ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ವಂಶಪಾರಂಪರ್ಯದಲ್ಲಿ ಬಂದು ಸ್ಟಾರ್ ಆಗಿರುವವರ ಮೇಲೆ ಸಿನಿ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದಾರೆ! ಅದಕ್ಕೆ ಪೂರಕವಾಗಿ ಸುಶಾಂತ್ ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸದ ಉದ್ಯಮದ ಸ್ಟಾರ್ ಗಳು ಇನ್ನಷ್ಟು ಕೆಂಗಣ್ಣಿಗೆ ಗುರಿಯಾಗಿದ್ದರು. ಅದರಲ್ಲಿ ಮುಖೇಶ್ ಭಟ್ ಮತ್ತು ಆಲಿಯಾ ಭಟ್ ಕೂಡ ಸೇರಿದ್ದಾರೆ. ಹಾಗಾಗಿ ನಿನ್ನೆ ತಾನೇ ಬಿಡುಗಡೆಯಾದ ಅವರ ಹೊಸ ಚಿತ್ರ `ಸಡಕ್ 2’ರ ಟ್ರೇಲರ್ ಗೆ ಡಿಸ್ಲೈಕ್ ನೀಡುವ ಮೂಲಕ ಹೊಸ ಅಭಿಯಾನ ಶುರು ಮಾಡಿದ್ದಾರೆ!
ಹಾಗೆ ನೋಡಿದರೆ ಸಡಕ್ 2 ಒಂದು ಮಟ್ಟಕ್ಕೆ ನಿರೀಕ್ಷೆ ಮೂಡಿಸಿರುವ ಚಿತ್ರ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಆಲಿಯಾ ಭಟ್ ಪ್ರಮುಖ ಆಕರ್ಷಣೆ. ಮಾತ್ರವಲ್ಲ, ಮಹೇಶ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಸಂಜಯ್ ದತ್ ಮತ್ತು ಆದಿತ್ಯ ರಾಯ್ ಕಪೂರ್ ಕೂಡ ಇದ್ದಾರೆ. ಆದರೆ ಅದನ್ನೇ ಮತ್ತೊಂದು ದೃಷ್ಟಿಯಲ್ಲಿ ನೋಡಿದರೆ ಭಟ್, ದತ್ ಮತ್ತು ಕಪೂರ್ ಮನೆತನಗಳ ಉತ್ತರಾಧಿಕಾರಿಗಳೇ ಚಿತ್ರದಲ್ಲಿರುವುದಕ್ಕಾಗಿ ಸಿನಿಪ್ರಿಯರು ಹಿಂದೆ ಮುಂದೆ ನೋಡದೇ ಟ್ರೇಲರ್ಗೆ ಡಿಸ್ಲೈಕ್ ಮಾಡುತ್ತಿದ್ದಾರೆ. ಮಾತ್ರವಲ್ಲ ಇದೇ ತಿಂಗಳ 28ರಂದು ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಎಲ್ಲರೂ ಆ ಸಂದರ್ಭಕ್ಕೆ ಸರಿಯಾಗಿ ಡಿಸ್ನಿ ಹಾಟ್ ಸ್ಟಾರ್ ಆಪ್ ಅನ್ ಇನ್ಸ್ಟಾಲ್ ಮಾಡಬೇಕೆನ್ನುವ ಅಭಿಯಾನವೂ ನಡೆದಿದೆ. ಇದರ ನಡುವೆ ಸುಶಾಂತ್ ಆತ್ಮಹತ್ಯೆಯಲ್ಲ ಕೊಲೆ ಎನ್ನುವ ಸಂದೇಹ ಕೂಡ ಸುಳಿದಾಡುತ್ತಿರುವುದು ಮತ್ತು ಇದರ ಬಗ್ಗೆ ಸೂಕ್ತ ತನಿಖೆಗೆ ಬಾಲಿವುಡ್ ದಿಗ್ಗಜರು ಆಗ್ರಹಿಸದಿರುವುದು ಅಭಿಮಾನಿಗಳೆಲ್ಲರಿಗೂ ಸಹಿಸಲಾಗದ ವಿಚಾರವಾಗಿದೆ. ಅದೇ ಕಾರಣದಿಂದಲೇ ಸಿನಿಮಾಸಕ್ತರಲ್ಲದವರು ಕೂಡ ಸಡಕ್ 2 ಟ್ರೇಲರ್ ಹುಡುಕಿ ಡಿಸ್ಲೈಕ್ ಒತ್ತುತ್ತಿದ್ದಾರೆ. ಇಲ್ಲಿದೆ ಅದಕ್ಕೊಂದು ಸ್ಪಷ್ಟ ನಿದರ್ಶನ. ನೈಜೀರಿಯನ್ ವ್ಯಕ್ತಿಯೊಬ್ಬರು ಕೇವಲ ತಾರಾ ಮನೆತನದ ಬೇಜವಾಬ್ದಾರಿತನಕ್ಕೆ ಬಿಸಿ ಮುಟ್ಟಿಸಲು ಡಿಸ್ಲೈಕ್ ಮಾಡಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.