಳಿಸಿದರು. ಈಗ ಹಾಡು ಹಿಟ್ ಆಗಿದೆ, ಜನ ಮೆಚ್ಚಿದ್ದಾರೆ, ಸಹಜವಾಗಿ ಖುಷಿಯಿದೆ.
ಎ ಆರ್ ರೆಹಮಾನ್ ಅವರೊಡಗಿನ ಒಡನಾಟವಾಗಿದ್ದು ಹೇಗೆ?
ಮಂಗಳೂರಿನ ಸುರತ್ಕಲ್ ನಲ್ಲಿರುವ NITK ಕಾಲೇಜ್ನಲ್ಲಿ ಮೆಕ್ಯಾನಿಕಲ್ ಎಂಜನಿಯರಿಂಗ್ ಮುಗಿಸಿದ ನಂತರ ಬೆಂಗಳೂರಿನ ರಾಬರ್ಟ್ ಬಾಸ್ಕ್ ಎಂಬ ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿದೆ. ನಂತರ ಕೆಲಸ ಬಿಟ್ಟು ಚೆನ್ನೈಯಲ್ಲಿರುವ ಎ ಅರ್ ರಹಮಾನ್ ಅವರ KM ಕಾಲೇಜ್ ಆಫ್ ಮ್ಯೂಸಿಕ್ ಅಂಡ್ ಟೆಕ್ನಾಲಜಿ ಸೇರಿಕೊಂಡು ಸಂಗೀತದಲ್ಲಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಮಾಡಿದೆ, ಅಲ್ಲಿ ಅವರ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಕೆಲವೊಂದು ಕೋರಸ್ ಸೆಷನ್ ಗಳಿಗೆ ಹೋಗುತ್ತಿದ್ದೆ, ಮತ್ತೆ ಅವರೊಂದು NAFS ಎಂಬ ವೋಕಲ್ ಜಾಝ್ ಬ್ಯಾಂಡ್ ಒಂದನ್ನು ಶುರು ಮಾಡಿದರು, ಅದರಲ್ಲಿ ನಾನು ಸೇರಿ ಹಾಡಲು ಶುರುಮಾಡಿದ ಕೆಲವು ತಿಂಗಳಲ್ಲಿ ಅವರು ನನ್ನನ್ನು ಗುರುತಿಸಲು ಶುರು ಮಾಡಿದರು ಅನಿಸುತ್ತೆ, ಅದೂ ಅಲ್ಲದೇ ಅವರದು ಯಾವಾಗಲೂ ಹೊಸಬರನ್ನು ಅವಕಾಶವನ್ನು ಕೊಟ್ಟು ಹುರಿದುಂಬಿಸುವ ಸ್ವಭಾವ, ವಿಷಯ ಇದೆ ಅಂತ ಅನಿಸಿದರೆ, ಇಂಪ್ರೂವ್ ಮಾಡಬಹುದು ಅನಿಸಿದರೆ ಹೆಚ್ಚೆಚ್ಚು ಅವಕಾಶ ಕೊಟ್ಟು ಕಲಿಯಲಿಕ್ಕೆ ಪ್ರೇರೇಪಿಸುತ್ತಾರೆ. ಹಾಗೆ ನಂತರದ ದಿನಗಳಲ್ಲಿ ಟ್ರ್ಯಾಕ್ ಹಾಡುಗಳನ್ನು ಹಾಡಲು ನನ್ನನ್ನು ಅವರ ಸ್ಟುಡಿಯೋಗೆ ಕರೆಯುತ್ತಿದ್ದರು ಹಾಗೆ ಪರಿಚಯ ಮುಂದುವರೆದು ಸುಮಾರು ಮೂರರಿಂದ ನಾಲ್ಕು ವರ್ಷ ಅವರ ಸ್ಟುಡಿಯೋಗೆ ಬೇರೆ ಬೇರೆ ಸಿನಿಮಾದ ಟ್ರ್ಯಾಕ್ ಹಾಡುಗಳನ್ನು ಹಾಡಿದೆ. ಈ ರೀತಿ ಶುರುವಾದ ಅವರೊಂದಿಗಿನ ಒಡನಾಟ ಇಂದಿನ ‘ ತುಂಬಿ ತುಳ್ಳಲ್ ‘ ಹಾಡಿನ ತನಕ ಮುಂದುವರೆದಿದೆ.
ನಿಮ್ಮ ಈವರೆಗಿನ ಒಟ್ಟು ಸಂಗೀತದ ಪಯಣದ ಬಗ್ಗೆ ಹೇಗಿತ್ತು?
2010 ರಲ್ಲಿ ಬಿಡುಗಡೆಯಾದ ‘ಕಿರಾತಕ’ ಚಿತ್ರದ ‘ಕೆಂದಾವರೆ ಹೂವೆ’ ನಾನು ಹಾಡಿದ ಮೊದಲ ಹಾಡು, ಅವಕಾಶ ಕೊಟ್ಟವರು ವಿ. ಮನೋಹರ್. ಅಲ್ಲಿಂದ ಇಲ್ಲಿಯತನಕ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಹಾಡುತ್ತಾ ಬಂದಿದ್ದೇನೆ, ಹೆಚ್ಚಿನವು ಕನ್ನಡದ್ದೇ ಆಗಿವೆ. ಹಿನ್ನೆಲೆ ಗಾಯಕನಾಗಿ ಮೊದಲಿಗೆ ಕಿರಾತಕ’,
ದಂಡುಪಾಳ್ಯ’, `ದುಷ್ಟ’ ಹೀಗೆ ಕೆಲವು ಸಿನಿಮಾಗಳಿಗೆ ಹಾಡಿದ್ದೇನಾದರೂ ಪೂರ್ಣ ಪ್ರಮಾಣದಲ್ಲಿ ಸಿನಿಮಾ ಸಂಗೀತ ಕ್ಷೇತ್ರಕ್ಕೆ 2013 ರಲ್ಲಿ ಕಾಲಿಟ್ಟೆ ಎಂದು ಹೇಳಬಹುದು. ಆಗ ನನ್ನನ್ನು ಮೊದಲಿಗೆ ಗುರುತಿಸಿ ಅವಕಾಶ ಕೊಟ್ಟವರು ಸಂಗೀತ ನಿರ್ದೇಶಕ ‘ಗಿರಿಧರ್ ದಿವಾನ್’. ಆಗಷ್ಟೇ ಬಹುರಾಷ್ಟ್ರೀಯ ಕಂಪನಿ ಯ ಕೆಲಸ ಬಿಟ್ಟಿದ್ದ ನನಗೆ ಅವರು ತುಂಬಾನೇ ಆತ್ಮವಿಶ್ವಾಸ ತುಂಬಿದ್ದಲ್ಲದೆ ಕೆಲಸವನ್ನೂ ಕೊಟ್ಟರು, ಅದರಿಂದ ನಾನು ತುಂಬಾ ಕಲಿತೆ, ಅವರ ಜತೆ ‘ಮೇಲ್ಕೋಟೆ ಮಂಜ ‘ ಸೇರಿದಂತೆ ಅವರ ಸಂಗೀತ ನಿರ್ದೇಶನದ ಹಲವಾರು ಸಿನಿಮಾಗಳಿಗೆ ಪ್ರೋಗ್ರಾಮಿಂಗ್ ಮಾಡಿದೆ, ಅದರಿಂದ ನನಗೆ ಹಿನ್ನೆಲೆ ಸಂಗೀತ ಬಗ್ಗೆ, ಒಬ್ಬ ಸಂಗೀತ ನಿರ್ದೇಶಕನ ಜೊತೆ ಕೆಲಸ ಕಲಿಯುವುದರ ಬಗ್ಗೆ ತುಂಬಾನೇ ಅನಭವ ಆಯಿತು. ಒಂದು ಸಮಯದಲ್ಲಿ ಸೀರಿಯಲ್ ಕ್ಷೇತ್ರದಲ್ಲಿ ಗಿರಿಧರ್ ಅವರದ್ದೇ ಕಾರುಬಾರು, ಸುಮಾರು ಹತ್ತರಿಂದ ಹದಿನೈದು ಧಾರಾವಾಹಿಗಳಿಗೆ ಅವರೇ ಸಂಗೀತ ಮಾಡಿದ್ದರು, ಆ ಎಲ್ಲಾ ಧಾರಾವಾಹಿಗಳಿಗೂ ಕೆಲಸ ಮಾಡಿದ ಅನುಭವ ಪಡೆದುಕೊಂಡೆ. 2015 ರಲ್ಲಿ ರಘು ದೀಕ್ಷಿತ್ ಅವರ ಪರಿಚಯವಾಯಿತು, ಚೆನ್ನೈ ನಲ್ಲಿ ಇದ್ದ ಸಮಯದಲ್ಲಿ ಮಣಿಕಾಂತ್ ಕದ್ರಿ ಅವರ ಪರಿಚಯವಾಯಿತು, ಅವರೂ ಕೆಲಸ ಕೊಟ್ಟರು, ಹಾಗೆ ಮುಂದುವರೆದು ಅರ್ಜುನ್ ಜನ್ಯ, ಎಲ್ ಎನ್ ಶಾಸ್ತ್ರಿ, ಚರಣ್ ರಾಜ್ ಸೇರಿದಂತೆ ಹಲವಾರು ಸಂಗೀತ ನಿರ್ದೇಶಕರಿಗೆ ಪ್ರೋಗ್ರಾಮಿಂಗ್ ಮಾಡಿದ ಅನುಭವ ಇದೆ, ಬಿಟ್ಟರೆ ತಮಿಳಿನಲ್ಲಿ ಎ ಆರ್ ರೆಹಮಾನ್ ಸೇರಿದಂತೆ ಕಾರ್ತಿಕ್, ಹಿಪ್ ಹಾಪ್ ತಮಿಳ ಅವರಿಗೂ ಸಹ ಪ್ರೋಗ್ರಾಮಿಂಗ್ ಮಾಡಿದ್ದೇನೆ.
ಮುಂದಿರುವ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ!!
2018 ರಲ್ಲಿ ಡ್ಯಾನಿಷ್ ಸೇಠ್ ನಟಿಸಿದ್ದ ‘ಹಂಬಲ್ ಪೊಲಿಟಿಶಿಯನ್ ನೊಗ್ರಾಜ್’ ಸಿನಿಮಾ ತೆರೆಕಂಡಿತ್ತು. ಈಗ ಅದೇ ಹೆಸರಿನ ಕನ್ನಡ ವೆಬ್ ಸೀರೀಸ್ ಹೊರಬರುತ್ತಿದ್ದು ಅಪ್ಲಾಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಸಾದ್ ಖಾನ್ ಮತ್ತು ಡ್ಯಾನಿಷ್ ಸೇಠ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ವೆಬ್ ಸೀರೀಸ್ ಗೆ ನಾನು ಸಂಗೀತ ನಿರ್ದೇಶನ ಮಾಡುತ್ತಿದ್ದೇನೆ. ಚಿತ್ರತಂಡದಲ್ಲಿ ಕೆಲಸ ಮಾಡಿರುವ ತಂತ್ರಜ್ಞರೇ ಇಲ್ಲಿಯೂ ಕೆಲಸ ಮಾಡಲಿದ್ದು ಈ ಪ್ರಾಜೆಕ್ಟ್ ಬಗ್ಗೆ ತುಂಬಾನೇ ಉತ್ಸುಕನಾಗಿದ್ದೇನೆ. ಅದು ಬಿಟ್ಟರೆ ತಮಿಳಿನ ಗೌತಮ್ ವಾಸುದೇವ ಮೆನನ್ ನಿರ್ದೇಶನದ ಕಿರುಚಿತ್ರಕ್ಕೆ ಹಾಗೆ ಸುಶಾಂತ್ ಸಿಂಘ್ ರಜಪೂತ್ ಅಭಿನಯದ ‘ದಿಲ್ ಬೇಚಾರ’ ಸಿನಿಮಾದ ಸಂಗೀತಕ್ಕೆ ಪ್ರೋಗ್ರಾಮಿಂಗ್ ಕೆಲಸ ಮಾಡಿದ್ದೇನೆ. ಎರಡೂ ಚಿತ್ರಗಳು ಸದ್ಯದಲ್ಲೇ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿವೆ.
ಹಿನ್ನೆಲೆ ಗಾಯಕನಾಗಿ ಸಿಗುತ್ತಿರುವ ಅವಕಾಶಗಳು ಹೇಗಿವೆ?
‘ಲವ್ ಮಾಕ್ಟೈಲ್’ ಚಿತ್ರದ ನಂತರ ಹಿನ್ನೆಲೆ ಗಾಯಕನಾಗಿ ತುಂಬಾ ಅವಕಾಶಗಳು ಬಂದಿವೆ. ಜತೆಗೆ ಜವಾಬ್ದಾರಿ ಕೂಡ ಹೆಚ್ಚಿದೆ. ತಾಯಂದಿರ ದಿನದ ಸಲುವಾಗಿ ‘ಸಾವಿರದ ಪ್ರಣಾಮ’ ಎಂಬ ಮ್ಯೂಸಿಕಲ್ ವಿಡಿಯೋ ಒಂದಕ್ಕೆ ನಾನೇ ಹಾಡಿ, ಸಂಗೀತ ಸಂಯೋಜನೆ ಮಾಡಿ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದೆ. ಅದು ಬಿಟ್ಟರೆ ಆರ್ ಜೆ ರೋಹಿತ್ ಅಭಿನಯದ ‘ ರೌಡಿ ಫೆಲೋ ‘ ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದೇನೆ. ದಿನಗಳೆದಂತೆ ನಾನು ಹಾಡುವ ಕನ್ನಡ ಹಾಡುಗಳ ಸಂಖ್ಯೆ ಏರುಗತಿಯಲ್ಲಿ ಇರುವುದಂತೂ ಖಚಿತ. ಹಲವಾರು ಸಿನಿಮಾಗಳು ಕೈಯಲ್ಲಿವೆ. ಲಾಕ್ ಡೌನ್ ಇರುವ ಕಾರಣ ಕೆಲವು ಸಿನಿಮಾಗಳ ಕೆಲಸಗಳು ಪ್ರಸ್ತುತ ನಿಂತಿವೆ.
ಸಂದರ್ಶಕರು: ಸುಜಯ್ ಬೆದ್ರ