ಸುಮಲತಾ ಕನ್ನಡಕ್ಕೆ ಸಿನಿಮಾ ನಾಯಕಿಯಾಗಿ ಪರಿಚಿತರಾದವರು. ಆದರೆ ಅವರನ್ನು ಬಾಳ ನಾಯಕಿಯಾಗಿಸಿದವರು ಅಂಬರೀಷ್. ಮುಂದೆ ಅವರ ಅನುಪಸ್ಥಿತಿಯಲ್ಲಿ ರಾಜಕೀಯ ನಾಯಕಿಯಾಗಿಸುವಲ್ಲಿ ಕೂಡ ಅಂಬರೀಷ್ ಮೇಲಿಟ್ಟ ಅಭಿಮಾನವೇ ಕಾರಣ ಎಂದರೆ ತಪ್ಪಲ್ಲ. ಆದರೆ ಇನ್ನೊಂದು ಬಾರಿ ಮಂಡ್ಯದ ಜನತೆ ತನ್ನನ್ನು ಆಯ್ಕೆ ಮಾಡಬೇಕಾದರೆ, ತನ್ನ ಕೆಲಸದ ಮೂಲಕವೇ ಗುರುತಿಸಬೇಕು ಎನ್ನುವ ನಿರ್ಧಾರವನ್ನು ಸುಮಲತಾ ಅವರು ಮಾಡಿದಂತಿದೆ. ಹಾಗಾಗಿಯೇ ಸದಾ ತಮ್ಮ ಕ್ಷೇತ್ರದ ಜನರ ಕುರಿತಾದ ಕಾಳಜಿಯಲ್ಲೇ ಮಾತನಾಡುತ್ತಿರುತ್ತಾರೆ. ಬಹುಶಃ ಇಂದಿಗೂ ಆ ಮನಸಿನೊಳಗೆ ಅಂಬರೀಷ್ ಮತ್ತು ಮಂಡ್ಯ ಬಿಟ್ಟರೆ ಮತ್ತೊಂದು ವಿಚಾರ ಇಲ್ಲವೇನೋ ಅನಿಸಿದ್ದು ಅವರೊಂದಿಗೆ ಮಾತನಾಡಿದಾಗ. ಆದರೆ ನಮ್ಮದು ಎಂದಿನಂತೆ ಸಿನಿಮಾ ಸಂಬಂಧಿತ ಪ್ರಶ್ನೋತ್ತರ. ಹೌದು; ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ಒಳಗಾಗಿದ್ದ ಸುಮಲತಾ ಅವರು ಅದರಿಂದ ಸುಧಾರಿಸಿಕೊಂಡ ಬಳಿಕ ಸಿನಿಕನ್ನಡ.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.
ನಿಮ್ಮ ಕ್ವಾರಂಟೈನ್ ಅವಧಿಯಲ್ಲಿ ಅಭಿಷೇಕ್ ಪ್ರತಿಕ್ರಿಯೆ ಹೇಗಿತ್ತು?
ಅಭಿ ಕೂಡ ಇನ್ನೊಂದು ಕೋಣೆಯಲ್ಲಿ ಕ್ವಾರಂಟೈನ್ ಆಗಿದ್ದ. ಬಾಲ್ಕನಿಯ ಮೇಲಿನ ಕೋಣೆಯಿಂದ ದೂರದಲ್ಲೇ ನಿಂತು ಮಾತನಾಡುತ್ತಿದ್ದೆವು. ನನ್ನ ಬಗ್ಗೆ ಅವನಿಗೆ ಆತಂಕವೂ ಇತ್ತು. ಜತೆಗೆ ಪಾಪ ಅವನೂ ಹದಿನೈದು ದಿನಗಳ ಕಾಲ ರೂಮ್ ಒಳಗೇನೇ ಇದ್ದ. ಲಾಕ್ಡೌನ್ ಇದ್ದಾಗಲೂ ನಾನು ಕಾನ್ಸ್ಟಿಯೆನ್ಸಿಗೆ ಹೋಗಿದ್ದೀನಿ. ಆದರೆ ಕ್ವಾರಂಟೈನ್ ಟೈಮಲ್ಲಿ ಮಾತ್ರ ಮನೆಯಿಂದ ಅಲ್ಲ, ಬಾಲ್ಕನಿಯಿಂದಲೇ ಕೆಳಗೆ ಬಂದಿರಲಿಲ್ಲ. ಎಲ್ಲ ಮುಗಿದ ಮೇಲೆ ಕೆಳಗಡೆ ಬಂದು, ಅಭಿ ಜತೆಗೆ ಡೈನಿಂಗ್ ಟೇಬಲ್ ಮುಂದೆ ಕುಳಿತಾಗಲೇ ಇಬ್ಬರಿಗೂ ನಿರಾಳವಾಗಿದ್ದು.
ಅಂಬರೀಷ್ ಅವರಿದ್ದಿದ್ದರೆ ಲಾಕ್ಡೌನಲ್ಲಿ 24 ಗಂಟೆ ಮನೇಲೇ ಇರುತ್ತಿದ್ದರು ಅನಿಸುತ್ತಾ?
ಲಾಕ್ಡೌನ್ ಟೈಮಲ್ಲಿ ಹೊರಗಡೆ ಹೋಗುವ ಅವಕಾಶವೇ ಇರದ ಕಾರಣ ಸದಾ ಮನೇಲೇ ಇರಬೇಕಾಗಿತ್ತು. ಯಾಕೆಂದರೆ ಮನೆಯಿಂದ ಹೊರಗಡೆ ಹೋಗುವುದಾಗಿ ಅವರು ಹೊರಡ್ತಾರೆ ಅಂತಾನೇ ಅಂದ್ಕೊಳ್ಳಿ. ಅಲ್ಲೇನಿದೆ? ಹೊರಗೂ ಏನೂ ಇಲ್ಲ. ಎಲ್ಲ ಕಡೆ ಕ್ಲೋಸ್. ಅಲ್ಲದೆ ನನಗೆ ವೈರಸ್ ಸೋಂಕು ಆದ ಮೇಲೆ ಕೋಣೆಯೊಳಗೇನೇ ಸೇರಬೇಕಾಗಿತ್ತು. ಅಂಬರೀಷ್ ಅವರು ಯಾವತ್ತೂ ಡಾಕ್ಟರ್ಸ್ ಮಾತುಗಳನ್ನು ಪಾಲಿಸಿದವರಲ್ಲ. ಹಾಗಾಗಿ ಅವರು ಇದ್ದಿದ್ದರೆ ಖಂಡಿತವಾಗಿ ಕಂಟ್ರೋಲ್ ಮಾಡೋಕೆ ತುಂಬ ಕಷ್ಟವಾಗುತ್ತಿತ್ತು. ಆದರೂ ಸಹ ಈ ಒಂದು ಸಮಯದಲ್ಲಿ ಬೇರೆ ಆಪ್ಷನ್ಸೇ ಇಲ್ಲ ಎನ್ನುವ ಕಾರಣದಿಂದ ಅವರನ್ನು ಕೂಡ ಕ್ವಾರಂಟೈನ್ ಸ್ಥಿತಿಯಲ್ಲಿ ನೋಡಬೇಕಾಗಿತ್ತು. ಹಾಗಾಗಿ ಕೋಪ ಮಾಡ್ಕೋತಾನೇ ಕ್ವಾರಂಟೈನ್ ನಿಯಮ ಪಾಲಿಸ್ತಿದ್ರು ಅನ್ಸುತ್ತೆ.
ಫಿಲ್ಮ್ ಸಿಟಿಯಂಥ ವಿಚಾರದಲ್ಲಿ ಅಂಬರೀಷ್ ಅವರ ಕನಸುಗಳೇನಿತ್ತು?
ಫಿಲ್ಮ್ ಸಿಟಿ ಎನ್ನುವುದು ನನಗೋ ಅಂಬರೀಷ್ ಅವರಿಗೋ ಇರುವ ಕನಸಲ್ಲ. ಎಲ್ಲ ಕನ್ನಡ ಚಿತ್ರ ಪ್ರೇಮಿಗಳಿಗೂ ಇರುವ ಆಸೆ ಅದು. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯನ್ನೇ ಗಮನಿಸಿ; ಅಲ್ಲಿ ಭಾರತೀಯ ಚಿತ್ರಗಳಷ್ಟೇ ಅಲ್ಲ, ಹಾಲಿವುಡ್ ಸಿನಿಮಾಗಳನ್ನು ಕೂಡ ಚಿತ್ರೀಕರಿಸಲಾಗಿದೆ. ನಮಗೂ ಬೇಕಾದಷ್ಟು ಉತ್ತಮವಾದ ಲೊಕೇಶನ್ಸ್ ಇವೆ. ಅವುಗಳನ್ನೆಲ್ಲ ಬಳಸಿಕೊಂಡು ಸರ್ಕಾರ ಮನಸು ಮಾಡಿ ಯಾವಾಗಲೋ ಮಾಡಬೇಕಾಗಿತ್ತು. ಅದು ಒಂದು ದೊಡ್ಡ ಪ್ರಾಜೆಕ್ಟ್. ಆಗಲೇ ಶುರು ಮಾಡಿದ್ದರೆ ಈಗ ಮುಗಿದಿರುತ್ತಿತ್ತೇನೋ. ಆದರೆ ಈಗಿರುವ ಎಕ್ಸ್ ಪೆನ್ಸ್‌ನಲ್ಲಿ ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತೆ ಎನ್ನುವುದು ಯಾರಿಗೆ ಬೇಕಾದರೂ ಊಹಿಸಬಹುದಾದ ಸಂಗತಿ. ಮಾಡಿದರೆ ಖಂಡಿತವಾಗಿ ಚೆನ್ನಾಗಿರುತ್ತೆ. ಅಂಬರೀಷ್ ಅವರಿಗಿದ್ದ ದೊಡ್ಡ ಕನಸು ಕಲಾವಿದರ ಸಂಘದ ಭವನದ್ದು. ಅದು ನೆರವೇರಿದೆ.
ಹಾಗಾಗಿ ಕಲಾವಿದರ ಭವನದ ಜತೆ ನಿಮಗೆ ವಿಶೇಷ ಅಕ್ಕರೆ ಇದೆ ಎನ್ನಬಹುದೇ?
ಖಂಡಿತವಾಗಿ. ಯಾಕೆಂದರೆ ಕಲಾವಿದರ ಸಂಘದ ಕಟ್ಟಡದ ಪ್ರತಿಯೊಂದು ಇಟ್ಟಿಗೆಯಲ್ಲಿಯೂ ಅವರ ಶ್ರಮ ಇದೆ. ಆ ಸೈಟನ್ನು ಸರ್ಕಾರದಿಂದ ಸಾಂಕ್ಷನ್ ಮಾಡಿಸುವುದರಿಂದ, ಆ ಬಿಲ್ಡಿಂಗ್‌ಗೆ ಫಂಡ್ ತರುವುದರಿಂದ ಎಲ್ಲದರಲ್ಲಿಯೂ ಅವರದೇ ಮುಂದಾಳುತನವಿತ್ತು. ಅದು ಕಲಾವಿದರ ಒಗ್ಗಟ್ಟನ್ನು ತೋರಿಸಬಹುದಾದ ಜಾಗ ಎನ್ನುವ ಕನಸು ಅವರದಾಗಿತ್ತು. ಅವರು ತಮ್ಮ ಕೊನೆಯ ದಿನಗಳಲ್ಲಿಎಲ್ಲ ಕಲಾವಿದರಿಗೂ ಕರೆದು, ಕರೆದು ಹೇಳಿದ್ದು ಒಂದೇ, “ಈ ಜಾಗದಲ್ಲಿ ನಾನಿರಲ್ಲ. ಇದು ನನಗೋಸ್ಕರ ಅಲ್ಲ; ನೀವೆಲ್ಲರೂ ಉಪಯೋಗಿಸಿಕೊಳ್ಳಬೇಕು. ಅದೇ ನನ್ನ ಆಸೆ” ಎಂದಿದ್ದರು. ಅದು ಆಗೇ ಆಗುತ್ತೆ ಎಂದು ನಾನೂ ಆಶಿಸುತ್ತೇನೆ. ಯಾಕೆಂದರೆ ಅದು ಅಂಬರೀಷ್ ಅವರ ಕೊನೆಯ ಕನಸಾಗಿತ್ತು. ಅದರಲ್ಲಿ ಇನ್ನೂ ಅವರು ಒಂದು ಆಕ್ಟಿಂಗ್ ಸ್ಕೂಲ್, ಆಕ್ಟಿಂಗ್ ಅಕಾಡೆಮಿ ಅಂತ, ಅದರಲ್ಲಿ ಕಲಾವಿದರಿಗೆ ಯೋಗ, ಜಿಮ್, ಡಾನ್ಸಿಂಗ್, ಬೇರೆ ಕಲಾವಿದರಿಂದ ಅಥವಾ ಅನುಭವಿಗಳಿಂದ ಟ್ರೈನಿಂಗ್ ಎಲ್ಲವನ್ನು ಏರ್ಪಡಿಸಿ ನುರಿತ ಕಲಾವಿದರನ್ನು ನೀಡುವ ಸೆಂಟರಾಗಿ ಅದನ್ನು ಮಾಡುವ ಆಸೆ ಅವರಲ್ಲಿತ್ತು. ಖಂಡಿತವಾಗಿ ಅದನ್ನೆಲ್ಲ ಹೇಗೆ ಕಾರ್ಯಗತಗೊಳಿಸಬಹುದು ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ.
ಸಿನಿಮಾದಿಂದ ಈಗಲೂ ನಿಮಗೆ ಆಫರ್ಸ್ ಬರುತ್ತಿವೆಯೇ?
ಹೌದು. ನನಗೆ ತೆಲುಗು, ಮಲಯಾಳಂ ಭಾಷೆಯಿಂದಲೂ ವಿಶೇಷ ಪಾತ್ರಗಳನ್ನು ನಿರ್ವಹಿಸಲು ಆಫರ್‌ಗಳು ಬರುತ್ತಿರುತ್ತವೆ. ಆದರೆ ಅವರು ಯಾರೂ ಮಾಡಲೇಬೇಕು ಎಂದು ಒತ್ತಾಯಿಸುವುದಿಲ್ಲ. ಯಾಕೆಂದರೆ ಅವರಿಗೂ ರಾಜಕೀಯದಲ್ಲಿನ ನನ್ನ ಸ್ಥಾನದ ಗಂಭೀರತೆಯ ಬಗ್ಗೆ ಅರಿವಿದೆ. ಸಮಯ ಮಾಡಿಕೊಂಡು ನಟಿಸಬಹುದಾ ಎಂದು ವಿಚಾರಿಸುತ್ತಾರೆ. ನಾನು ನಯವಾಗಿಯೇ ಇಲ್ಲವೆನ್ನುತ್ತೇನೆ. ಕನ್ನಡದಲ್ಲಿ ದರ್ಶನ್ ನಟನೆಯ `ಗಂಡುಗಲಿ ಮದಕರಿ ನಾಯಕ’ ಚಿತ್ರದಲ್ಲಿ ಪಾತ್ರ ಒಪ್ಪಿಕೊಂಡಿದ್ದೇನೆ. ಶೂಟಿಂಗ್ ಇನ್ನು ನಡೆಯಬೇಕಿದೆ.