ಉದಯ ವಾಹಿನಿಯಲ್ಲಿ ಕಾವ್ಯಾಂಜಲಿ' ಪ್ರಸಾರಕ್ಕೆ ತಯಾರಾಗಿದೆ. ಒಂದಷ್ಟು ವಾಹಿನಿಗಳು ಲಾಕ್ಡೌನ್ ಸಂದರ್ಭದಲ್ಲಿ ಹಳೆಯ ಸೂಪರ್ ಹಿಟ್ ಧಾರಾವಾಹಿಗಳನ್ನು ಮರು ಪ್ರಸಾರ ಮಾಡಿತ್ತು. ಅದೇ ರೀತಿ ಉದಯ ವಾಹಿನಿ ಕೂಡ ದಶಕದ ಹಿಂದಿನ ತನ್ನ ಸುಪರ್ ಹಿಟ್ ಧಾರಾವಾಹಿ ಕಾವ್ಯಾಂಜಲಿಯ ಪ್ರಸಾರ ಶುರು ಮಾಡಿದೆ ಎಂದು ನೀವು ಅಮದುಕೊಂಡರೆ ಅದು ಸುಳ್ಳು! ಯಾಕೆಂದರೆ ಇದು ಹೊಸ
ಕಾವ್ಯಾಂಜಲಿ’.
ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಧಾರಾವಾಹಿಗಳ ರಸದೌತಣ ನೀಡಲು ಆರಂಭಿಸಿದ್ದೇ ಉದಯ ವಾಹಿನಿ. ಇತ್ತೀಚೆಗಂತೂ ನಂದಿನಿ, ಕಸ್ತೂರಿ ನಿವಾಸ, ಸೇವಂತಿ, ಮನಸಾರೆಯಂತಹ ಕೌಟುಂಬಿಕ ಧಾರವಾಹಿಗಳಿಂದ ಪ್ರೇಕ್ಷಕರನ್ನು ರಂಜಿಸಿದೆ. ಪ್ರಸ್ತುತ ಒಂದು ನವಿರಾದ ಪ್ರೇಮ ಕತೆಯನ್ನು ಹೊಂದಿರುವ `ಕಾವ್ಯಾಂಜಲಿ’ ಎನ್ನುವ ಹೊಸ ಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸುತ್ತಿದೆ. ಅಂದಹಾಗೆ ಇದಕ್ಕೂ ಈ ಹಿಂದೆ ಪ್ರಸಾರವಾಗಿದ್ದ ಕಾವ್ಯಾಂಜಲಿಗೂ ಯಾವುದೇ ಸಂಬಂಧ ಇಲ್ಲವಂತೆ. ಆದರೆ ದಾಖಲೆಯ ವಿಚಾರದಲ್ಲಿ ಅದನ್ನು ಮುರಿಯುವ ಪ್ರಯತ್ನ ನಡೆಸಲಿರುವುದಂತೂ ಖಚಿತ.
ಹೊಸ ಕಲ್ಪನೆಯ ತ್ರಿಕೋನ ಪ್ರೇಮಕಥೆಯಲ್ಲಿ ಸಂಗೀತದ ರಸಧಾರೆಯಿದೆ. ಅಕ್ಕ ತಂಗಿ ಬಾಂಧವ್ಯದ ಕತೆ ಹೇಳುವ ಈ ಧಾರಾವಾಹಿಯಲ್ಲಿ ಜಗತ್ತಿನಲ್ಲಿ ಪ್ರೀತಿಗೆ ಇರುವ ಮಹತ್ವದ ಬಗ್ಗೆ ತೋರಿಸಲಿದ್ದಾರೆ. ಅದೇ ಸಂದರ್ಭದಲ್ಲಿ ಪ್ರಾಣ ಉಳಿಸೊ ಅಮೃತದಂತಹ ಪ್ರೀತಿ ಕೆಲವೊಮ್ಮೆ ಉಸಿರು ಕಟ್ಟಿಸುತ್ತೆ. ಅಂಥ ಪ್ರೀತಿಯಲ್ಲಿ ಉಸಿರು ಕಟ್ಟಿರುವ ನಾಯಕನಿಗೆ ನಿಷ್ಕಲ್ಮಶ ಪ್ರೀತಿಯ ತಂಪೆರೆಯೋ ನಾಯಕಿ ಹೇಗೆ ಜೊತೆಯಾಗ್ತಾಳೆ ಎನ್ನುವುದನ್ನು ಕಾವ್ಯಾಂಜಲಿಯ ಮೂಲಕ ನೋಡಬಹುದಾಗಿದೆ. ನಟಿ ವಿದ್ಯಾಶ್ರಿ ಜಯರಾಮ್ ಕಾವ್ಯ ಪಾತ್ರ ನಿರ್ವಹಿಸುತ್ತಿದ್ದು, ಅಂಜಲಿ ಪಾತ್ರದ ಮೂಲಕ ಸುಷ್ಮಿತಾ ಅನ್ನೋ ಹೊಸ ಪ್ರತಿಭೆ ಕನ್ನಡ ಕಿರುತೆರೆಗೆ ಪರಿಚಯವಾಗುತ್ತಿದ್ದಾರೆ. ಪವನ್ ರವೀಂದ್ರ ಇವರಿಬ್ಬರ ನಡುವಿನ ಕೇಂದ್ರಬಿಂದು. ಕಣ್ಮಣಿ ಖ್ಯಾತಿಯ ದರ್ಶಕ್ ಗೌಡ ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಿಥುನ್ ತೇಜಸ್ವಿ, ರವಿ ಭಟ್, ಮಹಾಲಕ್ಷ್ಮಿ, ಮರೀನಾ ತಾರ, ರಾಮಸ್ವಾಮಿ, ನಿಸರ್ಗ, ಸಿಂಚನಾ ಕಾವ್ಯಾಂಜಲಿ ಧಾರಾವಾಹಿಯ ತಾರಬಳಗದಲ್ಲಿದ್ದಾರೆ. ಹಿರಿಯ ಕಲಾವಿದ ಶಂಕರ್ ಅಶ್ವಥ್ ಅವರು ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಕೋವಿಡ್ 19ಗೆ ಸಂಬಂಧಿಸಿದ ಹಾಗೆ ಶೂಟಿಂಗ್ ಸಮಯದಲ್ಲಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. `ಬದಲಾಗಿದೆ ಸಮಯ, ಬದಲಾಗ್ತಿದೆ ಉದಯ’ ಎನ್ನುವ ಅಡಿಬರಹದೊಂದಿಗೆ ಪ್ರಸಾರವಾಗ್ತಿರೋ ಮೊದಲ ಹೊಸ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಕಾವ್ಯಾಂಜಲಿಯದ್ದಾಗಿದೆ.
ಶ್ಯಾಕ್ ಸ್ಟುಡಿಯೊ ಸಂಸ್ಥೆಯಡಿ ಶಂಕರ್ ವೆಂಕಟರಾಮನ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಅನುಭವಿ ನಿರ್ದೇಶಕ ಆದರ್ಶ್ ಹೆಗಡೆ ಹೊತ್ತುಕೊಂಡಿದ್ದಾರೆ. ನೈಪುಣ್ಯವುಳ್ಳ ಛಾಯಾಗ್ರಾಹಕ ರುದ್ರಮುನಿ ಬೆಳೆಗೆರೆ ಸೇರಿದರೆ ಪರಿಣಿತರ ಸಾಲು ಈ ತಂಡದಲ್ಲಿದೆ. ಇದೇ ಆಗಸ್ಟ್ 3ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಕಾವ್ಯಾಂಜಲಿ ಪ್ರಸಾರಗೊಳ್ಳಲಿದ್ದು ಪ್ರೇಕ್ಷಕರ ಮನಗೆಲ್ಲುವ ಭರವಸೆಯಲ್ಲಿದೆ.