`ಶಿವಣ್ಣನೇ ನನ್ನ ಅದೃಷ್ಟ’ ಎನ್ನುತ್ತಾರೆ ಪ್ರಶಾಂತ್ ಪಚ್ಚಿ!

ಒಬ್ಬ ನಿಜವಾದ ಕಲಾವಿದ ಹಲವರಿಗೆ ಸ್ಫೂರ್ತಿಯಾಗಬಲ್ಲ. ಅದನ್ನು ಡಾ.ರಾಜ್ ಕುಮಾರ್ ಅವರ ಬಳಿಕ ಕನ್ನಡದಲ್ಲಿ ಸಮರ್ಥವಾಗಿ ಸಾಬೀತು ಪಡಿಸುತ್ತಿರುವವರು ಡಾ.ಶಿವರಾಜ್ ಕುಮಾರ್. ಯಾಕೆಂದರೆ ಅವರನ್ನು ನಂಬಿ ಚಿತ್ರೋದ್ಯಮ ಮಾತ್ರವಲ್ಲ, ಅದಕ್ಕೆ ಸಂಬಂಧವೇ ಇಲ್ಲದ ಮಂದಿ ಕೂಡ ಬದುಕು ಕಟ್ಟಿಕೊಂಡಿದ್ದಾರೆ. ನಟನೋರ್ವ ಸ್ಟಾರ್ ಆಗುವುದೇ ಆಗ. ನಕ್ಷತ್ರಗಳು ಬಾನಿನಲ್ಲೇ ಇದ್ದುಕೊಂಡು ಅಸಂಖ್ಯಾತ ಮಂದಿಯನ್ನು ಆಕರ್ಷಿಸುತ್ತವೆ. ಆದರೆ ಶಿವರಾಜ್ ಕುಮಾರ್ ಆಕರ್ಷಣೆ ಮೂಡಿಸಿ ದೂರದಲ್ಲೇ ನಿಂತವರಲ್ಲ. ನಿಜ ಬದುಕಿಗೂ ಹತ್ತಿರವಾಗುತ್ತಲೇ ಇನ್ನಷ್ಟು ಎತ್ತರವಾದವರು. ಅದಕ್ಕೊಂದು ತಾಜಾ ಉದಾಹರಣೆ ಛಾಯಾಗ್ರಾಹಕ ಪ್ರಶಾಂತ್ ಪಚ್ಚಿ. ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಕ್ಯಾಂಡೀಡ್ ಛಾಯಾಗ್ರಾಹಕ ಎಂದು ಹೆಸರು ಮಾಡಿರುವ ಪ್ರಶಾಂತ್ ಪಚ್ಚಿಯವರು ಶಿವಣ್ಣನ ಬರ್ತ್ ಡೇ ಗೆ ಮುಂಚಿತವಾಗಿಯೇ ಮನೆಗೆ ಹೋಗಿ ಆಳೆತ್ತರದ ಫೊಟೋ ಒಂದನ್ನು ನೀಡಿದ್ದಾರೆ. ಅದಕ್ಕೆ ಕಾರಣವಾದ ಕುತೂಹಲಕಾರಿ ಅಂಶಗಳನ್ನು ಅವರು ಸಿನಿಕನ್ನಡ.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ.

ಶಿವರಾಜ್ ಕುಮಾರ್ ನಿಮಗೆ ಏಕೆ ಇಷ್ಟ?

ಬಹುಶಃ ಅವರ ಸಿನಿಮಾ ನೋಡಿದವರಲ್ಲಿ ಈ ಪ್ರಶ್ನೆ ಕೇಳುವ ಅಗತ್ಯವೇ ಇಲ್ಲ. ಯಾಕೆಂದರೆ ಅವರು ಎಲ್ಲ ರೀತಿಯಲ್ಲಿಯೂ ನಟಿಸಬಲ್ಲ ಕಲಾವಿದನಾಗಿ ಎಲ್ಲರಿಗೂ ಇಷ್ಟವಾಗಲೇಬೇಕು. ಆದರೆ ನನಗೆ ಒಬ್ಬ ಛಾಯಾಗ್ರಾಹಕನ ಕಣ್ಣಲ್ಲಿ ಅವರು ಹಲವು ರೀತಿಯಲ್ಲಿ ಇಷ್ಟ. ಅವರು ತುಂಬ ಫೊಟೋಜನಿಕ್. ಅಂದಹಾಗೆ ಇದನ್ನು ಕೂಡ ನಾನು ಹೇಳದೆ ಅವರ ಸಿನಿಮಾಗಳು, ಚಿತ್ರಗಳೇ ಹೇಳಿವೆ. ಅವರ ಮುಖದಲ್ಲಿ ಕ್ಷಣದೊಳಗೆ ಮಿಂಚಿ ಮರೆಯಾಗುವ ಭಾವನೆಗಳನ್ನು ಸೆರೆ ಹಿಡಿಯುವುದೇ ಒಂದು ಚಾಲೆಂಜ್. ಇನ್ನು ಪರಿಚಯ ಮಾಡಿಕೊಂಡ ಮೇಲೆಯಂತೂ ಅವರು ತೋರಿಸುವ ಆತ್ಮೀಯತೆಯನ್ನು ನೀವು ಯಾರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ.

ನಿಮ್ಮ ಈ ವಿಶೇಷ ಉಡುಗೊರೆಯ ಹಿಂದಿನ ಸ್ಫೂರ್ತಿ ಏನು?

ಕಳೆದ ಏಳೆಂಟು ವರ್ಷಗಳಿಂದ ನಾನು ಬೆಂಗಳೂರಲ್ಲಿ ಸಾಮಾನ್ಯ ಮದುವೆ, ಕಾರ್ಯಕ್ರಮಗಳ ಛಾಯಾಗ್ರಾಹಕನಾಗಿದ್ದೆ. ಇದರ ನಡುವೆ ಮೂರು ವರ್ಷಗಳಿಂದ ಒಂದಷ್ಟು ಸಿನಿಮಾ ತಾರೆಯರು ಪಾಲ್ಗೊಂಡ ಪಬ್ಲಿಕ್ ಇವೆಂಟ್‌ಗಳಿಗೆ ಹೋಗಿ ನಮ್ಮ ದುನಿಯಾ ವಿಜಯ್, ತೆಲುಗಿನ ಚಿರಂಜೀವಿ, ಪ್ರಭಾಸ್, ರಾಮ್ ಚರಣ್, ತಮನ್ನಾ ಮೊದಲಾದ ತಾರೆಯರ ಫೊಟೊ ತೆಗೆಯುವ ಅವಕಾಶ ಪಡೆದುಕೊಂಡೆ. ಆದರೆ ನನಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಕಳೆದ ವರ್ಷ ನಡೆದ `ಆಯುಷ್ಮಾನ್ ಭವ’ ಎನ್ನುವ ಸಿನಿಮಾದ ಪ್ರೆಸ್ಮೀಟ್‌ ಕಾರ್ಯಕ್ರಮ. ಅದರಲ್ಲಿ ರವಿಚಂದ್ರನ್, ಉಪೇಂದ್ರ, ಸುದೀಪ್ ಅವರ ಫೊಟೋಗಳನ್ನು ತೆಗೆಯುವ ಅದ್ಭುತ ಅವಕಾಶ ದೊರಕಿತು. ಎಲ್ಲ ಫೊಟೋಗಳಿಗೂ ಮೆಚ್ಚುಗೆ ಸಿಕ್ಕಿತು. ಆದರೆ ಶಿವಣ್ಣ ಎಂಟ್ರಿಯಾಗುತ್ತಿದ್ದ ಹಾಗೆ ಬಾಲನಟಿ ಅಂಕಿತಾ ಕಡೆಗೆ ನೋಡಿ ಒಂದು ಸ್ಮೈಲ್ ಕೊಟ್ಟರು. ಆ ಕ್ಷಣ ನಾನು ತೆಗೆದ ಫೊಟೋ ಬಗ್ಗೆ ಸಾಕಷ್ಟು ಮಂದಿ ವಿಚಾರಿಸಿದರು. ಅಲ್ಲಿಂದ ನನ್ನ ವೃತ್ತಿ ಬದುಕಲ್ಲೇ ಬದಲಾವಣೆ ಆಯಿತು.

ಶಿವಣ್ಣನ ಫೊಟೋ ತೆಗೆದ ಮೇಲೆ ಆದಂಥ ಬದಲಾವಣೆಗಳೇನು?

ಶಿವಣ್ಣನ ಆ ಫೊಟೋಗಳು ವೈರಲ್ ಆಗುತ್ತಿದ್ದ ಹಾಗೆ ನನಗೆ ಅವಕಾಶಗಳು ಹೆಚ್ಚತೊಡಗಿದವು. ಮದುವೆ ಕಾರ್ಯಕ್ರಮಗಳ ಛಾಯಾಗ್ರಾಹಕ ಆಗಿದ್ದ ನನಗೆ ಸಿನಿಮಾ ಕ್ಷೇತ್ರದಿಂದ ಕರೆಗಳು ಬರತೊಡಗಿದವು. ಶಿವಣ್ಣನ ವೈರಲ್ ಆಗಿರುವ ಫೊಟೋದ ಛಾಯಾಗ್ರಾಹಕ ಎಂದೇ ಗುರುತಿಸತೊಡಗಿದರು. ಈ ಸಂದರ್ಭದಲ್ಲಿ ನಾನು ಮಾಧ್ಯಮದವರನ್ನು ಕೂಡ ನೆನಪಿಸಿಕೊಳ್ಳಬೇಕು. ಅದರಲ್ಲಿಯೂ ಅಂದು ಟಿವಿ 5 ಕಾರ್ಯಕ್ರಮದಲ್ಲಿ `ಶಿವಣ್ಣನ ಸಾಲ್ಟ್ ಆಂಡ್ ಪೆಪ್ಪರ್ ಲುಕ್ ಫೊಟೊ ತೆಗೆದ ಛಾಯಾಗ್ರಾಹಕ’ ಎಂದು ಪರಿಚಯಿಸಿದ ಸಿನಿಮಾ ವಿಭಾಗದ ಮುಖ್ಯಸ್ಥ ಲಕ್ಷ್ಮೀನಾರಾಯಣ ಸರ್ ಅವರ ಪ್ರೋತ್ಸಾಹವನ್ನು ಮರೆಯಲಾರೆ. ವಿಶೇಷ ಏನೆಂದರೆ ಪ್ರತಿ ಬಾರಿ ಶಿವಣ್ಣನ ವಿಚಾರ ಬಂದಾಗ ನನಗೆ ಅದೃಷ್ಟ ಖುಲಾಯಿಸಿದೆ. ಉದಾಹರಣೆಗೆ ಅವರಿಗೆ ಫೊಟೋ ಗಿಫ್ಟ್ ನೀಡಿದ ದಿನ ನಾನು ನಡೆಸಿದ ಮೇಘ ಶೆಟ್ಟಿಯವರ ಫೊಟೋ ಶೂಟ್ ಬಗ್ಗೆ ಪವರ್ ಟಿವಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು.

ಉಡುಗೊರೆ ನೋಡಿದ ಶಿವಣ್ಣ ಹೇಗೆ ಪ್ರತಿಕ್ರಿಯಿಸಿದರು?

ನಾನು ಅವರಿಂದ ನನ್ನ ಅದೃಷ್ಟದ ಬಾಗಿಲು ತೆರೆದಿರುವುದಾಗಿ ತಿಳಿಸಿದೆ. ಅದಕ್ಕೆ ಅವರು “ಅದೆಲ್ಲ ನೀವು ನನ್ನ ಮೇಲೆ ಇರಿಸಿರುವ ಪ್ರೀತಿಯಿಂದ ಹಾಗೆ ಅನಿಸಿದೆ. ಅದೇನಿದ್ದರೂ ನಿಮ್ಮ ಪ್ರತಿಭೆ. ನೀವು ಅಷ್ಟು ಚೆನ್ನಾಗಿ ತೆಗೆದಿರುವುದಕ್ಕೆ ಫೊಟೋ ಚೆನ್ನಾಗಿ ಬಂದಿದೆ. ಈ ಗಿಫ್ಟ್ ಖಂಡಿತಾ ನಾನು ಮರೆಯಲ್ಲ. ಸಾಧಾರಣವಾಗಿ ಮರೆಯಲಾಗದಷ್ಟು ದೊಡ್ಡ ಫೊಟೋವನ್ನೇ ಕೊಟ್ಟಿದ್ದೀರಿ. ನೀವು ಎಷ್ಟು ದೊಡ್ಡ ಗಿಫ್ಟ್ ಕೊಟ್ಟಿದ್ದೀರಿ ಎನ್ನುವುದಕ್ಕಿಂತ ನಿಮಗೆ ಎಷ್ಟು ತೃಪ್ತಿ ಇದೆ ಎನ್ನುವುದು ನನಗೆ ಮುಖ್ಯ. ನಿಮಗೆ ಇನ್ನಷ್ಟು ಉತ್ತಮ ಅವಕಾಶಗಳು ಸಿಗಲಿ” ಎಂದು ಆಶೀರ್ವಾದ ಮಾಡಿದರು. ನನಗೆ ಈ ಸಹಾಯ ಮಾಡಿರುವುದಕ್ಕೆ ಶ್ರೀಕಾಂತ್ ಸರ್ ಟೀಮಲ್ಲಿರುವ ಪುನೀತಣ್ಣನ ಸಹಾಯ ಮರೆಯಲಾರೆ. ಯಾಕೆಂದರೆ ಇಂಥದೊಂದು ಭೇಟಿಗೆ ನಾನು ತುಂಬ ಸಮಯದಿಂದ ಕಾದಿದ್ದೆ. ನನ್ನ ಹತ್ತು ತಿಂಗಳ ಮಗುವಿನ ಮುಡಿ ಕೊಡಬೇಕಾದ ದಿನಾಂಕವನ್ನು ಬದಲಾಯಿಸಿಕೊಂಡು ಶಿವಣ್ಣನ ಭೇಟಿಗೆ ಹೋಗಿದ್ದೆ!

ಕುಟುಂಬದ ಸಹಕಾರ ಹೇಗಿದೆ?

ನಾನು ಉತ್ತರ ಕರ್ನಾಟಕ ಗದಗದಲ್ಲಿನ ಬಿಂಕದಕಟ್ಟಿ ಎನ್ನುವ ಹಳ್ಳಿಯವನು. ನನ್ನ ತಂದೆಗೆ ಅಲ್ಲಿ ಟೀ ಅಂಗಡಿ ಇತ್ತು. ಅದರಲ್ಲೇ ನಾನು ಕೂಡ ವ್ಯಾಪಾರ ಮಾಡುತ್ತಿದ್ದೆ. ಬೆಂಗಳೂರಿಗೆ ಹೊರಟಾಗ ಇಲ್ಲಿ ಪಾತ್ರೆ ತೊಳೆಯುವ ಬದಲು ಅಲ್ಲೇನಾದರೂ ಸಾಧಿಸು ಎಂದು ಕಳಿಸಿಕೊಟ್ಟಿದ್ದರು. ಬರಿಗೈನಲ್ಲಿ ಬೆಂಗಳೂರಿಗೆ ಬಂದ ನನಗೆ ಕ್ಯಾಮೆರಾ ಕೊಳ್ಳಲು ಇಬ್ಬರು ಅಣ್ಣಂದಿರ ಸಹಾಯವಿತ್ತು. ಇದರ ನಡುವೆ ಒಂದೂವರೆ ವರ್ಷದ ಹಿಂದೆ ಸಕಲೇಶಪುರದ ಹುಡುಗಿ ಚೈತ್ರಾಳನ್ನು ಪ್ರೀತಿಸಿ ಮನೆಯವರ ಸಹಕಾರದೊಂದಿಗೆ ವಿವಾಹವಾಗಿದ್ದೇನೆ. ಈಗ ನಮ್ಮೊಂದಿಗೆ ಹತ್ತು ತಿಂಗಳ ಪುತ್ರ ನೂತನ್ ಇದ್ದಾನೆ. ಕುಟುಂಬ ಸಮೇತ ಶಿವಣ್ಣನ ಮನೆಗೆ ಹೋಗಿದ್ದೆ. ಆರಡಿ ಫ್ರೇಮ್ ಇದ್ದ ಫೊಟೋ ಆಗಿದ್ದ ಕಾರಣ ಓಮ್ನಿ ಗಾಡಿಯಲ್ಲಿ ಸಾಗಿಸಲು ಬಾಮೈದ ಸಹಾಯ ನೀಡಿದ್ದ. ಹಾಗೆ ಕುಟುಂಬ ಪ್ರತಿ ಹೆಜ್ಜೆಗೂ ಜತೆ ನೀಡಿದೆ. ಶಿವಣ್ಣ ಹೇಳಿದಂತೆ ಇನ್ನು ತುಂಬ ಆರ್ಡರ್ ಪಡೆದು ಒಳ್ಳೆಯ ಫೊಟೋಗ್ರಾಫರ್ ಆಗಿಯೇ ಹೆಸರು ಮಾಡಬೇಕು ಎನ್ನುವುದೇ ನನ್ನ ಗುರಿ.

Recommended For You

Leave a Reply

error: Content is protected !!
%d bloggers like this: