ಇಂದು ಕನ್ನಡದ ಜನಪ್ರಿಯ ನಟ ಶಿವರಾಜ್ ಕುಮಾರ್ ಜನ್ಮದಿನ. ಚಂದನವನದ ಮಂದಿ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಒಬ್ಬರಿಗಿಂತ ಒಬ್ಬರು ತಮ್ಮ ಆತ್ಮೀಯ ನೆನಪುಗಳನ್ನು ಹಂಚಿಕೊಳ್ಳುವ, ಶುಭ ಕೋರುವ ಕೆಲಸ ಮಾಡಿದ್ದಾರೆ. ಆದರೆ ಎಲ್ಲರಿಗಿಂತ ಆಕರ್ಷಕವಾದ ಶುಭಾಶಯವೊಂದನ್ನು ದುನಿಯಾ ವಿಜಯ್ ತೋರಿಸಿದ್ದಾರೆ ಎನ್ನಬಹುದು. ಅವರು ಬರೆದಿರುವುದು ನಾಲ್ಕೇ ಸಾಲುಗಳು. ಆದರೆ ಅದನ್ನು ಓದಿದವರಲ್ಲಿ ನಾಲ್ಕುನೂರು ಕುತೂಹಲದ ಸವಾಲುಗಳು ಸೃಷ್ಟಿಯಾಗಿವೆ.
ಹೌದು, ವಿಜಯ್ ಹೇಳಿರುವ ಋಣದ ಮಾತೇ ಇಲ್ಲಿ ವಿಶೇಷ ಅನಿಸಲು ಕಾರಣ. ಯಾಕೆಂದರೆ, ಅದು ಯಾವ ರೀತಿಯ ಋಣ ಇರಬಹುದು ಎನ್ನುವುದು ವಿಜಯ್ ಅಭಿಮಾನಿಗಳನ್ನಷ್ಟೇ ಅಲ್ಲ, ಶಿವಣ್ಣನ ಅಭಿಮಾನಿಗಳಲ್ಲಿಯೂ ಕುತೂಹಲ ಮೂಡಿಸಿದೆ. ಹಾಗೆ ನೋಡಿದರೆ ಚಿತ್ರರಂಗದಲ್ಲಿ ಪ್ರತಿ ಹಿರಿಯ ಕಲಾವಿದರ ಋಣದಲ್ಲೇ ಇಂದು ಹೊಸದಾಗಿ ಬರುವ ಕಲಾವಿದರ ಪ್ರವೇಶ ಇರುತ್ತದೆ! ಉದಾಹರಣೆಗೆ ಡಾ. ರಾಜ್ ಕುಮಾರ್ ಅವರ ಹೆಸರನ್ನೇ ತೆಗೆದುಕೊಳ್ಳಿ. ಇಂದು ತೆಲುಗು ಚಿತ್ರರಂಗದಿಂದ ಯುವ ನಟನೋರ್ವ ಏಕಕಾಲದಲ್ಲಿ ತೆಲುಗು ಮತ್ತು ಕನ್ನಡ ಭಾಷೆಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾಗುವುದಾದರೆ ಡಾ.ರಾಜ್ ಕುಮಾರ್ ಹೆಸರನ್ನು ಹೇಳಲೇಬೇಕಾಗುತ್ತದೆ. ಹಾಗಂತ ಆತ ಅದುವರೆಗೆ ಅಣ್ಣಾವ್ರ ಸಿನಿಮಾಗಳನ್ನು ನೋಡಿರಬೇಕಿಲ್ಲ. ಆದರೆ ಈ ನೆಲದಲ್ಲಿ ಕನ್ನಡ ಚಿತ್ರರಂಗ ಉಳಿದು ಬೆಳೆಯಲು ಕಾರಣವಾದ ವ್ಯಕ್ತಿಯೊಬ್ಬರನ್ನು ನೆನೆದು ಮುಂದಡಿ ಇಡುವುದು ಸೌಜನ್ಯತೆಯ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆ. ಅದೇ ರೀತಿ ಅಂಬರೀಷ್ ಅವರು ಕಲಾವಿದರ ಭವನದ ಸ್ಥಾಪನೆಯ ಸಂದರ್ಭದಲ್ಲಿ ಮಾತನಾಡುತ್ತಾ, “ಡಾ. ರಾಜ್ ಕುಮಾರ್ ಅವರು ಕಲಾವಿದರ ಸಂಘ ಸ್ಥಾಪಿಸಿದವರು. ಕಲಾವಿದರ ಭವನ ಕಟ್ಟುವುದು ಕೂಡ ಕನಸಾಗಿತ್ತು. ಅದಕ್ಕಾಗಿ ಇದಕ್ಕೆ ರಾಜ್ ಭವನ ಎಂದು ಹೆಸರಿಡುವುದಾಗಿ ಹೇಳಿದ್ದರು. ಇಂದು ಅಂಬರೀಶ್ ಅವರ ಚಿತ್ರಗಳನ್ನು, ಚಿತ್ರರಂಗದಲ್ಲಿ ಅವರು ಪಡೆದಿರುವ ಸ್ಥಾನವನ್ನು ಗಮನಿಸಿ ಸಿನಿಮಾದ ಮೇಲೆ ಆಕರ್ಷಣೆ ಮೂಡಿ ಚಿತ್ರರಂಗ ಪ್ರವೇಶಿಸಿದವರೆಲ್ಲ ಅವರಿಗೂ ಕೃತಜ್ಞರಾಗಿರುತ್ತಾರೆ. ಹೀಗೆ ಒಂದಲ್ಲ ಒಬ್ಬ ಕಲಾವಿದರು ಚಿತ್ರರಂಗ ಪ್ರವೇಶಿಸುತ್ತಲೇ ತಾರೆಯರ ಋಣದಲ್ಲಿರುವುದನ್ನು ನೆನಪಿಸಿಕೊಳ್ಳುವುದು ಇದೆ. ಆದರೆ ದುನಿಯಾ ವಿಜಯ್ ಸ್ಟಾರ್ ಆಗಿ ದಶಕವಾಗಿದೆ. ಈಗ ಅವರು ಹೊಸದಾಗಿ ಋಣದ ನೆನಪು ಮಾಡುವ ಅಗತ್ಯವಿಲ್ಲ. ಅದರಲ್ಲಿಯೂ ಶಿವಣ್ಣನ ಜನ್ಮದಿನದ ಸಂದರ್ಭದಲ್ಲಿ. ಹಾಗಿದ್ದರೆ ಯಾಕೆ ಈ ಮಾತು ಹೇಳಿರಬಹುದು? ನಿಮಗೆ ತಿಳಿದಿರುವಂತೆ ಕುತೂಹಲ ಮೂಡಿದ ಮೇಲೆ ಸುಮ್ಮನಿರುವ ಜಾಯಮಾನ `ಸಿನಿಕನ್ನಡ.ಕಾಮ್‘ದ್ದಲ್ಲ. ನಾವು ಊಹಾಪೋಹದ ಸುದ್ದಿಗಳನ್ನು ಹರಡಿದವರಲ್ಲ. ಹಾಗಾಗಿ ನೇರವಾಗಿಯೇ ದುನಿಯಾ ವಿಜಯ್ ಅವರನ್ನು ಸಂಪರ್ಕಿಸಿದೆವು. ಆಗ ಅವರು ನೀಡಿದ ಪ್ರತಿಕ್ರಿಯೆ ಇನ್ನಷ್ಟು ಆಕಾಂಕ್ಷೆ ಮೂಡಿಸುವಂತಿತ್ತು.
ಬ್ಲ್ಯಾಕ್ ಕೋಬ್ರಾ ಹೇಳಿದ ಕಾರಣ..!
“ಹೌದು. ಒಂದು ಬಲವಾದ ಕಾರಣ ಇದೆ. ಆದರೆ ಅದನ್ನು ನಾನು ಬರೆಯುತ್ತಾ ಕುಳಿತರೆ ಅದೇ ದೊಡ್ಡ ಕತೆ ಆದೀತು. ಯಾಕೆಂದರೆ ಅದು ಭಾವನೆಗೆ ಸಂಬಂಧಿಸಿದ ವಿಷಯ. ಬರೆಯೋಕೆ ಅಂತ ಕುಳಿತಾಗ ಪದಗಳೇ ಕಡಿಮೆಯಾದ ಹಾಗೆ ಅನಿಸಿತು. ಹಾಗಂತ ಈಗ ನೀವು ಕೇಳಿದ್ದೀರಿ ಎಂದು ಹೇಳಿದ್ರೆ ನನ್ನ ಭಾವ ನಿಮ್ಮ ಪದಗಳಿಗೆ ನಿಲುಕಬೇಕಾಗಿಲ್ಲ. ಅಥವಾ ನಾನು ವಾಯ್ಸ್ ಮೆಸೇಜಲ್ಲಿ ತಿಳಿಸೋಣ ಅಂದರೆ ಸಂದರ್ಭ ಇದಲ್ಲ. ಹಾಗಾಗಿಯೇ ನಾನು ಕಾರಣ ಬರೆದಿಲ್ಲ” ಎಂದರು ದುನಿಯಾ ವಿಜಯ್.
“ಹಾಗಾದರೆ ಋಣಿ ಎನ್ನುವುದನ್ನು ಈಗ ಯಾಕೆ ಹೇಳಿದ್ದೇನೆ ಅಂತ ನಿಮಗೆ ಸಂದೇಹ ಕಾಡಬಹುದು. ಯಾಕೆಂದರೆ ಬರೀ ಎರಡು ಪದಗಳಲ್ಲಿ ಶುಭ ಕೋರಿದರೆ ಅದು ನನ್ನ ಆತ್ಮಸಾಕ್ಷಿಗೆ ಒಪ್ಪುವುವಂಥದ್ದಲ್ಲ. ಅದಕ್ಕಾಗಿ ಘಟನೆಯನ್ನು ಬರೆಯುತ್ತಾ ಕುಳಿತರೂ ಸರಿಯಾಗುವುದಿಲ್ಲ. ಹಾಗಾಗಿ ಸೂಚ್ಯವಾಗಿ ತಿಳಿಸಿದ್ದೇನೆ. ಶಿವಣ್ಣ ನೋಡಿದರೆ ಖಂಡಿತವಾಗಿ ಅರ್ಥಮಾಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಸದ್ಯಕ್ಕೆ ಅದು ಸಾಕು.” ಎಂದ ದುನಿಯಾ ವಿಜಯ್ ಇನ್ನೂ ಒಂದು ವಿಚಾರವನ್ನು ಹೇಳಿದರು. ಹಾಗೆ ನೋಡಿದರೆ ನಾನು ಅದರಲ್ಲಿ ಇನ್ನೊಂದು ವಾಕ್ಯವನ್ನು ಕೂಡ ಸೇರಿಸೋಣ ಎಂದುಕೊಂಡಿದ್ದೆ. ಅದರಲ್ಲಿ “ನಾನು ನಿಮ್ಮ ಅಭಿಮಾನಿಯಲ್ಲ” ಎಂದು ಬರೆಯಬೇಕು ಎಂದಿತ್ತು. ಅಂದರೆ ಅಭಿಮಾನಕ್ಕಿಂತಲೂ ಹೆಚ್ಚಾಗಿ ಋಣದಲ್ಲಿ ಬಿದ್ದವನು ಎನ್ನುವ ಅರ್ಥವನ್ನು ಸೂಚಿಸಬೇಕು ಎಂದುಕೊಂಡಿದ್ದೆ. ಆದರೆ ಒಂದುವೇಳೆ ಅದೇ ಅಪಾರ್ಥವಾಗಿ ಅಭಿಮಾನಿಯಲ್ಲ ಎನ್ನುವುದೇ ವಿವಾದಕ್ಕೆ ಕಾರಣವಾದರೆ ಕಷ್ಟ ಎಂದು ಸುಮ್ಮನಾದೆ. ಯಾಕೆಂದರೆ ವಿವಾದದಿಂದ ಸುದ್ದಿಯಾಗುವ ಅಗತ್ಯ ಇಲ್ಲ. ಇದು ನಮ್ಮ ನಡುವಿನ ಹಿರಿಯ ಕಲಾವಿದನಿಗೆ, ಅದ್ಭುತ ನಟನಿಗೆ ಶುಭ ಕೋರುವ ಸಂತಸದ ಸಂದರ್ಭ. ಖಂಡಿತವಾಗಿ ಅದನ್ನೇ ಮಾಡಿದ್ದೇನೆ ಎನ್ನುವ ತೃಪ್ತಿ ಇದೆ” ಎಂದು ಫೋನಿಟ್ಟರು ವಿಜಯ್. ಹಾವು ಹನ್ನೆರಡು ವರ್ಷಗಳ ಕಾಲ ಹಗೆ ಇರಿಸುವುದೆಂದು ಆಡುಮಾತಿದೆ. ಬಹುಶಃ ಈ ಬ್ಲ್ಯಾಕ್ ಕೋಬ್ರಾಗೆ ಜೀವಿತಾವಧಿಯ ಋಣ ಕಾಯ್ದುಕೊಳ್ಳುವ ಗುಣ ಇರಬೇಕು!
`ಸಲಗ’ವೇ ಕಾರಣವೇ..?
ವಿಜಯ್ ಅವರ ಮಾತುಗಳನ್ನು ಕೇಳಿದಾಗ ಅರೆರೆ ಒಂದು ಲಾಕ್ಡೌನ್ ಇವರನ್ನು ಇಷ್ಟೊಂದು ವಾಗ್ಮಿಯನ್ನಾಗಿ ಮಾಡಿದೆಯೇ ಎನ್ನುವ ಅಚ್ಚರಿ ಮೂಡಿದ್ದು ಸುಳ್ಳಲ್ಲ. ಆದರೆ ವಿಜಯ್ ಅವರ ಆತ್ಮೀಯರಿಗೆ ಗೊತ್ತು ಅವರು ಚೆನ್ನಾಗಿ ಮಾತನಾಡಬಲ್ಲರು, ಮಾತ್ರವಲ್ಲ ಆಲೋಚನೆಗಳನ್ನು ಆಕರ್ಷಕವಾಗಿ ಪದಗಳಿಗೆ ಇಳಿಸಬಲ್ಲರು! ಅವರ ಯೋಚನೆಗಳು ಎಷ್ಟೊಂದು ಕ್ರಿಯಾಶಾಲಿಯಾಗಿವೆ ಎನ್ನುವುದನ್ನು ಬಹುಶಃ ಸದ್ಯದಲ್ಲೇ ತಮ್ಮ ನಿರ್ದೇಶನದ `ಸಲಗ’ದ ಮೂಲಕ ಅವರು ಸಾಬೀತು ಪಡಿಸಲಿದ್ದಾರೆ. ಒಂದು ವೇಳೆ ಬಹುಶಃ ಸಲಗ ಚಿತ್ರ ತಂಡಕ್ಕಾಗಿಯೇ ಅವರು ಶಿವಣ್ಣನಿಗೆ ಕೃತಜ್ಞತೆ ಸಲ್ಲಿಸಿದ್ದರೂ ಅಚ್ಚರಿ ಇಲ್ಲ. ಯಾಕೆಂದರೆ ಅದರಲ್ಲಿ ಬಹುಪಾಲು ಶಿವಣ್ಣನ ಟಗರು ತಂಡದ್ದೇ ಸಾಥ್ ಇದೆ. ಶಿವಣ್ಣನ ಆತ್ಮೀಯ ವಲಯದಲ್ಲಿರುವ ಕೆಪಿ ಶ್ರೀಕಾಂತ್ ಅವರೇ ಚಿತ್ರದ ನಿರ್ಮಾಪಕರೂ ಹೌದು. ಇವೆಲ್ಲದರ ಜತೆಗೆ ಶಿವಣ್ಣ ಅತಿಥಿಯಾಗಿ ನಟಿಸಿದ್ದಾರ ಎನ್ನುವ ಸಂದೇಹವೂ ಇದೆ. ಒಟ್ಟಿನಲ್ಲಿ ದುನಿಯಾ ವಿಜಯ್ ಕೋರಿರುವ ಶುಭಾಶಯ ಆಕರ್ಷಕವೆನಿಸಿರುವುದು ನಿಜ.