ನಟ ಧ್ರುವ ಸರ್ಜ ಕುಟುಂಬಕ್ಕೆ ಕಷ್ಟ ಕಾಲ ಇನ್ನು ಮುಗಿದಂತಿಲ್ಲ. ಯಾಕೆಂದರೆ ಇಂದು ತಮಗೆ ಮತ್ತು ಪತ್ನಿಗೆ ಕೊರೊನಾದ ಲಕ್ಷಣಗಳು ಬಂದಿರುವುದನ್ನು ಅವರು ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಸಣ್ಣ ಮಟ್ಟಲ್ಲಿ ಇರುವ ಕಾರಣ ಆದಷ್ಟು ಬೇಗ ರಿಕವರಿಯಾಗಿ ಮನೆಗೆ ಮರಳುವ ಭರವಸೆ ವ್ಯಕ್ತಪಡಿಸಿದ್ದಾರೆ.
ಚಿರಂಜೀವಿ ಸರ್ಜಾ ಅನಿರೀಕ್ಷಿತ ಸಾವಿಗೆ ತಿಂಗಳು ದಾಟುತ್ತಿದೆ. ಸರ್ಜಾ ಕುಟುಂಬ ಅದರಲ್ಲಿಯೂ ಸಹೋದರ ಧ್ರುವ ಸರ್ಜ ಇನ್ನೂ ಆ ನೋವಿನಿಂದ ಹೊರಬಂದಿಲ್ಲ. ಮಾತ್ರವಲ್ಲ, ಅಣ್ಣನ ಅಗಲಿಕೆಯ ಡಿಪ್ರೆಶನ್ ಕಾರಣದಿಂದ ಇತ್ತೀಚೆಗಷ್ಟೇ ಆಸ್ಪತ್ರೆಗೂ ದಾಖಲಾಗಿದ್ದರು. ಇನ್ನೇನು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳುತ್ತಿದ್ದಾರೆ ಎನ್ನುವ ಹಂತದಲ್ಲಿ ಇಂದು ಸಿಡಿಲೆರಗಿದ ಮಾದರಿಯಲ್ಲಿ ಈ ಸುದ್ದಿ ಹಬ್ಬಿದೆ. ಸ್ವತಃ ಧ್ರುವಸರ್ಜಾ ಈ ಬಗ್ಗೆ ಪ್ರಕಟಣೆ ನೀಡಿ ಸುಧಾರಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿರುವುದರಿಂದ ಅಭಿಮಾನಿಗಳಿಗೆ ತುಸು ಸಮಾಧಾನ ಇದೆ. ಉಳಿದಂತೆ ಹೀಗೆ ಬೆಂಬಿಡದೆ ಕಾಡುತ್ತಿರುವ ಕಷ್ಟದ ಬಗ್ಗೆ ಎಲ್ಲರಲ್ಲಿಯೂ ನೋವಿದೆ.
ಅವರು ಟ್ವೀಟ್ ನಲ್ಲಿ ಹೇಳಿರುವ ಪ್ರಕಾರ “ನಾನು ಮತ್ತು ಪತ್ನಿ ಇಬ್ಬರಿಗೂ ಕೋವಿಡ್ 19 ಪಾಸಿಟಿವ್ ಆಗಿದ್ದು ಸಣ್ಣದಾದ ಲಕ್ಷಣಗಳು ಗೋಚರಿಸಿದ್ದು, ನಾವಾಗಿಯೇ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಾವು ಗುಣಮುಖರಾಗಿ ವಾಪಸಾಗುವ ಬಗ್ಗೆ ಭರವಸೆ ಇದೆ. ಈ ಸಂದರ್ಭದಲ್ಲಿ ನಮ್ಮೊಂದಿಗೆ ಹತ್ತಿರದ ಸಂಪರ್ಕ ಹೊಂದಿದ್ದಂಥ ಎಲ್ಲರೂ ಒಮ್ಮೆ ದಯವಿಟ್ಟು ಕೊರೊನಾ ಪರೀಕ್ಷೆಗೊಳಪಟ್ಟು ಸುರಕ್ಷಿತರಾಗಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಿ” ಎಂದು ವಿನಂತಿಸಿದ್ದಾರೆ. ಕೊನೆಯಲ್ಲಿ ಎಂದಿನಂತೆ ತಮ್ಮ ಸಿಗ್ನೇಚರ್ “ಜೈ ಆಂಜನೇಯ” ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ಅಣ್ಣನ ನಿಧನದ ಬಳಿಕ ಧ್ರುವ ಸರ್ಜಾ ಮಾಡಿರುವಂಥ ಪ್ರಥಮ ಟ್ವೀಟ್ ಇದಾಗಿದೆ. ಧ್ರುವ ಮತ್ತು ಪ್ರೇರಣಾ ದಂಪತಿ ಆದಷ್ಟು ಬೇಗ ಗುಣಮುಖರಾಗಿ ವಾಪಾಸಾಗಲು ನಟಿ ಮೇಘನಾ ಗಾಂವ್ಕರ್ ಸೇರಿದಂತೆ ಚಿತ್ರರಂಗದ ಗಣ್ಯರು ಪ್ರತಿಟ್ವೀಟ್ ಮಾಡಿ ಹಾರೈಸಿದ್ದಾರೆ.