ಚಂದನ್ ಶೆಟ್ಟಿ ಗಾಯನ ಹಾಗೂ ಸಂಗೀತ ಸಂಯೋಜನೆ ಇರುವ ‘ಕೋಲು ಮಂಡೆ’ ಹಾಡು ಸದ್ದು ಮಾಡುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಮೂಲಕ ಬಿಡುಗಡೆಯಾದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಬರೋಬ್ಬರಿ ಇಪ್ಪತ್ತು ಲಕ್ಷ ಮಂದಿ ವೀಕ್ಷಣೆ ಕಂಡು ಹೊಸ ದಾಖಲೆ ನಿರ್ಮಿಸಿದೆ. ಬಿಗ್ ಬಾಸ್ 5 ಗೆದ್ದ ಸಂದರ್ಭದಲ್ಲಿ ಕನ್ನಡ ಭಾಷೆಯ ಕಂಪನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ ಚಂದನ್ ಶೆಟ್ಟಿ ಅವರು ಅದಕ್ಕೆ ನಾಂದಿ ಎಂಬಂತೆ ಕನ್ನಡದ ಪ್ರಸಿದ್ಧ ಜಾನಪದ ಗೀತೆಯಾದ ಕೋಲು ಮಂಡೆ ಹಾಡಿಗೆ ಸಂಗೀತ ಸಂಯೋಜಿಸಿ ಸ್ವತಃ ತಾವೇ ಹಾಡಿದ್ದಾರೆ. ಹಾಡಿಗೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆ ಕುರಿತು ಸಿನಿಕನ್ನಡ.ಕಾಮ್ ಗೆ ವಿಶೇಷ ಸಂದರ್ಶನ ಇದು.
ಹಾಡಿನ ಬಗ್ಗೆ ವ್ಯಕ್ತವಾಗುತ್ತಿರುವ ಅದ್ಭುತವಾದ ಪ್ರತಿಕ್ರಿಯೆ ಬಗ್ಗೆ ನಿಮ್ಮ ಅನಿಸಿಕೆ!?
ಸಹಜವಾಗಿ ಖುಷಿಯಿದೆ, ಅಲ್ಲದೇ ಈ ಹಾಡಿಗೆ ಸಂಬಂಧಪಟ್ಟಂತೆ ನನ್ನ ಕೊಡುಗೆ ಬಹಳ ಕಡಿಮೆ ಎಂದೇ ಹೇಳಬಹುದು. ಯಾಕೆಂದರೆ ಇದೊಂದು ಪ್ರಖ್ಯಾತ ಜನಪದ ಗೀತೆ, ಈ ಮೊದಲೇ ಜನರ ಮನಸಿನಲ್ಲಿ ಬೇರೂರಿರುವ ಸಾಹಿತ್ಯಕ್ಕೆ ಸಂಗೀತ ಸಂಯೋಜಿಸಿ ಹಾಡಿದ್ದಷ್ಟೇ ನಾನು ಮಾಡಿದ ಕೆಲಸ. ನಾನು ಮಾಡಿದ ಕೆಲಸವನ್ನು ಜನರಿಗೆ ತಲುಪಿಸಲು ಯೂಟ್ಯೂಬ್ ಮಾಧ್ಯಮ ಜೊತೆಗಿದೆ. ದೇಶದ ಮೂಲೆ ಮೂಲೆಯಿಂದಲೂ ಸಾವಿರಾರು ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ಹರಿಬಿಡಲಾಗುತ್ತದೆ, ಅಂಥದ್ರಲ್ಲಿ ಕರ್ನಾಟಕದ ಜನತೆ ನಾನು ಮಾಡಿದ ಹಾಡನ್ನೇ ನೋಡಿ ಪ್ರೋತ್ಸಾಹಿಸುತ್ತಾರೆ ಎಂದರೆ ನಾನು ಪುಣ್ಯವಂತ ಎಂದಷ್ಟೇ ಹೇಳಬಹುದು. ಈ ಯಶಸ್ಸು ಏನಿದ್ದರೂ
ಕನ್ನಡಿಗರ ಭಾಷಾಭಿಮಾನ ಮತ್ತು ನನ್ನ ಮೇಲಿನ ಅವರು ತೋರಿಸುವ ಔದಾರ್ಯದ ಫಲವಷ್ಟೇ.
ಮೊದಲ ಬಾರಿಗೆ ಜಾನಪದ ಹಾಡೊಂದಕ್ಕೆ ಸಂಗೀತ ಸಂಯೋಜಿಸಿ ಹಾಡಿದ್ದೀರಿ, ಏನಿದರ ಉದ್ದೇಶ?
ಹೌದು, ಆಗಲೇ ಹೇಳಿದಂತೆ ಇದು ಕನ್ನಡದ ಪ್ರಖ್ಯಾತ ಜಾನಪದ ಹಾಡು. ಸೂಕ್ಷ್ಮವಾಗಿ ಗಮನಿಸಿದರೆ ಕನ್ನಡ ಭಾಷೆಗೆ ಸುಮಾರು ಎರಡು ಸಾವಿರಕ್ಕೂ ಹಿಂದಿನ ಇತಿಹಾಸವಿದೆ, ಇಷ್ಟು ವರ್ಷಗಳ ಕಾಲ ಒಂದು ಭಾಷೆ ಉಳಿದಿದೆ ಎಂದರೆ ಆ ಭಾಷೆ ಎಷ್ಟು ವೈಶಿಷ್ಟ್ಯತೆ ಹೊಂದಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಕೋಲು ಮಂಡೆ ಹಾಡನ್ನು ಹದಿನೈದನೇ ಶತಮಾನದಲ್ಲಿ ರಚಿಸಲ್ಪಟ್ಟದ್ದು ಎಂದು ದಾಖಲೆಗಳು ಹೇಳುತ್ತವೆ, ಅಂದರೆ ಆರುನೂರು ವರ್ಷಗಳಷ್ಟು ಹಳೆಯದಾದ ಈ ಹಾಡು ಇನ್ನೂ ಜನರ ಮನಸಿನಲ್ಲಿ ಆಳವಾಗಿ ಬೇರೂರಿದೆ ಎಂದರೆ ಇದು ಭಾಷೆಯ ಶ್ರೇಷ್ಠತೆ ಅಲ್ಲದೇ ಮತ್ತೇನು?. ಇಂಥ ವೈಶಿಷ್ಟ್ಯಗಳೇ ತುಂಬಿರುವ ನಮ್ಮ ಭಾಷೆಯ ಖದರನ್ನು ಇಂದಿನ ಪೀಳಿಗೆಯವರಿಗೆ ಇಷ್ಟವಾಗುವಂತೆ ಸಂಗೀತ ಸಂಯೋಜಿಸಿ ಇನ್ನೊಂದಿಷ್ಟು ವರ್ಷಗಳು ಈ ಹಾಡು ಜೀವಂತವಾಗಿ ಉಳಿಯುವಂತೆ ಮಾಡಬೇಕು. ಹಾಗೆಯೇ ಪ್ರಪಂಚದ ಯಾವುದೇ ಮೂಲೆಯಲ್ಲಿ ಇರುವ ಸಂಗೀತ ಪ್ರಿಯರಿಗೆ ಇಷ್ಟವಾಗಬೇಕು ಎಂಬ ಉದ್ದೇಶದಿಂದ ಈ ಹಾಡನ್ನು ಮಾಡಲು ತೀರ್ಮಾನಿಸಿದೆ. ಅಂದುಕೊಂಡಂತೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ.
‘ಕೋಲು ಮಂಡೆ’ ಹಾಡಿನ ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇದ್ದಾರೆ?
ಸಾಮಾನ್ಯವಾಗಿ ನನ್ನ ಸಂಗೀತ ಇರುವ ಹಾಡುಗಳಿಗೆ ನನ್ನದೇ ಕಾನ್ಸೆಪ್ಟ್ ಮತ್ತು ನಿರ್ದೇಶನ ಇರುತ್ತದೆ. ಆದರೆ ಇದು ಜಾನಪದ ಶೈಲಿಯ ಹಾಡಾಗಿದ್ದರಿಂದ ನುರಿತ ನೃತ್ಯ ಸಂಯೋಜಕರಿದ್ದರೆ ಒಳ್ಳೆಯದು ಎಂದು ನಿರ್ಧರಿಸಿ ನಿರ್ದೇಶನದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮುರಳಿ ಮಾಸ್ಟರ್ ಅವರಿಗೆ ವಹಿಸಿಬಿಟ್ಟೆ. ಹಾಗಾಗಿ ಕಲಾವಿದರಿಂದ ಹಿಡಿದು ತಾಂತ್ರಿಕ ವರ್ಗದವರಲ್ಲಿ ಬಹುತೇಕರು ಮುರಳಿ ಮಾಸ್ಟರ್ ಸೂಚಿಸಿದವರೇ ಕೆಲಸ ಮಾಡಿದ್ದಾರೆ. ಆದ್ದರಿಂದ ಹಾಡಿನ ಯಶಸ್ಸಿನ ಹಿಂದೆ ಅವರದ್ದೂ ದೊಡ್ಡ ಪಾಲಿದೆ. ಅಲ್ಲದೇ ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಇದ್ದದ್ದಕ್ಕೋ ಏನೋ ಹಾಡಿಗೆ ಸಿನಿಮೀಯ ಲೇಪನ ದೊರೆತಿದೆ ಎಂದು ಹೇಳಬಹುದು. ಅಂದಹಾಗೆ ಈ ಹಾಡಿನ ಚಿತ್ರೀಕರಣ ಆಗಸ್ಟ್ 6 ಕ್ಕೇ ಶುರುವಾಯಿತು. ಸುಮಾರು ಹದಿನೈದು ದಿನಗಳಲ್ಲಿ ಚಿತ್ರೀಕರಣ, ಸಂಕಲನ ಎಲ್ಲವೂ ಮುಗಿಸಿ ಇಷ್ಟು ಬೇಗ ಜನರ ಮುಂದೆ ತರುವಲ್ಲಿ ತಂಡ ಸದಸ್ಯರು ಪಟ್ಟಿರುವ ಶ್ರಮ ಶ್ಲಾಘನೀಯ.
ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿ!
ಸದ್ಯಕ್ಕೆ ಪೊಗರು ಸಿನಿಮಾಕ್ಕೇ ಸಂಬಂಧಪಟ್ಟ ಕೆಲಸಗಳು ಮುಗಿಯುವ ಹಂತದಲ್ಲಿದೆ. ಅದು ಬಿಟ್ಟರೆ ಕೆಲವು ಹೊಸ ಸಿನಿಮಾಗಳ ಸಂಗೀತಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಮಾತುಕತೆ ನಡೆದಿದೆ. ಜೊತೆಗೆ ಆಲ್ಬಂ ಹಾಡುಗಳ ಕುರಿತು ನನ್ನ ತಂಡದಲ್ಲಿ ಚರ್ಚೆ ನಡೆಯುತ್ತಿದೆ. ಎಲ್ಲವೂ ನಿರ್ಧಾರವಾದ ನಂತರ ನಾನೇ ತಿಳಿಸುತ್ತೇನೆ.
ಭಾರತದಲ್ಲಿ ಸಧ್ಯ ಟ್ರೆಂಡ್ ಆಗುತ್ತಿರುವ ಕೋಲು ಮಂಡೆ ಹಾಡಿಗೆ ಮಯೂರಿ ಉಪಾಧ್ಯ ಅವರ ಪರಿಕಲ್ಪನೆ ಇದ್ದು, ಕಿರಣ್ ಹಂಪಾಪುರ ಅವರ ಛಾಯಾಗ್ರಹಣವಿದೆ. ಚಂದನ್ ಶೆಟ್ಟಿ, ನಂದಿನಿ ಮತ್ತು ಶಿವು ಅವರ ತಾರಾಗಣವಿದ್ದು, ರಾಜು, ಕಸ್ಟಮ್ ಮೇಡ್ ಫ್ಯಾಷನ್ಸ್, ಶಿಲ್ಪಾ ಪೂಜಾರಿ ಹಾಗೂ ಕಾಮನ್ ಸೆನ್ಸ್ ಫ್ಯಾಷನ್ ನವರು ಕಲಾವಿದರಿಗೆ ಕಾಸ್ಟ್ಯೂಮ್ ಒದಗಿಸಿದ್ದಾರೆ.
ಸಂದರ್ಶನ- ಸುಜಯ್ ಬೆದ್ರ