ಅಪ್ಪು ಸರ್ ನೀಡಿದ್ದಾರೆ ಮತ್ತೊಂದು ಆಫರ್..! : ನಿರ್ದೇಶಕ ರಘು ಸಮರ್ಥ್ ಸಂಭ್ರಮ

ರಘು ಸಮರ್ಥ್ ಎನ್ನುವ ಹೆಸರು ಬಹಳ ಮಂದಿಗೆ ಕಳೆದ ವಾರದ ತನಕವೂ ಗೊತ್ತಿರಲಾರದು. ಆದರೆ ಕಳೆದ ವಾರ ತೆರೆಕಂಡ `ಲಾ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಇವರನ್ನು ಕಂಡವರು ಎಲ್ಲೋ ನೋಡಿದಂತಿದೆಯಲ್ಲ ಎಂದು ತಲೆ ಕೆಡಿಸಿಕೊಂಡಿದ್ದು ಕೂಡ ಅಷ್ಟೇ ಸತ್ಯ. ಅದಕ್ಕೆ ಕಾರಣ ಕಿರುತೆರೆಯಲ್ಲಿನ ಅವರ ನಟನೆ. ಖ್ಯಾತ ನಿರ್ದೇಶಕ ಟಿಎನ್ ಸೀತಾರಾಮ್ ಅವರ ಗರಡಿಯಲ್ಲಿ ಎಪಿಸೋಡ್ ನಿರ್ದೇಶಕರಾಗಿ, ನಟರಾಗಿ ಗುರುತಿಸಿಕೊಂಡಿದ್ದ ರಘು ಸಮರ್ಥ್ ನಿರ್ದೇಶನದ ಎರಡನೇ ಚಿತ್ರವೇ ಲಾ. ಕನ್ನಡ ಸಿನಿಮಾರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಒಟಿಟಿ ಫ್ಲಾಟ್ಫಾರ್ಮ್ ಮೂಲಕ ಸಿನಿಮಾ ಎನ್ನುವ ದಾಖಲೆಯ ಜತೆಗೆ ಜನಪ್ರಿಯ ಯುವನಟ ಪ್ರಜ್ವಲ್ ಪತ್ನಿ ರಾಗಿಣಿ ನಾಯಕಿಯಾದ ಪ್ರಥಮ ಚಿತ್ರ ಎನ್ನುವ ವಿಶೇಷತೆಯೂ ಚಿತ್ರಕ್ಕಿದೆ. ಒಟ್ಟು ಲಾ ಚಿತ್ರ ತಯಾರಾದ ಅನುಭವ ಮತ್ತು ಬಿಡುಗಡೆಯ ಬಳಿಕದ ಪ್ರತಿಕ್ರಿಯೆಗಳ ಬಗ್ಗೆ ಸಿನಿಕನ್ನಡ.ಕಾಮ್ ಜತೆಗೆ ಮನಸು ತೆರೆದು ಮಾತನಾಡಿದ್ದಾರೆ ನಿರ್ದೇಶಕ ರಘು ಸಮರ್ಥ್.

`ಲಾ’ದಂಥ ವಿಭಿನ್ನ ಚಿತ್ರ ಮಾಡುವ ಯೋಜನೆ ಮೂಡಿದ್ದು ಹೇಗೆ?

ಸಿನಿಮಾ ಮಾಡಿದರೆ ಅದು ವಿಭಿನ್ನವಾಗಿಯೇ ಇರಬೇಕು ಎನ್ನುವುದು ನನ್ನ ಗುರಿಯಾಗಿತ್ತು. ನನ್ನ ಮೊದಲ ಚಿತ್ರದ ಹೆಸರು ಸ್ಮೈಲ್ ಪ್ಲೀಸ್. ಅದು ಗುರು ನಂದನ್ ನಾಯಕರಾಗಿದ್ದ ಸಿನಿಮಾ. ಅದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿತ್ತು. ನನಗೆ ಯಾವುದಕ್ಕೂ ಲೇಬಲ್ ಆಗೋಕೂ ಇಷ್ಟ ಇರಲಿಲ್ಲ. ಹೊಸ ಚಾಲೆಂಜ್ ಸ್ವೀಕರಿಸುವುದು ಅಂದರೆ ಇಷ್ಟ. ಈ ಬಾರಿ ಬೇರೊಂದು ಜಾನರಲ್ಲಿ ಚಿತ್ರ ಮಾಡಬೇಕು ಎನ್ನುವ ಕಾರಣದಿಂದ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಆಯ್ದುಕೊಂಡೆ. ಯಾಕೆಂದರೆ ರೆಗ್ಯುಲರ್ ಮರಸುತ್ತುವ ಲವ್ ಸ್ಟೋರಿಗಳನ್ನು ಎಲ್ಲರೂ ಮಾಡುತ್ತಾರೆ. ಅದನ್ನೇ ನಾನ್ಯಾಕೆ ಮಾಡಲಿ ಎಂದೇ ಈ ಡಿಫರೆಂಟಾಗಿರುವ ಕತೆ ಆಯ್ಕೆ ಮಾಡಿಕೊಂಡೆ. ಮಾತ್ರವಲ್ಲ, ನನಗೆ ಸುಮ್ಸುಮ್ನೆ ಡೈರೆಕ್ಟ್ರು ಅನಿಸಿಕೊಳ್ಳೋದು ಇಷ್ಟವಿಲ್ಲ. ಮಾಡಿದ್ರೆ ಏನಾದರೂ ಚಾಲೆಂಜ್ ಇರಬೇಕು. ಹೇಳಿಕೊಳ್ಳುವಂಥ ಕತೆ ಇರಬೇಕು. ಅದಕ್ಕೆ ತಕ್ಕಂಥ ತಂಡ ಬೇಕು, ಪ್ಯಾಷನ್ ಇರುವ ನಿರ್ಮಾಪಕರು ಬೇಕು. ಅವೆಲ್ಲವೂ ಇದ್ದರೇನೇ ಚಿತ್ರ ಮಾಡೋದು. ಅದರ ಹೊರತು ಹೇಗಾದರು ಒಂದು ಚಿತ್ರ ಮಾಡಲೇಬೇಕು ಎನ್ನುವ ಮನಸ್ಥಿತಿ ನನಗಿಲ್ಲ. ಡೈರೆಕ್ಟರಾಗಿ ಗುರುತಿಸಿಕೊಳ್ಳಬೇಕು ಎನ್ನುವ ಹಪಹಪಿನೂ ಇಲ್ಲ.

ಚಿತ್ರ ಬಿಡುಗಡೆಯ ಬಳಿಕ ನಿಮಗೆ ಸಿಕ್ಕಂಥ ಪ್ರತಿಕ್ರಿಯೆಗಳು ಹೇಗಿವೆ?

ಹೆಚ್ಚಿನವರು ಚಿತ್ರ ನೋಡಿ ಇಷ್ಟಪಟ್ಟದ್ದಾಗಿ ಹೇಳಿದ್ದಾರೆ. ಒಟಿಟಿಯಲ್ಲಿ ಬಿಡುಗಡೆಯಾಗಿರುವ ಕಾರಣ, ನಮ್ಮಲ್ಲಿಂದ ಮಾತ್ರವಲ್ಲ ಅಂತಾರಾಜ್ಯ ಹಾಗೂ ವಿದೇಶಗಳಿಂದಲೂ ಪ್ರತಿಕ್ರಿಯೆ ಸಿಗುತ್ತದೆ. ಚೆನ್ನೈ, ಮುಂಬೈ, ಆಸ್ಟ್ರೇಲಿಯ, ಯು ಎಸ್ ಎ ಗಳಿಂದ ಚಿತ್ರ ನೋಡಿದವರು ಚಿತ್ರವನ್ನು ಮೆಚ್ಚಿಕೊಂಡಿರುವುದು ಮಾತ್ರವಲ್ಲ, ಆನ್ಲೈನಲ್ಲೇ ಒಂದು ಸಂವಾದ ಹಮ್ಮಿಕೊಳ್ಳಲು ಬಯಸಿದ್ದಾರೆ. ಆ ಪ್ರಕಾರ ಯು ಎಸ್ ಎ ಕನ್ನಡಿಗರ ಜತೆಗೆ `ನಿಮ್ಮ ಸಂಜೆ ನಮ್ಮ ತಾರೆಯರೊಂದಿಗೆ’ ಎನ್ನುವ ಕಾರ್ಯಕ್ರಮದ ರೂಪುರೇಷೆಗಳು ಸಿದ್ಧವಾಗಿವೆ. ಅದರಲ್ಲಿ ಅಪ್ಪು ಸರ್ ಜತೆಗೆ ನಾಯಕಿ ರಾಗಿಣಿ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ನಾನು ಪಾಲ್ಗೊಳ್ಳಲಿದ್ದೇವೆ. ಇದನ್ನೆಲ್ಲ ನೋಡಿದಾಗ ತುಂಬ ಖುಷಿಯಾಗುತ್ತದೆ. ಅದೇ ಸಂದರ್ಭದಲ್ಲಿ ಚಿತ್ರದ ಬಗ್ಗೆ ಕೆಲವರು ಇಷ್ಟವಾಗಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರುವುದನ್ನೂ ನೋಡಿದ್ದೇನೆ. ಅದು ಸಹಜ. ಎಲ್ಲರೂ ಇಷ್ಟಪಡಬೇಕಾಗಿಲ್ಲ. ವಿಶೇಷವೇನೆಂದರೆ ಸಾಮಾನ್ಯ ನೋಡುಗರು ಕತೆ ಇಷ್ಟಪಟ್ಟಿದ್ದಾರೆ. ಆದರೆ ಚಿತ್ರೋದ್ಯಮದ ಕೆಲವರು, ಮತ್ತು ಒಂದಷ್ಟು ಬುದ್ಧಿವಂತ ವೀಕ್ಷಕರ ಕಡೆಯಿಂದ ನೆಗೆಟಿವ್ ಮಾತುಗಳು ಹೆಚ್ಚು ಬಂದಿವೆ. ನಾನು ಮಾಡಿರುವುದು ಅದ್ಭುತ ಎಂದು ನಾನೂ ಅಂದುಕೊಂಡಿಲ್ಲ. ಆದರೆ ಪ್ರಾಮಾಣಿಕ ಪ್ರಯತ್ನವನ್ನಂತೂ ಮಾಡಿದ್ದೇನೆ.

ಚಿತ್ರ ನೋಡಿದ ಮೇಲೆ ಪುನೀತ್ ರಾಜ್ ಕುಮಾರ್ ಅವರು ಹೇಳಿದ್ದೇನು?

ಅಪ್ಪು ಸರ್ ಬಗ್ಗೆ ಇಲ್ಲಿ ನಾನು ಹೇಳಲೇಬೇಕು. ಅವರು ಆರಂಭದಿಂದಲೇ ಜತೆಗಿದ್ದ ಕಾರಣ ಇಂಥದೊಂದು ಚಿತ್ರ ಮೂಡಿಬರಲು ಕಾರಣವಾಯಿತು. ಅವರು ಕತೆ ಕೇಳಿ ಮೆಚ್ಚಿದ್ದ ಕಾರಣವೇ ನಿರ್ಮಾಣಕ್ಕೆ ಮುಂದೆ ಬಂದಿದ್ದರು. ಚಿತ್ರ ನೋಡಿ ಖುಷಿಯಾಗಿದ್ದ ಅವರು ಇದೀಗ ಅವರಿಗೆ ಸಿಕ್ಕ ಪ್ರತಿಕ್ರಿಯೆಯಿಂದ ತೃಪ್ತರಾಗಿದ್ದಾರೆ. ಇದರ ನಡುವೆ ಕೆಲವರು ನನ್ನ ಬಗ್ಗೆ ದಯವಿಟ್ಟು ಇನ್ನು ಮುಂದೆ ಚಿತ್ರ ನಿರ್ದೇಶಿಸಬೇಡಿ',ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಹಾಳು ಮಾಡಬೇಡಿ’ ಎಂದೆಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ಬರೆದಿದ್ದಾರೆ. ಅದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಹೋಗಿಲ್ಲ. ಯಾಕೆಂದರೆ ಅಲ್ಲಿ ವಾದ, ಚರ್ಚೆ ಮಾಡಿ ಯಾರಿಗೇನು ಸಿಗುತ್ತದೆ ಹೇಳಿ? ಸಂಸ್ಥೆಯ ಹೆಸರು ನನ್ನಿಂದ ಹಾಳಾಗಿದ್ದರೆ ಅದನ್ನು ಮೊದಲು ಪುನೀತ್ ಅವರೇ ನನ್ನ ಗಮನಕ್ಕೆ ತರುತ್ತಿದ್ದರು ಎನ್ನುವ ನಂಬಿಕೆ ನನಗಿದೆ. ಆದರೆ ಅವರು ಚಿತ್ರದ ಬಗ್ಗೆ ಪ್ರಶಂಸಿಸುತ್ತಾ ನನಗೆ ಫೋನ್ ಮಾಡಿ ಅಭಿನಂದಿಸಿದ್ಧಾರೆ. ತಂಡವನ್ನು ಭೇಟಿಯಾಗಬೇಕು. ಇದೇ ತಂಡದ ಜತೆಗೆ ಸೇರಿ ಇನ್ನೊಂದು ಸಿನಿಮಾ ಮಾಡಬೇಕು ಎನ್ನುವ ಬಗ್ಗೆಯೂ ಮಾತನಾಡಿದ್ದಾರೆ! ಅದು ಈ ಸಂದರ್ಭದಲ್ಲಿ ನನಗೆ ಸಿಕ್ಕಂಥ ಬಲುದೊಡ್ಡ ಗೌರವವಾಗಿ ನಾನು ತಿಳಿದುಕೊಂಡಿದ್ದೇನೆ.

ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ನಿರಾಶೆ ತಂದಿತೇ?

ನಿರಾಶೆ ಎನ್ನುವುದಕ್ಕಿಂತ ಅನಿರೀಕ್ಷಿತವಾಗಿತ್ತು. ಯಾಕೆಂದರೆ ನಾವು ಥಿಯೇಟರ್‌ಗೆಂದೇ ಚಿತ್ರ ಮಾಡಿದ್ದಾಗಿತ್ತು. ಕಳೆದ ಡಿಸೆಂಬರಲ್ಲೇ ಚಿತ್ರ ಪೂರ್ತಿಯಾಗಿತ್ತು. ಆದರೆ ಪಿಆರ್ ಕೆ ಚಿತ್ರವಾಗಿರುವುದರಿಂದ `ಮಾಯಾ ಬಜಾರ್’ ಬಿಡುಗಡೆಯ ಬಳಿಕ ಇದನ್ನು ತೆರೆಕಾಣಿಸುವ ಯೋಜನೆ ಇತ್ತು. ಆದರೆ ಮಾಯಾ ಬಜಾರ್ ಬಿಡುಗಡೆಯ ಬಳಿಕ ಕೊರೊನಾ, ಲಾಕ್ಡೌನ್ ಸಮಸ್ಯೆಗಳು ತಲೆದೋರಿದ ಕಾರಣ ಚಿತ್ರ ತಿಂಗಳಾನುಗಟ್ಟಲೆ ಬಿಡುಗಡೆ ಕಾಣದೇ ಇರಬೇಕಾಯಿತು. ಈ ಸಂದರ್ಭದಲ್ಲಿ ಇನ್ನು ಹೆಚ್ಚು ಕಾಯುವುದಕ್ಕಿಂತ ಇಂಥದೊಂದು ಪ್ರಯೋಗ ಮಾಡಲು ಅಪ್ಪು ಸರ್ ತಯಾರಾದರು. ಎಲ್ಲರಂತೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ ಅನುಭವ ನನಗೂ ಹೊಸದು. ಇದು ಮುಖ್ಯವಾಗಿ ಥಿಯೇಟರ್ ಅಭಿಮಾನಿಗಳನ್ನು ಗಮನದಲ್ಲಿರಿಸಿಕೊಂಡು ಮಾಡಿದಂಥ ಮೇಕಿಂಗ್ ಆಗಿತ್ತು. ಬಹುಶಃ ಮೊದಲೇ ಇದು ಒಟಿಟಿಗೆ ಎಂದು ತಯಾರು ಮಾಡುವ ಯೋಜನೆ ಇದ್ದಿದ್ದರೆ ನಾನು ಮೇಕಿಂಗ್ ರೀತಿಯನ್ನೇ ಬೇರೆ ಮಾಡುತ್ತಿದ್ದೆನೇನೋ ಗೊತ್ತಿಲ್ಲ. ಇದು ಥಿಯೇಟರ್ ಗೆ ಬರುವವರ ಮನಸ್ಥಿತಿಯ ಬಗ್ಗೆ ಗಮನಿಸಿ ಮಾಡಿದಂಥ ಚಿತ್ರ. ಇನ್ನೊಂದು ರೀತಿಯಲ್ಲಿ ಗಮನಿಸಿದರೆ ನನಗೆ ಥಿಯೇಟರ್ ರಿಲೀಸ್ ವೇಳೆ ಮಾಡಬೇಕಾದ ಪಬ್ಲಿಸಿಟಿ ಮಾಡದೇನೇ ಹೆಚ್ಚಿನ ಪ್ರಚಾರ ದೊರಕಿದೆ.

ಚಿತ್ರಕ್ಕೆ ನವ ನಾಯಕಿಯನ್ನು ಆಯ್ಕೆ ಮಾಡಿದ್ದೇಕೆ?

ಮೊದಲು ಕೆಲವು ಎಸ್ಟಾಬ್ಲಿಷ್ ನಾಯಕಿಯರನ್ನೇ ಹುಡುಕಾಡಿದ್ದೇವೆ. ಆದರೆ ಅವರನ್ನು ರೀಚ್ ಮಾಡೋದು, ಕತೆ ಹೇಳೋದೇನೇ ಒಂದು ಚಾಲೆಂಜ್ ಆಗಿತ್ತು. ಎಷ್ಟೋ ಮಂದಿಗೆ ಕೇಳುವುದಕ್ಕೂ ಆಸಕ್ತಿ ಇರಲಿಲ್ಲ. ಆಗ ಅಪ್ಪು ಅವರೇ ಚಿತ್ರ ನಿರ್ಮಿಸುತ್ತಾರೆ ಎನ್ನುವುದು ಇನ್ನೂ ತೀರ್ಮಾನ ಆಗಿರಲಿಲ್ಲ ಬೇರೆ! ಆದರೆ ಏನೇ ಆಗಲಿ, ಲೀಡ್ ಆಗಿ ನಟಿಸುವವರಿಗೆ ಈ ಪಾತ್ರದಲ್ಲಿ ಒಂದು ಆಸಕ್ತಿ ಇರಬೇಕು. ನಾವು ಒತ್ತಾಯ ಮಾಡಿ ಒಪ್ಪಿಸೋದು, ಅವರು ಏನೋ ಹೊಸಬರ ಚಿತ್ರ ಎಂದು ಒಪ್ಪಿಕೊಂಡು ಬರೋದು ಎಲ್ಲ ರಿಸ್ಕೇ ಬೇಡ ಅನಿಸ್ತು. ಹಾಗಾಗಿ ಹೊಸಬರ ಕಡೆಗೆ ಪ್ರಯತ್ನ ಮಾಡೋಣ ಅನಿಸ್ತು. ಮಾತ್ರವಲ್ಲ ಟೀಮ್ ಜತೆಗೆ ಡಿಸ್ಕಸ್ ಮಾಡಿದಾಗ ಒಂದು ಹೊಸ ಮುಖ ಇದ್ದರೆ ಬೆಟರ್ ಅಂತ ಅನಿಸಿತ್ತು. ಎಸ್ಟಾಬ್ಲಿಷ್ ಹೀರೋಯಿನ್ ಅಂದಕೂಡಲೇ ಒಂದಷ್ಟು ಪೂರ್ವಾಗ್ರಹಗಳಿರುತ್ತವೆ; ಇವರು ಇದೇ ಪಾತ್ರ ಮಾಡುತ್ತಾರೆ ಅಂತ. ಹಾಗಾಗಿ ನಮ್ಮ ಕ್ಯಾರೆಕ್ಟರ್ ಗೆ ಏನಾಗಿರಬಹುದು ಎನ್ನುವ ಜಡ್ಜ್ ಮೆಂಟ್ ಜನರಿಗೆ ಸಿಗೋದು ಬೇಡ ಎನ್ನುವ ಕಾರಣಕ್ಕೆ ಹೊಸಬರೇ ಬೆಟರ್ ಅನಿಸಿತ್ತು. ಅದೇ ಸಂದರ್ಭದಲ್ಲಿ ರಾಗಿಣಿಯವರ ಕಿರುಚಿತ್ರ ಮತ್ತು ಜಾಹೀರಾತು ನೋಡಿದ್ದೆ. ಹಾಗಾಗಿ ಅವರನ್ನೇ ಅಪ್ರೊಚ್ ಮಾಡೋಣ ಅನಿಸಿತು.

ಕತೆ ಕೇಳಿದಾಗ ರಾಗಿಣಿಯವರ ಪ್ರತಿಕ್ರಿಯೆ ಹೇಗಿತ್ತು?

ನಾನು ಕತೆ ಹೇಳಿದಾಗ ಅವರು ತುಂಬಾನೇ ಖುಷಿಯಾಗಿದ್ದರು. ತಕ್ಷಣ ಅವರು ಹೇಳಿದ್ದೇನೆಂದರೆ, “ನನಗೆ ಈ ಹಿಂದೆಯೂ ಸಾಕಷ್ಟು ಆಫರ್ಸ್ ಬಂದಿದ್ದವು. ಆದರೆ ಎಲ್ಲರೂ ಒಂದು ಲವ್ ಸ್ಟೋರಿ, ಅದರಲ್ಲಿ ನಾನು, ಪ್ರಜ್ವಲ್ ಹೀರೋ- ಹೀರೋಯಿನ್ ಆಗಿರುವಂಥ ಕತೆಯನ್ನೇ ಹೇಳಿಕೊಂಡು ಬಂದಿದ್ದರು. ಮೊದಲ ಬಾರಿ ನೀವು ಒಂದು ನಾಯಕಿಗೆ ಪ್ರಾಧಾನ್ಯತೆ ಇರುವ ಕತೆಯನ್ನು ತೆಗೆದುಕೊಂಡು ಬಂದಿದ್ದೀರಿ. ಅದರಲ್ಲೇ ನೀವು ನನ್ನ ಮೇಲಿಟ್ಟಿರುವ ಭರವಸೆ ನನಗೆ ಅರ್ಥವಾಗಿದೆ. ನನಗೆ ಇಷ್ಟವಾಗಿದೆ” ಎಂದರು. ನನಗೂ ಅದೇ ಬೇಕಿತ್ತು. ಯಾಕೆಂದರೆ ಪಾತ್ರ ಮಾಡುವವರಿಗೆ ಪಾತ್ರದ ಮೇಲೆ ಇಷ್ಟ ಇರುವುದು ಮುಖ್ಯ. ಅಷ್ಟು ಹೊತ್ತಿಗೆ ಸರಿಯಾಗಿ ಅಪ್ಪು ಸರ್ ಕೂಡ ನಿರ್ಮಾಣದ ಹೊಣೆ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದರು. ಹಾಗೆ ಎಲ್ಲವೂ ಕೂಡಿಕೊಂಡು ಬಂತು.

ಕೃಷ್ಣ ಹೆಬ್ಬಾಳೆಯವರನ್ನು ಪೊಲೀಸ್ ಪಾತ್ರಕ್ಕೆ ಹೇಗೆ ಒಪ್ಪಿಸಿದಿರಿ?

ಹೌದು, ಅವರು ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ಪೊಲೀಸ್ ಪಾತ್ರ ಮಾಡಿರುವ ಕಾರಣ ಮತ್ತೆ ಇನ್ನೊಮ್ಮೆ ಪೊಲೀಸ್ ಪಾತ್ರ ಮಾಡಲು ಅವರು ತಯಾರಿರಲಿಲ್ಲ. ಮಾತ್ರವಲ್ಲ ಕೃಷ್ಣ ಮತ್ತು ನಾನು ಪರಿಚಿತರೇನೂ ಆಗಿರಲಿಲ್ಲ. ನಾನು ಅವರಿಗೆ ಕತೆ ಹೇಳುವ ಮೊದಲು ಪೊಲೀಸ್ ಪಾತ್ರ ಎಂದು ತಿಳಿದಾಕ್ಷಣ ಸಾರಿ ನನಗೆ ಇಷ್ಟವಿಲ್ಲ ಎಂದೇ ಹೇಳಿದ್ದರು. “ಸರ್ ಒಂದು ಸಲ ಆಫೀಸ್‌ಗೆ ಬಂದು ಕತೆ ಕೇಳಿ. ನಿಮಗೆ ಇಷ್ಟವಾಗದಿದ್ದರೆ ನಾನು ಬಲವಂತ ಮಾಡುವುದಿಲ್ಲ ಎಂದಿದ್ದೆ. ಮಾತ್ರವಲ್ಲ, ಚಿತ್ರದಲ್ಲಿ ನಿಮ್ಮ ಪಾತ್ರ ಖಾಕಿ ಹಾಕಿರುವುದಿಲ್ಲ ಎಂದಿದ್ದೆ. ಅವರು ಕತೆ ಕೇಳಿದ ಮೇಲೆ ತುಂಬಾನೇ ಎಕ್ಸೈಟಾದರು. ಮಂಡ್ಯ ರಮೇಶ್ ಅವರ ಪಾತ್ರದ ಬಗ್ಗೆ ಕೆಲವು ಕಡೆ ಅತಿರೇಕ ಎನ್ನುವ ಒಪಿನಿಯನ್ ಇದ್ದರೂ, ಅವರು ನೆಗೆಟಿವ್ ಪಾತ್ರಕ್ಕೆ ಜೀವ ನೀಡಿರುವುದಂತೂ ನಿಜ. ಅಂಥದೊಂದು ವಾತಾವರಣದಲ್ಲಿ ಕೃಷ್ಣ ಹೆಬ್ಬಾಳೆಯವರ ಪ್ರವೇಶಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ ಎನ್ನುವುದು ನನ್ನ ನಂಬಿಕೆಯಾಗಿತ್ತು.

ನೀವು ಕಲಾವಿದರಿಗೆ ಅಭಿನಯ ಮಾಡಿ ತೋರಿಸುತ್ತೀರ?

ನಾನು ಕಲಿತ ಗುರುಕುಲ ಅಂಥದ್ದು! ಹೌದು, ನಾನು ಟಿ.ಎನ್ ಸೀತಾರಾಮ್ ಸರ್ ಶಿಷ್ಯ. ಅವರ ಧಾರಾವಾಹಿಗಳಲ್ಲಿ ಎಪಿಸೋಡ್ ಡೈರೆಕ್ಟರಾಗಿಯೂ ಕೆಲಸ ಮಾಡಿದ್ದೆ. ಬರಹಗಾರನಾಗಿದ್ದೂ ಅಲ್ಲಿಂದಲೇ. ಪಾತ್ರವನ್ನು ಹೇಗೆ ಬಿಲ್ಡ್ ಮಾಡಬೇಕು ಎನ್ನುವುದನ್ನೆಲ್ಲ ನಾನು ಅವರಿಂದಲೇ ಕಲಿತಿರುವುದು. ಅವರು ಒಬ್ಬ ವ್ಯಕ್ತಿಯಿಂದ ಯಾವ ಪಾತ್ರ ಮಾಡಿಸಿದರೆ ಅದನ್ನು ಅವರು ಚೆನ್ನಾಗಿ ಮಾಡಬಹುದು ಎನ್ನುವುದನ್ನು ಒಂದೆರಡು ದಿನಗಳ ಸಹವಾಸದಿಂದಲೇ ಅರಿತುಕೊಳ್ಳಬಲ್ಲವರು ಟಿ ಎನ್ ಸೀತಾರಾಮ್. ಪ್ರತಿಯೊಬ್ಬ ಕಲಾವಿದರಿಗೂ ಒಂದು ಪ್ಲಸ್ ಮತ್ತು ಮೈನಸ್ ಎನ್ನುವುದು ಇರುತ್ತದೆ. ಅವರು ಆ ಪ್ಲಸ್ ಗಳ ಮೇಲೆ ಹೆಚ್ಚು ಫೋಕಸ್ ಮಾಡುವಂಥ ಸನ್ನಿವೇಶಗಳನ್ನು ನೀಡುತ್ತಾರೆ. ಮನ್ವಂತರ ಧಾರಾವಾಹಿಯ ರಾಜಕೀಯದ ಸನ್ನಿವೇಶದಲ್ಲಿ ಒಂದು ದೃಶ್ಯಕ್ಕೆಂದು ರಮೇಶ್ ಕುಮಾರ್ ಅವರನ್ನು ಕರೆಸುವುದಾಗಿ ಮಾತನಾಡಿಕೊಂಡಿದ್ದೆವು. ಜಸ್ಟ್ ಒಬ್ಬ ಅಪೊಸಿಷನ್ ಲೀಡರಾಗಿ ಮಾತ್ರ, ಒಂದು ದೃಶ್ಯ ಮಾತ್ರ ಅವರನ್ನು ಇರಿಸಿಕೊಂಡು ತೆಗೆಯುವುದಾಗಿ ಅಂದುಕೊಂಡಿದ್ದೆವು. ಅವರಿಗೆ ಕ್ಯಾಮೆರಾ ಎಲ್ಲ ಏನು ಗೊತ್ತಾಗುತ್ತಿರಲಿಲ್ಲ. ಕ್ಯಾಮೆರಾ ನೋಡಬಾರದು ಅಂದರೆ ಕ್ಯಾಮೆರಾವನ್ನೇ ನೋಡುತ್ತಿದ್ದರು. ಆದರೆ ಒಂದು ದೃಶ್ಯ ಮಾಡಲು ಆರಂಭಿಸಿದ ಬಳಿಕ, ಅವರು ಎಲೆಕ್ಷನ್ ನಿಲ್ಲೋದು, ಮುಖ್ಯಮಂತ್ರಿಯಾಗೋದು ಹೀಗೆ ದೃಶ್ಯಗಳು ಬೆಳೆಯುತ್ತಾ ಹೋದವು. ಒಬ್ಬ ವ್ಯಕ್ತಿಯ ಜತೆಗೆ ಇಂಟರ್ಯಾಕ್ಟ್ ಮಾಡುತ್ತಿದ್ದ ಹಾಗೆ ಅದು ಚಿಕ್ಕ ಮಗುವಿನಿಂದ ಹಿಡಿದು, ಎಂಬತ್ತು ವರ್ಷದ ವ್ಯಕ್ತಿಯ ತನಕದ ಎಲ್ಲ ಪಾತ್ರಗಳಿಗೂ ನಟನೆ ಮಾಡಿ ತೋರಿಸಬಲ್ಲವರು ಅವರು. ಕೋಪ, ನೋವು, ಹಾಸ್ಯ ಎಲ್ಲವನ್ನೂ ಅಭಿನಯಿಸಿ ತೋರಿಸುತ್ತಾರೆ. ಅಲ್ಲಿಂದ ನೋಡಿ ಕಲಿತ ಕಾರಣ, ನಾವು ಕೂಡ ಬೇರೆಯವರಿಗೆ ಮಾಡಿ ತೋರಿಸುತ್ತಿದ್ದೆವು. ಇಂದು `ಲಾ’ ಚಿತ್ರವನ್ನು ಮೆಚ್ಚಿಕೊಂಡವರಿಗೆ ಅದರಲ್ಲಿ ಕಾಣಿಸುವ ಎಲ್ಲ ಪಾಸಿಟಿವ್ ಸಂಗತಿಗಳಿಗೆ ಸೀತಾರಾಮ್ ಸರ್ ಕಾರಣ ಎಂದು ಹೇಳಲು ಇಷ್ಟಪಡುತ್ತೇನೆ. ಅದೇ ವೇಳೆ ನೆಗೆಟಿವ್ ಗಳಿದ್ದರೆ ಅದಕ್ಕೆ ನಾನೇ ಕಾರಣ.

ಸೀತಾರಾಮ್ ಸರ್ ನನ್ನನ್ನು ನಟನಾಗಿಯೂ ತೋರಿಸಿದ್ದರು. ಹಾಗೆ ನಟನಾದೆ ಬಿಟ್ಟರೆ, ನನಗೆ ನಿರ್ದೇಶನದಲ್ಲಿ ಆಸಕ್ತಿ ಇತ್ತು. ಲಾ ಚಿತ್ರದಲ್ಲಿ ಯಾರಿಗೂ ನಟಿಸಿ ತೋರಿಸಿರಲಿಲ್ಲ. ಹೇಗೆ ಇರಬೇಕು ಎನ್ನುವುದನ್ನು ವಿವರಿಸಿದ್ದೆ. ಉದಾಹರಣೆಗೆ ನಟರಂಗ ರಾಜೇಶ್ ಅವರಿಗೆ ನಾಲ್ಕೈದು ಕನ್ನಡಕ ಹಾಕಿ ಟೆಸ್ಟ್ ಮಾಡಿಸಿದ್ದೆವು. ಆದರೆ ಒಕೆ ಮಾಡಿದ ಕನ್ನಡಕ ತುಂಬ ಟೈಟಾಗಿತ್ತು. ಹಾಗಾಗಿ ಒತ್ತುವ ಹಾಗಿದೆ ಎನ್ನುವುದನ್ನು ಕಣ್ಣುಗಳ ಮೂಲಕವೇ ತೋರಿಸಿದರು. ನನಗೆ ಆ ಮ್ಯಾನರಿಸಮ್ ಇಷ್ಟವಾಯ್ತು! ಆದುದರಿಂದ ಪಾತ್ರದಲ್ಲಿಯೂ ಅದೇ ಮ್ಯಾನರಿಸಮ್ ತೋರಿಸುವಂತೆ ಸಲಹೆ ಮಾಡಿದ್ದೆ. ಅವರು ಅದನ್ನು ಒಪ್ಪಿಕೊಂಡು ಹಾಗೆಯೇ ಮಾಡಿದ್ದಾರೆ ಕೂಡ.

ನಿಮ್ಮ ಇದುವರೆಗಿನ ಸಿನಿಮಾ ಪಯಣ ಹೇಗಿತ್ತು?

ಆಗಲೇ ಹೇಳಿದಂತೆ ನಾನು ಕಿರುತೆರೆಯಿಂದ ಬಂದವನು. ಸೀತಾರಾಮ್ ಸರ್ ಧಾರಾವಾಹಿಯ ಬಳಿಕ ಸುವರ್ಣ ವಾಹಿನಿಯಲ್ಲಿ ಫಿಕ್ಷನ್ ಹೆಡ್ ಆಗಿ ಕೆಲಸದಲ್ಲಿದ್ದೆ. ಆನಂತರ ಮಠ ಗುರು ಪ್ರಸಾದ್ ಅವರ ಡೈರೆಕ್ಟರ್ ಸ್ಪೆಷಲ್' ಚಿತ್ರಕ್ಕೆ ಕೊ ಡೈರೆಕ್ಟರಾಗಿದ್ದೆ.ಕೋಟ್ಯಾಧಿಪತಿ’ ಸೀಸನಲ್ಲಿ ಅಪ್ಪು ಸರ್ ಜತೆ ತುಂಬ ಆತ್ಮೀಯನಾದೆ. ಎರಡು ಸೀಸ್ ನ್ ಗಳಿಗೆ ನಾನೇ ಡೈಲಾಗ್ ಬರೆದಿದ್ದೆ. ವಿನಯ್ ರಾಜ್ ಕುಮಾರ್ ನಾಯಕರಾಗಿದ್ದಸಿದ್ದಾರ್ಥ' ಸಿನಿಮಾಗೆ ಫುಲ್ ಫ್ಲೆಡ್ಜಾಗಿ ನಾನೇ ಡೈಲಾಗ್ ಬರೆದಿದ್ದೆ. ಜಾಗ್ವಾರ್',ಸತ್ಯ ಹರಿಶ್ಚಂದ್ರ’,ರುಸ್ತುಂ' ಚಿತ್ರಗಳಿಗೆ ಕೂಡ ಸಂಭಾಷಣೆ ಬರೆದೆ. ಮೂರು ವರ್ಷಗಳ ಹಿಂದೆ ನಾನು ಪ್ರಥಮವಾಗಿ ನಿರ್ದೇಶಿಸಿದ ಚಿತ್ರಸ್ಮೈಲ್ ಪ್ಲೀಸ್’ ಆಗಿತ್ತು. ಅದಕ್ಕೂ ಕತೆ, ಚಿತ್ರಕತೆ, ಸಂಭಾಷಣೆ ನಾನೇ ಮಾಡಿದ್ದೆ. ವಿಶೇಷ ಏನೆಂದರೆ ಆಗ ಪ್ರೆಸ್ಮೀಟ್, ಪ್ರಚಾರ ಎಲ್ಲವನ್ನೂ ಮಾಡಿ ತೆರೆಗೆ ತಂದ ಚಿತ್ರಕ್ಕಿಂತ ಹೆಚ್ಚಿನ ಪ್ರಚಾರ `ಲಾ’ಗೆ ದೊರಕಿದೆ. ಸಿನಿಮಾ ಮಾಡಿದರೆ ಅದರಿಂದ ಸಮಾಜಕ್ಕೆ ಏನಾದರೂ ಇಂಪ್ಯಾಕ್ಟ್ ಆಗುವಂತಿರಬೇಕು ಎನ್ನುವುದು ನನ್ನ ಉದ್ದೇಶ. ಬರವಣಿಗೆ ಮೊದಲಿನಿಂದಲೂ ನನಗೆ ಹುಚ್ಚು. ಮನ್ವಂತರ, ಮುಕ್ತ ಆದ ಬಳಿಕ ಸಿನಿಮಾದಲ್ಲಿ ನಾಯಕನಾಗಲು ಆಫರ್ ಮಾಡಿದ್ದರು. ಆದರೆ ನನ್ನ ನಂಬಿಕೊಂಡು ಯಾಕೆ ದುಡ್ಡ್ ಹಾಳ್ಮಾಡ್ಕೋತೀರಿ ಎಂದು ಹಿಂದೆ ಸರಿದವನು ನಾನು! ನನ್ನ ಆಸಕ್ತಿ ಎಲ್ಲವೂ ಸಿನಿಮಾ ನಿರ್ದೇಶನದ ಮೇಲೆ ಮಾತ್ರ.

Recommended For You

Leave a Reply

error: Content is protected !!