ಕ್ರೇಜಿಸ್ಟಾರ್ ಗೆ ಕೆಜೆ ಏಸುದಾಸ್, ಉಪ್ಪಿಗೆ ಉದಿತ್ ನಾರಾಯಣ್, ಗೋಲ್ಡನ್ ಸ್ಟಾರ್ ಗೆ ಸೋನು ನಿಗಮ್ ಹೀಗೆ ಕೆಲವೊಂದು ಕಾಂಬಿನೇಶನ್ ಗೀತೆಗಳು ಸುಪರ್ ಹಿಟ್ ಆಗುತ್ತವೆ. ಆ ನಿಟ್ಟಿನಲ್ಲಿ ದುನಿಯಾ ವಿಜಯ್ ಗೆ ಹೊಂದುವ ಕಂಠ ಅಂದರೆ ಅದು ನವೀನ್ ಸಜ್ಜು ಅವರದು. ಇಂದು ನವೀನ್ ಸಜ್ಜು ಜನ್ಮದಿನ. ಈ ಸಂದರ್ಭದಲ್ಲಿ ಅವರು ಫೇಸ್ಬುಕ್ ಮೂಲಕ ನೆನಪಿಸಿಕೊಂಡಿರುವುದು ಹೀಗೆ.
ನವೀನ್ ಸಜ್ಜು ಎಲ್ಲರಿಗೂ ಗಾಯಕನಾದರೆ ನನಗೆ ತುಂಬ ಆತ್ಮೀಯ ಸ್ನೇಹಿತ. ಲಾಕ್ಡೌನ್ ಬಳಿಕ ಇತ್ತೀಚೆಗಷ್ಟೇ ಸೋಶಿಯಲ್ ಡಿಸ್ಟೆನ್ಸ್ ಇಟ್ಟುಕೊಂಡು ಭೇಟಿಯಾದೆವು. ಡಿಸ್ಟೆನ್ಸ್ ಏನಿದ್ದರೂ ದೇಹಗಳಿಗೆ ಹೊರತು ಮನಸುಗಳಿಗಲ್ಲವಲ್ಲ? ಹಾಗಾಗಿ ಹಳೆಯ ದಿನಗಳನ್ನು ಮೆಲುಕು ಹಾಕಿದೆವು. ಮುಂದೆ ಏನು ಎನ್ನುವುದು ನಮ್ಮ ಕೈಯ್ಯಲ್ಲಿಲ್ಲ. ಆದರೆ ಆ ಹುಡುಗನ ಫ್ಲ್ಯಾಷ್ ಬ್ಯಾಕ್ ಕುರಿತಾದ ಮಾತು ಕೇಳುವಾಗ ನನಗೆ ಕಣ್ಣಲ್ಲಿ ನೀರು ಬಂತು. ಯಾಕೆಂದರೆ ಆತ ಬೆಳೆದು ಬಂದ ದಾರಿಯಲ್ಲಿ ಅಷ್ಟೊಂದು ಕಷ್ಟಗಳನ್ನು ಅನುಭವಿಸಿದ್ದಾನೆ. ಆದರೆ ಇಂದು ಆತ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಬೆಳೆದಿದ್ದಾನೆ.
“ಒಳಿತು ಮಾಡು ಮನುಷ್ಯ.. ನೀನು ಇರೋದು ಮೂರು ದಿವಸಾ..” ಹಾಡು ಆತನ ಮೂಲಕ ನೀವು ಕೂಡ ಕೇಳಿರುತ್ತೀರ. ಪಲ್ಲವಿ ಶುರುವಾಗುತ್ತಲೇ ನಮಗೆ ಹಾಡಿನ ಸರಿಗಮಪದನಿಸ ಮರೆಯುತ್ತದೆ. ಯಾಕೆಂದರೆ ನಮ್ಮ ಮನಸು ಹಾಡಿನೊಂದಿಗೆ ಬೆರೆಯುತ್ತದೆ. ಅದಕ್ಕೆ ಕಾರಣ ಆ ಹಾಡಿನಲ್ಲಿ ಜೀವನದ ಅರ್ಥವಿದೆ. ಹಾಡುವ ನವೀನ್ ಕಂಠದಲ್ಲಿ ಎಲ್ಲ ಅನುಭವಗಳ ಪರಮಾರ್ಥವಿದೆ! ಗಾಯಕನಾಗಿಯೇ ಹಳೆಯ ನೋವುಗಳನ್ನೆಲ್ಲ ಮಾಯಕ ಮಾಡುತ್ತಾನೆ. ಆತನಿಗೆ ಇನ್ನೂ ದೊಡ್ಡ ಯಶಸ್ಸು ಸಿಗಬೇಕು.
ನನಗಂತೂ ಆತ ನಮ್ಮನೆ ಮಗನಂತೆ ಅನಿಸುತ್ತಾನೆ. ಒಂದು ರೀತಿ ಆತ ನನಗೆ ತಮ್ಮನಂತೆ. ನನ್ನದೇ ಕನಕ' ಚಿತ್ರದ ಮೂಲಕ ಸಂಗೀತ ನಿರ್ದೇಶಕನಾದ. ಇದೀಗ
ಸಲಗ’ ಚಿತ್ರದ ಸಂಗೀತ ನಿರ್ದೇಶನದಲ್ಲಿಆತನದೂ ಪಾಲಿದೆ. ನಾನು ಬರೆದು ನವೀನ್ ಹಾಡಿರುವ `ಸೂರಿ ಅಣ್ಣಾ..’ ಗೀತೆ ಈಗಾಗಲೇ ಜನಪ್ರಿಯವಾಗಿದೆ. ನಾನು ಸಲಗ ಆದರೆ ಆತ ನನ್ನ ಬಳಗ. ಅಂಥ ನವೀನನಿಗೆ ಸಾಗುವ ದಾರಿಯಲ್ಲೆಲ್ಲ ಯಶಸ್ಸು ಸಿಗುತ್ತಿರಲಿ ಎಂದು ಆತನಿಗೆ ಜನ್ಮದಿನದ ಸಂದರ್ಭದಲ್ಲಿ ಪ್ರೀತಿ ಪೂರ್ವಕವಾಗಿ ಹಾರೈಸುತ್ತೇನೆ.