
ಕನ್ನಡ ಸಿನಿಮಾಗಳಲ್ಲಿ ಅಜ್ಜಿ ಪಾತ್ರಗಳಿಗೆ ಜೀವತುಂಬಿ ಜನಪ್ರಿಯರಾಗಿದ್ದ ನಟಿ ಶಾಂತಮ್ಮ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ನಿನ್ನೆ ಸಂಜೆ ಆಹಾರ ಸೇವನೆಗೆ ಮಾಡಲಾಗದೆ ಕಷ್ಟಕ್ಕೊಳಗಾಗಿದ್ದ ಅವರನ್ನು ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಸಂಜೆ 5.30ರ ಹೊತ್ತಿಗೆ ನಿಧನರಾಗಿದ್ದಾರೆ.
1956ರಲ್ಲಿ ಹರಿಭಕ್ತ' ರಾಜಕುಮಾರ್ ಅವರ ನಾಲ್ಕನೇ ಚಿತ್ರದಲ್ಲಿ ಚಿತ್ರರಂಗ ಪ್ರವೇಶ. ಚಿತ್ರದಲ್ಲಿ ಪಂಡರೀಬಾಯಿಯವರು ನಾಯಕಿ. ಮೂಲತಃ ರಂಗಭೂಮಿ ಕಲಾವಿದೆ. ಪತಿ ಅನಿಲ್ ಕುಮಾರ್ ಡಾನ್ಸ್ ಮಾಸ್ಟರ್ ಆಗಿದ್ದರು. ಆ ದಿನಗಳಲ್ಲಿ ಸಿನಿಮಾದ ಅವಕಾಶಕ್ಕಾಗಿ ಮದರಾಸಲ್ಲೇ ಮನೆ ಮಾಡಿ, ಅಲ್ಲೇ ಹದಿನೈದು ವರ್ಷ ಇದ್ದರು. ಸಿನಿಮಾಗಳಲ್ಲಿ ಅವಕಾಶ ಇರದ ಕಾಲದಲ್ಲಿ ಡಾ.ರಾಜ್ ಕುಮಾರ್ , ಬಾಲಣ್ಣ, ನರಸಿಂಹರಾಜು ಮತ್ತು ಜಿವಿ ಅಯ್ಯರ್ ಅವರು ಸೇರಿಕೊಂಡು 'ಕನ್ನಡ ಕಲಾವಿದರ ಸಂಘ' ಮಾಡಿ ರಂಗಭೂಮಿಯತ್ತ ಕಾಲಿಟ್ಟಾಗ ಅಲ್ಲಿಯೂ ಜತೆಯಾಗಿದ್ದವರು ಶಾಂತಮ್ಮ. ಹಾಗೆ ನಾಟಕದ ಮೂಲಕ ಸಂಗ್ರಹಿಸಿದ ದುಡ್ಡಿನಲ್ಲಿ ನಿರ್ಮಿಸಲಾದ "ರಣಧೀರ ಕಂಠೀರವ" ಎನ್ನುವ ರಾಜ್ ಕುಮಾರ್ ನಾಯಕರಾಗಿದ್ದ ಚಿತ್ರದಲ್ಲಿ ಶಾಂತಮ್ಮ ಕೂಡ ಪಾತ್ರ ಮಾಡಿದ್ದರು. ರಾಜ್ ಕುಮಾರ ಅವರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದವರು. ನೂರೈವತ್ತಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಹಿರಿಯನಟಿ. ರಜನಿಕಾಂತ್ ನಾಯಕರಾಗಿದ್ದ
ಮುಳ್ಳು ಮಲರುಂ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ರಜನಿಯವರದೇ ಲಿಂಗ' ಸಿನಿಮಾ ಅವರ ಕೊನೆಯ ಚಿತ್ರವಾಗಿತ್ತು.
ಪೂಟಾದ ಪೂಟುಗಳ್’, ಒಪ್ಪಂದಂ' ಮೊದಲಾದ ತಮಿಳು ಚಿತ್ರಗಳಲ್ಲಿಯೂ ಪಾತ್ರ ಮಾಡಿದ್ದಾರೆ. ಹಿಂದಿಯ 'ಸ್ವಾಮಿ ವಿವೇಕಾನಂದ' ಚಿತ್ರದಲ್ಲಿ ಮಿಥುನ್ ಚಕ್ರವರ್ತಿ ತಾಯಿಯಾಗಿಯೂ ನಟಿಸಿದ್ದರು. ಕನ್ನಡದಲ್ಲಿ
ಗಿರಿಕನ್ಯೆ’, ಕಾಮನ ಬಿಲ್ಲು',
ರಾಣಿ ಮಹಾರಾಣಿ’ ಯಿಂದ ಹಿಡಿದು ಇತ್ತೀಚೆಗೆ ತೆರೆಕಂಡಿದ್ದ ಗಣೇಶ್ ಅಮೂಲ್ಯ ಜೋಡಿಯ `ಶ್ರಾವಣಿ ಸುಬ್ರಮಣ್ಯ’ ತನಕ ಸುಮಾರು 400 ಸಿನಿಮಾಗಳಲ್ಲಿ ನಟಿಸಿರುವುದಾಗಿ ತಿಳಿದು ಬಂದಿದೆ.

ಅಮ್ಮನ ಬಗ್ಗೆ ಮಗಳ ಮಾತು
ಶಾಂತಮ್ಮ ಅವರ ಪುತ್ರಿ ಸುಮಾ ಅವರು ಸಿನಿಕನ್ನಡ.ಕಾಮ್ ಜತೆಗೆ ಮಾತನಾಡುತ್ತಾ, ಬೆಂಗಳೂರಲ್ಲಿದ್ದ ತಾಯಿಯನ್ನು ತಾವೇ ತಿಂಗಳುಗಳ ಹಿಂದೆ ಮೈಸೂರಿನ ತಮ್ಮ ಮನೆಗೆ ಕರೆದೊಯ್ದಿದ್ದಾಗಿ ತಿಳಿಸಿದರು. ಅವರಿಗೆ ಮರೆವಿನ ಖಾಯಿಲೆ ಶುರುವಾಗಿದ್ದ ಕಾರಣ ತಮ್ಮೊಂದಿಗೆ ಇದ್ದರೆ ಸುರಕ್ಷಿತವಾಗಿರುತ್ತಾರೆ ಎನ್ನುವ ಅಭಿಪ್ರಾಯ ಅವರದಾಗಿತ್ತು. ನಿನ್ನೆ ಸಂಜೆ ಅನಾರೋಗ್ಯ ಕಾಡಿದ ಬಳಿಕ ಮೈಸೂರಿನ ಯಾವುದೇ ಆಸ್ಪತ್ರೆಯಲ್ಲಿಯೂ ಅಡ್ಮಿಟ್ ಮಾಡಿಕೊಳ್ಳಲು ಅವಕಾಶ ನೀಡದ ಕಾರಣ, ನಾಲ್ಕಾರು ಗಂಟೆಗಳ ಕಾಲ ಆಂಬುಲೆನ್ಸಲ್ಲೇ ಕಳೆಯಬೇಕಾಗಿ ಬಂತು ಎಂದು ಸುಮಾ ನೊಂದುಕೊಂಡರು. ಬಳಿಕ, ಬೆಂಗಳೂರಿನ ವೈದ್ಯರಿಗೆ ಫೋನ್ ಮಾಡಿ ಅವರ ಸೂಚನೆಯ ಮೇರೆಗೆ ರಾತ್ರಿ ಕಾವೇರಿ ಆಸ್ಪತ್ರೆಗೆ ದಾಖಲಿಸಿದ್ದಾಗಿ ಅವರು ತಿಳಿಸಿದರು. ಅಂದಹಾಗೆ ಶಾಂತಮ್ಮ ಅವರಿಗೆ ಆರುಮಂದಿ ಮಕ್ಕಳಿದ್ದು, ಅವರಲ್ಲಿ ನಮಗೆ ಮಾಹಿತಿ ನೀಡಿದ ಸುಮಾ ಅವರು ಕೂಡ ಸಿನಿಮಾ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ತಾವು ಕ್ಯಾನ್ಸರ್ ಪೀಡಿತರಾಗಿದ್ದಾಗಿ ಅಮ್ಮ ಮುಖ್ಯಮಂತ್ರಿಯವರಲ್ಲಿ ಧನಸಹಾಯ ಬೇಡಿದ್ದ ಘಟನೆಯನ್ನು ನೆನಪಿಸಿಕೊಂಡು ಸುಮಾ ಆರ್ದ್ರರಾದರು.
ಡಾ.ರಾಜ್ ಕುಟುಂಬಕ್ಕೆ ಆತ್ಮೀಯರಾಗಿದ್ದರು
ಶಾಂತಮ್ಮ ರಾಜ್ ಕುಮಾರ್, ಅಂಬರೀಷ್, ವಿಷ್ಣುವರ್ಧನ್ ಎಲ್ಲರ ಸಿನಿಮಾಗಳಲ್ಲಿಯೂ ತಾವು ಸಾಯುವ ಪಾತ್ರ ಮಾಡಿದ್ದೇನೆ ಎಂದು ನಗುತ್ತಿದ್ದರು. ಸಾವಿನ ಬಗ್ಗೆ ಎಂದಿಗೂ ಭಯ ಹೊಂದಿರದ ಶಾಂತಮ್ಮ, ಡಾ. ರಾಜ್ ಕುಮಾರ್ ಅವರ ಆದರ್ಶದಲ್ಲೇ ಮುಂದುವರಿದು, ತಮ್ಮ ದೇಹವನ್ನು ರಾಮಯ್ಯ ಆಸ್ಪತ್ರೆಗೆ ಬರೆದುಕೊಟ್ಟಿದ್ದರಂತೆ. ಆದರೆ ಈ ಕೊರೊನಾ ಸಂದರ್ಭದಲ್ಲಿ ಅದೆಲ್ಲ ಕಷ್ಟಸಾಧ್ಯ ಎಂದು ಸುಮಾ ತಿಳಿಸಿದರು.

ರಾಜ್ ಕುಮಾರ್ ಅವರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದು ಮಾತ್ರವಲ್ಲ, ಆನಂತರವೂ ಅವರು ಮತ್ತು ಕುಟುಂಬದ ಜತೆಗೆ ಆತ್ಮೀಯತೆ ಹೊಂದಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ಶಾಂತಮ್ಮ. ಗೌರಿಹಬ್ಬ, ಯುಗಾದಿ ಹಬ್ಬಕ್ಕೆ ರಾಜ್ ಕುಮಾರ್ ಅವರ ಮನೆಯಲ್ಲಿ ಅವರ ಕುಟುಂಬದವರಿಗೆ ಹೊಸ ಬಟ್ಟೆ ತೆಗೆಯುವಾಗ ಇವರಿಗೂ ತೆಗೆದುಕೊಡುತ್ತಿದ್ದುದನ್ನು ಶಾಂತಮ್ಮ ಸದಾ ನೆನಪಿಸಿಕೊಳ್ಳುತ್ತಿದ್ದರು. ಅಣ್ಣಾವ್ರ ಕೊನೆಯ ದಿನಗಳಲ್ಲಿ ಆಪರೇಷನ್ ಆಗಿ ಆಸ್ಪತ್ರೆಯಲ್ಲಿದ್ದಾಗ ಪಾರ್ವತಮ್ಮನವರ ಜತೆಗೆ ತಾವು ಕೂಡ ಹೋಗಿ ಶುಶ್ರೂಷೆ ಮಾಡಿದ್ದರು. ಹಾಗಾಗಿ ಅವರ ಸೇವೆಯ ಅವಕಾಶ ದೊರಕಿತ್ತು ಎನ್ನುವ ಸಂತೃಪ್ತಿ ಶಾಂತಮ್ಮನವರಲ್ಲಿತ್ತು. ಆರು ಜನ ಮಕ್ಕಳಲ್ಲಿ ನಾಲ್ಕು ಜನ ಗಂಡು ಮಕ್ಕಳು. ಒಬ್ಬ ಮಗ ರವಿ ಡಾ.ರಾಜ್ ಕುಮಾರ್ ಅವರಿಗೆ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಮಗಳ ಮದುವೆಯ ಸಂದರ್ಭದಲ್ಲಿ ಪಾರ್ವತಮ್ಮ, ಶಂಕರನಾಗ್, ಅಂಬರೀಷ್ ಸಹಾಯ ಮಾಡಿದ್ದನ್ನು ಕೂಡ ಸ್ಮರಿಸಿಕೊಳ್ಳುತ್ತಿದ್ದರು.
