ಕೆಜಿಎಫ್ ಜೊತೆಗೆ ಬರುತ್ತಾ ಆರ್ ಆರ್ ಆರ್ ?

ಕೆಜಿಎಫ್ ಏಪ್ರಿಲ್ ಹದಿನಾಲ್ಕಕ್ಕೆ ಬಿಡುಗಡೆಯಾಗುವ ಬಗ್ಗೆ ಈಗಾಗಲೇ ಅನೌನ್ಸ್ ಆಗಿದೆ. ಅದರ ಬಳಿಕ ತಮ್ಮ ಚಿತ್ರವನ್ನು ಅದೇ ದಿನ ಬಿಡುಗಡೆ ಮಾಡುತ್ತಿರುವ ವಿಚಾರಕ್ಕಾಗಿ ಖುದ್ದು ಆಮೀರ್ ಖಾನ್ ಯಶ್ ಅವರಿಗೆ ಕ್ಷಮೆ ಕೇಳಿದ್ದನ್ನು ಕೂಡ ಗಮನಿಸಿದ್ದೇವೆ. ಆದರೆ ಇದೇ ವಾರ ತೆರೆಕಾಣಬೇಕಿದ್ದ ರಾಜಮೌಳಿ ಸಿನಿಮಾ ಆರ್ ಆರ್ ಆರ್ ಕೂಡ ಏಪ್ರಿಲ್​ ತಿಂಗಳಿಗೆ ಪೋಸ್ಟ್ ಪೋನ್ ಆಗಿದೆ. ಹಾಗಾಗಿ ಅದೇ ತಿಂಗಳು ತೆರೆಕಾಣಲಿರುವ ಕೆಜಿಎಫ್ ಚಾಪ್ಟರ್ 2ರ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ ಒಂದು ಚಿತ್ರವನ್ನು ಕನ್ನಡಿಗರಿಗಿಂತ ಒಂದು ಪಟ್ಟು ಹೆಚ್ಚೇ ಮೆಚ್ಚಿದ್ದು ಟಾಲಿವುಡ್ ಮಂದಿ ಎನ್ನಬಹುದು. ಅದಕ್ಕೆ ಕಾರಣ ಚಿತ್ರದಲ್ಲಿ ಸಾಹಸ, ಕ್ರೌರ್ಯ ಎಲ್ಲವೂ ಬಹುತೇಕ ತೆಲುಗು ಶೈಲಿಯಲ್ಲೇ ಇತ್ತು ಎಂದು ಹೇಳಬಹುದು. ಚಿತ್ರ ಬಿಡುಗಡೆಯಾದ ಬಳಿಕ ಕನ್ನಡ, ತೆಲುಗು ಸೇರಿದಂತೆ ರಾಷ್ಟ್ರಮಟ್ಟದಲ್ಲೇ ಗುರುತಿಸಿಕೊಂಡಿತ್ತು. ಯಶ್​ ಗೆ ಪ್ಯಾನ್ ಇಂಡಿಯಾ ಲೆವೆಲಲ್ಲಿ ಫ್ಯಾನ್ಸ್ ಸೃಷ್ಟಿಯಾಗಿದ್ದರು. ಅಂಥ ಚಿತ್ರದ ಎರಡನೇ ಭಾಗ ಎನ್ನುವ ಕಾರಣಕ್ಕಾಗಿ ಕೆಜಿಎಫ್ ಚಾಪ್ಟರ್ ಎರಡರ ಮೇಲೆ ಅತಿಯಾದ ನಿರೀಕ್ಷೆ ಇದೆ. ಅದೇ ಸಂದರ್ಭದಲ್ಲಿ ಭಾರತೀಯ ಬಾಕ್ಸಾಫೀಸ್ ದಿಗ್ಗಜ ಆಮೀರ್ ಖಾನ್ ಸಿನಿಮಾ ಮತ್ತು ಇದೀಗ ರಾಜಮೌಳಿಯಂಥ ನಿರ್ದೇಶಕ ಸ್ಟಾರ್ ನಾಯಕರ ದಂಡನ್ನೇ ಇರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಆತಂಕದ ಸಂದರ್ಭ ಸೃಷ್ಟಿಸಿದೆ.

ಎಷ್ಟೇ ಸಿನಿಮಾ ಜೊತೆಯಾಗಿ ಬಂದರೂ ಚೆನ್ನಾಗಿರುವ ಸಿನಿಮಾವನ್ನು ಜನ ಖಂಡಿತವಾಗಿ ನೋಡುತ್ತಾರೆ ಎನ್ನುವುದು ಹಳೆಯ ಮಾತು. ಯಾಕೆಂದರೆ ಇದೀಗ ಜೊತೆಯಾಗಿ ಬರುತ್ತಿರುವ ಸಿನಿಮಾಗಳೆಲ್ಲ ಚೆನ್ನಾಗಿರುವ ಬಗ್ಗೆ ಯಾರಿಗೂ ಸಂದೇಹವೇ ಇಲ್ಲ. ಆಮೀರ್ ಖಾನ್ ತಮ್ಮ ಲಾಲ್ ಸಿಂಗ್ ಛಡ್ಡ ಚಿತ್ರಕ್ಕಾಗಿ ಎಷ್ಟೊಂದು ಶ್ರಮ ವಹಿಸಿ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜಮೌಳಿಯಂತೂ ಇದುವರೆಗೆ ಸೋಲನ್ನೇ ಕಂಡಿರದ ನಿರ್ದೇಶಕ. ಇಂಥ ಸಿನಿಮಾಗಳು ಜೊತೆ ಜೊತೆಯಾಗಿ ಬಂದರೆ ಮೊದಲ ಸಮಸ್ಯೆ ಎದುರಾಗುವುದೇ ಚಿತ್ರ ಮಂದಿರಗಳ ವಿಚಾರದಲ್ಲಿ. ಪ್ರತಿ ಸಿನಿಮಾಕ್ಕೂ ಸಿಗಲೇಬೇಕಾದ ದೊಡ್ಡ ಮಟ್ಟದ ಥಿಯೇಟರ್ ವ್ಯವಸ್ಥೆ ಕುಂಠಿತವಾಗುತ್ತದೆ. ಆಗ ಸಹಜವಾಗಿ ಆರಂಭದ ದಿನಗಳಲ್ಲಿ ಆಗಬೇಕಾಗಿರುವ ಭರ್ಜರಿ ಕಲೆಕ್ಷನ್ ಗೆ ಹೊಡೆತ ಬೀಳುವುದು ಖಚಿತ.

ಎಲ್ಲಕ್ಕಿಂತ ಮುಖ್ಯವಾಗಿ ಆರ್ ಆರ್ ಆರ್ ಸಿನಿಮಾ ಮುಂದಕ್ಕೆ ಹಾಕಲು ಕಾರಣವಾದಂಥ ಒಮಿಕ್ರಾನ್ ಸಮಸ್ಯೆ ಏಪ್ರಿಲ್ ಹೊತ್ತಿಗೆ ಯಾವ ಮಟ್ಟಕ್ಕೆ ಹೋಗಿರುತ್ತದೆ ಎನ್ನುವ ಬಗ್ಗೆ ಯಾರಿಗೂ ಕಲ್ಪನೆ ಇಲ್ಲ. ಕಡಿಮೆಯಾಗುತ್ತಾ ಅಥವಾ ಮತ್ತೊಂದು ಹೊಸ ಅಲೆ ಬರುತ್ತಾ ಎಂದು ಹೇಳುವುದು ಯಾರಿಂದಲೂ ಆಗುತ್ತಿಲ್ಲ. ಒಟ್ಟಿನಲ್ಲಿ ಕೊರೊನಾ ಶುರುವಾದ ಬಳಿಕ ಸಿನಿಮಾರಂಗವಂತೂ ದೊಡ್ಡ ಮಟ್ಟದ ಅತಂತ್ರತೆಯನ್ನೇ ಎದುರಿಸುತ್ತಿರುವುದು ನಿಜ.

Recommended For You

Leave a Reply

error: Content is protected !!