ಗಾಯಕಿ ಚಿತ್ರಾ ಗುಂಗಲ್ಲಿ…

ಶೀರ್ಷಿಕೆ ನೋಡಿ ಕೆ.ಎಸ್ ಚಿತ್ರಾ ಅವರು ಯಾರ ಗುಂಗಲ್ಲಿದ್ದಾರೆ ಎಂದು ಚಿಂತಿಸಬೇಡಿ. ಇದು ನಾವೆಲ್ಲ ಅವರ ಹಾಡುಗಳ ಗುಂಗಲ್ಲಿರುವ ವಿಚಾರ! ಇಂದು ಅವರ 57ನೇ ವರ್ಷದ ಜನ್ಮದಿನ. ಈ ಸಂದರ್ಭದಲ್ಲಿ ಕನ್ನಡ ಇಬ್ಬರು ಪ್ರತಿಭಾವಂತೆಯರು ಚಿತ್ರಾ ಅವರ ಹಾಡಿನ ಜತೆಗೆ ತಮಗಿರುವ ಸಂಬಂಧವನ್ನು ಸಿನಿಕನ್ನಡ.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ. ಅವರಲ್ಲೊಬ್ಬರು ನಾಯಕಿಯಾಗಿ ಗುರುತಿಸಿಕೊಂಡವರು. ಮತ್ತೊಬ್ಬಾಕೆ ನಾಡು ಮೆಚ್ಚಿದ ಗಾಯಕಿ. ಹೌದು; ನಟಿ ಸುಧಾರಾಣಿ ಮತ್ತು ಗಾಯಕಿ ಅನುರಾಧಾ ಭಟ್ ಮಾತುಗಳಲ್ಲೇ ಅವರ ಮೆಚ್ಚಿನ ಗಾಯಕಿಯ ಬಗ್ಗೆ ಎರಡು ಮಾತುಗಳೇನಿವೆ ನೋಡೋಣ. ಇದು ಜನ್ಮದಿನದ ಸಂಭ್ರಮದಲ್ಲಿರುವ ಹಿರಿಯ ಗಾಯಕಿಗೆ ನಮ್ಮ ಕೊಡುಗೆ.

ಚಿತ್ರಾ ಅವರ ಎಲ್ಲ ಹಾಡುಗಳು ನನಗೆ ಇಷ್ಟ. ಅವರ ಹಾಡುಗಳಲ್ಲಿ ನನಗೆ ವೈಯಕ್ತಿಕವಾಗಿ ಮರೆಯಲಾಗದ ಹಾಡು ಎಂದರೆ ಅದು ನನಗೆ ಅವರು ಹಾಡಿದಂಥ ಮೊದಲ ಗೀತೆ. ನನ್ನ ಎರಡನೇ ಚಿತ್ರವಾದ ವಿಜಯೋತ್ಸವ' ಸಿನಿಮಾದಲ್ಲಿ ಅವರು ಹಾಡಿರುವ ಗೀತೆಗೆ ನಟಿಸುವ ಮೂಲಕ ಅದ್ಭುತ ಜರ್ನಿ ಶುರುವಾಯಿತು. ಅದು ಬಿಟ್ಟರೆಕೃಷ್ಣ ನೀ ಕುಣಿದಾಗ’ ಚಿತ್ರದ ಟೈಟಲ್ ಟ್ರ್ಯಾಕ್ ನನಗೆ ಇಷ್ಟ. ಅದು ಬಿಟ್ಟರೆ `ಈ ರಾಧೆ ಜೀವ ಕುಣಿದಾಡಿತೀಗ..’ ಹಾಡುಗಳು ನನಗೆ ಇಷ್ಟ. ಉಳಿದ ಹಾಗೆ ಅವರ ಕಂಠವೇ ನನಗೆ ಇಷ್ಟ. ಸರಿ ಸುಮಾರು ದೇಶದ ಎಲ್ಲ ಭಾಷೆಗಳಲ್ಲಿಯೂ ಹಾಡಿರುವ ಘಟಾನುಘಟಿ ಗಾಯಕಿ ಅವರು. ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಸುಧಾರಾಣಿ, ನಟಿ

ಗಾಯಕಿಯಾಗಿ ಮಾತ್ರವಲ್ಲ; ಓರ್ವ ಮಹಿಳೆಯಾಗಿಯೂ ನನಗೆ ತುಂಬ ಇಷ್ಟ. ಅಷ್ಟು ದೊಡ್ಡ ಪ್ರತಿಭಾವಂತೆಯಾದರೂ ತುಂಬ ಹಂಬಲ್ ಆಗಿ, ಡೌನ್ ಟು ಅರ್ಥ್ ಆಗಿ ಇರುತ್ತಾರೆ. ಅವರ ಧ್ವನಿಯಷ್ಟೇ ಅವರು ಕೂಡ ಮಧುರವಾದ ವ್ಯಕ್ತಿತ್ವ ಹೊಂದಿದವರು. ನಾನು ಒಂದಷ್ಟು ಸಂಗೀತ ಕಾರ್ಯಕ್ರಮಗಳಲ್ಲಿ ಅವರನ್ನು ಭೇಟಿಯಾಗಿದ್ದೇನೆ. ಅವರ ಹಾಡಿನ ರೆಕಾರ್ಡಿಂಗ್ ನಾನೇ ಮಾಡಿದ ಅನುಭವವಂತೂ ಮರೆಯಲಾಗದು. ಅದಕ್ಕೆ ಕಾರಣವಾಗಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.

ಅರ್ಜುನ್ ಜನ್ಯ ಅವರು ಯಾವುದೋ ಒಂದು ಕೆಲಸದಲ್ಲಿ ತುಂಬಾನೇ ಬ್ಯುಸಿಯಾಗಿದ್ದರು. ಅದೇ ಸಮಯದಲ್ಲಿ ಚೆನ್ನೈ ಸ್ಟುಡಿಯೋದಲ್ಲಿ ಚಿತ್ರಾ ಅವರ ಹಾಡಿನ ರೆಕಾರ್ಡಿಂಗ್ ಮಾಡಬೇಕಿತ್ತು. ಕನ್ನಡದ ಹಾಡಾಗಿರುವ ಕಾರಣ, ಚಿತ್ರಾ ಅವರ ಹಾಡು ರೆಕಾರ್ಡ್ ಮಾಡಬೇಕಾದರೆ ಅಲ್ಲಿ ಸಂಗೀತ ನಿರ್ದೇಶಕರು ಇರಲೇಬೇಕಾದ ಅನಿವಾರ್ಯತೆ ಇತ್ತು. ಯಾಕೆಂದರೆ ಚಿತ್ರಾ ಅವರ ಮಾತೃಭಾಷೆ ಮಲಯಾಳಂ. ರೆಕಾರ್ಡಿಂಗ್‌ ವೇಳೆ ಕನ್ನಡದ ಉಚ್ಚಾರಣೆಯ ಬಗ್ಗೆಯೂ ಗಮನ ಹರಿಸಬೇಕಿತ್ತು. ಹಾಗಾಗಿ ಅರ್ಜುನ್ ಜನ್ಯ ಅವರು ತಮ್ಮ ಬದಲಿಗೆ ಚೆನ್ನೈ ಸ್ಟುಡಿಯೋಗೆ ಹೋಗಬಹುದೇ ಎಂದು ನನ್ನಲ್ಲಿ ವಿಚಾರಿಸಿದರು. ಆಗ ನಾನು ಕೂಡ ಬಿಡುವಾಗಿದ್ದೆ. ಮಾತ್ರವಲ್ಲ, ಹಿರಿಯ ಗಾಯಕಿ ಚಿತ್ರಾ ಅವರು ಹಾಡುವಾಗ ಅಂಥದೊಂದು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುವುದರಲ್ಲಿ ನನಗೂ ಹೆಮ್ಮೆ ಇತ್ತು. ಹಾಗಾಗಿ ಅವರೊಂದಿಗೆ ನಾನು ಕೂಡ ಚೆನ್ನೈಗೆ ಹೋಗಿದ್ದೆ. ಅದು ಮಾಲಾಶ್ರೀಯವರು ನಟಿಸಿದ್ದ `ಗಂಗಾ’ ಚಿತ್ರದ ಹಾಡಾಗಿತ್ತು.

ನನ್ನ ಇಷ್ಟದ ಹಾಡುಗಳ ವಿಚಾರಕ್ಕೆ ಬಂದರೆ ಅವರು ಹಾಡಿರುವ ಎಲ್ಲ ಹಾಡುಗಳೂ ನನಗೆ ಇಷ್ಟ. ಅವುಗಳಲ್ಲಿ ಪರಭಾಷೆಯ ಹಾಡುಗಳೂ ಇವೆ. ಇನ್ನು ಕನ್ನಡದಲ್ಲಿ ನನಗೆ ತುಂಬ ಇಷ್ಟವಾದ ಹಾಡು ಅಂದರೆ `ತುಂತುರು.. ಅಲ್ಲಿ ನೀರ ಹಾಡು’ ಎನ್ನುವ ಗೀತೆ. ಅವರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು.

ಅನುರಾಧ ಭಟ್, ಗಾಯಕಿ

Recommended For You

Leave a Reply

error: Content is protected !!
%d bloggers like this: