
ಕೊರೊನಾ ವೈರಸ್ ಗೆ ಔಷಧಿ ವಿಶ್ವದಲ್ಲೇ ಇಲ್ಲ. ಆದರೆ ಈ ಕೊರೊನಾದಿಂದ ಉಂಟಾದ ಜನಸಾಮಾನ್ಯರ ಆರ್ಥಿಕ ಸಂಕಷ್ಟಗಳಿಗೆ ಭಾರತದಲ್ಲಿ ಪರಿಹಾರ ಎನ್ನುವುದೊಂದು ಇದ್ದರೆ ಅದು ನಟ ಸೋನು ಸೂದ್ ಮಾತ್ರ! ಯಾವುದೇ ಪ್ರದೇಶಕ್ಕೆ ಸೀಮಿತಗೊಳ್ಳದೆ, ಇಡೀ ದೇಶದ ಸಮಸ್ಯೆಗಳನ್ನು ಒಬ್ಬನೇ ಹೊತ್ತುಕೊಂಡು, ಖರ್ಚುವೆಚ್ಚದ ಬಗ್ಗೆ ಯೋಚಿಸದೆ ಸಹಾಯಹಸ್ತ ಚಾಚಿ ಅಚ್ಚರಿ ಮೂಡಿಸಿದ್ದಾರೆ. ಇದೀಗ ಅವರು ಮತ್ತೆ ಸುದ್ದಿಯಾಗಿರುವುದು ಆಂಧ್ರ ಪ್ರದೇಶದ ರೈತರೊಬ್ಬರಿಗೆ ಟ್ರ್ಯಾಕ್ಟರ್ ಕೊಡಿಸುವ ಮೂಲಕ.

ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಒಂದಿತ್ತು. ಅದರಲ್ಲಿ ರೈತನೋರ್ವ ನೆಲ ಉಳುವ ದೃಶ್ಯವಿತ್ತು. ಆದರೆ ನೆಲವನ್ನು ಉಳಲು ಎತ್ತುಗಳ ಬದಲಿಗೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಬಳಸಿಕೊಂಡಿದ್ದರು! ಈ ವಿಡಿಯೋ ನೋಡಿದ ನಟ ಸೋನು ಸೂದ್, ಇವರಿಗೆ ಟ್ರ್ಯಾಕ್ಟರ್ ಅಗತ್ಯವಿದೆ. ಹಾಗಾಗಿ ನಾನೇ ಒಂದು ಟ್ರ್ಯಾಕ್ಟರ್ ಕಳಿಸುತ್ತಿದ್ದೇನೆ. ಸಂಜೆಯ ಹೊತ್ತಿಗೆ ನೀವು ಟ್ರಾಕ್ಟರ್ ಮೂಲಕ ಉಳಬಹುದು ಎಂದು ಟ್ವೀಟ್ ಮಾಡಿದ್ದರು.

ಸೋನು ಸೂದ್ ಟ್ವೀಟ್ ಮಾಡಿ ಸುಮ್ಮನೆ ಕುಳಿತುಕೊಂಡಿಲ್ಲ. ಹಾಗೆ ಟ್ವೀಟ್ ಮಾಡಿದ ಎಂಟೇ ಗಂಟೆಗಳ ಒಳಗೆ ಅಂದರೆ ನಿನ್ನೆ ಭಾನುವಾರ ಸಂಜೆಯೊಳಗೆ ಟ್ರ್ಯಾಕ್ಟರ್ ಅವರ ಮನೆಯ ಮಂದೆ ಇತ್ತು. ಈ ಕೆಲಸವನ್ನು ಗಮನಿಸಿದ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಟ್ರಾಕ್ಟರ್ ಪಡೆದುಕೊಂಡ ವಿಡಿಯೋ ಹಂಚಿಕೊಂಡು ಸೋನು ಸೂದ್ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸ್ವತಃ ಟ್ವೀಟ್ ಮಾಡಿರುವ ನಾಯ್ಡು ಅವರು ತಾವು ಖುದ್ದಾಗಿ ಸೋನ್ ಸೂದ್ ಜತೆಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ. ರೈತನಿಗೆ ಉಳಲು ಸಹಾಯ ಮಾಡಿದ್ದ ಆತನ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ವ್ಯವಸ್ಥೆಯನ್ನು ತಾವೇ ಮಾಡುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಯಾಗಿ ಸೋನು ಸೂದ್ ಕೂಡ ಮುಖ್ಯಮಂತ್ರಿಯವರ ಕಾರ್ಯಕ್ಕೆ ಮೆಚ್ಚಿ ಆದಷ್ಟು ಬೇಗ ಭೇಟಿಯಾಗೋಣ ಎಂದಿದ್ದಾರೆ.

ಟ್ರ್ಯಾಕ್ಟರ್ ಪಡೆದ ರೈತನ ಹೆಸರು ನಾಗೇಶ್ವರ ರಾವ್ ಎಂದಾಗಿದ್ದು, ಆಂಧ್ರದ ಚಿತ್ತೂರು ಜಿಲ್ಲೆಯವರು. ಅವರು ಮದನಪಲ್ಲಿ ಎಂಬಲ್ಲಿ ಕಳೆದ 15 ವರ್ಷಗಳಿಂದ ಸಣ್ಣದೊಂದು ಚಹಾದ ಅಂಗಡಿ ನಡೆಸುವ ಮೂಲಕ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್ಡೌನ್ ಕಾರಣದಿಂದ ಅಂಗಡಿ ಮುಚ್ಚಿ ಮನೆ ಸೇರಬೇಕಾಗಿತ್ತು. ಉಳಿದ ಸಣ್ಣ ಮೊತ್ತದೊಂದಿಗೆ ತಮ್ಮ ಹಳ್ಳಿಯ ಮನೆಗೆ ಮರಳಿದ್ದರು. ಈ ವರ್ಷ ಮಳೆ ಚೆನ್ನಾಗಿ ಬಂದಿದ್ದ ಕಾರಣ ಕೃಷಿ ಮಾಡಿ ಬದುಕಲು ತೀರ್ಮಾನ ಮಾಡಿದ್ದರು. ಆದರೆ ಉಳುವುದಕ್ಕೆ ಟ್ರ್ಯಾಕ್ಟರ್ ಗಾಗಿ ಗಂಟೆಗೆ ಒಂದು ಸಾವಿರ ಕೊಡಬೇಕಾಗಿತ್ತು. ಆ ಹಣ ಇಲ್ಲವಾದ ಕಾರಣ ಇಬ್ಬರು ಹೆಣ್ಣು ಮಕ್ಕಳನ್ನು ಬಳಸಿ ನೆಲ ಉಳಲು ಮುಂದಾಗಿದ್ದರು ನಾಗೇಶ್ವರರಾವ್. ತಂದೆ ಹಿಡಿದ ನೇಗಿಲನ್ನು ಎಳೆಯುವ ಜೋಡಿ ಹೆಣ್ಣುಮಕ್ಕಳು ಮತ್ತು ಬೀಜ ಬಿತ್ತುವ ತಾಯಿಯ ವಿಡಿಯೋ ನೋಡಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದರು ಸೋನು ಸೂದ್!

ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ಕುಟುಂಬವೊಂದು ಆನ್ಲೈನ್ ಕ್ಲಾಸ್ ನಲ್ಲಿ ಪಾಲ್ಗೊಳ್ಳಲು ತಮ್ಮ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡಿಸುವ ಸಲುವಾಗಿ ತಮ್ಮ ಆದಾಯದ ಮೂಲವಾಗಿದ್ದ ದನವನ್ನೇ ಮಾರಿದ ಘಟನೆ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿತ್ತು. ವಿಚಾರ ತಿಳಿದ ಸೋನು ಸೂದ್ ಆ ಸುದ್ದಿ ಪ್ರಕಟಿಸಿದ ವರದಿಗಾರನ ಖಾತೆಗೆ ಸ್ಮಾರ್ಟ್ ಫೋನ್ ದುಡ್ಡು ಹಾಕುವುದಾಗಿಯೂ ಆ ಮೂಲಕ ಅವರಿಗೆ ದನವನ್ನು ವಾಪಾಸು ಕೊಡಿಸುವಂತೆಯೂ ಬರೆದಿದ್ದರು. ಆದರೆ ಆ ವರದಿ ಬಳಿಕ ಏನಾಯಿತೋ ಗೊತ್ತಿಲ್ಲ.

ಒಟ್ಟಿನಲ್ಲಿ ಸೋನ್ ಸೂದ್ ಒಬ್ಬ ನಟ ಎನ್ನುವುದಕ್ಕಿಂತ ಒಬ್ಬ ಸುಪರ್ ಮ್ಯಾನ್ ಎನ್ನುವುದು ಇದೀಗ ದೇಶದ ತುಂಬ ಹರಿದಾಡುತ್ತಿರುವ ಸುದ್ದಿ! ಇದು ಕೋವಿಡ್ 19 ನಮಗೆ ತಿಳಿಸಿರುವ ಸತ್ಯ! ಲಾಕ್ಡೌನ್ ಆರಂಭವಾದ ದಿನಗಳಿಂದ ಮುಂಬೈನಿಂದ ಕರ್ನಾಟಕಕ್ಕೆ ವಿಶೇಷ ಬಸ್ ಗಳ ಮೂಲಕ ಕನ್ನಡಿಗರನ್ನು ಕಳಿಸಿಕೊಟ್ಟಿದ್ದರು. ಕೇರಳದಲ್ಲಿದ್ದ 167 ಮಂದಿ ಕಾರ್ಮಿಕರನ್ನು ವಿಶೇಷ ವಿಮಾನದ ಮೂಲಕ ಒರಿಸ್ಸಾ ತಲುಪುವಂತೆ ಮಾಡಿದ್ದರು. ಕಿರ್ಜಿಸ್ಥಾನದಲ್ಲಿ ಸಿಲುಕಿದ್ದ 137 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ವಾರಣಾಸಿಗೆ ವಿಮಾನದಲ್ಲಿ ಕರೆಸಿಕೊಂಡಿದ್ದು ಸುದ್ದಿ ಆಗಿತ್ತು. ಈಗ ಈ ಟ್ರ್ಯಾಕ್ಟರ್ ಕೊಡುಗೆ ನೀಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ಕೋವಿಡ್19 ಸಮಯದಲ್ಲಿಯೂ ಭ್ರಷ್ಟಾಚಾರದಲ್ಲಿ ನಿರತವಾದ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಾಗ ನಟನೋರ್ವ ಮಾಡುತ್ತಿರುವ ಈ ಸಹಾಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರವೇ ಸೋನು ಸೂದ್ ಸಹಾಯ ಕೇಳಿದ ಘಟನೆ ಕೂಡ ಈ ಸಂದರ್ಭದಲ್ಲಿ ನಡೆದಿದ್ದು ಅದು ಎಷ್ಟರಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದರ ಸಂಕೇತವಾಗಿತ್ತು! ಮುಂಬೈನಲ್ಲಿ ಸಿಲುಕಿಕೊಂಡಿರುವ ಮಧ್ಯಪ್ರದೇಶವಾಸಿಗಳನ್ನು ಅವರ ನೆಲೆಗೆ ವಾಪಾಸು ಮಾಡಲು ತಮಗೆ ಸಹಾಯ ಮಾಡುವಂತೆ ಶಾಸಕ ರಾಜೇಂದ್ರ ಶುಕ್ಲ ಟ್ವೀಟ್ ಮೂಲಕ ಸೋನ್ ಸೂದ್ ಅವರಲ್ಲಿ ಬೇಡಿಕೊಂಡಿದ್ದರು! ಅವರು ನೀಡಿದ ಪಟ್ಟಿಯನ್ನು ಪರಿಗಣಿಸುವುದಾಗಿ ಸೋನು ಸೂದ್ ಪ್ರತಿಕ್ರಿಯೆ ಕೂಡ ನೀಡಿದ್ದರು. ಆದರೆ ಈ ವಿಚಾರದಲ್ಲಿ ಪ್ರತಿಪಕ್ಷಗಳು ಗೇಲಿ ಮಾಡಿದ ಬಳಿಕ ತಮ್ಮ ಟ್ವೀಟ್ ಅಳಿಸಿದ್ದರು ಶುಕ್ಲಾ!
