ದರ್ಶನ್ ಏನಂತಾರೆ..?

ಡಿ ಬಾಸ್ ಏನಂತಾರೋ ಏನೋ..?! ಈ ಪ್ರಶ್ನೆ ಇವತ್ತು ಮಧ್ಯಾಹ್ನದ ಬಳಿಕ ತುಂಬ ಮಂದಿ ನನ್ನಲ್ಲಿ ಕೇಳಿದ್ದಾರೆ! ಅದಕ್ಕೆ ಕಾರಣ ಬೇರೆನೂ ಅಲ್ಲ; ಶಿವಣ್ಣನ ನಾಯಕತ್ವದಲ್ಲಿ ಕನ್ನಡ ಚಿತ್ರರಂಗಕ್ಕೆ ಸಹಾಯ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುತ್ತಿದೆ ಎನ್ನುವುದೇ ಕಾರಣ! ಅರೆರೆ.. ಅಜಾತ ಶತ್ರು ಶಿವಣ್ಣನ ನಾಯಕತ್ವದ ಬಗ್ಗೆ ದರ್ಶನ್ ಅವರು ಕೂಡ ಬೆಂಬಲಿಸುತ್ತಾರೆ. ಅದನ್ನು ಬಿಟ್ಟು, ಬೇರೇನೋ ಅಂತಾರೇನೋ.. ಎನ್ನುವ ಸಂದೇಹವಾದರೂ ಯಾಕೆ ಇವರಿಗೆ ಎನ್ನುವಂತಿಲ್ಲ. ಯಾಕೆಂದರೆ ಅಂಥದೊಂದು ಸಂದೇಹ ಸೃಷ್ಟಿಸಲು ಐದಾರು ವರ್ಷಗಳ ಹಿಂದಿನ ಘಟನೆಯನ್ನು ಅಭಿಮಾನಿಗಳು ಮರೆಯದಿರುವುದೇ ಕಾರಣ!

ಹೌದು. ಅಂದು ಡಬ್ಬಿಂಗ್ ಚಿತ್ರಗಳ ವಿರುದ್ಧದ ಪ್ರತಿಭಟನೆಗೆ ಶಿವರಾಜ್ ಕುಮಾರ್ ಅವರನ್ನು ನಾಯಕತ್ವ ವಹಿಸುವಂತೆ ಒತ್ತಾಯಿಸಲಾಗಿತ್ತು. ಆ ಪ್ರಕಾರ ಅವರು ಎಲ್ಲ ಕಲಾವಿದರಿಗೆ ಕರೆ ನೀಡಿ ಮುನ್ನುಗ್ಗಿದ್ದೂ ನಿಜ. ಆದರೆ ಆ ಸಂದರ್ಭದಲ್ಲಿ ಸುದೀಪ್ ಮತ್ತು ದರ್ಶನ್ ಅವರು ಪಾಲ್ಗೊಳ್ಳುವಿಕೆಯಲ್ಲಿ ಉತ್ಸಾಹ ತೋರಿಸಿರಲಿಲ್ಲ. ಅದಕ್ಕೆ ಕಾರಣ ಹುಡುಕುತ್ತಾ ಹೋದರೆ ಒಣಗಿದ ಗಾಯವನ್ನು ಕೆದಕಿದ ಹಾಗೆ ಆದೀತು. ಒಟ್ಟಿನಲ್ಲಿ ಅಂದು ಅವರಿಬ್ಬರು ಡಬ್ಬಿಂಗ್ ಸಿನಿಮಾಗಳ ಬಗ್ಗೆ ವಿರೋಧ ಹೊಂದಿದ್ದರೂ, ಶಿವಣ್ಣನ ನಾಯಕತ್ವದ ಬಗ್ಗೆ ಅಷ್ಟಾಗಿ ತೃಪ್ತರಾಗಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಅಂದು ಯಾವ ಸ್ನೇಹಿತನ ಜತೆ ಸೇರಿ ಶಿವಣ್ಣನ ನಾಯಕತ್ವದ ಕುರಿತು ದರ್ಶನ್ ನಿರಾಸಕ್ತಿ ವ್ಯಕ್ತಪಡಿಸಿದ್ದರೋ, ಇಂದು ಆ ಸ್ನೇಹವೇ ಉಳಿದಿಲ್ಲ. “ಸುದೀಪ್ ಮತ್ತು ತಾವು ಕನ್ನಡ ಚಿತ್ರೋದ್ಯಮದಲ್ಲಿ ಕಾರ್ಯನಿರತರಾಗಿರುವ ಇಬ್ಬರು ಕಲಾವಿದರೇ ಹೊರತು, ಅದರಾಚೆಗಿನ ಯಾವುದೇ ಊಹಾಪೋಹಗಳಿಗೆ ಅವಕಾಶ ಇಲ್ಲ” ಎಂದು ಮೂರು ವರ್ಷಗಳ ಹಿಂದೆ ದರ್ಶನ್ ಒಂದು ಟ್ವೀಟ್ ಮಾಡಿದ ಬಳಿಕ ಇದುವರೆಗೂ ಅವರು ಸುದೀಪ್ ಹೆಸರು ಎತ್ತಿರುವುದನ್ನು ಯಾರೂ ಕೇಳಿಲ್ಲ, ನೋಡಿಲ್ಲ. ಅದೇ ಸಂದರ್ಭದಲ್ಲಿ ಸುದೀಪ್ ಶಿವರಾಜ್ ಕುಮಾರ್ ಅವರ ಜತೆ ಸೇರಿ ಸಿನಿಮಾವನ್ನೇ ಮಾಡಿದರು! ಹಾಗಂತ ದರ್ಶನ್ ಶಿವಣ್ಣನ ಜತೆಗೆ ಸಿನಿಮಾ ಮಾಡದಿದ್ದರೂ, ಶಿವಣ್ಣನ ಬಗ್ಗೆ ಯಾವತ್ತಿಗೂ ಅವರು ಮೃದು ಧೋರಣೆಯನ್ನಷ್ಟೇ ಹೊಂದಿದ್ದಾರೆ ಎನ್ನುವುದು ಗಮನಾರ್ಹ. ಯಾಕೆಂದರೆ ಶಿವಣ್ಣನ ಕುಟುಂಬದ ಜತೆಗೆ ಅವರಿಗಿರುವ ಸಂಬಂಧ, ಇತಿಹಾಸವೇ ಅಂಥದ್ದು. ಅದು ಈಗ ನಮ್ಮ ಕಣ್ಣಿಗೆ ಕಾಣುವಂತೆ ಬರೇ ಇಬ್ಬರು ಸ್ಟಾರ್ ನಟರ ಸಿನಿಮಾಗಳಿಗೆ ಮಾತ್ರ ಸೀಮಿತವಲ್ಲ. ಅವರ ತಂದೆಯ ಕಾಲದಿಂದಲೇ ಬೆಸೆದುಕೊಂಡು ಬಂದಿರುವಂಥದ್ದು. ಬಂದ ದಾರಿಯನ್ನು, ಹಿರಿಯರನ್ನು ಎಂದಿಗೂ ಮರೆಯದ ದರ್ಶನ್ ಅವರಿಗೆ ನಾವು ಯಾರೂ ಇಂಥ ವಿಚಾರಗಳನ್ನು ನೆನಪಿಸುವ ಅಗತ್ಯವೇ ಇರುವುದಿಲ್ಲ.

ತಾರೆಯರ ಮಹಾತ್ಮೆ..!

ಇಷ್ಟಕ್ಕೂ ಸಿನಿಮಾರಂಗದ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಮುಂದೆ ಇಡಲು ತಾರೆಯೇ ಯಾಕೆ ನಾಯಕತ್ವ ವಹಿಸಬೇಕು? ಸಿನಿಮಾದ ಕ್ಯಾಪ್ಟನ್ ನಿರ್ದೇಶಕ ಎನ್ನುತ್ತೇವೆ. ನಮ್ಮದು ಪುಟ್ಟಣ್ಣನಂಥ ನಿರ್ದೇಶಕರನ್ನು ಕೊಟ್ಟ ರಾಜ್ಯ. ಇಂದು ಹಲವಾರು ರಾಷ್ಟ್ರ ಪ್ರಶಸ್ತಿಗಳನ್ನು ಕನ್ನಡಕ್ಕೆ ತಂದುಕೊಟ್ಟ ಗಿರೀಶ್ ಕಾಸರವಳ್ಳಿ, ಟಿ. ಎಸ್ ನಾಗಾಭರಣ, ಬರಗೂರು ರಾಮಚಂದ್ರಪ್ಪ, ಪಿ ಶೇಷಾದ್ರಿ, ಕವಿತಾ ಲಂಕೇಶ್ ಮೊದಲಾದವರ ಜತೆಗೆ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ಎಸ್. ವಿ ರಾಜೇಂದ್ರ ಸಿಂಗ್ ಬಾಬು, ಎಸ್. ನಾರಾಯಣ್, ಯೋಗರಾಜ್ ಭಟ್, ಪ್ರಶಾಂತ್ ನೀಲ್ ಮೊದಲಾದ ನಿರ್ದೇಶಕರಿದ್ದಾರೆ. ಇವರೇ ಎಲ್ಲ ವರ್ಗದ ಕ್ಯಾಪ್ಟನ್ ಶಿಪ್ ತೆಗೆದುಕೊಂಡು ಮುಖ್ಯಮಂತ್ರಿಯವರನ್ನು ಭೇಟಿಯಾದರೆ ಅವರಂತೆ ಸಮಸ್ಯೆ ಮನವರಿಕೆ ಮಾಡಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆದರೂ ನಮಗೆ ತಾರೆಯೇ ಮುಂದೆ ನಿಲ್ಲಬೇಕು ಎನ್ನುವ ಹಂಬಲ ಏಕೆ? ಕಾರಣ ಸಿಂಪಲ್; ನಿರ್ದೇಶಕರು ಪರದೆಯ ಹಿಂದೆ ಮಾತ್ರ ಸೀಮಿತ. ಆದರೆ ಸಿನಿಮಾರಂಗದ ಎದುರಿಗಿರುವ ಚುಂಬಕ ಶಕ್ತಿ ಇಂದಿಗೂ ತಾರೆಗಳೇ. ಅದರಲ್ಲಿಯೂ ಕರ್ನಾಟಕದ ಮಟ್ಟಿಗೆ ಡಾ.ರಾಜ್ ಕುಮಾರ್ ಎನ್ನುವ ದಂತಕತೆಯೇ ಇದ್ದಾರೆ.

ರಾಜ್ ಕುಮಾರ್ ಅವರು ರಾಜಕಾರಣಿ ಆಗಿರಲಿಲ್ಲ. ಆದರೆ ಗೋಕಾಕ್ ಹೋರಾಟದಲ್ಲಿ ನಾಡನ್ನು ಒಂದಾಗಿಸುವಲ್ಲಿ ಅವರು ತುಂಬಿದ ಶಕ್ತಿ ದೊಡ್ಡದು. ನಮ್ಮಲ್ಲಿನ ಚಿತ್ರನಟರಿಗೆ ಸಾಮಾಜಿಕ ಕಾಳಜಿಯನ್ನು ಹೊಂದಿರಬೇಕು ಎನ್ನುವ ಜವಾಬ್ದಾರಿಯನ್ನು ಮೂಡಿಸಿದ ಘಟನೆ ಅದು. ಅಂದಿನಿಂದ ಇಂದಿನವರೆಗೂ ನಾವೆಲ್ಲ ಸಾಮಾಜಿಕ ಹೋರಾಟದ ವಿಚಾರ ಬಂದೊಡನೆ ಚಿತ್ರನಟರ ಪಾಲ್ಗೊಳ್ಳುವಿಕೆಯನ್ನು ಪ್ರಶ್ನಿಸುವಂತಾಗಿದೆ. ಡಾ.ರಾಜ್ ಬಳಿಕ ಅಂಬರೀಷ್ ಅವರು ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಕೇಂದ್ರವಾಗಿದ್ದರು. ಅವರು ರಾಜಕಾರಣಿಯಾಗಿದ್ದರೂ ಸಮಾಜದಲ್ಲಿ ಅವರಿಗಿದ್ದ ಅಜಾತ ಶತ್ರುವಿನ ಗುಣ ಈ ಸಂಧಾನ, ಹೋರಾಟಗಳಿಗೆ ಅರ್ಥ ತಂದುಕೊಟ್ಟಿತ್ತು. ಇದೀಗ ಅವರು ಕೂಡ ನಮ್ಮನ್ನು ಅಗಲಿದ್ದಾರೆ. ಹಾಗಾಗಿ ಹಿರಿಯ ತಾರೆಯೊಬ್ಬರ ಮುಖ ಈ ಹೋರಾಟಕ್ಕೆ ಬೇಕಾಗಿದೆ. ಅದು ಶಿವಣ್ಣನ ಮೂಲಕ ಮುಂದುವರಿದರೆ ಚೆನ್ನಾಗಿರುತ್ತದೆ ಎಂದು ಚಿತ್ರೋದ್ಯಮದ ಹಿರಿಯರು ಬಯಸಿದ್ದಾರೆ. ಶಿವರಾಜ್ ಕುಮಾರ್ ಕೂಡ ಇದಕ್ಕೆ ಪ್ರತಿಕ್ರಯಿಸುತ್ತಾ, “ನಾನು ನಾಯಕ ಎಂದು ಮುಂದೆ ಹೋಗುವುದಕ್ಕಿಂತ ಜತೆಯಾಗಿ ಸಾಗೋಣ” ಎಂದಿದ್ದಾರೆ.

ಶಿವಣ್ಣನ ವಿಶೇಷತೆ ಏನು?

ಶಿವರಾಜ್ ಕುಮಾರ್ ತಾನೊಬ್ಬ ಸ್ಟಾರ್ ಎನ್ನುವುದನ್ನು ಯಾವತ್ತಿಗೂ ತೋರಿಸಿಕೊಳ್ಳದ ನಟ. ಡಾ.ರಾಜ್ ಅವರ ಸರಳತೆಯ ಮುಂದುವರಿದ ಭಾಗವನ್ನು ನಾವು ಶಿವಣ್ಣನಲ್ಲಿ ಕಾಣಬಹುದು. ಅವರು ರಾಜಕೀಯದಲ್ಲಿ ಇಲ್ಲವಾದರೂ, ಎಲ್ಲ ಪಕ್ಷಗಳ ರಾಜಕಾರಣಿಗಳು ಅವರಿಗೆ ಆತ್ಮೀಯರಾಗಿದ್ದಾರೆ. ಪದವಿ ಸ್ವೀಕರಿಸಿದ ಹೆಚ್ಚಿನ ಮುಖ್ಯಮಂತ್ರಿಗಳು ಕನ್ನಡದ ಸಿನಿಮಾ ಸಾಂಸ್ಕೃತಿಕ ರಾಯಭಾರಿಯ ಪುತ್ರ ಎನ್ನುವ ಕಾರಣಕ್ಕಾಗಿಯೇ ಶಿವರಾಜ್ ಕುಮಾರ್ ಮನೆಗೆ ಒಮ್ಮೆ ಭೇಟಿ ನೀಡುವ ಪರಿಪಾಠ ಇರಿಸಿಕೊಂಡಿದ್ದಾರೆ. ಪರಭಾಷಾ ಚಿತ್ರಗಳಲ್ಲಿ ನಟಿಸದಿದ್ದರೂ, ಪಂಚಭಾಷಾ ಚಿತ್ರರಂಗದಲ್ಲಿಯೂ ಆತ್ಮೀಯರನ್ನು ಹೊಂದಿದ್ದಾರೆ! ಒಂದು ವೇಳೆ ನಿರ್ದೇಶಕರ ಸಂಘದ ಮೂಲಕ ಹೋಗಿ ಬೇಡಿಕೆ ಸಲ್ಲಿಸಿದಾಗ ಅದಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸದೇ ಹೋದರೂ ಅದು ಹೆಚ್ಚು ಸುದ್ದಿಯಾಗುವುದು ಸಂದೇಹ. ಆದರೆ ಶಿವರಾಜ್ ಕುಮಾರ್ ನೇತೃತ್ವ ವಹಿಸಲಿದ್ದಾರೆ ಎಂದೊಡನೆ ಅದು ರಾಜ್ಯಮಟ್ಟದ ವಾರ್ತೆಯಾಗಿದೆ. ಅದು ನಮ್ಮ ಸಿನಿಮಾ ಅಭಿಮಾನಿಗಳು ತಾರೆಯರಿಗೆ ನೀಡುವ ಗಮನದ, ಕಾಳಜಿಯ ಸಂಕೇತ. ಈ ಎಲ್ಲ ಕಾರಣಗಳಿಂದ ದರ್ಶನ್ ಮಾತ್ರವಲ್ಲ, ಚಿತ್ರರಂಗದ ಎಲ್ಲರೂ ಶಿವಣ್ಣನ ನಾಯಕತ್ವವನ್ನು ಸಂಪೂರ್ಣವಾಗಿ ಬೆಂಬಲಿಸುವುದು ಖಚಿತ.

ಶಿವರಾಜ್ ಕುಮಾರ್ – ದರ್ಶನ್ ಸಾಮ್ಯತೆ

ಇಬ್ಬರೂ ಎರಡು ಜನರೇಶನ್ ಕಲಾವಿದರು. ಹಾಗೆ ನೋಡಿದರೆ ತಲೆಮಾರಿನಿಂದ ತುಂಬ ಆತ್ಮೀಯತೆ ಇರಿಸಿಕೊಂಡು ಬಂದವರು. ತಮ್ಮ ಚಿತ್ರಕ್ಕೆ ಕತೆ ಮಾಡುವಾಗ ಅದರಲ್ಲಿ ತೂಗುದೀಪ ಶ್ರೀನಿವಾಸ್ ಅವರಿಗೆ ಒಂದು ಪ್ರಮುಖ ಪಾತ್ರ ಇರಿಸಲೇಬೇಕು ಎಂದು ಡಾ.ರಾಜ್ ಉದಯಶಂಕರ್ ಅವರಿಗೆ ಮೊದಲೇ ತಾಕೀತು ಮಾಡುತ್ತಿದ್ದರೆಂದು ಖುದ್ದು ಉದಯಶಂಕರ್ ಅವರೇ ಹೇಳಿಕೊಂಡಿದ್ದರು. ಅವರ ಆತ್ಮೀಯತೆ ಹೇಗಿತ್ತು ಎಂದರೆ, ಮೈಸೂರಿನಲ್ಲಿ ಮನೆ ಕಟ್ಟಬೇಕು ಎನ್ನುವ ಆಕಾಂಕ್ಷೆ ಹೊಂದಿದ್ದ ತೂಗುದೀಪ ಶ್ರೀನಿವಾಸ್ ಅವರಿಗೆ ರಾಜ್ ಕುಮಾರ್ ದಂಪತಿ ಸಹಾಯ ಮಾಡಿದ್ದರು. ಆ ನೆನಪಿಗೆಂದೇ ತಮ್ಮ ಮನೆಯ ಮುಂದೆ `ಮು.ಪಾ ಕೃಪ’ ಎಂದು ಬರೆಸಿದ್ದರು ಶ್ರೀನಿವಾಸ್. ಅಂದರೆ ಅದರ ಪೂರ್ಣರೂಪ ‘ಮುತ್ತುರಾಜ್ ಪಾರ್ವತಮ್ಮ ಕೃಪಾ’ ಎಂದು! ಇದನ್ನು ಸ್ವತಃ ಮೀನಾ ತೂಗುದೀಪ ಅವರೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು.

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೊಂದವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ. ಆದರೆ ಯಾವುದನ್ನು ಕೂಡ ಪ್ರಚಾರ ಮಾಡಲು ಅವರು ಬಯಸುವುದಿಲ್ಲ. ವಿಶೇಷ ಏನೆಂದರೆ ಶಿವರಾಜ್ ಕುಮಾರ್ ಕೂಡ ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವ ಧ್ಯೇಯ ಹೊಂದಿರುವವರು. ಅವರಿಬ್ಬರು ಮಾಡಿರುವ ಸಹಾಯಗಳ ಬಗ್ಗೆ ವಿಚಾರಿಸಲು ಹೋದರೆ ಸ್ವತಃ ಅವರ ಅಭಿಮಾನಿಗಳು ಕೂಡ ಹೇಳಲು ಅಂಜುತ್ತಾರೆ!

ಕನ್ನಡದ ಮಟ್ಟಿಗೆ ಲಾಂಗ್ ಕೈಯ್ಯಲ್ಲಿ ಹಿಡಿದು ಕ್ರೇಜ್ ಮೂಡಿಸಿದ ಮೊದಲ ಹೀರೋ ಶಿವರಾಜ್ ಕುಮಾರ್. ಆದರೆ ಆನಂತರ ಲಾಂಗ್ ಜತೆಗೆ ಹೊಂದಿಕೊಳ್ಳುವ ಮತ್ತೊಬ್ಬ ನಾಯಕ ಬಂದಿದ್ದರೆ, ಅದು ದರ್ಶನ್ ಅವರು ಮಾತ್ರ. ಅವರಿಬ್ಬರು ಜತೆಯಾಗಿ ನಟಿಸಿಲ್ಲ. ಹಾಗಂತ ಅದು ಸ್ಪರ್ಧೆಯ ವಿಚಾರ ಅಲ್ಲವೇ ಅಲ್ಲ. ಸ್ವತಃ ಚಿತ್ರವೊಂದರ ಮುಹೂರ್ತದ ಸಂದರ್ಭದಲ್ಲಿ ಅತಿಥಿಯಾಗಿ ಇಬ್ಬರೂ ಆಗಮಿಸಿದ್ದಾಗ ಮಾಧ್ಯಮದ ಕಡೆಯಿಂದ ಇದೇ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಶಿವಣ್ಣ “ನನಗೆ ಸಣ್ಣ ಪಾತ್ರ ಇದ್ದರೂ ಸಾಕು, ದರ್ಶನ್ ಜತೆಯಾಗಿ ನಟಿಸುತ್ತೇನೆ” ಎಂದಿದ್ದರು. ಆದರೆ “ಶಿವಣ್ಣನೇ ಸೀನಿಯರು. ನಾನು ಲಾಂಗ್ ಹಿಡಿದು ಸೈಡಲ್ಲಿ ನಿಲ್ಲುತ್ತೇನೆ” ಎಂದಿದ್ದರು ದರ್ಶನ್! ಈ ಬಿಟ್ಟುಕೊಡುವ ಮನಸ್ಥಿತಿ ತಮ್ಮಿಬ್ಬರಲ್ಲಿಯೂ ಮನಸಾರೆ ಇದೆ ಎನ್ನುವುದನ್ನು ಹಲವಾರು ಬಾರಿ ತೋರಿಸಿಕೊಟ್ಟಿರುವ ಕಲಾವಿದರು ಅವರು. ದರ್ಶನ್ ಚಿತ್ರಗಳು ಬರುವುದೇ ಅಪರೂಪ. ಬಂದವುಗಳೆಲ್ಲ ಬಾಕ್ಸ್‌ ಆಫೀಸ್‌ ಚಿಂದಿ ಮಾಡಲೆಂದೇ ತಯಾರಾದ ಹಾಗಿರುತ್ತವೆ. ಶಿವಣ್ಣ ಮೂರುವರೆ ದಶಕದ ಬಳಿಕವೂ ಅತಿಹೆಚ್ಚು ಚಿತ್ರಗಳಲ್ಲಿ ನಟಿಸುವ ತಾರೆ. ಮಾತ್ರವಲ್ಲ, ಇಂದಿಗೂ ವರ್ಷಕ್ಕೊಂದು ಬ್ಲಾಕ್ ಬಸ್ಟರ್ ಇವರ ಹೆಸರಿನಲ್ಲಿ ಇದ್ದೇ ಇರುತ್ತದೆ. ಇದುವರೆಗೆ ಇಬ್ಬರೂ ಜತೆಯಾಗಿ ನಟಿಸದಿರುವುದು ಕನ್ನಡ ಚಿತ್ರ ಪ್ರಿಯರ ಸೋಲು. ಆದರೆ ಖಂಡಿತವಾಗಿ ಒಂದಾಗಿ ಅಭಿನಯಿಸಲಿದ್ದಾರೆ ಎನ್ನುವುದು ಅವರಿಬ್ಬರ ಸ್ನೇಹ ಕಂಡಾಗ ಸಿಗುವ ಫೀಲು.

ಅಂದಹಾಗೆ ಈ ತಾರೆಗಳು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದೇ ಅಪರೂಪ ಇರಬಹುದು. ಹಾಗಂತ ಇದು ಇತ್ತೀಚೆಗೆ ಮೂಡಿರುವ ಅನುಬಂಧವಂತೂ ಖಂಡಿತವಾಗಿ ಅಲ್ಲ. ದರ್ಶನ್ ಅವರ `ಸುಂಟರಗಾಳಿ’ ಚಿತ್ರದ ಮುಹೂರ್ತಕ್ಕೆ ಸ್ವತಃ ಶಿವರಾಜ್ ಕುಮಾರ್ ಅವರೇ ಕ್ಲ್ಯಾಪ್ ಬೋರ್ಡ್ ಹಿಡಿದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅಪರೂಪಕ್ಕಾದರೂ ಸಿಕ್ಕಾಗ, ಉತ್ತಮ ಬಾಂಧವ್ಯದ ವರ್ತನೆಯನ್ನೇ ತೋರಿಸಿ ಇತರ ಕಲಾವಿದರಿಗೆ ಮಾದರಿಯಾಗಿದ್ದಾರೆ. ಸಿನಿಮಾ ವಿಚಾರ ಬಂದಾಗ ಸ್ಪರ್ಧೆ ಇದ್ದೇ ಇರುತ್ತದೆ ಎನ್ನುವುದು ದರ್ಶನ್ ಯಾವಾಗಲೂ ಹೇಳುವ ಮಾತು. ಅದು ಅವರು ಹೇಳುವ ನಿಜವಾದ ಮಾತು ಕೂಡ ಹೌದು. ಆದರೆ ಸಿನಿಮಾರಂಗಕ್ಕೊಂದು ಕಷ್ಟ ಎಂದು ಬಂದಾಗ ಒಂದಾಗಿ ನಿಲ್ಲುವ ಮನಸ್ಥಿತಿ ಅವರದ್ದು ಖಂಡಿತವಾಗಿ ಹೌದು. ಈ ಬಗ್ಗೆ ಮುಖ್ಯಮಂತ್ರಿಗೆ ನೀಡುವ ಮನವಿಯ ಕುರಿತಾದ ತಯಾರಿ ನಡೆಸುತ್ತಿದ್ದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರನ್ನೇ ಕೇಳಲಾಯಿತು. ಅದಕ್ಕೆ ಅವರು “ಖಂಡಿತವಾಗಿ ಕಲಾವಿದರೊಳಗಿನ ಒಗ್ಗಟ್ಟಿನ ಬಗ್ಗೆ ಯಾವುದೇ ಸಂದೇಹ ಬೇಕಾಗಿಲ್ಲ” ಎಂದು ಸಿನಿಕನ್ನಡಕ್ಕೆ ಸ್ಪಷ್ಟ ಪಡಿಸಿದರು. ಹೌದು; ತಾರೆಯರು ಒಂದಾಗಿರುವಾಗ ಅಭಿಮಾನಿಗಳು ಸಂದೇಹ ಪಡುವ ಸಂದರ್ಭ ಖಂಡಿತವಾಗಿ ಇದು ಅಲ್ಲ. ಚಿತ್ರರಂಗದ ಸಂಕಷ್ಟ ಆದಷ್ಟು ಬೇಗ ಪರಿಹಾರವಾಗಿ ಎಲ್ಲರೂ ಸಕ್ರಿಯರಾಗುವಂತೆ ಹಾರೈಸುವುದಷ್ಟೇ ನಮ್ಮ ಕೆಲಸ.

Recommended For You

Leave a Reply

error: Content is protected !!
%d bloggers like this: