ದುನಿಯಾ ವಿಜಯ್ ನಟನೆಯ ಸಲಗ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಲಾಕ್ಡೌನ್ ಮತ್ತು ಚಿತ್ರ ಮಂದಿರಗಳ ಮುಚ್ಚುವಿಕೆಯಿಂದ ಬಿಡುಗಡೆಗೆ ಕಾಯುತ್ತಿರುವ `ಸಲಗ’ ತಂಡ ಕೊರೊನಾ ಕಾಟದಿಂದ ಸರ್ವರಿಗೂ ಆದಷ್ಟು ಬೇಗ ಮುಕ್ತಿ ಸಿಗಲೆಂದು ದೇವರ ಮೊರೆ ಹೋಗಿದೆ. ಇಂದು ಬೆಳಿಗ್ಗೆ ಗವಿಪುರಂ ಗುಟ್ಟಹಳ್ಳಿಯ ಬಂಡಿ ಮಾಂಕಾಳಮ್ಮ ದೇವಾಲಯದಲ್ಲಿ ಪೂಜೆ ನಡೆಸಿದ ಚಿತ್ರದ ನಾಯಕ, ನಿರ್ದೇಶಕ ದುನಿಯಾ ವಿಜಯ್ ಅವರನ್ನು ಮಾತನಾಡಿಸಿದಾಗ ಸಿನಿಕನ್ನಡದ ಜತೆಗೆ ಅವರು ಹೇಳಿರುವ ವಿಚಾರಗಳು ಇಲ್ಲಿವೆ.
“ನಮ್ಮ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಶುಭವಾಗಿ ಶುರುವಾಗಲೆಂದು ಮತ್ತು ಎಲ್ಲವೂ ಅದಷ್ಟು ಬೇಗ ಯಥಾಸ್ಥಿತಿಗೆ ಮರಳಲಿ ಎಂದು ಬೇಡುತ್ತಾ ಈ ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ನಮ್ಮ ತಂಡದ ಇಷ್ಟದ ದೇವತೆ ಬಂಡಿಮಾಂಕಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದೇವೆ” ಎಂದು ವಿಜಯ್ ಹೇಳಿದ್ದಾರೆ. ಈ ವಿಶೇಷ ಪೂಜೆಯಲ್ಲಿ ದುನಿಯಾ ವಿಜಯ್ ಜತೆಗೆ ನಿರ್ಮಾಪಕ ಕೆ.ಪಿ ಶ್ರೀಕಾಂತ್, ನಾಗಿ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.
`ಸಲಗ’ ವರ್ಷದ ಬಹು ನಿರೀಕ್ಷಿತ ಚಿತ್ರ
ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಸಲಗವೂ ಒಂದು. ಚಿತ್ರದ ಹೆಸರಲ್ಲೇ ಶಕ್ತಿ ಇದೆ. ಅದರ ಜತೆಗೆ ಕನ್ನಡ ಚಿತ್ರರಂಗದ ಶಕ್ತಿ ಕೇಂದ್ರವಾದ ಡಾ.ರಾಜ್ ಕುಮಾರ್ ಕುಟುಂಬದ ಕೃಪಾಶೀರ್ವಾದವೂ ಜತೆಯಲ್ಲೇ ಇದೆ. ವಿಶೇಷವಾಗಿ ಹಾಗೆ ಹೇಳಲು ಕಾರಣ, ದುನಿಯಾ ವಿಜಯ ನಟನೆಯ ಈ ಬಹು ನಿರೀಕ್ಷಿತ ಚಿತ್ರದ ನಿರ್ಮಾಪಕರಾಗಿರುವುದು ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಮೂಲಕ ಗುರುತಿಸಿಕೊಂಡಿರುವ ಕೆ.ಪಿ ಶ್ರೀಕಾಂತ್ ಅವರು. ಶ್ರಿಕಾಂತ್ ಅಣ್ಣಾವ್ರ ಅಭಿಮಾನಿಯಷ್ಟೇ ಅಲ್ಲ; ಮೈಲಾರಿ' ಸಿನಿಮಾದ ಮೂಲಕ ಶಿವರಾಜ್ ಕುಮಾರ್ ಸಿನಿಮಾಗಳ ನಿರ್ಮಾಪಕರೂ ಆದರು.
ಟಗರು’ವಿನಂಥ ಸಪರ್ ಹಿಟ್ ಸಿನಿಮಾ ನೀಡಿದ ಬಳಿಕ ಕೆ.ಪಿ ಶ್ರೀಕಾಂತ್ ಅವರು ನಿರ್ಮಿಸಿರುವ ದುನಿಯಾ ವಿಜಯ್ ನಿರ್ದೇಶನದ ಪ್ರಥಮ ಚಿತ್ರ ಆ ಕಾರಣದಿಂದಲೂ ಗಮನಾರ್ಹ.
ಸಲಗದ ಬಳಗ
ಸಲಗದಲ್ಲಿ ದುನಿಯಾ ವಿಜಯ್ ಅವರ ಜತೆಗೆ ಮತ್ತೊಂದು ಪ್ರಮುಖ ಪಾತ್ರವನ್ನು ಡಾಲಿ ಧನಂಜಯ್ ನಿರ್ವಹಿಸಿದ್ದಾರೆ. ಸಂಜನಾ ಆನಂದ್ ಚಿತ್ರದ ನಾಯಕಿಯಾಗಿದ್ದು ಅಚ್ಯುತ್ ಕುಮಾರ್, ರಂಗಾಯಣ ರಘು ಮೊದಲಾದ ಜನಪ್ರಿಯ ಕಲಾವಿದರ ದಂಡೇ ಇದೆ. ಈಗಾಗಲೇ ಟೀಸರ್ ಮತ್ತು ಮೇಕಿಂಗ್ ದೃಶ್ಯ ಹಾಗು ಹಾಡುಗಳ ಮೂಲಕ ಜನಪ್ರಿಯವಾಗಿರುವ ಸಲಗ ಬಿಡುಗಡೆಗೆ ಪ್ರೇಕ್ಷಕರು ಕಾತರರಾಗಿದ್ದಾರೆ. ಚಿತ್ರ ತಂಡದ ಪ್ರಾರ್ಥನೆಯಂತೆ ಸಿನಿಮಾ ಆದಷ್ಟು ಬೇಗ, ಒಳ್ಳೆಯ ರೀತಿಯಲ್ಲಿ ಪ್ರೇಕ್ಷಕರನ್ನು ತಲುಪುವಂತಾಗಲಿ ಎನ್ನುವುದು ನಮ್ಮ ಆಶಯವೂ ಹೌದು.