ಶಿವರಾಜ್ ಕುಮಾರ್ ಅವರಿಗೆ ಇಬ್ಬರು ತಂಗಿಯರು. ಅವರಲ್ಲಿ ಪೂರ್ಣಿಮಾ ರಾಮ್ ಕುಮಾರ್ ಅವರು ನಮ್ಮೊಂದಿಗೆ ಮಾತನಾಡಿದ್ದಾರೆ. ಅವರ ಇಬ್ಬರು ಮಕ್ಕಳು ಕೂಡ ಈ ವರ್ಷ ಚಿತ್ರರಂಗ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಒಂದು ರೀತಿಯಲ್ಲಿ ನೋಡಿದರೆ ಡಾ.ರಾಜ್ ಕುಮಾರ್ ಕುಟುಂಬದಿಂದ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ಮೊದಲ ಹೆಣ್ಣುಮಗಳು ಧನ್ಯಾ ರಾಮ್ ಕುಮಾರ್. ಇಂಥದೊಂದು ದಿಟ್ಟ ನಿರ್ಧಾರ ತೆಗೆದುಕೊಂಡಿರುವಲ್ಲಿ ಪೂರ್ಣಿಮಾ ರಾಮ್ ಕುಮಾರ್ ಅವರ ಪಾತ್ರವೂ ದೊಡ್ಡದು. ಅಷ್ಟೇ ಅಲ್ಲ; `ಪ್ರೇಮದ ಕಾಣಿಕೆ’ ಚಿತ್ರದಲ್ಲಿನ ಬಾಲನಟಿಯ ಪಾತ್ರಕ್ಕೆ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ಪೂರ್ಣಿಮಾ ತಮ್ಮ ಸಹೋದರರಲ್ಲಿನ ವಾತ್ಸಲ್ಯದ ಜತೆಗೆ ಕಲಾವಿದರಾಗಿ ಅವರನ್ನು ಹೇಗೆ ಕಾಣುತ್ತಾರೆ ಎನ್ನುವ ಕುರಿತಾದ ಮಾಹಿತಿಯನ್ನು ಸಿನಿಕನ್ನಡ.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ. ಇದು ರಕ್ಷಾ ಬಂಧನದ ವಿಶೇಷ.
ರಕ್ಷಾ ಬಂಧನದ ದಿನ ನಿಮ್ಮ ಪಾಲಿಗೆ ಎಷ್ಟು ಪ್ರಾಮುಖ್ಯ?
ನಾವು ಆರಂಭದಲ್ಲಿ ಈಗಿನಂತೆ ಆಚರಣೆ ಮಾಡುತ್ತಿರಲಿಲ್ಲ. ಇತ್ತೀಚೆಗೆ ಶಿವಣ್ಣನ ಮನೆಗೆ ಹೋಗಿ ಕಟ್ಟಿ ಬರುತ್ತೇವೆ..ಅಷ್ಟೇ. ರಾಖಿಕಟ್ಟಿ ಸ್ವೀಟ್ ಕೊಡೋದು, ಅವರೇನಾದರೂ ಒಂದು ಅಮೌಂಟ್ ಕೊಡೋದು ಅಷ್ಟೇ ಮಾಡೋದು.. ಅದೇ ಆಚರಣೆ. ಆದರೆ ರಕ್ಷಾ ಬಂಧನದ ವಿಚಾರ ಅಂತಲ್ಲ, ಯಾವ ಹಬ್ಬ ಇದ್ದರೂ ನನ್ನ ಅಣ್ತಮ್ಮಂದಿರು ನನ್ನನ್ನು ನೆನಪಿಸಿಕೊಳ್ತಾ ಇರ್ತಾರೆ, ಏನಾದರೂ ಗಿಫ್ಟ್ ತಂದುಕೊಡುತ್ತಿರುತ್ತಾರೆ. ಯಾವುದಾದರೂ ಊರುಗಳಿಗೆ ಹೋಗಿ ಏನಾದರೂ ಸ್ಪೆಷಲ್ ತಂದಾಗ ಮೂರು ಜನ ಕೂಡ ನನಗೆ ಕೊಡುತ್ತಾರೆ. ಮನೇಲಿದ್ರೆ ನಾವು ಹೋಗುವುದನ್ನು ಕಾಯ್ತಾ ಇರ್ತಾರೆ. ಅವರೇ ಫೋನ್ ಮಾಡಿ ಕೇಳ್ತಾರೆ “ಎಷ್ಟು ಹೊತ್ತಿಗೆ ಬರ್ತೀರ ?” ಅಂತ.
ಅಣ್ಣ ತಮ್ಮಂದಿರ ಜತೆಗೆ ಕಳೆದಂಥ; ನಿಮಗೆ ಮರೆಯಲಾರದ ದಿನ ಯಾವುದು?
ಸಾಮಾನ್ಯವಾಗಿ ನಾವು ಎಲ್ಲರೂ ಅಪ್ಪಾಜಿ ಮನೇಲಿ ಸೇರ್ತಾ ಇದ್ದೆವು. ಈಗ ಏನೇ ವಿಶೇಷ ಇದ್ದಾಗ ಶಿವಣ್ಣನ ಮನೇಲಿ ಸೇರುತ್ತೇವೆ. ನಮ್ಮ ತಂದೆ ತಾಯಿಯ ಐವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವ ನಡೆದಿದ್ದು ಮಾತ್ರ ಮರೆಯಲಾಗದ ಸಂದರ್ಭ. ಯಾಕೆಂದರೆ ಆ ದಿನ ಎಲ್ಲರೂ ಜತೆ ಸೇರಿದ್ದೆವು. ಸದಾಶಿವನಗರದ ಹಳೆ ಮನೆಯಲ್ಲಿ ನಡೆದ ಆ ಕಾರ್ಯಕ್ರಮ ಯಾವತ್ತಿಗೂ ಮರೆಯಲಾಗದು. ಯಾಕೆಂದರೆ ಸಾಮಾನ್ಯವಾಗಿ ಯಾವುದೇ ಶೂಟಿಂಗ್ ನಲ್ಲಿ ಆಗಲೀ, ಯಾವುದೇ ಫಂಕ್ಷನ್ ಆಗಲೀ ಏನಾದರು ಒಂದು ಕಾರಣದಿಂದ ಯಾರಾದರು ಒಬ್ಬರು ಮಿಸ್ ಆಗ್ತಿರ್ತಾರೆ. ಆದರೆ ಅಪ್ಪಾಜಿ ಅಮ್ಮನ ಆ ಕಾರ್ಯಕ್ರಮ ಇತ್ತಲ್ಲ? ಅದರಲ್ಲಿ ಎಲ್ಲರೂ ಇದ್ದೆವು. ಎಲ್ಲರಲ್ಲಿಯೂ ಖುಷಿಯಿತ್ತು. ಆ ದಿನವನ್ನು ಯಾವತ್ತಿಗೂ ಮರೆಯುವಂತಿಲ್ಲ.
ನಿಮಗೆ ನಿಮ್ಮ ಮೂವರು ಸಹೋದರರ ಮೆಚ್ಚಿನ ಚಿತ್ರಗಳು ಯಾವುವು?
ನನಗೆ ಶಿವಣ್ಣನ ಫೇವರಿಟ್ ಮೂವಿ ನನಗೆ ಓಂ' ಮತ್ತು
ಜೋಗಿ’. ಅದರಲ್ಲಿ ಆಕ್ಷನ್ ಇದೆ ಅಂತ ಅಲ್ಲ. ಇನ್ ಫ್ಯಾಕ್ಟ್ ಸರಿಯಾಗಿ ನೋಡಿದ್ರೆ ಅದರಲ್ಲಿ ಎಲ್ಲವೂ ಇವೆ. ಹಾಗೆ ನನಗೆ ಶಿವಣ್ಣನ ಕಾಮಿಡಿ ಕೂಡ ಇಷ್ಟ. ರಾಘಣ್ಣನ ಸಿನಿಮಾದ ಕಾಮಿಡಿಯಂತೂ ತುಂಬಾನೇ ಇಷ್ಟ. ಅಪ್ಪುವಿನ ಎಲ್ಲ ಸಿನಿಮಾಗಳೂ ಇಷ್ಟ. ಯಾಕೆಂದರೆ ಅವನು ನನಗಿಂತ ಚಿಕ್ಕವನು. ಅವನು ಏನೇ ಮಾಡಿದ್ರೂ ಚೆನ್ನಾಗಿರುತ್ತೆ. ಹಾಗಾಗಿ ಅಪ್ಪು ಫೈಟ್, ಡಾನ್ಸ್, ನಟನೆ ಎಲ್ಲವೂ ಇಷ್ಟ. ಅದರಲ್ಲಿ ಕೂಡ ಇತ್ತೀಚೆಗೆ ನೋಡಿರುವ ಸಿನಿಮಾಗಳಲ್ಲಿ `ರಾಜ್ ಕುಮಾರ’ ತುಂಬ ಫೇವರಿಟ್ ಅನಿಸಿರುವ ಸಿನಿಮಾ.
ನಟಿಯಾಗಬೇಕು ಎನ್ನುವ ನಿಮ್ಮಾಸೆಯೇ ಈಗ ಮಗಳನ್ನು ನಾಯಕಿಯಾಗಿಸಲು ಕಾರಣವೇ?
ನನಗೆ ಆ ತರಹ ಏನಿಲ್ಲ. ನಟನೆ ಬಾಲ್ಯದಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ಮಾಡಿದ್ದೆ. ನನ್ನ ಜನರೇಶನ್ನೇ ಬೇರೆ. ಈಗಿನ ಮಕ್ಕಳ ಆಸಕ್ತಿ ಅಂದರೆ ಅವರು ಅದರ ಬಗ್ಗೆ ಸಂಪೂರ್ಣ ತಿಳಿದು, ತಯಾರಾಗಲು ಸಿದ್ಧ ಇರುತ್ತಾರೆ. ಹಾಗಿರಬೇಕಾದರೆ ಅವರ ಆಸಕ್ತಿಯನ್ನು ತಾಯಿಯಾಗಿ ನಾವು ಎಲ್ಲರಿಗಿಂತ ಹೆಚ್ಚು ಅರ್ಥ ಮಾಡಿಕೊಂಡು ಅವರ ರೀತಿಯಲ್ಲೇ ಹೋಗುವುದು ಬೆಟರ್ ಅಂತ ನನಗೆ ಅನಿಸಿತು. ಯಾಕೆಂದರೆ ಅವರು ಓದಿದ್ದಾರೆ; ಕೆಲಸಾನೂ ಮಾಡಿದ್ದಾರೆ. ಸಿನಿಮಾದಲ್ಲಿಯೂ ಟ್ರೈ ಮಾಡ್ತಾರೆ ಅಂದರೆ ತಪ್ಪೇನು? ಈಗಾಗಲೇ ಯಂಗ್ ಜನರೇಶನ್ನಲ್ಲಿ ಅವಳ ಫ್ರೆಂಡ್ಸ್ ಕಡೆಯಿಂದ ಎಲ್ಲ ನಟನೆ ಮಾಡ್ತಿದ್ದಾರೆ. ತಾನೂ ಮಾಡೋದಾಗಿ ಹೇಳಿದಾಗ ಯಾಕೆ ಬೇಡ ಅನ್ನೋದು ಅನಿಸಿತು ನನಗೆ. ಹಾಗಂತ ನಾವಾಗಿ ಅವಕಾಶ ಹುಡುಕೋದು ಬೇಡ. ನಮ್ಮನ್ನು ಹುಡುಕಿಕೊಂಡು ಒಳ್ಳೆಯ ಆಫರ್ ಬಂದಾಗ ಅದು ನಿನಗೆ ಇಷ್ಟವಾದರೆ ಮಾಡಬಹುದು ಅಂದಿದ್ದೆ. ಹಾಗೆ ಒಪ್ಪಿಕೊಂಡು ನಟಿಸಿರುವ `ನಿನ್ನ ಸನಿಹಕೆ’ ಚಿತ್ರದ ಶೂಟಿಂಗ್ ಪೂರ್ತಿಯಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.