ಕಾಳಜಿಗೆ ಮತ್ತೊಂದು ಹೆಸರೇ ಶಿವಣ್ಣ..!

ಸಿನಿಮಾ ಸುದ್ದಿಯ ಮಾಧ್ಯಮದಲ್ಲಿ ವರದಿಯ ಕೆಲಸ ಮಾಡುವಾಗ ಕಲಾವಿದರ ಪರಿಚಯ ಇದ್ದೇ ಇರುತ್ತದೆ. ಹೊಸಬರು ಮಾಧ್ಯಮದವರು ಎನ್ನುವ ಕಾರಣಕ್ಕೆ ಸ್ನೇಹಿತರಾಗುತ್ತಾರೆ. ಇನ್ನು ಕೆಲವರು ಮಾಧ್ಯಮದ ಸಂಸ್ಥೆ ಯಾವುದು ಎನ್ನುವುದನ್ನು ಗಮನಿಸಿ ಆತ್ಮೀಯತೆ ತೋರಿಸುತ್ತಾರೆ! ಯಾಕೆಂದರೆ ಪತ್ರಿಕೆ, ಟಿವಿ, ರೇಡಿಯೋ ಮತ್ತು ಆನ್ಲೈನ್ ಮಾಧ್ಯಮಗಳ ಪ್ರತಿನಿಧಿಯಾಗಿ ದಶಕದಿಂದ ಪಡೆದ ಅನುಭವದಲ್ಲಿ ಈ ಮಾತು ಹೇಳುತ್ತಿದ್ದೇನೆ. ಇಂಥವರ ನಡುವೆ, ಕ್ಯಾಮೆರಾ ಮುಂದೆ ಹಿಂದೆ, ಜನರ ಮುಂದೆ, ಗಣ್ಯರ ಮುಂದೆ, ಅಭಿಮಾನಿಗಳ ಮುಂದೆ ಎನ್ನುವ ಯಾವ ಭೇದ ಭಾವ ತೋರದೆ ವರ್ತಿಸುವ ಅಪರೂಪದ ನಟ ಶಿವರಾಜ್ ಕುಮಾರ್. ಇಂದು ಕೆಲವರು ಸ್ಟಾರ್ ಪಟ್ಟ ಸಿಕ್ಕ ಮೇಲೆ ಮಾಧ್ಯಮದ ಅಗತ್ಯವಿಲ್ಲ ಎನ್ನುವಂತೆ ವರ್ತಿಸಿ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಮಾತ್ರ ಪ್ರತ್ಯಕ್ಷವಾಗುವವರಿದ್ದಾರೆ. ಹಾಗೆ ನೋಡಿದರೆ ಶಿವರಾಜ್ ಕುಮಾರ್ ಅವರಿಗೆ ಎಂಟ್ರಿಯಾಗುವಾಗಲೇ ಮಾಧ್ಯಮಗಳ ಅಗತ್ಯ ಇರಲಿಲ್ಲ. ಆದರೆ ಅಂದಿನಿಂದ ಇಂದಿನವರೆಗೆ ಅವರು ಮಾಧ್ಯಮಕ್ಕೆ ಮಾತ್ರವಲ್ಲ, ಪ್ರತಿಯೊಬ್ಬ ಅಭಿಮಾನಿಗೆ ನೀಡುವ ಗೌರವ, ಪ್ರೀತಿಗೆ ಹೆಸರಾದವರು. ಯಾವೊಬ್ಬ ಸ್ಟಾರ್ ನಲ್ಲಿಯೂ ಕಾಣದ ಅಪರೂಪದ ವರ್ತನೆಗಳಿಗೆ ಕಳೆದ ಒಂದು ದಶಕದಲ್ಲಿ ಶಶಿಕರ ಪಾತೂರು ಎನ್ನುವ ನಾನು ಹಲವು ಬಾರಿ ಸಾಕ್ಷಿಯಾಗಿದ್ದೇನೆ. ಇತ್ತೀಚೆಗೆ ನಡೆದ ಘಟನೆಯೊಂದನ್ನು ಅವರ ಜನ್ಮದಿನದ ಪ್ರಯುಕ್ತ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಲಾಕ್ಡೌನ್‌ ಗೆ ಮೊದಲು ಶಿವಣ್ಣ ಯಾವುದೋ ಪ್ರೆಸ್ಮೀಟಲ್ಲಿ ಸಿಕ್ಕಿದ್ದರು. ಆಗ ಮಾತಿನ ನಡುವೆ ಒಂದು ಇಂಗ್ಲಿಷ್ ಪುಸ್ತಕದ ಬಗ್ಗೆ ಮಾತನಾಡಿದ್ದರು. (ಅದು ಯಾವುದು ಎನ್ನುವುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ) ಆನಂತರದ ಒಂದಷ್ಟು ದಿನಗಳ ಬಳಿಕ ನನ್ನ ಸ್ನೇಹಿತರೋರ್ವರು ಆ ಪುಸ್ತಕ ತಂದುಕೊಟ್ಟರು. ಆದರೆ ಅದನ್ನು ಇನ್ನೇನು ಶಿವಣ್ಣನಿಗೆ ತಲುಪಿಸಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಮಾಡಲಾಯಿತು. ಆ ಸಂದರ್ಭದಲ್ಲಿ ಬಿಎಂಟಿಸಿ ಬಸ್ಸುಗಳಲ್ಲಿ ಮಾಧ್ಯಮದವರಿಗೆ ಪ್ರಯಾಣಿಸಲಿ ಅವಕಾಶ ಇತ್ತು. ನಾನು ಶಿವರಾಜ್ ಕುಮಾರ್ ಅವರ ಮನೆಗೆ ಹೋದೆ. ಅವರು ಮನೆಯಲ್ಲೇ ಇರುವ ಕಾರಣ ಈ ಸಮಯದಲ್ಲಿ ಪುಸ್ತಕ ಕೊಟ್ಟರೆ ಅವರಿಗೆ ಓದಲು ಸಹಾಯವಾದೀತು ಎನ್ನುವುದು ನನ್ನ ನಂಬಿಕೆಯಾಗಿತ್ತು. ಗೇಟ್ ಕೀಪರ್ ಜತೆ ಮಾತನಾಡುತ್ತಿರಬೇಕಾದರೆ ಅವರೇ ಗೇಟ್ ಹತ್ತಿರ ಬಂದು ಆತ್ಮೀಯವಾಗಿ ಒಳಗೆ ಸ್ವಾಗತಿಸಿದರು. ಸ್ಯಾನಿಟೈಸರ್ ಕೊಟ್ಟು ಕುಳ್ಳಿರಿಸಿದರು. ಒಂದಷ್ಟು ಹೊತ್ತಿನ ಮಾತುಕತೆಗಳ ಬಳಿಕ ಹಿಂದಿರುಗಿದೆ. ಇಲ್ಲಿ ನಾನು ಹೇಳಲು ಬಯಸುವ ವಿಚಾರ ನಡೆದಿದ್ದೇ ಆ ಮನೆಯ ಗೇಟ್ ನಿಂದಾಚೆ ಕಾಲಿಟ್ಟ ಮೇಲೆ!

ನಾನು ಬಸ್ಸಲ್ಲಿ ಹೋಗಿದ್ದ ಕಾರಣ, ಅವರ ಮನೆಯಿಂದ ಮಾನ್ಯತಾ ಟೆಕ್ಪಾರ್ಪ್ ಹೊರಗಿನ ರಸ್ತೆ ತನಕ ನಡೆದೇ ಬರಬೇಕಿತ್ತು. ಹಾಗೆ ನಡೆದು ಬರುತ್ತಲೇ ಅವರ ಮನೆಯ ಕಂಪೌಂಡ್ ಪಕ್ಕದಿಂದಲೇ ಹೆಜ್ಜೆ ಹಾಕಿದೆ. ನನ್ನ ಎಡ ಬದಿಗೆ ಮನೆಯಯಿತ್ತು. ಒಮ್ಮೆ ಮಹಡಿಯತ್ತ ಕಣ್ಣು ಹಾಯಿಸಿದೆ. ಶಿವಣ್ಣ ಅಲ್ಲಿ ನಿಂತು ನೋಡುತ್ತಿದ್ದರು. ಬಾಯ್ ಸರ್ ಎಂದು ಕೈ ಎತ್ತಿದೆ. ಅವರು ಕೈ ಬೀಸಿ ಮರೆಯಾದರು. ಆ ಬಳಿಕ ನಾನು ಎರಡು ಹೆಜ್ಜೆ ಮುಂದಿಡುವಷ್ಟರಲ್ಲಿ ನನ್ನ ಪಕ್ಕ ವೇಗದಲ್ಲಿ ಬಂದು ಒಂದು ಸ್ಕೂಟಿ ನಿಂತಿತು. ಅದರಲ್ಲೊಬ್ಬ ಯುವಕನಿದ್ದ. ಬನ್ನಿ ಸರ್ ಕೂತ್ಕೊಳ್ಳಿ ಎಂದ. ನಾನು ಕ್ಷಣ ಕಕ್ಕಾಬಿಕ್ಕಿಯಾಗಿ ನೋಡಿದೆ. “ಮನೆಯಿಂದ ಬಂದ್ರಲ್ವ ಸರ್? ಬಾಸ್ ಹೇಳಿದ್ರು ನಿಮ್ಮನ್ನು ಬಸ್ ಸ್ಟಾಪ್ ತನಕ ಬಿಡಬೇಕಂತೆ” ಎಂದಾಗ ಹತ್ತಿ ಕುಳಿತುಕೊಂಡೆ. ಗಾಡಿ ಮುಂದೆ ಹೋಗುವಷ್ಟರಲ್ಲಿ ಮತ್ತೆ ನನಗೆ ಫೋನ್ ಮಾಡಿದ್ರು. “ಅವನು ನಮ್ಮ ಹುಡುಗ ಅವನ ಜತೆಗೆ ಹೋಗಿ” ಎಂದರು! ಆತ ಗೇಟ್ ತನಕ ಬಿಟ್ಟು ಹೊರಡಬೇಕಾದರೆ ಆತನ ಹೆಸರು ಕೇಳಿದೆ. ಸಾಗರ್ ಎಂದ. ನನಗೆ ಅಲ್ಲಿಂದ ವಾಪಾಸು ಬರುವಾಗಲೆಲ್ಲ ಸಾಗರದಂಥ ಶಿವಣ್ಣನ ಮನದ ಬಗ್ಗೆಯೇ ಅಭಿಮಾನ ಉಕ್ಕತೊಡಗಿತ್ತು.

Recommended For You

Leave a Reply

error: Content is protected !!
%d bloggers like this: