ಕನ್ನಡ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ಡಾ.ಶಿವರಾಜ್ ಕುಮಾರ್ ನೇತೃತ್ವದಲ್ಲಿ ಮನವಿ ನೀಡಲಿರುವ ವಿಚಾರ ನಿಮಗೆಲ್ಲ ಗೊತ್ತಿದೆ. ಆದರೆ ಇದೀಗ ಶಿವಣ್ಣನ ಮುಂದಾಳುತ್ವದಲ್ಲಿ ಅವರ ಸ್ವಗೃಹದಲ್ಲಿ ನಡೆದ ಸಭೆಯಲ್ಲಿ ಚಿತ್ರರಂಗದ ಎಲ್ಲ ತಾರೆಯರು ಭಾಗಿಯಾಗಿ ಚರ್ಚೆ ನಡೆಸಿದ ಘಟನೆ ಇಂದು ನಡೆದಿದೆ.
ಸಿಟಿ ರವಿ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ
ಸಭೆಯಲ್ಲಿ ಕನ್ನಡ ಕಿರುತೆರೆ ಮತ್ತು ಚಲನಚಿತ್ರೋದ್ಯಮವನ್ನು ಅವಲಂಬಿಸಿರುವ ಕಾರ್ಮಿಕರಿಗೆ ಪ್ಯಾಕೇಜ್ ಮತ್ತು ಚಿತ್ರರಂಗದ ಪುನಶ್ಚೇತನಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳಲ್ಲಿ ನೆರವು ಕೋರಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ತಾರೆಯರಾದ ವಿ. ರವಿಚಂದ್ರನ್, ರಮೇಶ್ ಅರವಿಂದ್, ಉಪೇಂದ್ರ ಸೇರಿದಂತೆ ಯುವ ತಾರೆಯರಾದ ಪುನೀತ್ ರಾಜ್ ಕುಮಾರ್, ಶ್ರೀ ಮುರಳಿ, ಗಣೇಶ್, ಯಶ್, ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು. ತಾರೆಯರ ಚರ್ಚೆಯಲ್ಲಿ ಪಾಲ್ಗೊಂಡು ಅವರ ಅಹವಾಲುಗಳನ್ನು ಆಲಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ಇದರ ಬಗ್ಗೆ ಖುದ್ದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಅಪರೂಪದ ಸಮಾಗಮ
ಇದೇ ವೇಳೆ ಚಿತ್ರ ಮಂದಿರ ತೆರೆಯುವ ಬಗ್ಗೆ, ವಿನೂತನ ದರ ನಿಗದಿ ಮತ್ತು ತೆರಿಗೆ ವಿನಾಯಿತಿ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಬಹಳ ಸಮಯದ ಬಳಿಕ ದೊಡ್ಡ ಮಟ್ಟದಲ್ಲಿ ತಾರೆಯರು ಶಿವಣ್ಣನ ಮನೆಯಲ್ಲಿ ನೆರೆದಿರುವುದು ಹ್ಯಾಟ್ರಿಕ್ ಹೀರೋ ಅವರು ಚಂದನವನದ ನಾಯಕತ್ವ ವಹಿಸಿರುವುದನ್ನು ಸಂಪೂರ್ಣವಾಗಿ ಬೆಂಬಲಿಸಿದ ಸೂಚನೆಯಾಗಿದೆ. ಹೈದರಾಬಾದ್ ಚಿತ್ರೀಕರಣದಲ್ಲಿರುವ ಸುದೀಪ್ ಮತ್ತು ಮೈಸೂರಲ್ಲಿರುವ ದರ್ಶನ್ ಈ ಸಂದರ್ಭದಲ್ಲಿ ಇರಲಿಲ್ಲ. ಆದರೆ ಖ್ಯಾತ ನಿರ್ಮಾಪಕರಾದ ಕೆ.ಪಿ ಶ್ರೀಕಾಂತ್, ಪುಷ್ಕರ್ ಮಲ್ಲಿಕಾರ್ಜುನಯ್ಯ, ಸೂರಪ್ಪ ಬಾಬು ಮೊದಲಾದವರು ಉಪಸ್ಥಿತರಿದ್ದರು.
ಕಳೆದ ವಾರವಷ್ಟೇ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರು ಸಾರಾ ಗೋವಿಂದು, ರಾಜೇಂದ್ರ ಸಿಂಗ್ ಬಾಬು ಅವರ ನೇತೃತ್ವದಲ್ಲಿ ಶಿವರಾಜ್ ಕುಮಾರ್ ಅವರ ಮನೆಗೆ ಹೋಗಿ ಕನ್ನಡ ಚಿತ್ರರಂಗದ ನಾಯಕತ್ವ ವಹಿಸುವಂತೆ ವಿನಂತಿಸಿದ್ದರು. ಅವರ ಮೂಲಕವೇ ಮುಖ್ಯಮಂತ್ರಿಗೆ ಮನವಿ ನೀಡುವ ತಯಾರಿಯೂ ನಡೆದಿತ್ತು. ಇದೀಗ ನಾಯಕತ್ವ ಶಿವಣ್ಣನಲ್ಲಿದೆ ಎನ್ನುವುದು ಘೋಷಣೆಯಾದೊಡನೆ ತಾರೆಯರು ಮತ್ತು ಒಂದಷ್ಟು ನಿರ್ಮಾಪಕರು ಜತೆ ಸೇರಿ ಶಿವಣ್ಣನಲ್ಲಿ ಮಾತನಾಡಿ, ಸಚಿವ ಸಿಟಿ ರವಿಯವರನ್ನು ಚರ್ಚೆಗೆ ಕರೆಸುವ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆಯುವ ಮತ್ತೊಂದು ಪ್ರಯತ್ನ ಮಾಡಿದ್ದಾರೆ.