
ಯುವ ನಿರ್ದೇಶಕ ಹೇಮಂತ್ ನಾಯ್ಕ್ (28)ಆತ್ಮಹತ್ಯೆಗೆ ಶರಣಾಗಿದ್ದಾರೆ. ‘ಧರ್ಮಪುರ' ಮತ್ತು '
ದಾರಿದೀಪ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಚಿತ್ರದುರ್ಗದ ಹೊಳಲ್ಕೆರೆಯ ವಾಸಿಯಾಗಿರುವ ಇವರು ಇಂದು, ಮಂಗಳವಾರ ಸಂಜೆ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಈ ಸಾವಿಗೆ ಸಾಂಸಾರಿಕ ಘಟನೆಗಳ ಹಿನ್ನೆಲೆ ಇದೆ ಎನ್ನಲಾಗಿದೆ.
ಆಶಾ ಎನ್ನುವ ಯುವತಿಯನ್ನು ಪ್ರೇಮಿಸಿ ವಿವಾಹವಾಗಿದ್ದ ಹೇಮಂತ್ ನಾಯ್ಕ್ ಅವರಿಗೆ ಒಂದು ಮಗುವೂ ಜನಿಸಿತ್ತು. ಆದರೆ ಇಂದು ಆ ಕುಟುಂಬದಲ್ಲಿ ಯಾರೊಬ್ಬರೂ ಜೀವಂತ ಇಲ್ಲ. ಘಟನೆ ನಿಜಕ್ಕೂ ಭಯಾನಕವಾಗಿದೆ.
ಘಟನೆಯ ಹಿನ್ನೆಲೆ ಹೀಗಿದೆ. ಆಶಾಳನ್ನು ಮದುವೆಯಾದ ಬಳಿಕ ಹೇಮಂತ್ ನಾಯ್ಕ್ ಗೆ ಶ್ವೇತಾ ಎನ್ನುವ ಹುಡುಗಿಯೊಂದಿಗೆ ಅಫೇರ್ ಇರುವುದಾಗಿ ತಿಳಿದು ಬಂದಿತ್ತು. ಈ ಹೊತ್ತಿಗೆ ಪತ್ನಿ ಆಶಾ ಗರ್ಭಿಣಿಯಾಗಿದ್ದರು. ಚೊಚ್ಚಲ ಹೆರಿಗೆ ಮತ್ತು ಅದಕ್ಕೆ ಸಂಬಂಧಿಸಿದ ಒಂದಷ್ಟು ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಆಶಾ, ಮಗುವಿಗೆ ತಾಯಿಯೂ ಆಗುತ್ತಾರೆ. ಆದರೆ ಮಗು ಜನಿಸಿದ ಬಳಿಕವೂ ಆಕೆಯ ಚಿಂತೆ, ನೋವು, ಸಮಸ್ಯೆ ಮುಗಿಯುವುದಿಲ್ಲ. ಹಾಗಾಗಿ ಕಂದನಿಗೆ ಒಂಬತ್ತು ತಿಂಗಳಾಗಿದ್ದಾಗ ಮಗುವನ್ನು ನೀರಿನ ಡ್ರಮ್ ಗೆ ಹಾಕಿ ಕೊಂದು ತಾವು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಹೇಮಂತ್ ಹೆಂಡತಿ ಮನೆಯವರು ಆಶಾ ಸಾವಿಗೆ ಹೇಮಂತ್ ನಾಯ್ಕ್ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ನಾಲ್ಕು ತಿಂಗಳು ಜೈಲು ವಾಸ ಅನುಭವಿಸಿದ ಹೇಮಂತನಾಯ್ಕ್ ಇತ್ತೀಚೆಗಷ್ಟೇ ವಾಪಾಸು ಬಂದಿದ್ದರು. ಆದರೆ ಇಂದು ತಮ್ಮ ಸಾವಿಗೆ ಶ್ವೇತಾ ಮತ್ತು ಆಕೆಯ ತಂದೆ ತಾಯಿಯ ಮೇಲೆ ಕಾರಣವೆಂದು ಬರೆದಿಟ್ಟು ಹೇಮಂತ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬಹುದೆಂದು ನಿರೀಕ್ಷಿಸಲಾಗಿದೆ.

ಘಟನೆಯ ಬಗ್ಗೆ ಸಿನಿಕನ್ನಡ.ಕಾಮ್ ಜತೆಗೆ ಮಾತನಾಡಿದ ಪತ್ರಕರ್ತ, ನಟ ಯತಿರಾಜ್ ಹೇಮಂತ್ ತಮ್ಮ ‘ದಾರಿದೀಪ' ಚಿತ್ರಕ್ಕೆ ತನ್ನಿಂದಲೇ ಕ್ಲ್ಯಾಪ್ ಮಾಡಿಸಿದ್ದನ್ನು ನೆನಪಿಸಿಕೊಂಡರು. ತಮ್ಮ ಮುಂದಿನ ಚಿತ್ರವಾದ '
ಸಹೋದರರ ಸವಾಲ್’ ಸಿನಿಮಾದಲ್ಲಿ ಯತಿರಾಜ್ ಗೆ ಪ್ರಧಾನ ಪಾತ್ರವನ್ನೇ ಮಾಡುವಂತೆ ಒಪ್ಪಿಸಿದ್ದ ಆತ ಅದರ ತಯಾರಿಯಲ್ಲಿದ್ದರಂತೆ. ಆದರೆ ಇತ್ತೀಚೆಗೆ ಅವರು ಸಂಪರ್ಕದಲ್ಲಿ ಇರಲಿಲ್ಲ. ಲಾಕ್ಡೌನ್ ಸಮಸ್ಯೆಯ ಕಾರಣ ಯತಿರಾಜ್ ಕೂಡ ಆ ಘಟನೆಯನ್ನು ಮರೆತಿದ್ದರು. ಅದರ ನಡುವೆ ಇಂದು ಈ ದುರ್ಘಟನೆ ನಡೆದಿದೆ.
ಅಂದಹಾಗೆ ಹೇಮಂತ್ ಯೋಜನೆ ಹಾಕಿದ್ದ ಮುಂದಿನ ಚಿತ್ರದಲ್ಲಿ ಯತಿರಾಜ್ ಜತೆಗೆ ಮತ್ತೊಂದು ಪಾತ್ರದ ಆಯ್ಕೆಯನ್ನೂ ಮಾಡಲಾಗಿತ್ತು. ಅದನ್ನು `ರುದ್ರಾಕ್ಷಿ ಪುರ’ ಚಿತ್ರದ ನಾಯಕನ ಪಾತ್ರ ಮಾಡಿದ ಅರ್ಜುನ್ ನಿರ್ವಹಿಸಬೇಕಿತ್ತು. ಆದರೆ ಇದೀಗ ಎಲ್ಲಕ್ಕೂ ಕ್ಲೈಮ್ಯಾಕ್ಸ್ ಬರೆದು ಮರೆಯಾಗಿದ್ದಾರೆ ಹೇಮಂತ್ ನಾಯ್ಕ್.