ಬ್ಯೂಟಿ ಕ್ವೀನು ಈಗ ರಾಣಿ ಜೇನು..!

ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳಿಗೆ ಕೊರತೆ ಇಲ್ಲ. ಆದರೆ ಗುಣಮಟ್ಟದಲ್ಲಿ ಕಾಣಿಸುವವುಗಳು ಕಡಿಮೆ. ಆದರೆ ಅವುಗಳಿಗೆ ಅಪವಾದ ಎನ್ನುವ ಹಾಗೆ ‘ರಾಣಿ ಜೇನು’ ಎನ್ನುವ ಕಿರು ಸಾಕ್ಷ್ಯಚಿತ್ರ ಸಿದ್ಧವಾಗಿದೆ. ಅದರ ಮೂಲಕ ಮೇಘ ಶೆಟ್ಟಿ ಎನ್ನುವ ಬ್ಯೂಟಿ ಕ್ವೀನ್ ಪರುಚಯವಾಗುತ್ತಿದ್ದಾರೆ. `ಡ್ಯಾಮ್ 36 ಸ್ಟುಡಿಯೊಸ್’ ಅಡಿಯಲ್ಲಿ ಲೋಕೇಶ್ ಯನ್ ಗೌಡ ಅವರು ನಿರ್ಮಾಣ ಮಾಡಿರುವ ಈ ಚಿತ್ರವು ಮುಂದಿನ ವಾರ ಬಿಡುಗಡೆಯಾಗಲಿದೆ. ಈಗಾಗಲೇ ಪೋಸ್ಟರ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿರುವ ನಾಯಕಿ ಮೇಘಾ ಶೆಟ್ಟಿಯವರ ಜತೆಗೆ ಸಿನಿಕನ್ನಡ.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.

`ರಾಣಿ ಜೇನು’ ನಿಮ್ಮ ಮೊದಲ ಕಿರುಚಿತ್ರವೇ?

ಹೌದು. ಆದರೆ ನಟನೆಯ ವಿಚಾರಕ್ಕೆ ಬಂದರೆ ನನಗೆ ಇದು ಹೊಸ ಅನುಭವವೇನಲ್ಲ. ಆಲ್ಬಮ್ ಸಾಂಗ್, ವೆಬ್ ಸೀರೀಸ್ ಸೇರಿದಂತೆ ಕಳೆದ ಮೂರು ವರ್ಷಗಳಿಂದ ನೂರಾರು ಜಾಹೀರಾತುಗಳಲ್ಲಿ ನಟಿಸಿದ್ದೇನೆ. ಆದರೆ ಕಿರುಚಿತ್ರ ವಿಭಾಗದಲ್ಲಿ ಇದೇ ಪ್ರಥಮ ಅನುಭವ.

ರಾಣಿಜೇನು ಕಿರುಚಿತ್ರದಲ್ಲಿ ನಿಮ್ಮ ಪಾತ್ರವೇನು?

ಚಿತ್ರದಲ್ಲಿ ಒಂದು ರೀತಿ ನಾನೇ ರಾಣಿ ಜೇನು! ಇದು ನೈಜ ಕತೆ ಆಧಾರಿಸಿದ ಚಿತ್ರ. ಗಂಗೂಬಾಯಿ ಕಥೈವಾಡಿ ಎನ್ನುವ ವೇಶ್ಯೆಯ ಬದುಕಿನ ಬಗ್ಗೆ ಹೇಳುವ ಈ ಚಿತ್ರದಲ್ಲಿ ಎರಡೇ ಪಾತ್ರಗಳಿವೆ. ವ್ಯೇಶ್ಯೆ ಹಾಗೂ ‘ಲೇಡಿ ಡಾನ್’ ನಾಮಾಂಕಿತ ಗಂಗೂಬಾಯಿ ಕಥೈವಾಡಿ ಮತ್ತು ಆಕೆಯ ನಗ್ನ ಚಿತ್ರವನ್ನು ಬಿಡಿಸಲು ಬರುವ ಪೃಥ್ವಿರಾಜ್ ಎನ್ನುವ ಕಲಾವಿದ. ಇಲ್ಲಿ ಕಲಾವಿದನಾಗಿ ‘ಕರುನಾಡ ಸೇವಕ ಸಂಘ’ದ ಅಧ್ಯಕ್ಷರ ಪುತ್ರ ದರ್ಶನ್ ಗೌಡ ನಿರ್ವಹಿಸಿದ್ದಾರೆ. ಚಿತ್ರ ಬಿಡಿಸಲು ಒಪ್ಪಿಕೊಂಡ ನಂತರ ಪೃಥ್ವಿರಾಜ್ ಮತ್ತು ಗಂಗೂಬಾಯಿಯ ನಡುವೆ ನಡೆಯುವ ಮಾತುಕತೆಯೇ ಈ ಸಾಕ್ಷ್ಯಚಿತ್ರದ ಒಟ್ಟು ಹೂರಣ.

ವೇಶ್ಯೆಯ ಪಾತ್ರ ಎಂದಾಗ ಆತಂಕವಾಗಿತ್ತೇ ?

ಸಹಜವಾಗಿ ಆತಂಕವಿತ್ತು. ಆದರೆ ನಿರ್ದೇಶಕ ಮಿಥುನ್ ಸುವರ್ಣ ಅವರು ಸ್ಕ್ರಿಪ್ಟ್ ನ ಸಂಪೂರ್ಣ ವಿವರಣೆ ನೀಡಿದಾಗಲೇ ನನಗೆ ಗಂಗೂಬಾಯಿ ಕಥೈವಾಡಿಯವರ ಸಮಾಜಮುಖಿ ಕೆಲಸಗಳ ಅರಿವಾಗಿತ್ತು. ತಾನು ಅನುಭವಿಸಿದ ಶೋಷಣೆ ಬೇರೆ ಯಾವುದೇ ಹೆಣ್ಣುಮಗಳಿಗೂ ಒದಗಬಾರದು ಎಂಬ ಕಾರಣಕ್ಕೆ ಆಕೆ ಪಟ್ಟ ಶ್ರಮ, ಶೋಷಿತ ಹೆಣ್ಣುಮಕ್ಕಳಿಗೆ ಆಧಾರ ಸ್ತಂಭವಾಗಿದ್ದು, ಅರವತ್ತರ ದಶಕದ ಭೂಗತ ಜಗತ್ತು ಮತ್ತು ರಾಜಕೀಯ ವ್ಯವಸ್ಥೆ ಎರಡರಲ್ಲೂ ತನ್ನದೇ ಛಾಪು ಒತ್ತಿದ್ದ ಆಕೆಯ ಗಟ್ಟಿತನ ಇದೆಲ್ಲ ವಿಚಾರಗಳು ನನಗೆ ತಿಳಿಯಿತು. ಆಗಲೇ ಅವರ ಬಗ್ಗೆ ಒಂದು ಬಗೆಯ ಗೌರವ ಮೂಡಿತ್ತು. ಮಾತ್ರವಲ್ಲ, ಇದೇ ಮಹಿಳೆಯ ಕತೆಯನ್ನು ಹಿಂದಿಯಲ್ಲಿ ಸಂಜಯ್ ಲೀಲ ಬನ್ಸಾಲಿ ನಿರ್ದೇಶಿಸುತ್ತಿದ್ದು ಆಲಿಯಾ ಭಟ್ ನಾಯಕಿಯ ಪಾತ್ರ ಮಾಡಿರುವುದು ತಿಳಿದಾಗ ಪಾತ್ರದ ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿತು.

ಸದ್ಯದ ನಿಮ್ಮ ನಿರೀಕ್ಷೆಗಳೇನು?

ಮೊದಲನೆಯದಾಗಿ ರಾಣಿಜೇನು’ ಬಿಡುಗಡೆಯಾಗಬೇಕು. ಮುಂದಿನ ಶುಕ್ರವಾರ ಎಂ ಎಕ್ಸ್ ಪ್ಲೇಯರ್ ಆ್ಯಪ್ ಹಾಗೂ 'ಅಖಿಲ ಕರ್ನಾಟಕ ಡಾ. ವಿಷ್ಣುಸೇನಾ ಸಮಿತಿ'ಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಅವರ ‘ಕನ್ನಡ ಮಾಣಿಕ್ಯ’ ಯೂಟ್ಯೂಬ್ ವಾಹಿನಿಯಲ್ಲಿ ತೆರೆಕಾಣಲಿದೆ. ಅದರ ಪ್ರತಿಕ್ರಿಯೆಗಾಗಿ ನಿರೀಕ್ಷಿಸುತ್ತಿದ್ದೇನೆ. ಇದಲ್ಲದೆ ಗಿರೀಶ್ ಪರಮೇಶ್ವರ್ ನಿರ್ದೇಶನದ ಇನ್ನೂ ಹೆಸರಿಡದ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಮುಂದಿನ ತಿಂಗಳಲ್ಲಿ ಟೀಸರ್ ಮುಖಾಂತರ ಹೊರ ಹಾಕುವ ಸಾಧ್ಯತೆ ಇವೆ.

ಸಂದರ್ಶಕರು: ಸುಜಯ್ ಬೆದ್ರ.

Recommended For You

Leave a Reply

error: Content is protected !!