
ಕಲೆ ರಕ್ತಗತವಾಗಿ ಬರುತ್ತದೆ ಎನ್ನುತ್ತಾರೆ. ಆದರೆ ವ್ಯಕ್ತಿಗತವಾಗಿ ಕೂಡ ಹರಡಬಲ್ಲದು ಎನ್ನುವುದಕ್ಕೆ ‘ಅಭಿನಯ ಭಾರ್ಗವ’ ವಿಷ್ಣುವರ್ಧನ್ ಕುಟುಂಬದ ಉದಾಹರಣೆಯೊಂದೇ ಸಾಕು. ಯಾಕೆಂದರೆ ಅವರ ಅಳಿಯ ಅನಿರುದ್ಧ್ ಕೂಡ ಅದ್ಭುತ ಕಲಾವಿದನೆನ್ನುವುದು ಇತ್ತೀಚೆಗೆ ಹೆಚ್ಚೆಚ್ಚು ಜನರಿಗೆ ಮನವರಿಕೆಯಾಗಿದೆ. ಇಂದು ಅವರ ಜತೆಗೆ ಅವರ ಮಕ್ಕಳು ಕೂಡ ಕಲಾರಂಗದಲ್ಲಿ ಹೆಸರು ಮಾಡುತ್ತಿದ್ದಾರೆ. ಅನಿರುದ್ಧ್ ಎನ್ನುವ ಚೆಲುವ `ಜೊತೆ ಜೊತೆಯಲಿ’ ಎನ್ನುವ ಧಾರಾವಾಹಿಯ ಮೂಲಕ ಇತಿಹಾಸ ಸೃಷ್ಟಿಸಿದ್ದು ಎಲ್ಲರಿಗೂ ಗೊತ್ತು. ಅದೇ ರೀತಿ ಅವರು ತಮ್ಮ ಮಕ್ಕಳ ಡ್ಯಾನ್ಸ್ ವಿಡಿಯೋಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿರುತ್ತಾರೆ. ಒಮ್ಮೆ ಆ ಮಕ್ಕಳ ಉತ್ಸಾಹವನ್ನು ಕಂಡವರು ಆ ನೃತ್ಯಗಳನ್ನು ಪೂರ್ತಿಯಾಗಿ ನೋಡದೇ ಬಿಡಲಾರರು. ಇದೀಗ ಅವರ ಪುತ್ರಿ ಶ್ಲೋಕ ತನ್ನ ಸ್ನೇಹಿತೆಯೊಂದಿಗೆ ಮಾಡಿರುವ ನೃತ್ಯವೊಂದು ಎಲ್ಲರ ಗಮನ ಸೆಳೆಯುತ್ತಿದೆ.
ಗಮನಿಸಲೇಬೇಕಾದ ನೃತ್ಯ..!
ಇದು ಯೂಟ್ಯೂಬ್ ಮೂಲಕ ನಡೆಸಲಾಗುತ್ತಿರುವ ಒಂದು ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆ. ಬ್ಲ್ಯಾಕ್ ಪಿಂಕ್ ಡ್ಯಾನ್ಸ್ ಕವರ್ ಕಂಟೆಸ್ಟ್ ಎನ್ನುವುದು ಇದರ ಹೆಸರು. ಬ್ಲ್ಯಾಕ್ ಪಿಂಕ್ ಮ್ಯೂಸಿಕ್ ತಂಡ ಒಂದು ವಿರಾಮದ ಬಳಿಕ ಹಾಜರಾಗಿದ್ದು, ಈ ಬಾರಿ `ಹೌ ಯು ಲೈಕ್ ದಟ್’ ಎನ್ನುವ ಹಾಡಿನೊಂದಿಗೆ ಬಂದಿದೆ. ಎರಡೇ ವಾರಗಳ ಒಳಗಡೆ ಇನ್ನೂರು ಮಿಲಿಯನ್ ಸ್ಟ್ರೀಮ್ಸ್ ಪಡೆದುಕೊಂಡ ವಿಡಿಯೋ ದೊಡ್ಡ ಮಟ್ಟದ ಸದ್ದು ಮಾಡಿದೆ. ಈ ಕ್ರೇಜ್ ಮುಂದುವರಿಸುತ್ತಾ ಕೆ ಗ್ರೂಪ್ ಒಂದು ಆನ್ಲೈನ್ ನೃತ್ಯ ಸ್ಪರ್ಧೆಯನ್ನೇ ಏರ್ಪಡಿಸಿದೆ. ಅಂದಹಾಗೆ ಇದಕ್ಕೆ ಯಾರು ಬೇಕಾದರೂ ಸ್ಪರ್ಧಿಸಬಹುದು! ಅದಕ್ಕಾಗಿ ಡ್ಯಾನ್ಸ್ ಕವರ್ ಕಂಟೆಸ್ಟ್ ನ ಆನ್ಲೈನ್ ಅರ್ಜಿಯನ್ನು ಭರ್ತಿಗೊಳಿಸಿ ಈ ಹಾಡಿನ ಅಭಿಮಾನಿಗಳು ತಾವೇ ಕೊರಿಯಾಗ್ರಫಿ ಮಾಡಿಕೊಂಡು ವಿಡಿಯೋ ಒಂದನ್ನುಯೂಟ್ಯೂಬ್ ಗೆ ಅಪ್ಲೋಡ್ ಮಾಡಬೇಕಿದೆ. ಅತಿ ಹೆಚ್ಚು ವ್ಯೂವ್ಸ್ ಪಡೆದ ಮೂರು ಡಾನ್ಸ್ ತಂಡಗಳನ್ನು ಆರಿಸಿ ಬಲು ದೊಡ್ಡ ಮೊತ್ತವೊಂದನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಲಾಗಿದೆ. ಇದರಲ್ಲಿ ಶ್ಲೋಕ ಕೂಡ ಸ್ಪರ್ಧಿಯಾಗಿದ್ದಾರೆ ಎನ್ನುವುದು ಗಮನಾರ್ಹ ವಿಚಾರ.
ಶ್ಲೋಕ ಹೇಳಿದ ಮಾತು
“ಅಂದಹಾಗೆ ನಮ್ಮ ನೃತ್ಯಕ್ಕೆ ಜುಲೈ 20ರ ಸಂಜೆ ಗಂಟೆ 4.30ರ ಒಳಗೆ ಹೈಯೆಸ್ಟ್ ವ್ಯೂವ್ಸ್ ಬೇಕಾಗಿದೆ. ಹಲವರದ್ದುಈಗಾಗಗಲೇ ಮಿಲಿಯನ್ಸ್ ರೀಚ್ ಆಗಿದೆ. ಒಂದು ವೇಳೆ ವಿನ್ ಆಗದಿದ್ದರೂ ಕೂಡ ನಮ್ಮ ಡಾನ್ಸ್ ಮಿಲಿಯನ್ ವ್ಯೂವ್ಸ್ ದಾಟಿದರೆ, ಗುರುತಿಸಲ್ಪಡೋಕೆ ಸಾಧ್ಯ ಅಂತ ಅಂದ್ಕೊಂಡಿದ್ದೀವಿ” ಎನ್ನುವುದು ಸಿನಿಕನ್ನಡ.ಕಾಮ್ ಜತೆಗೆ ಮಾತನಾಡಿದ ಶ್ಲೋಕ ತಿಳಿಸಿದ ಅಭಿಪ್ರಾಯ.
ಹೌದು, ವೃತ್ತಿಪರ ರೀತಿಯಲ್ಲಿ ಯಾವುದೇ ಡ್ಯಾನ್ಸ್ ತರಬೇತಿ ಪಡೆದಿರದ 13ರ ಹರೆಯದ ಶ್ಲೋಕ ತಮ್ಮ ಗೆಳತಿ ವರ್ಷಾ ಜತೆಗೆ ಸೇರಿ ಈ ನೃತ್ಯ ಮಾಡಿದ್ದಾರೆ. ಹಾಡಿನ ಛಾಯಾಗ್ರಹಣವನ್ನು ರಾಜು ಅವರ ಜತೆಗೆ ಸೇರಿಕೊಂಡು ಸ್ವತಃ ಶ್ಲೋಕಾ ಸಹೋದರ ಜೇಷ್ಠವರ್ಧನ್ ನಿರ್ವಹಿಸಿರುವುದು ವಿಶೇಷ. ವಸ್ತ್ರ ವಿನ್ಯಾಸಕಿಯಾಗಿ ಕೀರ್ತಿ ವಿಷ್ಣುವರ್ಧನ್ ಕೈಜೋಡಿಸಿರುವುದು ಮತ್ತೊಂದು ವಿಶೇಷ. ಈ ಎಲ್ಲ ಕಾರಣಗಳಿಂದಾಗಿ ನಿಜಕ್ಕೂ ಕನ್ನಡಿಗರ ಪಾಲಿಗೆ ಈ ವಿಡಿಯೋ ಆಕರ್ಷಕ. ಆದರೆ ವಿದೇಶಗಳೊಂದಿಗೆ ಸ್ಪರ್ಧಿಸಬೇಕಾದ ನಿಟ್ಟಿನಲ್ಲಿ ಈ ಹಾಡಿಗೆ ಖಂಡಿತವಾಗಿ ಹೆಚ್ಚಿನ ವ್ಯೂವ್ಸ್ ಬೀಳಬೇಕಾಗಿದೆ. ಅದಕ್ಕೆ ಒಂದು ಹಂತದ ತನಕ ಅನಿರುದ್ಧ್ ಅವರ ಫೇಸ್ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳೇ ಸಾಕು. ಉಳಿದಂತೆ ಈ ಕಲಾಕುಟುಂಬದ ಮೇಲೆ ಅಭಿಮಾನ ಇರಿಸಿರುವ ಕನ್ನಡಿಗರ ಒಂದು ಕ್ಲಿಕ್ ಕೂಡ ಸಾಕಾಗುತ್ತದೆ. ಡಾ. ವಿಷ್ಣುವರ್ಧನ್, ಭಾರತೀ ವಿಷ್ಣುವರ್ಧನ್, ಕೀರ್ತಿ ವಿಷ್ಣುವರ್ಧನ್, ಅನಿರುದ್ಧ್ ಅವರಂಥ ಕಲಾರತ್ನಗಳನ್ನು ನೀಡಿರುವ ಕುಟುಂಬದಲ್ಲಿನ ಮೂರನೇ ತಲೆಮಾರಿನ ಪ್ರತಿಭೆಗೆ ಕರ್ನಾಟಕ ಸಾಕ್ಷಿಯಾಗಿರುವ ಸಂದರ್ಭ ಇದು. ಅನಿರುದ್ಧ್ ಅವರೇ ಹೇಳುವಂತೆ ನಿಮ್ಮೆಲ್ಲರ ಆಶೀರ್ವಾದ ಈ ಪ್ರತಿಭೆಯ ಮೇಲಿರಲಿ ಎನ್ನುವುದು ನಮ್ಮ ಆಶಯವೂ ಹೌದು.

