ಬೋಳಾರ್ ಪ್ರಕರಣದ ಬಗ್ಗೆ ಕಾಪಿಕಾಡ್ ಹೇಳುವುದೇನು..?

ಕಳೆದ ಎರಡು ದಿನಗಳಿಂದ ಕರಾವಳಿಯ ಸಿನಿಮಾ, ನಾಟಕರಂಗ ವಿಭಾಗದಲ್ಲಿ ಒಂದು ಆತಂಕದ ವಿಚಾರ ಹರಿದಾಡುತ್ತಿದೆ. ತುಳು ಭಾಷೆಯ ಜನಪ್ರಿಯ ಕಲಾವಿದ ಅರವಿಂದ್ ಬೋಳಾರ್ ಅವರ ವಿರುದ್ಧ ಒಂದಷ್ಟು ಕಡೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳೂರಿನ ಖಾಸಗಿ ವಾಹಿನಿ ಡೈಜಿವರ್ಲ್ಡ್ ನಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ವಾಹಿನಿ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮತ್ತು ಕಲಾವಿದ ಅರವಿಂದ್ ಬೋಳಾರ್ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಅರವಿಂದ್ ಬೋಳಾರ್ ಒಬ್ಬ ಶ್ರೇಷ್ಠ ಕಲಾವಿದರಾಗಿದ್ದು, ದುಬೈನಲ್ಲಿ ಅವರ ನಟನೆಯನ್ನು ಕಂಡ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರದಲ್ಲಿ ನಟಿಸಲು ಆಫರ್ ನೀಡಿದ ವಿಚಾರ ಎಲ್ಲರಿಗೂ ತಿಳಿದಿರುವಂಥದ್ದು. ದಶಕಗಳಿಂದ ಹಾಸ್ಯ ಕಲಾವಿದರಾಗಿ ತುಳು ರಂಗಭೂಮಿ ಮತ್ತು ಸಿನಿಮಾಗಳ ಅಭಿಮಾನ ಸಂಪಾದಿಸಿರುವ ಅರವಿಂದ್ ಅವರ ವಿರುದ್ಧ ಸ್ಥಳೀಯ ಹಿಂದೂಗಳಿಗೆ ಥಟ್ಟನೆ ಈ ಮಟ್ಟದ ವಿರೋಧ ಮೂಡಲು ಕಾರಣವೇನು? ರಂಗ ಪ್ರಕಾರಗಳಲ್ಲಿ ಹಾಸ್ಯದ ಮೂಲಕ ಧಾರ್ಮಿಕ ಮೌಢ್ಯತೆಯನ್ನು ಪ್ರಶ್ನಿಸುವ ಸ್ವಾತಂತ್ರ್ಯ ಕಲಾವಿದರಿಗೆ ಇಲ್ಲವೇ? ಮುಂತಾದ ಪ್ರಶ್ನೆಗಳಿಗೆ ಮಂಗಳೂರಿನ `ಚಾ ಪರ್ಕ’ ರಂಗತಂಡದ ಮಾಲೀಕ, ನಾಟಕ ಸಿನಿಮಾಗಳ ನಿರ್ದೇಶಕ, ಕಲಾವಿದ, ಕನ್ನಡ ಸಿನಿಮಾಗಳಲ್ಲಿಯೂ ನಟಿಸಿರುವ ಮಾತ್ರವಲ್ಲ, ಅರವಿಂದ್ ಬೋಳಾರ್ ಅವರ ಆತ್ಮೀಯರೂ ಆಗಿರುವ ದೇವದಾಸ್ ಕಾಪಿಕಾಡ್ ಸಿನಿಕನ್ನಡದ ಜತೆಗೆ ಉತ್ತರಿಸಿದ್ದಾರೆ.

ಅರವಿಂದ್ ಬೋಳಾರ್ ಅವರ ಜ್ಯೋತಿಷಿ ಪಾತ್ರದ ಬಗ್ಗೆ ಎದ್ದ ವಿವಾದದ ಬಗ್ಗೆ ಏನು ಹೇಳುತ್ತೀರಿ?

ನಾನು ನನ್ನದೇ ಪ್ರೊಡಕ್ಷನ್ ನಲ್ಲಿರುವ ಒಂದಷ್ಟು ಟಿವಿ ಕಾರ್ಯಕ್ರಮಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೇನೆ. ಹಾಗಾಗಿ ಅರವಿಂದ್ ಬೋಳಾರ್ ಅವರ ಕಾರ್ಯಕ್ರಮವನ್ನು ನೋಡಲು ಸಾಧ್ಯವಾಗಿಲ್ಲ. ನನ್ನ ಕಾಮಿಡಿ ಶೋನಲ್ಲಿಯೂ ಅರವಿಂದ್ ಅವರು ಮೂರು ಎಪಿಸೋಡ್ ನಟಿಸಿ ಹೋಗಿದ್ದಾರೆ. ಆದರೆ ಆಗ ಈ ಬಗ್ಗೆ ಅವರು ಏನೂ ಹೇಳಿರಲಿಲ್ಲ. ಇದೀಗ ಪ್ರಕರಣ ದಾಖಲಾದ ಬಳಿಕಷ್ಟೇ ನನಗೆ ವಿಷಯಗೊತ್ತಾಗಿದೆ. ಹಾಗಾಗಿ ಆ ಎಪಿಸೋಡ್ ನಲ್ಲಿ ಏನು ತಪ್ಪಾಗಿದೆ ಅಥವಾ ಆಗಿಲ್ಲ ಎಂದು ನಾನು ಹೇಳುವುದು ಕಷ್ಟ.

ಸಮಾಜದ ಕುಂದುಕೊರತೆಗಳನ್ನು ಪಾತ್ರಗಳ ಮೂಲಕ ವ್ಯಕ್ತಪಡಿಸುವ ಸ್ವಾತಂತ್ರ್ಯ ಕಲಾವಿದರಿಗೆ ಇಲ್ಲವೇ?

ನಮ್ಮ ಸಾಮಾಜಿಕ ಸಿನಿಮಾ, ನಾಟಕಗಳಲ್ಲಿ ಮಂತ್ರವಾದಿ, ಶಾಸ್ತ್ರಿ ಮುಂತಾದ ಪಾತ್ರಗಳು ಬರುತ್ತಿರುತ್ತವೆ. ಆದರೆ ಅವುಗಳು ಫನ್ನಿಯಾಗಿ ಯಾರಿಗೂ ನೀವು ನೀಡದ ರೀತಿಯಲ್ಲಿ ಇರಬೇಕಾಗುತ್ತದೆ. ನಮ್ಮಲ್ಲಿನ ಅಂಕು ಡೊಂಕುಗಳನ್ನು ನಾಟಕ, ಸಿನಿಮಾಗಳಂಥ ಸಾಂಸ್ಕೃತಿಕ ವೇದಿಕೆಯಲ್ಲೇ ಹೇಳಬೇಕು. ಅದರ ಹೊರತು ಮನೆ ಮನೆಗೆ ಹೋಗಿ ಹೇಳಲು ಸಾಧ್ಯವಿಲ್ಲ. ನಾನು ಕಾರ್ಯಕ್ರಮ ನೋಡದಿದ್ದರೂ, ವಾಲ್ಟರ್ ಮತ್ತು ಬೋಳಾರ್ ಘಟನೆಯ ಬಗ್ಗೆ ಮಾತನಾಡಿದ ವಿಡಿಯೋ ನೋಡಿದೆ. ತಮ್ಮ ಕಾರ್ಯಕ್ರಮದಲ್ಲಿ ಅಂಥ ವಿಚಾರಗಳ ಬಗ್ಗೆ ಪ್ರಸ್ತಾಪ ಆಗಿಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲ, ಒಂದು ವೇಳೆ ಮಾಡಿರುವ ಕಾರ್ಯಕ್ರಮದ ಯಾವುದಾದರೂ ಭಾಗದಲ್ಲಿ ನೋವು ನೀಡಿದ್ದರೆ ಕ್ಷಮಿಸಬೇಕಾಗಿ ವಿನಂತಿಸಿದ್ದಾರೆ. ಅಲ್ಲಿಗೆ ಎಲ್ಲವನ್ನೂ ಕ್ಷಮಿಸಿ ಮರೆತರೆ ಚೆನ್ನಾಗಿರುತ್ತದೆ.

ನಿಮ್ಮ ಪ್ರಕಾರ ಇಂಥ ಸಂದರ್ಭದಲ್ಲಿ ಕಲಾವಿದರು ವಹಿಸಬೇಕಾದ ಎಚ್ಚರಿಕೆ ಏನು?

ನಾನು ಕಳೆದ 35 ವರ್ಷಗಳಿಂದ ಕಲಾರಂಗದಲ್ಲಿದ್ದೇನೆ. ನನ್ನ ಪ್ರಕಾರ ನಮ್ಮ ಹಲವಾರು ಆಚರಣೆಗಳಲ್ಲಿ ಮೌಢ್ಯತನ ಇದ್ದಾಗ ವಿಮರ್ಶಿಸಬಹುದು. ಆದರೆ ಒಟ್ಟು ಹಿಂದೂ ಧರ್ಮದ ವಿರುದ್ಧವೇ ಏನಾದರೂ ಕಾರ್ಯಕ್ರಮ ಮಾಡಿದರೆ ಅದು ತಪ್ಪು. ನನ್ನ ನಾಟಕಗಳಲ್ಲಿ ನೀವು ಗಮನಿಸಿರಬಹುದು, ಅಂಥ ಸೂಕ್ಷ್ಮ ವಿಚಾರಗಳು ಬಂದಾಗ ಎಚ್ಚರಿಕೆಯಿಂದಲೇ ನಿರ್ವಹಿಸಿದ್ದೇನೆ. ನನ್ನ ನಾಟಕಗಳನ್ನು ಧರ್ಮಸ್ಥಳದ ಖಾವಂದರು ನೋಡುತ್ತಾರೆ. ಉಡುಪಿ ಮಠದ ಸ್ವಾಮೀಜಿಗಳು ತಂಡವನ್ನು ರಾಜಾಂಗಣಕ್ಕೆ ಕರೆಸಿ ವೀಕ್ಷಿಸುತ್ತಾರೆ. ಕಲಾವಿದ ಅರವಿಂದ್ ಅವರು ಕೂಡ ನನ್ನೊಂದಿಗೆ ಇದ್ದವರು. ಬೋಳಾರ್ ಅವರು ಈ ಹಿಂದೆಯೂ ಹಿಂದೂ ಧರ್ಮವನ್ನು ಪ್ರತಿನಿಧಿಸುವ, ಮುಸಲ್ಮಾನ ಧರ್ಮಗಳನ್ನು ಪ್ರತಿನಿಧಿಸುವ ಹಾಸ್ಯ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಯಾವತ್ತಿಗೂ ಇಷ್ಟು ಗಂಭೀರ ಸ್ವರೂಪ ಪಡೆದಿಲ್ಲ. ಸ್ಕ್ರಿಪ್ಟ್ ಇಟ್ಟುಕೊಂಡು ಮಾತನಾಡುವಾಗ ನಮ್ಮ ಸಂಭಾಷಣೆಗಳ ಬಗ್ಗೆ ನಮಗೆ ಅವಲೋಕನ ಮಾಡಲು ಅವಕಾಶ ಇರುತ್ತದೆ. ಆದರೂ ಹೀಗೇಕಾಯಿತು ಗೊತ್ತಿಲ್ಲ. ಇನ್ನಷ್ಟು ಸರಿಯಾಗಿ ವಿವರಿಸಬೇಕಾದರೆ ನಾನು ಆ ಡೈಜಿವರ್ಲ್ಡ್ ಕಾರ್ಯಕ್ರಮ ನೋಡಿಲ್ಲವಲ್ಲ.

ಡೈಜಿವಲ್ಡ್‌ ಮೇಲೆಯೂ ದೂರು ದಾಖಲಾಗಲು ಕರಾವಳಿಯ ಕೋಮು ದ್ವೇಷದ ವಾತಾವರಣವೂ ಕಾರಣ ಎನ್ನಬಹುದೇ?

ಇಲ್ಲಿ ಕೋಮು ವಿಚಾರ ಬರುವುದಿಲ್ಲ ಎಂದು ನನ್ನ ಅನಿಸಿಕೆ. ಯಾಕೆಂದರೆ ಡೈಜಿ ವರ್ಲ್ಡ್ ನ ವಾಲ್ಟರ್ ಅವರನ್ನು ನಾನು ಚೆನ್ನಾಗಿ ಬಲ್ಲೆ. ನನಗೆ ಅವರು ಫ್ಯಾಮಿಲಿ ಫ್ರೆಂಡ್. ಅವರ ಮನೆಯ ಪ್ರತಿ ಕಾರ್ಯಕ್ರಮಗಳಿಗೆ ನಾನು ಹೋಗಿದ್ದೇನೆ. ನಾನು ಅಲ್ಲಿ ಹಾಸ್ಯದ ಕಾರ್ಯಕ್ರಮ ನೀಡಿದ್ದೆ. ಕಾಪಿಕಾಡ್ಸ್‌ ಕಾಮಿಡಿ ವರ್ಲ್ಡ್ ಎಂದು. ಅದು ಕೂಡ ಜನಪ್ರಿಯವಾಗಿತ್ತು. ಯಾಕೆಂದರೆ ಅವರು ಈ ಕಷ್ಟ ಕಾಲದಲ್ಲಿ ಸಂಗ್ರಹಿಸಿದ ಕೋಟಿಗಟ್ಟಲೆ ಹಣವನ್ನು ಬಡವರ ಮನೆಮನೆ ಬಾಗಿಲಿಗೆ ಹೋಗಿ ನೀಡಿದ್ದಾರೆ. ಉಪಕಾರ ಮಾಡುವ ಹೃದಯ ಇದೆ. ಕೊರೊನ ಗೆಲ್ಲೋಣ ಕಾರ್ಯಕ್ರಮದ ಮೂಲಕ ನನಗೆ ತಿಳಿದಿರುವ ಮಟ್ಟಿಗೆ ಮೂರು ಸಾವಿರ ಮನೆಗಳಿಗೆ ಸಹಾಯ ಮಾಡಿದ್ದಾರೆ. ನಾನು ಅವರ ಆ ಕಾರ್ಯಕ್ರಮದ ಮೂರನೇ ಅತಿಥಿಯಾಗಿ ಹೋಗಿದ್ದೆ. ಆನಂತರವೂ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಯಾವುದಕ್ಕೂ ಪ್ರಚಾರ ಮಾಡಿದವರಲ್ಲ. ದುಬೈನಲ್ಲಿ ನನ್ನ ಶೋ ಇರುವ ಸಂದರ್ಭದಲ್ಲಿ ಯಾವುದೇ ದುಡ್ಡು ಪಡೆಯದೆ ತಿಂಗಳುಗಟ್ಟಲೆ ನಮ್ಮ ಶೋ ಬಗ್ಗೆ ತಮ್ಮ ವಾಹಿನಿಯಲ್ಲಿ ಮಾಹಿತಿ ನೀಡಿದ ವ್ಯಕ್ತಿ ಅವರು. ಅವರ ಮಾತೃಭಾಷೆ ಕೊಂಕಣಿಯಾದರೂ ತುಳು ಭಾಷೆಗೆ, ಸಾಂಸ್ಕೃತಿಕ ರಂಗಕ್ಕೆ ತುಂಬಾನೇ ಪ್ರೋತ್ಸಾಹ ನೀಡುತ್ತಿರುವ ವ್ಯಕ್ತಿ.

ಕೇರಳದಲ್ಲಿ ಎಲ್ಲ ಧರ್ಮದ ಕುಂದುಕೊರತೆಗಳನ್ನು ನಾಟಕ ಸ್ಕಿಟ್ ಗಳ ಮೂಲಕ ತೋರಿಸುತ್ತಾರೆ. ಆದರೆ ಕೇರಳಕ್ಕೆ ಹೊಂದಿಕೊಂಡಿರುವ ಕರಾವಳಿಯ ಬುದ್ಧಿವಂತರಲ್ಲಿ ಮಾತ್ರ ಅಸಹಿಷ್ಣುತೆ ಏಕೆ?

ಕೇರಳಕ್ಕೆ ಹೊಂದಿಕೊಂಡಂತೆ ಇದ್ದರೂ ಕರಾವಳಿಗೆ ಇಲ್ಲಿಯದೇ ಆದ ವೈಶಿಷ್ಟ್ಯತೆಗಳಿವೆ. ಇಲ್ಲಿ ಹಿಂದುತ್ವಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ತುಂಬ ಗಟ್ಟಿಯಾಗಿರುವ ತಳಹದಿ ಇದೆ.
ಅಷ್ಟಾದರೂ ಇದುವರೆಗೆ ನನ್ನ ಅಥವಾ ನಮ್ಮ ಯಾವುದೇ ಕಲಾವಿದರ ಮೇಲೆ ಈ ರೀತಿ ಪ್ರಕರಣ ದಾಖಲಾಗಿರುವುದು ನನಗಂತೂ ಗೊತ್ತಿಲ್ಲ. ಇದೇ ಪ್ರಥಮ ಎಂದು ಹೇಳಬಹುದು. ಒಂದೇ ವಿಚಾರದ ಬಗ್ಗೆ ನಾಲ್ಕಾರು ಕಡೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಗ್ಯಕರ ಹಾಸ್ಯವನ್ನು ಎಲ್ಲರೂ ಸ್ವಾಗತಿಸುತ್ತಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಇದು ಕೊರೊನಾದ ಕಾಲ. ಕಲಾವಿದರು ತುಂಬ ಕಷ್ಟದಲ್ಲಿದ್ದಾರೆ. ಪ್ರಕರಣ ದಾಖಲಿಸುವ ಬದಲಿಗೆ ವೈಯಕ್ತಿಕವಾಗಿ ಅವರಿಗೆ ಸೂಚನೆ ನೀಡಿದ್ದರೂ, ಆಗಲೂ ತಪ್ಪಾಗಿದ್ದರೆ ಒಪ್ಪಿಕೊಂಡು ಕ್ಷಮೆ ಯಾಚಿಸುತ್ತಿದ್ದರು ಎಂದು ನನ್ನ ನಂಬಿಕೆ. ಅರವಿಂದ್ ಡೈಜಿವರ್ಲ್ಡ್ ಗೆ ನೀಡಿದ ಕಾರ್ಯಕ್ರಮದಲ್ಲಿ ಒಬ್ಬ ಕಲಾವಿದನಾಗಿ ದುಡಿದಿದ್ದಾರೆ. ಒಂದು ವೇಳೆ ಅವರು ತಪ್ಪು ಮಾಡಿದ್ದರೆ ಈಗಾಗಲೇ ಅವರು ಕ್ಷಮೆ ಯಾಚಿಸಿದ್ದಾರೆ. ಎಷ್ಟೋ ಲಕ್ಷ ಜನರನ್ನು ನಗಿಸಿರುವಂಥ ಕಲಾವಿದ ಅವರು. ಇದನ್ನೆಲ್ಲ ಪರಿಗಣಿಸಿ ಈ ಪ್ರಕರಣವನ್ನು ಸುಖಾಂತ್ಯಗೊಳಿಸುವುದು ನನ್ನಂಥ ಕಲಾವಿದನ ಬಯಕೆ.

Recommended For You

Leave a Reply

error: Content is protected !!
%d bloggers like this: